ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Saturday, March 30, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೧೩


ಅದಾರ್ಯ-ಸಾಲಾವಲಿ-ದಾರಣೇನ ವ್ಯಾಪಾದಿತೇಂದ್ರ-ಪ್ರಭವೇನ ತೇನ ।
ಪ್ರಾದ್ಯೋತನಿ-ಪ್ರೀತಿ-ಕೃತಾ ನಿಕಾಮಂ ಮಧು-ದ್ವಿಷಾ ಸಂದಿದಿಶೇ ಸ ವೀರಃ ॥೦೧.೧೩॥

ಪುರಾಣಪುರುಷನು ಇವನನ್ನು ಹಿಡಿದೆತ್ತಿದ. ಸುಗ್ರೀವನಿಗೂ ರಾಮನಿಗೂ ಅಗ್ನಿಸಾಕ್ಷಿಯಾಗಿ ನಂಟು ಬೆಸೆದ. ಸುಗ್ರೀವ ತನ್ನ ಗೋಳನ್ನು ರಾಮನೆದುರು ತೆರೆದಿಟ್ಟ. ರಾಮ, ಅವನ ಕ್ಷೇಮದ ಭಾರ ಹೊತ್ತ. ರಾಮನೊಟ್ಟಿಗೆ ಸೀತೆಯನ್ನು ಸೇರಿಸುವ ಕಾರ್ಯದಲ್ಲಿ ಸಹಕಾರ ಮಾಡುವೆನು ಎಂದು ಪ್ರತಿಜ್ಞೆ ಮಾಡಿದ ಸುಗ್ರೀವ. ಆದರೆ ಪಾಪ, ಅವನಿಗೆ ಸಂಶಯ. ಇವನ ಕೈಯಲ್ಲಿ ನನ್ನ ಎಲ್ಲಾ ದುಃಖಗಳನ್ನು ನಾಶಮಾಡುವ ತಾಕತ್ತು ಇದೆಯೇ? ಪರೀಕ್ಷಿಸಿ ಮತ್ತೆ ತೀರ್ಮಾನ ಮಾಡಬೇಕು. ಪರೀಕ್ಷಿಸಿದ. ಮತ್ತಿಯ ಮರಗಳು ಏಳು! ಬ್ರಹ್ಮನ ವರದಿಂದ ಅದರ ಒಂದು ಎಲೆಯನ್ನೂ ಕೀಳುವ ಗಟ್ಟಿಗರಾರೂ ಇಲ್ಲದೆ ಕೊಬ್ಬಿನಿಂದ ಉಬ್ಬಿ ನಿಂತಿದ್ದವು. ಬ್ರಹ್ಮನ ಪದವಿಗೇರಬೇಕು ಎಂಬ ಹುಚ್ಚಿನಿಂದ ತಪಸ್ಸು ಮಾಡುತ್ತಾ ಬೆಳೆದಿದ್ದವು. ಅವುಗಳನ್ನು ಒಂದೇ ಬಾಣದಿಂದ ಪುಡಿಪುಡಿಮಾಡಿದ ರಾಘವ! (ಅದಾರ್ಯ-ಸಾಲಾವಲಿ-ದಾರಣೇನ)
ಸಂಶಯ ತೀರಿತು. ವಾಲಿಯ ಜೊತೆ ಸೆಣಸಾಟ ನಡೆಯಿತು. ಇಂದ್ರನ ಅಂಶದವನಾದ ವಾಲಿಯನ್ನು ಕೊಂದ ರಾಘವ! (ವ್ಯಾಪಾದಿತೇಂದ್ರ-ಪ್ರಭವೇನ)
ಸೂರ್ಯನ ಕುವರನಾದ ಸುಗ್ರೀವನಿಗೆ ಏನೇನು ಇಹದಲ್ಲಿ ಸುಖಕ್ಕೆ ಆಗಬೇಕೋ ಅದೆಲ್ಲವನ್ನೂ ಇತ್ತ ರಾಘವ! (ನಿಕಾಮಂ ಪ್ರಾದ್ಯೋತನಿ-ಪ್ರೀತಿ-ಕೃತಾ)
ಅಸುರರ ಮಧು(ಆನಂದ)ವನ್ನು ಕಿತ್ತು ಸುಜನರಿಗೆ ಸ್ವರೂಪಾನಂದವನ್ನು ಇತ್ತು ನಡೆಯಬೇಕು ಎಂಬ ಕಾರಣಕ್ಕಾಗಿಯೇ ಭುವಿಗಿಳಿದ ರಾಘವ (ಮಧು-ದ್ವಿಷಾ), ಸೀತೆಯನ್ನು ಕಂಡು ಬರಲು ಆಯ್ಕೆಮಾಡಿದ್ದು ಈ ವೀರಹನುಮನನ್ನೇ! (ಸಂದಿದಿಶೇ ಸ ವೀರಃ)
ಪ್ರಾದ್ಯೋತನಿ ಎಂದರೆ ಸುಗ್ರೀವ.
ಪ್ರದ್ಯೋತ ಎಂದರೆ ಸೂರ್ಯ. ಅವನ ಮಗ ಆದ್ದರಿಂದ ಪ್ರಾದ್ಯೋತನಿ, ಸುಗ್ರೀವ.

