ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Saturday, March 30, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೧೩


ಅದಾರ್ಯ-ಸಾಲಾವಲಿ-ದಾರಣೇನ ವ್ಯಾಪಾದಿತೇಂದ್ರ-ಪ್ರಭವೇನ ತೇನ ।
ಪ್ರಾದ್ಯೋತನಿ-ಪ್ರೀತಿ-ಕೃತಾ ನಿಕಾಮಂ ಮಧು-ದ್ವಿಷಾ ಸಂದಿದಿಶೇ ಸ ವೀರಃ ॥೦೧.೧೩॥

ಪುರಾಣಪುರುಷನು ಇವನನ್ನು ಹಿಡಿದೆತ್ತಿದ. ಸುಗ್ರೀವನಿಗೂ ರಾಮನಿಗೂ ಅಗ್ನಿಸಾಕ್ಷಿಯಾಗಿ ನಂಟು ಬೆಸೆದ. ಸುಗ್ರೀವ ತನ್ನ ಗೋಳನ್ನು ರಾಮನೆದುರು ತೆರೆದಿಟ್ಟ. ರಾಮ, ಅವನ ಕ್ಷೇಮದ ಭಾರ ಹೊತ್ತ. ರಾಮನೊಟ್ಟಿಗೆ ಸೀತೆಯನ್ನು ಸೇರಿಸುವ ಕಾರ್ಯದಲ್ಲಿ ಸಹಕಾರ ಮಾಡುವೆನು ಎಂದು ಪ್ರತಿಜ್ಞೆ ಮಾಡಿದ ಸುಗ್ರೀವ. ಆದರೆ ಪಾಪ, ಅವನಿಗೆ ಸಂಶಯ. ಇವನ ಕೈಯಲ್ಲಿ ನನ್ನ ಎಲ್ಲಾ ದುಃಖಗಳನ್ನು ನಾಶಮಾಡುವ ತಾಕತ್ತು ಇದೆಯೇ? ಪರೀಕ್ಷಿಸಿ ಮತ್ತೆ ತೀರ್ಮಾನ ಮಾಡಬೇಕು. ಪರೀಕ್ಷಿಸಿದ. ಮತ್ತಿಯ ಮರಗಳು ಏಳು! ಬ್ರಹ್ಮನ ವರದಿಂದ ಅದರ ಒಂದು ಎಲೆಯನ್ನೂ ಕೀಳುವ ಗಟ್ಟಿಗರಾರೂ ಇಲ್ಲದೆ ಕೊಬ್ಬಿನಿಂದ ಉಬ್ಬಿ ನಿಂತಿದ್ದವು. ಬ್ರಹ್ಮನ ಪದವಿಗೇರಬೇಕು ಎಂಬ ಹುಚ್ಚಿನಿಂದ ತಪಸ್ಸು ಮಾಡುತ್ತಾ ಬೆಳೆದಿದ್ದವು. ಅವುಗಳನ್ನು ಒಂದೇ ಬಾಣದಿಂದ ಪುಡಿಪುಡಿಮಾಡಿದ ರಾಘವ! (ಅದಾರ್ಯ-ಸಾಲಾವಲಿ-ದಾರಣೇನ)
ಸಂಶಯ ತೀರಿತು. ವಾಲಿಯ ಜೊತೆ ಸೆಣಸಾಟ ನಡೆಯಿತು. ಇಂದ್ರನ ಅಂಶದವನಾದ ವಾಲಿಯನ್ನು ಕೊಂದ ರಾಘವ! (ವ್ಯಾಪಾದಿತೇಂದ್ರ-ಪ್ರಭವೇನ)
ಸೂರ್ಯನ ಕುವರನಾದ ಸುಗ್ರೀವನಿಗೆ ಏನೇನು ಇಹದಲ್ಲಿ ಸುಖಕ್ಕೆ ಆಗಬೇಕೋ ಅದೆಲ್ಲವನ್ನೂ ಇತ್ತ ರಾಘವ! (ನಿಕಾಮಂ ಪ್ರಾದ್ಯೋತನಿ-ಪ್ರೀತಿ-ಕೃತಾ)
ಅಸುರರ ಮಧು(ಆನಂದ)ವನ್ನು ಕಿತ್ತು ಸುಜನರಿಗೆ ಸ್ವರೂಪಾನಂದವನ್ನು ಇತ್ತು ನಡೆಯಬೇಕು ಎಂಬ ಕಾರಣಕ್ಕಾಗಿಯೇ ಭುವಿಗಿಳಿದ ರಾಘವ (ಮಧು-ದ್ವಿಷಾ), ಸೀತೆಯನ್ನು ಕಂಡು ಬರಲು ಆಯ್ಕೆಮಾಡಿದ್ದು ಈ ವೀರಹನುಮನನ್ನೇ! (ಸಂದಿದಿಶೇ ಸ ವೀರಃ)
ಪ್ರಾದ್ಯೋತನಿ ಎಂದರೆ ಸುಗ್ರೀವ.
ಪ್ರದ್ಯೋತ ಎಂದರೆ ಸೂರ್ಯ. ಅವನ ಮಗ ಆದ್ದರಿಂದ ಪ್ರಾದ್ಯೋತನಿ, ಸುಗ್ರೀವ.

ಈಗೊಂದು ವಿಷಯ. ಇಂದ್ರನ ಅಂಶದವನನ್ನು ಸದೆದ. ಸೂರ್ಯನ ಅಂಶದವನಿಗೆ ಸೌಖ್ಯವನ್ನು ಸುರಿದ.
ಇಬ್ಬರೂ ದೇವತೆಗಳೇ! ಅದರಲ್ಲೂ ಇಂದ್ರ, ಸೂರ್ಯನಿಗಿಂತ ಯೋಗ್ಯತೆಯಲ್ಲಿ ಮೇಲಿನವ! ಅವನನ್ನು ಬಡಿದದ್ದು ಏಕೆ?
ಇಲ್ಲಿ ವಾಲಿಯೂ ಮುಖ್ಯ ಅಲ್ಲ, ಸುಗ್ರೀವನೂ ಮುಖ್ಯ ಅಲ್ಲ. ಯಾರು ಹನುಮನ ಪಕ್ಷವಹಿಸಿದರೋ ಅವರು ಬದುಕಿದರು. ವಾಲಿ ಈ ಜನ್ಮದಲ್ಲಿ ಪ್ರಾರಬ್ಧವಶಾತ್ ಹನುಮನಿಗೆ ಶರಣಾಗಲಿಲ್ಲ. ಹನುಮನ ನಂಬಿದ ಸುಗ್ರೀವನು ಗೆದ್ದ. ಹನುಮನ ನಂಬದ ವಾಲಿಯು ಬಿದ್ದ.
‘ಪೂರ್ವಂ ಹಿ ಮಾರುತಿಮವಾಪ ರವೇಃ ಸುತೋsಯಂ ತೇನಾಸ್ಯ ವಾಲಿನಮಹನ್ ರಘುಪಃ ಪ್ರತೀಪಮ್’, ಅಷ್ಟೇ!
ಮುಂದೆ ಈ ವಾಲಿಯೇ ಅರ್ಜುನನಾಗಿ ಹುಟ್ಟಿಬಂದು ಭೀಮನ ಕೆಳೆಯಲ್ಲಿ ನಿಂತ. ಕೃಷ್ಣ ಅವನ ಸಾರಥಿಯಾದ! ಇದೇ ಸುಗ್ರೀವ ಕರ್ಣನಾದ. ಭೀಮನ ಬಿಟ್ಟ ಅವನನ್ನು ಅರ್ಜುನನಿಂದಲೆ ಕೊಲ್ಲಿಸಿದ ಭಗವಂತ!
ಪ್ರಾಣನಿದ್ದೆಡೆ ಹರಿಯು ಇರುವ. ಅವನಿಲ್ಲದಿರೆ ತಾನಿರ.
ವೇದವುಸುರಿತು – ‘ಕಸ್ಮಿನ್ ನ್ವಹಮುತ್ಕ್ರಾಂತ ಉತ್ಕ್ರಾಂತೋ ಭವಿಷ್ಯಾಮಿ । ಕಸ್ಮಿನ್ ವಾ ಪ್ರತಿಷ್ಠಿತೇ ಪ್ರತಿಷ್ಠಾಸ್ಯಾಮೀತಿ ॥  ಸ ಪ್ರಾಣಮಸೃಜತ’  ಎಂದು

ಹನುಮನು ಇದ್ದೆಡೆ ರಾಮ ತಾನೇ ಬರುವ. ಹನುಮ, ತನ್ನನ್ನು ಸಾರಿದವರ ಭಯವನ್ನು ಕಳೆದು ರಾಮನೆಂಬ ನಿಧಿಯನ್ನು ಕೊಡುವ. ಸಾತ್ವಿಕರನ್ನು ವಿಶೇಷವಾಗಿ ಭಗವಂತನೆಡೆಗೆ ಸಾಗಿಸುವ. ಅದಕ್ಕೆಂದೇ ಅವನು ವೀರ, ಸಾರಿಬಂದವರಿಗೆ ಅಭಯದಾನಮಾಡುವವ (ವಾ ಗತಿಗಂಧನಯೋಃ ರಾ ದಾನೇ)
ಇಂಥಾ ಸಾತ್ವಿಕರ ಒಡೆಯನಾದ, ಸರ್ವಸಮರ್ಥನಾದ ವೀರಹನುಮನನ್ನು ಸೀತೆಯ ಕಾಣಲು ಕಳುಹಿಸಿದ!

ಛಂದಸ್ಸು ಆರ್ದ್ರಾ ಎಂಬ ಉಪಜಾತಿಯ ಪ್ರಬೇಧ. ಸಾರಿಬಂದವರಿಗೆ ಕಾರುಣ್ಯದ ನಿಧಿಯಾಗಿ, ವಾಲಿಯೊಟ್ಟಿಗೆ ಕಡೆಗೆ ಮುದ್ದಿನ ಮಾತಾಡಿ, ವಿಧಿಯ ಮಾತನ್ನೂ ಮೀರಿ ಸುಜನರ ಸಲಹುವ ದೊರೆಯ ನಡೆಯ ಮೋಡಿ!

Friday, March 29, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೧೨

ಲೋಕದೃಷ್ಟಿಯಲ್ಲಿ ದಶರಥನ ಮಗ, ರಾಮನೆಂಬ ಹೆಸರಿನವ, ಸೀತೆಯನ್ನು ಕಳಕೊಂಡು ಇತ್ತ ಬಂದ, ಅವನನ್ನು ಹನುಮ ಕಂಡ. ನಿಜವಾಗಿ ಹನುಮ ಕಂಡದ್ದು ರಮಾಪತಿಯಾದ ರಾಮನನ್ನು. ಈ ರಾಮ ಸಾಕ್ಷಾತ್ ನಾರಾಯಣ, ಬ್ರಹ್ಮ ಎಂದರಿತು ಕಂಡ. ಸಾಕ್ಷಾತ್ ಬ್ರಹ್ಮಪಿತಾ ಅಸೌ ಇತಿ ಜಾನನ್ ಪಾದಯೋಃ ಪೇತೇ, ಸುಗ್ರೀವ ಇವನನ್ನು ಕಂಡು ಹೆದರಿದ್ದ. ಜಗತ್ಪವಿತ್ರವಾದ, ಈ ಬ್ರಹ್ಮವಸ್ತುವೇ ಮುಂದೆ ಬಂದಿದೆ ಎಂದು ತಿಳಿದವರಿಗೆ ಯಾವ ಭಯ! ಭಯ ಅಜ್ಞಾನದ ಕಾರ್ಯ. ಅಜ್ಞಾನಕಿಂತ ಅಪವಿತ್ರವಾದ ಇನ್ನೊಂದು ವಸ್ತುವಿಲ್ಲ. ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ! ಹನುಮ ಇವನನ್ನು ಕಂಡದ್ದು ಜಗತ್ಪವಿತ್ರನೆಂದು. ಜ್ಞಾನಮೂರ್ತಿಯೆಂದು. ಹಾಗೆ ಉಪಾಸಿಸುವವರಿಗೆ ಅಜ್ಞಾನವು ಇಲ್ಲ, ಅದರ ಬೆನ್ನಿಗೆ ಬರುವ ಭಯವೂ ಇಲ್ಲ! ಹೀಗೆ ಕಂಡ ಹನುಮಂತ ಏನು ಮಾಡಿದ?

ಪದಾರವಿಂದ-ಪ್ರಣತೋ ಹರೀಂದ್ರಸ್ತದಾ ಮಹಾಭಕ್ತಿ-ಭರಾಭಿನುನ್ನಃ
ಅಗ್ರಾಹಿ ಪದ್ಮೋರ-ಸುಂದರಾಭ್ಯಾಂ ದೋರ್ಭ್ಯಾಂ ಪುರಾಣೇನ ಪೂರುಷೇಣ ೦೧.೧೨      

ಆಗ, ಮಿಗಿಲಾದ ಭಕ್ತಿಯೆಂಬ ಭಾರವನ್ನು ತಡೆಯಲಾರದೆ ಎಂಬಂತೆ ಕಪಿಗಳೊಡೆಯ ತನ್ನೊಡೆಯನ ಅಡಿದಾವರೆಗೆ ಮೈಚೆಲ್ಲಿ ನಮಿಸಿದ. ಅವನನ್ನು ಎತ್ತಿ ಹಿಡಿದ ಪರಿಪೂರ್ಣನಾದ ಪುರುಷೋತ್ತಮ ಶ್ರೀರಾಮ, ತನ್ನ ಕಮಲದ ಕೇಸರದಂತೆ ಕೆಂಪಾಗಿ ಕಂಗೊಳಿಸುವ ಮುದ್ದಾದ ಕೈಗಳಿಂದ.
ಪೂರುಷ - ಪುರು ಎಂದರೆ ಪೂರ್ಣವಾದುದು. ಪೂರು ಎಂದು ಎಳೆದು ಹೇಳಿದರೆ, ಪರಿಪೂರ್ಣವಾದುದು ಎಂದರ್ಥ.
ಮತ್ತು, ಪುರುಷ ಎಂದು ಹೇಳುವಲ್ಲಿ ಪೂರುಷ ಎಂದು ಅಧಿಕಮಾಡಿ ಹೇಳಿದ್ದು ಅವನು ಪುರುಷೋತ್ತಮ ಎಂದು. ಆಧಿಕ್ಯೇ ಅಧಿಕಮ್ ಅಲ್ಲವೇ. ಆದ್ದರಿಂದಲೇ ಅವನು ಪರಿಪೂರ್ಣನಾದ ಪುರುಷೋತ್ತಮ.
ಈ ಭಾಗದ ವಿವರಣೆ ಹನುಮನು ತನ್ನ ನಿಜಾನುಭವವನ್ನು ಮಧ್ವನಾಗಿ ಹೇಳಿಕೊಂಡ ತಾತ್ಪರ್ಯನಿರ್ಣಯದ ಮಾತನ್ನು ನೆನಪಿಸುವಂತಿದೆ. "ಉತ್ಥಾಪ್ಯ ಚೈನಮರವಿಂದದಲಾಯತಾಕ್ಷಃ ಚಕ್ರಾಂಕಿತೇನ ವರದೇನ ಕರಾಂಬುಜೇನ", ಎಂದು(ಮಹಾಭಾರತ ತಾತ್ಪರ್ಯ ನಿರ್ಣಯ ೬.೧). ಕವಿಗೆ ಕೈಬಣ್ಣ ಕಂಡಿತು. ಮಧ್ವಕವಿರಾಜನಿಗೆ ಅವುಗಳ ಮೇಲಿದ್ದ ಚಕ್ರದ ಗುರುತೂ ಕಂಡಿತು (ಚಕ್ರಾಂಕಿತೇನ ಕರಾಂಬುಜೇನ). ಅವನೇ ಅಲ್ಲವೇ ಅದರ ಸ್ಪರ್ಶಾನಂದವನ್ನು ಅನುಭವಿಸಿದ ಧನ್ಯ!
ಛಂದಸ್ಸು ಮಾಲಾ ಎಂಬ ಉಪಜಾತಿ. ರಾಮನನ್ನು ಸಾತ್ವಿಕನಾದ ಸುಗ್ರೀವನ ಭಾಗ್ಯದ ಬಾಗಿಲಲ್ಲಿ ನಿಲ್ಲಿಸಿ ಹನುಮನು ಹಾಕಿದ ಮಾಲೆ.

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೧೧

ಹನುಮಂತನ ಗುಣಕಥನ ಇಲ್ಲಿಗೆ ಮುಗಿಲಿಲ್ಲ. ವಾಲ್ಮೀಕಿಗಳು ಹನುಮತ್ಸ್ವರೂಪವನ್ನು ಯಥಾರ್ಥವಾಗಿ ಉಪಾಸಿಸಿದ ಜ್ಞಾನಿ. ಅದಕ್ಕೆಂದೇ ಭಗವಂತ ಇವರ ಬಾಯಲ್ಲಿ ಭವಿಷ್ಯ ನುಡಿಸಿದ. ಮುಂದೆ ಈ ಹನುಮಂತನೇ ಮಧ್ವನಾಗಿ ಬಂದು ಮತ್ತೂ ವಿಶೇಷಗುಣಗಳನ್ನು ಅಭಿವ್ಯಕ್ತಗೊಳಿಸುವ ವಿಚಾರವನ್ನು ರಾಮಾಯಣದಲ್ಲಿ ಹೇಳಿದ್ದಾರೆ. ಎಲ್ಲಿ? ಇಲ್ಲಿ -
"ಸಸೂತ್ರವೃತ್ಯರ್ಥಪದಂ ಮಹಾರ್ಥಂ ಸಸಂಗ್ರಹಂ ಸಾಧ್ಯತಿ ವೈ ಕಪೀಂದ್ರಃ ನ ಹ್ಯಸ್ತಿ ಕಶ್ಚಿತ್ ಸದೃಶೋsಸ್ತಿ ಶಾಸ್ತ್ರೇ ವೈಶಾರದೇ ಛಂದಗತೌ ತಥೈವ "  ಮುಂದೆ ಮಧ್ವನಾಗಿ ಬಂದು ಸಾಧಿಸುತ್ತಾನೆ ಈ ಕಪೀಂದ್ರ! ತಂದೆ ವ್ಯಾಸ ರಚಿಸಿದ ಬ್ರಹ್ಮಸೂತ್ರಗಳಿಗೆ ಅನುವಾಖ್ಯಾನ-ಸರ್ವಶಾಸ್ತ್ರಾರ್ಥಸಂಗ್ರಹಗಳಿಂದ ಕೂಡಿದ ಭಾಷ್ಯವನ್ನು! ವಿಷ್ಣುವನ್ನು ಪ್ರತಿಪಾದಿಸುವ ಶಾಸ್ತ್ರಗಳಲ್ಲಿ, ವೇದಗಳನ್ನು ಅರ್ಥೈಸುವುದರಲ್ಲಿ ಇವನಿಗೆ ಸಮನಾದ ಇನ್ನೊಬ್ಬ ಜ್ಞಾನಿ ಯಾರಿದ್ದಾನೆ?!
ವಿಶಾರದ ಎಂದರೆ ವಿಷ್ಣು. 'ಮಾಯಾ ವೈಶಾರದೀ', ಎಂದು ಭಾಗವತ ಹೇಳಿತು. ಆದ್ದರಿಂದ ವೈಶಾರದೇ ಶಾಸ್ತ್ರೇ ಎಂದರೆ ವೈಷ್ಣವಶಾಸ್ತ್ರವೆಂದರ್ಥ.   ಸರ್ವಶಾಸ್ತ್ರಾರ್ಥಸಂಗ್ರಹಕ್ಕೆ ‘ಅಣುಭಾಷ್ಯ’ ಎಂತಲೂ ಹೆಸರು.

ತನ್ನ ನೋಟಕ್ಕೆ ನಿಚ್ಚ ಸಿಗುವ ಮೆಚ್ಚಾದ ದೈವ ರಾಮಚಂದ್ರನನ್ನು ಹನುಮನಾಗಿ ಲೋಕದೃಷ್ಟಿಯಲ್ಲಿ ಮೊದಲು ಕಂಡದ್ದು ಕಿಷ್ಕಿಂಧೆಯಲ್ಲಿ.
ಆ ಸೇವ್ಯ-ಸೇವಕರ ಸಮಾಗಮ ಹೇಗಿತ್ತು, ಮುಂದಿನ ಶ್ಲೋಕಗಳು ಹೇಳುತ್ತವೆ -

ಕರ್ಮಾಣಿ ಕುರ್ವನ್ ಪರಮಾದ್ಭುತಾನಿ ಸಭಾಸು ದೈವೀಷು ಸಭಾಜಿತಾನಿ
ಸುಗ್ರೀವಮಿತ್ರಂ ಸ ಜಗತ್ಪವಿತ್ರಂ ರಮಾಪತಿಂ ರಾಮತನುಂ ದದರ್ಶ

ಸಗ್ಗಿಗಳು ತಮ್ಮ ಸಭೆಗಳಲ್ಲಿ ಪ್ರೀತಿಯಿಂದ ತುತಿಸುತ್ತಾ ಸೇವಿಸುವಜಗತ್ತು ನಂಬಲಸದಳವಾದ ಕರ್ಮಗಳನ್ನು ಎಸಗುತ್ತ, ಸುಗ್ರೀವನ ಗೆಳೆಯನಾದ ಇವನು (ಹನುಮಂತ) ಕಂಡ  ರಮೆಯರಸನನ್ನು. (ಮುಂದೆ) ಸುಗ್ರೀವನಿಗೆ ಸ್ನೇಹ ಹಾಗೂ ರಕ್ಷಣೆಯನಿತ್ತು ಸಲಹುವ, ಪ್ರಕೃತಿಯ ಸೋಂಕಿಲ್ಲದ, ಪೂತಾತ್ಮನಾದ ರಾಮನನ್ನು!

'ಸಭಾಜ' ಎಂಬ ಧಾತುವಿನ ಅರ್ಥ, ಪ್ರೀತಿ ಹಾಗೂ ಸೇವೆ.
‘ಸುಗ್ರೀವಮಿತ್ರಂ’ ಎಂಬ ಶಬ್ದವನ್ನು ಎರಡು ಸಾಲಿನ ನಡುವೆ ಇಟ್ಟು ಚಮತ್ಕಾರವನ್ನು ಮಾಡಿದ ಕವಿಗೆ ನಮನ. ಅದು ಬಿಂಬನಾದ ರಾಮನಿಗೂ ಅನ್ವಯ, ಅವನ ಆಭಾಸಕನಿಗೂ ಅನ್ವಯ. ಮಿತ್ರ ಎಂದರೆ ಗೆಳೆಯ ಎಂದರ್ಥವಲ್ಲೆವೇ? ರಕ್ಷಣೆಯ ಅರ್ಥ ಹೇಗೆ?
ವೈಯಾಕರಣರು ‘ಮಿದ’ ಎಂಬ ಧಾತುವಿಗೆ ‘ಕ್ತ್ರ’ ಎಂಬ ಪ್ರತ್ಯಯವನ್ನು ಹೇಳುತ್ತಾರೆ. ನಮಗೆ ಪ್ರತ್ಯಕ್ಷರವನ್ನು ಬಿಡಿಸಿ ನೋಡುವ ಹುಚ್ಚು. ‘ತ್ರ’ ಎಂಬುದಕ್ಕೆ ತ್ರಾಣ, ರಕ್ಷಣಾ ಎಂಬರ್ಥವು ಜ್ಞಾನಿಗಳು ತೋರಿದ್ದಾರೆ. ‘ಗಾಯಂತಮ್ ತ್ರಾಯತೇ’ ಎಂದು ಗಾಯತ್ರೀ ತಾನೇ! ಅದಕ್ಕೆಂದೇ ಅವನು ಸುಗ್ರೀವನಿಗೆ ಮಿತ್ರ. ಅವನ ನೇಹಿಗನಾದ. ವಾಲಿಯಿಂದ ರಕ್ಷಣೆಯನಿತ್ತ.
ಮಾರುತಿಕೃತೇ ರವಿಜಂ ರರಕ್ಷ, ಎಂಬ ಮಾತು ಸ್ಮರಿಸೋಣ.
ಈ ಹನುಮಂತನಿಗೆ ರಾಮನು ಕಂಡದ್ದು ಅದೇ ಮೊದಲು. ಅವನಿಗೆ  ಸುಗ್ರೀವನಿಗೆ ಇವನು ಮಿತ್ರನಾಗುವದು ಹೇಗೆ ತಿಳಿಯಿತು?
ಅದಕ್ಕೆ ಹೇಳಿದ್ದು ಹನುಮಂತ ಅಂತ. ಜ್ಞಾನವಂತ. ಅವನಿಗೆ ತಿಳಿಯದ್ದೇನಿದೆ!
ರಾಮ ಸುಗ್ರೀವನಿಗೆ ಅಲ್ಲದೆ ಮತ್ತಾರಿಗೆ ಮಿತ್ರನಾಗುವ!? ಒಳ್ಳೆಯ ಮುಖದವರನ್ನು ಅಲ್ಲವೇ ಅವನು ಸಲಹುವುದು?
ಮುಖ ಎಂದರೆ ಸ್ವರೂಪ ಎಂಬುದು ಪ್ರಾಚೀನರ ಕಾಣ್ಕೆ. ಚೇತೋಮುಖಮ್, ಎಂಬ ಮಾತು ಉಪನಿಷತ್ತಿನದ್ದು.  ಅದಾದರೂ ಯಾಕೆ? ಯಾವುದು ಪ್ರಮುಖವೋ ಅದು ಮುಖ. ಒಳ್ಳೆಯ ಮುಖ ಎಂದರೂ, ಒಳ್ಳೆಯ ಜೀವರು (ಸಾತ್ವಿಕರು) ಎಂದರೂ ಒಂದೇ!
ನಮಗೂ ರಾಮನಿಗೂ ಸ್ನೇಹದ ನಂಟು ಬೆಸೆವ ಅಂತರಂಗದ ಭಂಟ ಹನುಮ!
ಸೀತೆಯನ್ನು ಕಳಕೊಂಡು ಹುಡುಕುತ್ತಾ ಬಂದ ರಾಮನನ್ನು ಹನುಮಂತ ಕಂಡ, ಕಿಷ್ಕಿಂಧೆಯಲ್ಲಿ. ಇದು ಲೋಗರ ನೋಟ. ಅವನಿಗೆ ಕಂಡದ್ದು ರಮಾಪತಿಯಾಗಿಯೇ ಬಂದ ರಾಮನನ್ನು! ರಮೆಯನ್ನು ಎಂದೂ ಅಗಲಿರದ ರಾಮನನ್ನು. ನಿತ್ಯಾವಿಯೋಗಿಯರಾದ ಸೀತಾರಾಮರನ್ನು ಕಂಡ!
ಛಂದಸ್ಸು ಭದ್ರಾ ಎಂಬ ಉಪಜಾತಿಪ್ರಬೇಧ. ಜೀವೋತ್ತಮ ಸರ್ವೋತ್ತಮರ ಸಮಾಗಮದ ಭದ್ರ ಪ್ರಸಂಗ.

Friday, March 22, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೧೦


"ಧನ್ಯನಾದ ಮಗ ನಿನಗಾಗಲಿ", ಎಂದು ಹರಸಿದರು ಜ್ಞಾನಿಗಳು. ಧನ್ಯ ಎಂದರೇ 'ಶ್ರೀಮಂತ' ಎಂದು ಹಿಂದೆ ನೋಡಿದೆವು. ಯಾರೀ ಶ್ರೀಮಂತ? ಎಂಥವನು ಇವನು? ಹಾಡಿದ ಕವಿ –

ಯೇಯೇ ಗುಣಾ ನಾಮ ಜಗತ್ಪ್ರಸಿದ್ಧಾಃ ಯಂ ತೇಷುತೇಷು ಸ್ಮ ನಿದರ್ಶಯಂತಿ
ಸಾಕ್ಷಾನ್ಮಹಾಭಾಗವತ-ಪ್ರಬರ್ಹಂ ಶ್ರೀಮಂತಮೇನಂ ಹನುಮಂತಮಾಹುಃ ೧.೧೦

ಈ ಸೃಷ್ಟಿಯಲ್ಲಿ ಏನೇನು ಗುಣ ಎಂದು ಪ್ರಸಿದ್ಧವಾಗಿದೆಯೋ, ಆ ಎಲ್ಲಾ ಗುಣಗಳ ಉದಾಹರಣೆಗೆ ಯಾರನ್ನು ವಾಲ್ಮೀಕಿ-ವ್ಯಾಸರು ಬೆರಳಿಟ್ಟು ಜಗತ್ತಿಗೆ ತೋರಿದ್ದಾರೋ, ಅವನನ್ನೇ, ಮುಖ್ಯವಾದ ಅರ್ಥದಲ್ಲಿ ಮಹಾಭಗವದ್ಭಕ್ತರಲ್ಲಿ ಹಿರಿಯನಾದವನನ್ನೇ, ಸಮಸ್ತಗುಣಸಂಪತ್ತಿನಿಂದ ಕೂಡಿದ ಸಿರಿವಂತನನ್ನೇ, ಹನುಮಂತನೆಂದು ವೈದಿಕ-ಲೌಕಿಕ ಮಾತುಗಳು ಕರೆದವು.
ಹನು ಎಂದರೆ ಜ್ಞಾನವೆಂದು ತಿಳಿದೆವು. ಹನುಮಾನ್ ಎಂದರೆ ಜ್ಞಾನವಾನ್. ಜ್ಞಾನವೇ ಮೊದಲಾದ ಸಮಸ್ತಗುಣಗಳ ಆಕರ.
ಸರ್ವಗುಣಗಳ ನಿದರ್ಶನ ಇವನೆಂದು ಸಾರಿದರು ವಾಲ್ಮೀಕಿಮಹರ್ಷಿ. ಅವರು ಯಾವ ಯಾವ ಗುಣಗಳನ್ನು ಇವನಲ್ಲಿ ಕಂಡರು? ಇಲ್ಲಿದೆ ನಾರಾಯಣರು ಉದಾಹರಿಸಿದ ಭಾವಪ್ರಕಾಶಿಕೆಯಲ್ಲಿಯ ಕೆಲ ನುಡಿಗಳು, ಉತ್ತರರಾಮಾಯಣದ ಭಾಗದಿಂದ:
"ಪರಾಕ್ರಮೌದಾರ್ಯ-ಯಶಃಪ್ರತಾಪೈಃ ಸೌಂದರ್ಯ-ಮಾಧುರ್ಯ-ನಯಾನಯೈಶ್ಚ ಗಾಂಭೀರ್ಯ-ಚಾತುರ್ಯ-ಸುವೀರ್ಯ-ಧೈರ್ಯೈರ್ಹನೂಮತಃ ಕೋsಭ್ಯಧಿಕಸ್ತ್ರಿಲೋಕ್ಯಾಮ್ "  ಪರಾಕ್ರಮ ಸೋಲಿಸುವ ತಾಕತ್ತು, ಔದಾರ್ಯ  ಈವ ಮನಸ್ಸು, ಯಶಃ  ಪೆರ್ಮೆ, ಪ್ರತಾಪ ಸೋಲಿಸಲಾಗದ ಶಕ್ತಿ, ಸೌಂದರ್ಯ ಕಣ್ಸೆಳೆವ ಸೊಬಗು, ಮಾಧುರ್ಯ ಮುದ್ದಾದ ಮಾತು, ನಯ ಪೂರ್ವಾಪರವಿಚಾರದ ವಿವೇಕ, ಅನಯ ಮೋಸಕ್ಕೆ ಪ್ರತಿತಂತ್ರ, ಗಾಂಭೀರ್ಯ ಅಳಿಯಲಾಗದ ಗತ್ತು, ಚಾತುರ್ಯ ಸಮಸ್ಯೆಯನ್ನು ಥಟ್ಟೆಂದು ಗುರುತಿಸಿ ಅದನ್ನು ಬಗೆಹರಿಸುವ ಪರಿ, ಸುವೀರ್ಯ ಯಾರೂ ಅಳಿಸಲಾಗದ ಅಂತಃಸತ್ವ, ಧೈರ್ಯ ಮುನ್ನುಗ್ಗಿ ಬರುವ ಅನಿಷ್ಟವನ್ನು ಎದುರಿಸಿ ನಿಲ್ಲುವ ಶಕ್ತಿ, ಇವೆಲ್ಲಾ ಹನುಮಂತನಲ್ಲಿ ಇದ್ದಾವಪ್ಪ ಮತ್ತೆ ಮೂರುಲೋಕದ ಜೀವರಾಶಿಗೂ ಊಹಿಸಲಾಗದ ಪರಿಯಲ್ಲಿ.
"ಪ್ರಜಾ ಮಿಮಂಕ್ಷೋರಿವ ಸಾಗರಸ್ಯ ಲೋಕಾನ್ ದಿಧಕ್ಷೋರಿವ ಪಾವಕಸ್ಯ ಸರ್ವಾನ್ ಜಿಹೀರ್ಷೋರಿವ ಚಾಂತಕಸ್ಯ ಹನೂಮತಃ ಸ್ಥಾಸ್ಯತಿ ಕಃ ಪುರಸ್ತಾತ್ " ಸೃಷ್ಟಿಯನ್ನೇ ಸಮಾಧಿಮಾಡುವ ಪ್ರಳಯಜಲದೆದಿರು ನಿಲ್ವವರುಂಟೆ? ಮೂರುಲೋಕವನ್ನೇ ಸುಡುವ ಕೊನೆಯ ಬೆಂಕಿಯ ಮುಂದೆ ಆಡುವವರುಂಟೆ? ಎಲ್ಲರನ್ನೂ ಮುಗಿಸಿಬಿಡುವ ಜವರಾಯನೆದಿರು ಮಾತಾಡುವರುಂಟೆ? ಆಹಾ! ಹನುಮಂತನೆದಿರು ನಿಲ್ವ ಗಟ್ಟಿಗರುಂಟೆ?

Monday, March 18, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೯(೨)


ತೀರ್ಥವಿಘ್ನಕರಂ ದುಷ್ಟಗಜಂ ಹತ್ವಾ ಪ್ರತೋಷಿತಾಃ ಭರದ್ವಾಜಾದಯೋ ಧನ್ಯಂ ಪುತ್ರಂ ಕೇಸರಿಣೇ ದದೌ
ಹನುಮಂತನು ಹುಟ್ಟುವುದು ಅಂದರೆ, ಪ್ರಕೃಷ್ಟಜ್ಞಾನವು  ಉದಿಸುವುದು ಎಂದು ಅರ್ಥ. ಹನು ಎಂದರೆ ಜ್ಞಾನ (ಹನುಶಬ್ದೋ ಜ್ಞಾನವಾಚೀ). ಇಂಥಾ ಪ್ರಕೃಷ್ಟಜ್ಞಾನವನ್ನು ಪಡೆವ ಅಧಿಕಾರಿ ಯಾರು? ಕೇಸರಿ. ಕ ಎಂದರೆ ಬ್ರಹ್ಮ ಅವನಲ್ಲಿಯೇ ಇವನ ಗಮನ (ಸರತಿ), ಸಂಸಾರದ ಆಮಿಷಗಳಿಂದ ನಿರ್ಗಮನ. ವಿರಕ್ತನಾದ ಮುಮುಕ್ಷು ಎಂದು ಅರ್ಥ.
ಇವನಿಗೆ ಹನುಮತನೆಂಬ ಬ್ರಹ್ಮಜ್ಞಾನವನ್ನು ಕೊಟ್ಟವರು ಯಾರು? ಭರದ್ವಾಜಾದಿ ಮುನಿಗಳು. ಜ್ಞಾನಿಗಳು ಎಂದು ಅರ್ಥ.
ಕೊಡುವುದು ಎಂದರೆ ಏನು? ಉಪದೇಶಿಸುವುದು ಎಂದು ಅರ್ಥ. ಹೇಗೆ ಉಪದೇಶ ಮಾಡಿದರು? ಪ್ರತೋಷಿತಾಃ, ಬಹಳ ಸಂತುಷ್ಟರಾಗಿ ಉಪದೇಶಿಸಿದರು. ಅದನ್ನೇ ಹೇಳಿದ್ದು," ಯದ್ದದ್ಯಾತ್ ಸುಪ್ರಸನ್ನಧೀಃ ಶಿಷ್ಯಾಯ ಸತ್ಯಂ ಭವತಿ", ಎಂದು.
ಅವರು ಸಂತುಷ್ಟರಾಗುವುದು ಹೇಗೆ? ತೀರ್ಥವಿಘ್ನಕರಂ ದುಷ್ಟಗಜಂ ಹತ್ವಾ! ತೀರ್ಥ ಎಂದರೆ ಶಾಸ್ತ್ರ. ಅದರ ಅಧ್ಯಯನಕ್ಕೆ ಬರುವ ದೊಡ್ಡ ವಿಘ್ನ, ಅದು ಮದವೇರಿದ ಗಜ, ಅಹಂಕಾರದಿಂದ ಕುರುಡಾದ ಮನಸ್ಸು. ಪಾತ್ರೆಯನ್ನು ತೊಳೆಯದೆ ಅಮೃತವನ್ನು ಹಾಕಿದರೆ ಏನಾದೀತು! ದುಷ್ಟ ಮನಸ್ಸಿನಲ್ಲಿ ಎಷ್ಟೇ ಸದ್ವಿಚಾರವನ್ನು ತುಂಬಿದರು ಅದು ಕೆಸರಿಗೆ ಸೇರಿ ಕೆಸರೇ ಆಗಿಬಿಡುತ್ತದೆ. ಮೊದಲು ಮನಸ್ಸಿನ ದುಷ್ಟತನವನ್ನು ಕೊಲ್ಲಬೇಕು. ಕೊಲ್ಲುವುದು ಎಂದರೆ ಏನು?
ಅದರ ಒಂದೊಂದು ನಡೆಯನ್ನು ಸೂಕ್ಷ್ಮವಾಗಿ ವಿಮರ್ಶಿಸುವುದು ಎಂದು ಅರ್ಥ.
"ಹನನಂ ವಿಮರ್ಶ ಏವ", ಎಂದು ಆಚಾರ್ಯರ ಮಾತು. ಪದೇ ಪದೇ, ಕುಳಿತಾಗ, ನಿಂತಾಗ, ಜಗಳಾಡುವಾಗ, ತಿನ್ನುವಾಗ, ಬೈವಾಗ, ಹೊಗಳಿಕೊಳ್ಳುವಾಗ, ಆತ್ಮವನ್ನು ಅವಲೋಕಿಸುತ್ತಿರಬೇಕು. ಅದು ಹೇಗೆ ಸಾಧ್ಯ? ವಿಮರ್ಶೆಗೆ ಮನಸ್ಸನ್ನು ಒಳಪಡಿಸುವುದು ಹೇಗೆ? ಉತ್ತರ ಭಾಗವತದಲ್ಲಿದೆ:
"ಅಸಂಕಲ್ಪಾಜ್ಜಯೇತ್ ಕಾಮಂ ಕ್ರೋಧಮ್ ಕಾಮವಿವರ್ಜನಾತ್ ಅರ್ಥಾನರ್ಥೇಕ್ಷಯಾ ಲೋಭಂ ಭಯಂ ತತ್ವಾವಮರ್ಶನಾತ್ ಅನ್ವೀಕ್ಷಕ್ಯಾ ಶೋಕಮೋಹೌ ದಂಭಂ ಮಹದುಪಾಸಯಾ ಯೋಗಾಂತರಾಯಾನ್ ಮೌನೇನ ಹಿಂಸಾ ಕಾಯಾದನೀಹಯಾ" ೦೭.೧೬.೨೨-೨೩
ಮನಸ್ಸಿನ ಎಲ್ಲಾ ಕೊಳೆಗಳನ್ನು ಕೊಲ್ಲುವ ಹಾದಿ ಇಲ್ಲಿದೆ. ಮದವನ್ನು ಕೊಲ್ಲಲು ಕೇಸರಿಯಾದವನು ವಿಶೇಷವಾಗಿ ಮಹಾತ್ಮರ ಉಪಾಸನೆ ಮಾಡಬೇಕು.
ಕೇಳಿಲ್ಲವೇ,"ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನೋ ತತ್ವದರ್ಶಿನಃ " ಎಂಥಾ ಜ್ಞಾನವನ್ನು ಕೊಡುವರು? ಧನ್ಯವಾದ, ಪುತ್ರನನ್ನು, ಹನುಮಂತನನ್ನು ಕೊಡುವರು.
ಧನ್ಯ ಎಂದರೆ  'ಸಂಪತ್ತಿನಿಂದ ಕೂಡಿದ' ಎಂದು ಅರ್ಥ. ಸಿರಿವಂತನಾದ ಮಗ, ಇಹದಲ್ಲಿ ಸಕಲ ಸಾತ್ವಿಕಸಂಪತ್ತಿನಿಂದ ಕೂಡಿದ ಜ್ಞಾನ. ಪರದಲ್ಲಿ ನರಕಾದಿಗಳಿಂದ ಪಾರುಮಾಡುವ, ಮೋಕ್ಷಕ್ಕೆ ಕರೆದೊಯ್ಯುವ ತಾಕತ್ತಿನ ಜ್ಞಾನವನ್ನು ಇತ್ತು ಸಲಹುವರು.
ಇದೇ ಕೇಸರಿಗೆ ಹನುಮಂತ ಹುಟ್ಟಿದ ಎಂಬ ಕಥೆಯ ಅಧ್ಯಾತ್ಮ.
ನಾವೂ ಕೇಸರಿಗಳಾಗುವ ಪಾಠ! ಮನಸ್ಸನ್ನು ಹಿರಿಯರ ಪಾದರಜೋಭಿಷೇಕದಿಂದ ತೊಳೆಯುವ ಹಠ. ಅವರು ತಾವೇ ಸಂತುಷ್ಟರಾಗಿ ಹನುಮಂತನನ್ನು ನಮ್ಮ ಪಾಲಿಗೆ ಹುಟ್ಟಿಸುತ್ತಾರೆ, ಇದು ದಿಟ.

Sunday, March 17, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೯(೧)


ಆನಂದತೀರ್ಥರ ಭಾವವನ್ನು ಅವರ ಮುಖದಿಂದಲೇ ಅನುಭವಿಸಿದ ಹಿರಿಯಜೀವ ನಾರಾಯಣಪಂಡಿತರು. ಮಧ್ವರ   ಜೀವನಗಾಥೆಯನ್ನು ಅವರನುಗ್ರಹದಿಂದಲೆ ಬಣ್ಣಿಸಿದ ಕೃತಕೃತ್ಯರು. ತಮ್ಮನ್ನು ಅಸೂಕ್ಷ್ಮದೃಷ್ಟಿ, ಮಂದಬುದ್ಧಿ ಎಂದು ಕರೆದುಕೊಳ್ಳುವ ಪರಿಯನ್ನು ನೋಡಿದರೆ ತಿಳಿದೀತು, ಇದೆಷ್ಟು ಮಾಗಿದ ಜೀವವಿರಬೇಕು! ಗುರುಗಳಿಗೆ ಇನ್ನೆಷ್ಟು ಬಾಗಿದ ಮನಸ್ಸಿರಬೇಕು! ಹನುಮನೂ ಹೀಗೆ ವಿನಯದ ಮಾತನಾಡಿದ್ದ ತಾಯಿ ಸೀತೆಯ ಇದಿರು, "ಮತ್ತಃ ಪ್ರತ್ಯವರಃ ಕಶ್ಚಿನ್ನಾಸ್ತಿ ಸುಗ್ರೀವಸನ್ನಿಧೌ", ಎಂದು (ಅಮ್ಮ, ನನಗಿಂತ ಕಿರಿಯನಾದ ಇನ್ನೊಬ್ಬ ಕಪಿ ಸುಗ್ರೀವನ ಬಳಿಯಿಲ್ಲ). ಜೀವೋತ್ತಮನ ಬಾಯಲ್ಲಿ ಇಂಥಾ ಮಾತು! ಅದರ ಪ್ರತಿಬಿಂಬವೇ ಅವನ ಶಿಷ್ಯರ ನುಡಿಯಲ್ಲಿ! ಇದರಿಂದ ಮನಸ್ಸು ತಪಸ್ಸಿಗೆ ಕೂರಬೇಕು. ನಮ್ಮ ಮುಖವಾಡದ ಬದುಕು ಎಷ್ಟು ಅಸಹ್ಯವೆಂಬ ಸತ್ಯದರ್ಶನವಾಗಬೇಕು. ಆಗಲೇ ಅಲ್ಲವೇ ಉನ್ನತಿಯ ದಾರಿ ಕಾಣುವುದು. ಟೊಳ್ಳುತಲೆಯೊಳಗಿನ ಆರ್ಭಟವೇ ಮಧುರನಾದವೆಂದು ಬಗೆದ ಮನುಜರಿಗೆ ಇದು ಅರ್ಥವಾಗದ ಸಂಗತಿ. ಮೌನವೇ ನಿನಗೆ ಶರಣು!
ಮುಂದೆ ಸಾಗುವ.
‘ವಾಯೋರವತಾರಲೀಲಾಂ ವಕ್ಷ್ಯಾಮಿ’, ಎಂದು ಹೇಳಿದ್ದರು ಕವಿ ನಾರಾಯಣರು. ಅದರಲ್ಲಿ ವಾಯುವಿನ ಮೊದಲ ಅವತಾರವಾದ ಹನುಮಂತನ ಚರಿತೆಯನ್ನು ಮುಂದಿನ ಹತ್ತೊಂಭತ್ತು ಪದ್ಯಗಳಲ್ಲಿ ವರ್ಣಿಸುತ್ತಾರೆ.

ಶ್ರೀ-ವಲ್ಲಭಾಜ್ಞಾಂ ಸ-ಸುರೇಂದ್ರ-ಯಾಚ್ಞಾಂ ಸಂಭಾವ್ಯ ಸಂಭಾವ್ಯತಮಾಂ ತ್ರಿಲೋಕ್ಯಾಮ್ ।
ಪ್ರಾಣೇಶ್ವರಃ ಪ್ರಾಣಿ-ಗಣ-ಪ್ರಣೇತಾ ಗುರುಃ ಸತಾಂ ಕೇಸರಿಣೋ ಗೃಹೇsಭೂತ್ ॥     ೧.೯ ॥

ಸರ್ವಜೀವಜಾತದ ನಾಯಕ, ಜೀವಕಲಾಭಿಮಾನಿ, ಸುಜನರ ಗುರು, ಮುಖ್ಯಪ್ರಾಣನು ಹನುಮನಾಗುದಿಸಿದನು. ಕೇಸರಿಯ ಮಡದಿ ಅಂಜನೆಯಲ್ಲಿ! ಗೃಹ ಎಂದರೆ ಮನೆಯಲ್ಲವೆ? ಮಡದಿ ಹೇಗಾಯ್ತು? ಗೃಹಯತೇ, ಹಿಡಿಯುತ್ತಾಳೆ ಎಲ್ಲವನ್ನೂ, ಮನೆಯ ಸರ್ವಸ್ವವನ್ನೂ ಆದ್ದರಿಂದ ಹೆಂಡತಿಯೇ ಗೃಹ.
ಮೂರುಲೋಕದಲ್ಲಿ ಎಲ್ಲರಿಂದಲೂ ಮನ್ನಿಸಬೇಕಾದ ರಮೆಯರಸನ ಆಜ್ಞೆಗೆ ಮಣಿದು ಹುಟ್ಟಿದ. "ಸ್ವಾಮೀ! ನಮ್ಮನ್ನು ಕಾಡುವ ಹಗೆಗಳನ್ನು ಬಗಿಯಲು, ಮಿಗಿಲಾದ ಹರಿಯ ಸೊಗಸನ್ನು ಪೋಗಳಲು ಇಳೆಗಿಳಿದು ಬಾ", ಎಂಬ ಸಗ್ಗಿಗರ ಪ್ರಾರ್ಥನೆಯನ್ನು ಮನ್ನಿಸಿ ಹುಟ್ಟಿದ.
ಬಾಲಹನುಮನನ್ನು ಬಣ್ಣಿಸುವ ನಡೆಯ ಹೆಸರೂ "ಬಾಲಾ". ಭಾವಪ್ರಕಾಶಿಕೆಯಲ್ಲಿ ನಾರಾಯಣರು  ಪೂರ್ವಕಥಾನಕವನ್ನು ಉದಾಹರಿಸುತ್ತಾರೆ-
“ತೀರ್ಥವಿಘ್ನಕರಂ ದುಷ್ಟಗಜಂ ಹತ್ವಾ ಪ್ರತೋಷಿತಾಃ ।   ಭರದ್ವಾಜಾದಯೋ ಧನ್ಯಂ ಪುತ್ರಂ ಕೇಸರಿಣೇ ದದೌ "
ಪಾವನವಾದ ತೀರ್ಥವನ್ನು ಹಾಳುಗೆಡವಲು ಬಂದ ಆನೆಯ ರೂಪದ ದುಷ್ಟನನ್ನು ಕೊಂದ ಕೇಸರಿ. ಆ ಕಾರಣ, ಸಂತುಷ್ಟರಾದ ಭರದ್ವಾಜರೇ ಮೊದಲಾದ ಮುನಿಗಳು ಧನ್ಯನಾದ ಪುತ್ರನನ್ನು ಅವನಿಗಿತ್ತರು.
ಋಷಿಗಳ ಅನುಗ್ರಹದಿಂದ ಅವತರಿಸಿದ ಮುಖ್ಯಪ್ರಾಣ, ಹನುಮನಾಗಿ.
ಈ ಶ್ಲೋಕವನ್ನೇಕೆ ಕೊಟ್ಟರು ಕವಿಗಳು? ನಮಗೆ ಅಧ್ಯಾತ್ಮದ ಅರಿವು ಮೂಡಿಸಲು. ಯಾರೋ ತ್ರೇತೆಯಲ್ಲಿ ಇದ್ದ ಕಪಿಗೆ ಮುನಿಗಳು ಒಲಿದು ವರವಿತ್ತ ಕಾರಣ ಹುಟ್ಟಿದ ಹನುಮನ ಕಥೆಯಲ್ಲ ಅದು. ಒಳಗೆ ಒಂದು ಸೊಗಸಿದೆ. ಹನುಮ ನಮ್ಮ ಮಡದಿಗೆ ಹುಟ್ಟಬೇಕು. ಹನುಮನ ಅವತಾರ ನಮ್ಮಲ್ಲೂ ಆಗಬೇಕು. ಅದು ಹೇಗೆ? ನೋಡುವ!

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೭-೦೮


ಅಪೌರುಷೇಯವಚನಗಳೇ ಹೀಗೆ ಬಹುವಾಗಿ ಕೊಂಡಾಡುವ ಜಗದ್ಗುರುವಿನ ಮಹಿಮೆಗೆ ಪಾರವಿದೆಯೇ! ಆ ಮಹಾಚರಿತೆಯನ್ನು ಪೌರುಷೇಯವಾಕು ಹೇಗೆ ತಾನೇ ಬಣ್ಣಿಸೀತು! ಈ ಯೋಚನೆಯಲ್ಲೇ ಕವಿ ನುಡಿದ –

ಉಚ್ಚಾವಚಾ ಯೇನ ಸಮಸ್ತ-ಚೇಷ್ಟಾಃ  ಕಿಂ ತತ್ರ ಚಿತ್ರಂ ಚರಿತಂ ನಿವೇದ್ಯಮ್ ।
ಕಿಂತೂತ್ತಮ-ಶ್ಲೋಕ-ಶಿಖಾಮಣೀನಾಂ  ಮನೋವಿಶುದ್ಯೈ ಚರಿತಾನುವಾದಃ ॥ ೧.೭ ॥

