ಅಪೌರುಷೇಯವಚನಗಳೇ ಹೀಗೆ ಬಹುವಾಗಿ
ಕೊಂಡಾಡುವ ಜಗದ್ಗುರುವಿನ ಮಹಿಮೆಗೆ ಪಾರವಿದೆಯೇ! ಆ ಮಹಾಚರಿತೆಯನ್ನು ಪೌರುಷೇಯವಾಕು ಹೇಗೆ ತಾನೇ
ಬಣ್ಣಿಸೀತು! ಈ ಯೋಚನೆಯಲ್ಲೇ ಕವಿ ನುಡಿದ –
ಉಚ್ಚಾವಚಾ ಯೇನ ಸಮಸ್ತ-ಚೇಷ್ಟಾಃ  ಕಿಂ ತತ್ರ ಚಿತ್ರಂ ಚರಿತಂ ನಿವೇದ್ಯಮ್ ।
ಕಿಂತೂತ್ತಮ-ಶ್ಲೋಕ-ಶಿಖಾಮಣೀನಾಂ  ಮನೋವಿಶುದ್ಯೈ ಚರಿತಾನುವಾದಃ ॥ ೧.೭ ॥
ಮುಖ್ಯಪ್ರಾಣನಿಂದಾಗುವುವು ಬಹುಬಗೆಯ
ಸಂಗತಿಗಳು ಜಗತ್ತಿನಲ್ಲಿ, ಅವುಗಳಲ್ಲಿ ಇವು ದೊಡ್ಡವು, ಇವು ಚಿಕ್ಕವೆಂದು ಹೇಳಲಾದೀತೆ!!
ತೃಣನಿಂದಾರಂಭಿಸಿ ಬ್ರಹ್ಮನ ಪರ್ಯಂತ ಸರ್ವಜೀವರಿಗೆ ಜೀವನವಿತ್ತವ! ಭಗವಂತನ ಕಾರ್ಯವನ್ನು ಸಾಧಿಸಲು
ಬೇರೆಯವರಿಗಸದಳವಾದ ಲೀಲೆಯನ್ನು ತೋರಿದವ, ಸರ್ವತತ್ವಾಭಿಮಾನಿದೇವರ್ಕಳಿಂದ
ನಿತ್ಯ ಸ್ತುತ್ಯಚರಿತನಾದ ಇವನ ಚೇಷ್ಟೆಗಳಿಗೆ ಇತಿಯುಂಟೆ! ಅದರಲ್ಲಿ ಇವನ್ನು ಕೊಂಡಾಡುವ, ಇವಿಷ್ಟನ್ನು ಬಿಟ್ಟುಬಿಡುವ
ಎನ್ನಲಾದೀತೆ!! ಯಾವುದನ್ನು ಇದು ಬಹಳ ಸೊಗಸು ಎಂದು ಬಣ್ಣಿಸಲಿ!? 
ಅವನ ಅಂತರ್ಯಾಮಿಯ ಪ್ರೇರಣೆಯಿಂದ
ಆಗುತ್ತಿರುವ ಸಕಲಕರ್ಮಗಳಲ್ಲಿ ಯಾವುದನ್ನು ಆರಿಸಿ ತೂಗಿ ಹಾಡಲಿ!? 
ಆಗಲಿ, ಇಷ್ಟು ಯೋಚಿಸೋದು ಬೇಡ.
ಹಿರಿಯಯಶಸ್ಸನ್ನು ಗಳಿಸಿದ ಮಂದಿಯ ಮುಡಿರನ್ನರಾದ ಮಹಾತ್ಮರ ಚರಿತೆಯನ್ನು ಸ್ವಲ್ಪವಾದರೂ ಹಾಡಬೇಕು.
ಅದರಿಂದಲೇ ಅಲ್ಲವೇ ಒಳಬಗೆಯು ಶುದ್ಧವಾಗುವುದು. 
ಛಂದಸ್ಸು "ಬಾಲಾ" ಎಂಬ ಉಪಜಾತಿಪ್ರಬೇಧ. ಬಾಲಕನ ಕಲಭಾಷೆಯಿಂದ ಪ್ರಬಲನ ಮಹಿಮೆಯನ್ನು ಕೊಂಡಾಡಲು ಹುರುಪು ಕಂಡುಕೊಂಡ ನಡೆ. 
ಮಾಲಾ-ಕೃತಸ್ತಚ್ಚರಿತಾಖ್ಯ-ರತ್ನೈರಸೂಕ್ಷ್ಮ-ದೃಷ್ಟೇಃ ಸ-ಕುತೂಲಹಸ್ಯ ।
ಪೂರ್ವಾಪರೀಕಾರಮಥಾಪರಂ ವಾ ಕ್ಷಾಮ್ಯಂತು ಮೇ ಹಂತ ಮುಹುರ್ಮಹಾಂತಃ ॥ ೧.೮
॥      
ಅಪಾರವಾದ ಈ ಮಹಾತ್ಮನ ಮಹಿಮೆಗಳೆಂಬ
ಬೆಲೆಗಟ್ಟಲಾಗದ ರತ್ನರಾಶಿಯನ್ನು ಕಂಡು ಬೆರಗಾದ ಮಾಲೆಪೋಣಿಸುವವ ನಾನು! ಪೋಣಿಸ ಹೊರಟ ನನಗೆ
ಆದದ್ದು ಇದು... ಆಹಾ! ನನ್ನ ಅಂತರಂಗದ ಗುರುವಿನ ಮಹಿಮಾರತ್ನಗಳು ಎಷ್ಟು ಹಿರಿದು! ಎಲ್ಲಿಂದ
ಪೋಣಿಸಲಿ. ಯಾವುದನ್ನು ಮೊದಲು ಪೋಣಿಸಲಿ... ಯಾವುದನ್ನು ಮತ್ತೆ...? ತಿಳಿಯದಾಗಿದೆ ನನಗೆ!! 
ಹೀಗೆ ಚರಿತೆಯನ್ನು ಕೊಂಡಾಡುವ
ಭರದಲ್ಲಿ ಮುಂದೆ ಹೇಳಬೇಕಾದ್ದನ್ನು ಹಿಂದೆ, ಹಿಂದೆ ಹೇಳಬೇಕಾದ್ದನ್ನು ಮುಂದೆ
ಮಾಡಿರಬಹುದು. ಇದಕ್ಕೆ ನನ್ನ ಮಂದದೃಷ್ಟಿಯೇ ಕಾರಣ. ಅದಾದರೂ ಆದದ್ದು ರಮ್ಯವಾದ ಆಚಾರ್ಯರ
ಚರಿತೆಯನ್ನು ಕೊಂಡಾಡಬೇಕು ಎನ್ನುವ ಉತ್ಕಂಠೆಯಿಂದ. ಇವೆಲ್ಲ ಈ ಮಾಲಾಕಾರನಾದ ನಾರಾಯಣನ ಸಣ್ಣ
ತಪ್ಪುಗಳೆಂದು ಬಗೆದು ಅನುಕಂಪೆಯಿಂದ ಸಹಿಸಿಕೊಂಡುಬಿಡಿ ಮಹಾತ್ಮರು! 
ಛಂದಸ್ಸು "ವಾಣೀ" ಎಂಬ ಉಪಜಾತಿಪ್ರಬೇಧ. ಮತ್ತೆ ಮಾತು ವಾಯುವಿನ ಗುಣಕಥನಕ್ಕೆ ಮೀಸಲಿರಲಿ.
 
 
 
No comments:
Post a Comment