ಈಗೊಂದು ವಿಷಯ. ಇಂದ್ರನ ಅಂಶದವನನ್ನು ಸದೆದ. ಸೂರ್ಯನ ಅಂಶದವನಿಗೆ ಸೌಖ್ಯವನ್ನು ಸುರಿದ.
ಇಬ್ಬರೂ ದೇವತೆಗಳೇ! ಅದರಲ್ಲೂ ಇಂದ್ರ, ಸೂರ್ಯನಿಗಿಂತ ಯೋಗ್ಯತೆಯಲ್ಲಿ ಮೇಲಿನವ! ಅವನನ್ನು ಬಡಿದದ್ದು ಏಕೆ?
ಇಲ್ಲಿ ವಾಲಿಯೂ ಮುಖ್ಯ ಅಲ್ಲ, ಸುಗ್ರೀವನೂ ಮುಖ್ಯ ಅಲ್ಲ. ಯಾರು ಹನುಮನ ಪಕ್ಷವಹಿಸಿದರೋ ಅವರು ಬದುಕಿದರು. ವಾಲಿ ಈ ಜನ್ಮದಲ್ಲಿ ಪ್ರಾರಬ್ಧವಶಾತ್ ಹನುಮನಿಗೆ ಶರಣಾಗಲಿಲ್ಲ. ಹನುಮನ ನಂಬಿದ ಸುಗ್ರೀವನು ಗೆದ್ದ. ಹನುಮನ ನಂಬದ ವಾಲಿಯು ಬಿದ್ದ.
‘ಪೂರ್ವಂ ಹಿ ಮಾರುತಿಮವಾಪ ರವೇಃ ಸುತೋsಯಂ ತೇನಾಸ್ಯ ವಾಲಿನಮಹನ್ ರಘುಪಃ ಪ್ರತೀಪಮ್’, ಅಷ್ಟೇ!
ಮುಂದೆ ಈ ವಾಲಿಯೇ ಅರ್ಜುನನಾಗಿ ಹುಟ್ಟಿಬಂದು ಭೀಮನ ಕೆಳೆಯಲ್ಲಿ ನಿಂತ. ಕೃಷ್ಣ ಅವನ ಸಾರಥಿಯಾದ! ಇದೇ ಸುಗ್ರೀವ ಕರ್ಣನಾದ. ಭೀಮನ ಬಿಟ್ಟ ಅವನನ್ನು ಅರ್ಜುನನಿಂದಲೆ ಕೊಲ್ಲಿಸಿದ ಭಗವಂತ!
ಪ್ರಾಣನಿದ್ದೆಡೆ ಹರಿಯು ಇರುವ. ಅವನಿಲ್ಲದಿರೆ ತಾನಿರ.
ವೇದವುಸುರಿತು – ‘ಕಸ್ಮಿನ್ ನ್ವಹಮುತ್ಕ್ರಾಂತ ಉತ್ಕ್ರಾಂತೋ ಭವಿಷ್ಯಾಮಿ । ಕಸ್ಮಿನ್ ವಾ ಪ್ರತಿಷ್ಠಿತೇ ಪ್ರತಿಷ್ಠಾಸ್ಯಾಮೀತಿ ॥  ಸ ಪ್ರಾಣಮಸೃಜತ’  ಎಂದು

ಹನುಮನು ಇದ್ದೆಡೆ ರಾಮ ತಾನೇ ಬರುವ. ಹನುಮ, ತನ್ನನ್ನು ಸಾರಿದವರ ಭಯವನ್ನು ಕಳೆದು ರಾಮನೆಂಬ ನಿಧಿಯನ್ನು ಕೊಡುವ. ಸಾತ್ವಿಕರನ್ನು ವಿಶೇಷವಾಗಿ ಭಗವಂತನೆಡೆಗೆ ಸಾಗಿಸುವ. ಅದಕ್ಕೆಂದೇ ಅವನು ವೀರ, ಸಾರಿಬಂದವರಿಗೆ ಅಭಯದಾನಮಾಡುವವ (ವಾ ಗತಿಗಂಧನಯೋಃ ರಾ ದಾನೇ)
ಇಂಥಾ ಸಾತ್ವಿಕರ ಒಡೆಯನಾದ, ಸರ್ವಸಮರ್ಥನಾದ ವೀರಹನುಮನನ್ನು ಸೀತೆಯ ಕಾಣಲು ಕಳುಹಿಸಿದ!

ಛಂದಸ್ಸು ಆರ್ದ್ರಾ ಎಂಬ ಉಪಜಾತಿಯ ಪ್ರಬೇಧ. ಸಾರಿಬಂದವರಿಗೆ ಕಾರುಣ್ಯದ ನಿಧಿಯಾಗಿ, ವಾಲಿಯೊಟ್ಟಿಗೆ ಕಡೆಗೆ ಮುದ್ದಿನ ಮಾತಾಡಿ, ವಿಧಿಯ ಮಾತನ್ನೂ ಮೀರಿ ಸುಜನರ ಸಲಹುವ ದೊರೆಯ ನಡೆಯ ಮೋಡಿ!

2 comments: