ಹದಿಮೂರು ಮಂತ್ರಗಳಲ್ಲಿ ಹತ್ತನೇ ಮಂತ್ರ:
ಅಸ್ಮಾಕಮಗ್ನೇ ಮಘವತ್ಸು ದೀದಿಹ್ಯಧ
ಶ್ವಸೀವಾನ್ ವೃಷಭೋ ದಮೂನಾಃ ।        
ಅವಾಸ್ಯಾ ಶಿಶುಮತೀರದೀದೇರ್ವರ್ಮೇವ
ಯುತ್ಸು ಪರಿಜರ್ಭುರಾಣಃ ॥ 
ಹೇ ನಮ್ಮೊಳಗಿನ ದೀಪವೇ, ನಮ್ಮ ಪ್ರೇರಕಶಕ್ತಿಯೇ (ಅಗ್ನೇ)!
ಸಾತ್ವಿಕವಾದ ಸಂಪತ್ತಿನಿಂದ ತುಂಬಿರುವ ನಮ್ಮ ಮನೆ-ಮನಗಳಲ್ಲಿ (ಅಸ್ಮಾಕಂ ಮಘವತ್ಸು) ಬೆಳಗು
(ದೀದಿಹಿ), ನಿನ್ನೊಳಗಿನ ಅಗ್ನಿಯ ಅರಿವುಕೊಡು. ನಮಗೆ ಉಸಿರಿತ್ತ ದೈವವೇ, ನಮ್ಮ ಉಸಿರು ಉಸಿರು ನಿನ್ನ
ಸೇವೆಗಿರಲಿ, ಎಲ್ಲವೂ ನಿನ್ನಿಂದ ಆದದ್ದು ಎಂಬ ಅರಿವು ಇರಲಿ (ಶ್ವಸೀವಾನ್). ಜೀವೋತ್ತಮನಾದ, ವಿಷ್ಣುಭಕ್ತರಲ್ಲಿ ಅಗ್ರಣಿಯಾದ ನೀನು
(ವೃಷಭಃ), ನಮ್ಮ ಎಲ್ಲಾ ಅಶುಭವಾದ ನಡೆ-ನುಡಿಗಳನ್ನು ದಮನ ಮಾಡು (ದಮೂನಾಃ).
ನಮ್ಮದು ಹುಡುಗು ಬುದ್ಧಿ ಸ್ವಾಮಿ!! (ಶಿಶುಮತಿ). ಊಟ-ನಿದ್ದೆ-ಮೈಥುನಗಳಲ್ಲಿ ಜಾರಿ ಹೋದ ಮನಸ್ಸು
ನಮ್ಮದು! ಆ ಇಳಿಜಾರಿನಿಂದ ನಮ್ಮನ್ನು ಎತ್ತು, ಬಳಕಿನೂರಿಗೆ ಸಾಗಿಸು(ಅವಾಸ್ಯ ಅದೀದೇಃ).
ಅಜ್ಞಾನದ ವಿರುದ್ಧ ಮಾಡುವ ತತ್ವವಾದದ ಯುದ್ಧದಲ್ಲಿ ಸೋಲದಂತೆ ನಮ್ಮನ್ನು ಕಾವ ಕವಚವಾಗು (ವರ್ಮೇವ
ಯುತ್ಸು ಪರಿಜರ್ಭುರಾಣಃ). 
ನಾವೆಲ್ಲರೂ ನಿತ್ಯ ಮಾಡಬೇಕಾದ ವಾಯುಸ್ತುತಿ ಇದೇ ಅಲ್ಲವೇ!! 
ಇನ್ನು ಇಲ್ಲಿಂದ ಕಡೆಯ ವರ್ಗದ ಮೂರು ಮಂತ್ರಗಳನ್ನು ನೋಡುವ.
ಹದಿಮೂರು ಮಂತ್ರಗಳಲ್ಲಿ ಹನ್ನೊಂದನೇ ಮಂತ್ರ:
ಇದಮಗ್ನೇ ಸುಧಿತಂ ದುರ್ಧಿತಾದಧಿ
ಪ್ರಿಯಾದು ಚಿನ್ಮನ್ಮನಃ ಪ್ರೇಯೋ ಅಸ್ತು ತೇ ।     
ಯತ್ ತೇ ಶುಕ್ರಂ ತನ್ವೋ ರೋಚತೇ ಶುಚಿ
ತೇನಾಸ್ಮಭ್ಯಂ ವನಸೇ ರತ್ನಮಾ ತ್ವಮ್ ॥        
ಹೇ ಸರ್ವಜ್ಞ (ಅಗ್ನೇ)! ತತ್ವವಾದದ ಯುದ್ಧ ಗೆದಿಯ ಬಯಸುವ ನಾವು ನೀನು
ಹೇಳಿದ, ವೇದಕ್ಕೆ ದುಷ್ಟ ಅರ್ಥಗಳನ್ನು ಹೇಳಿ ಹಾಳುಗೆಡವಿದ
ಅಪವ್ಯಾಖ್ಯಾನಗಳನ್ನು ಮೆಟ್ಟಿ ನಿಲ್ಲುವ, (ದುರ್ಧಿತಾದಧಿ) ನಿನ್ನ ಈ ಯಥಾರ್ಥವಾದ
ವ್ಯಾಖ್ಯಾನಗಳು ಏನಿವೇ, ಅದನ್ನು ಚನ್ನಾಗಿ ಪರಿಗ್ರಹಿಸಿದ್ದೇವೆ (ಸುಧಿತಂ). ಮನನೀಯವಾದ
(ಮನ್ಮನಃ), ಹೃದ್ಯವಾದ (ಪ್ರಿಯಾದು) ನಿನ್ನ ವ್ಯಾಖ್ಯಾನವು ಸರ್ವಥಾ ನಮಗೆ
ಅಭೀಷ್ಟವನ್ನೀಯಲಿ (ಪ್ರೇಯೋ ಅಸ್ತು).
ನಿನ್ನ ಜ್ಞಾನಾವತಾರವಾದ ಮಧ್ವ ಎಂಬ ರೂಪವು, ಶುದ್ಧವಾದುದು (ಶುಚಿ), ತೇಜೋಮಯವಾದುದು (ಶುಕ್ರಮ್)
ಆನಂದವನ್ನು ತಂದಿದೆ (ರೋಚತೇ). ನೀನು, ನಮಗೆಲ್ಲಾ (ಅಸ್ಮಭ್ಯಂ)
ಸ್ವರೂಪಾನಂದವನ್ನು (ರತ್ನಮಾ) ವಿತರಿಸು (ವನಸೇ).
 
 
 
No comments:
Post a Comment