ಮುಖ್ಯಪ್ರಾಣನಿಂದಾಗುವುವು ಬಹುಬಗೆಯ ಸಂಗತಿಗಳು ಜಗತ್ತಿನಲ್ಲಿ, ಅವುಗಳಲ್ಲಿ ಇವು ದೊಡ್ಡವು, ಇವು ಚಿಕ್ಕವೆಂದು ಹೇಳಲಾದೀತೆ!! ತೃಣನಿಂದಾರಂಭಿಸಿ ಬ್ರಹ್ಮನ ಪರ್ಯಂತ ಸರ್ವಜೀವರಿಗೆ ಜೀವನವಿತ್ತವ! ಭಗವಂತನ ಕಾರ್ಯವನ್ನು ಸಾಧಿಸಲು ಬೇರೆಯವರಿಗಸದಳವಾದ ಲೀಲೆಯನ್ನು ತೋರಿದವ, ಸರ್ವತತ್ವಾಭಿಮಾನಿದೇವರ್ಕಳಿಂದ ನಿತ್ಯ ಸ್ತುತ್ಯಚರಿತನಾದ ಇವನ ಚೇಷ್ಟೆಗಳಿಗೆ ಇತಿಯುಂಟೆ! ಅದರಲ್ಲಿ ಇವನ್ನು ಕೊಂಡಾಡುವ, ಇವಿಷ್ಟನ್ನು ಬಿಟ್ಟುಬಿಡುವ ಎನ್ನಲಾದೀತೆ!! ಯಾವುದನ್ನು ಇದು ಬಹಳ ಸೊಗಸು ಎಂದು ಬಣ್ಣಿಸಲಿ!?
ಅವನ ಅಂತರ್ಯಾಮಿಯ ಪ್ರೇರಣೆಯಿಂದ ಆಗುತ್ತಿರುವ ಸಕಲಕರ್ಮಗಳಲ್ಲಿ ಯಾವುದನ್ನು ಆರಿಸಿ ತೂಗಿ ಹಾಡಲಿ!?
ಆಗಲಿ, ಇಷ್ಟು ಯೋಚಿಸೋದು ಬೇಡ. ಹಿರಿಯಯಶಸ್ಸನ್ನು ಗಳಿಸಿದ ಮಂದಿಯ ಮುಡಿರನ್ನರಾದ ಮಹಾತ್ಮರ ಚರಿತೆಯನ್ನು ಸ್ವಲ್ಪವಾದರೂ ಹಾಡಬೇಕು. ಅದರಿಂದಲೇ ಅಲ್ಲವೇ ಒಳಬಗೆಯು ಶುದ್ಧವಾಗುವುದು.
ಛಂದಸ್ಸು "ಬಾಲಾ" ಎಂಬ ಉಪಜಾತಿಪ್ರಬೇಧ. ಬಾಲಕನ ಕಲಭಾಷೆಯಿಂದ ಪ್ರಬಲನ ಮಹಿಮೆಯನ್ನು ಕೊಂಡಾಡಲು ಹುರುಪು ಕಂಡುಕೊಂಡ ನಡೆ.

ಮಾಲಾ-ಕೃತಸ್ತಚ್ಚರಿತಾಖ್ಯ-ರತ್ನೈರಸೂಕ್ಷ್ಮ-ದೃಷ್ಟೇಃ ಸ-ಕುತೂಲಹಸ್ಯ ।
ಪೂರ್ವಾಪರೀಕಾರಮಥಾಪರಂ ವಾ ಕ್ಷಾಮ್ಯಂತು ಮೇ ಹಂತ ಮುಹುರ್ಮಹಾಂತಃ ॥ ೧.೮ ॥     

ಅಪಾರವಾದ ಈ ಮಹಾತ್ಮನ ಮಹಿಮೆಗಳೆಂಬ ಬೆಲೆಗಟ್ಟಲಾಗದ ರತ್ನರಾಶಿಯನ್ನು ಕಂಡು ಬೆರಗಾದ ಮಾಲೆಪೋಣಿಸುವವ ನಾನು! ಪೋಣಿಸ ಹೊರಟ ನನಗೆ ಆದದ್ದು ಇದು... ಆಹಾ! ನನ್ನ ಅಂತರಂಗದ ಗುರುವಿನ ಮಹಿಮಾರತ್ನಗಳು ಎಷ್ಟು ಹಿರಿದು! ಎಲ್ಲಿಂದ ಪೋಣಿಸಲಿ. ಯಾವುದನ್ನು ಮೊದಲು ಪೋಣಿಸಲಿ... ಯಾವುದನ್ನು ಮತ್ತೆ...? ತಿಳಿಯದಾಗಿದೆ ನನಗೆ!!
ಹೀಗೆ ಚರಿತೆಯನ್ನು ಕೊಂಡಾಡುವ ಭರದಲ್ಲಿ ಮುಂದೆ ಹೇಳಬೇಕಾದ್ದನ್ನು ಹಿಂದೆ, ಹಿಂದೆ ಹೇಳಬೇಕಾದ್ದನ್ನು ಮುಂದೆ ಮಾಡಿರಬಹುದು. ಇದಕ್ಕೆ ನನ್ನ ಮಂದದೃಷ್ಟಿಯೇ ಕಾರಣ. ಅದಾದರೂ ಆದದ್ದು ರಮ್ಯವಾದ ಆಚಾರ್ಯರ ಚರಿತೆಯನ್ನು ಕೊಂಡಾಡಬೇಕು ಎನ್ನುವ ಉತ್ಕಂಠೆಯಿಂದ. ಇವೆಲ್ಲ ಈ ಮಾಲಾಕಾರನಾದ ನಾರಾಯಣನ ಸಣ್ಣ ತಪ್ಪುಗಳೆಂದು ಬಗೆದು ಅನುಕಂಪೆಯಿಂದ ಸಹಿಸಿಕೊಂಡುಬಿಡಿ ಮಹಾತ್ಮರು!
ಛಂದಸ್ಸು "ವಾಣೀ" ಎಂಬ ಉಪಜಾತಿಪ್ರಬೇಧ. ಮತ್ತೆ ಮಾತು ವಾಯುವಿನ ಗುಣಕಥನಕ್ಕೆ ಮೀಸಲಿರಲಿ.

Saturday, March 16, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೬(೧೨)


ಇನ್ನು ಕಡೆಯಲ್ಲಿ ಎರಡು ಬಿಡಿಯಾದ ಮಂತ್ರಗಳನ್ನು ಉದಾಹರಿಸುತ್ತಾರೆ. ಈ ಮಂತ್ರಗಳಲ್ಲಿ ಮಧ್ವ ಎಂಬ ನಾಮವು ಗೋಚರಿಸುವುದು ವಿಶೇಷ.

ಮೊದಲ ಮಂತ್ರ:
"ವಿಷ್ಣೋರ್ನು ಕಮ್", ಎಂದು ಆರಂಭವಾಗುವ ಆರು ಮಂತ್ರಗಳ ವಿಷ್ಣುಸೂಕ್ತವು ದೀರ್ಘತಮಸ್ ಎಂಬ ಋಷಿಯಿಂದ ಬಂದದ್ದು. ತ್ರಿಷ್ಟುಪ್ ಛಂದಸ್ಸು.  ಆರು ಮಂತ್ರಗಳಲ್ಲಿ ಈ ಮಂತ್ರವು ಐದನೆದ್ದು.

ತದಸ್ಯ ಪ್ರಿಯಮಭಿ ಪಾಥೋ ಅಶ್ಯಾಂ ನರೋ ಯತ್ರ ದೇವಯವೋ ಮದಂತಿ  
ಉರುಕ್ರಮಸ್ಯ ಸ ಬಂಧುರಿತ್ಥಾ ವಿಷ್ಣೋಃ ಪದೇ ಪರಮೇ ಮಧ್ವ ಉತ್ಸಃ ॥

ನನ್ನ ಗುರು ಆನಂದತೀರ್ಥನಿಂದ ಆವಿಷ್ಕೃತವಾದ ಆ ಮಹಾವಿಷ್ಣುವಿನ ಪ್ರಿಯವಾದ ಹಾದಿಯನ್ನು, ವೈಷ್ಣವಪದವನ್ನು ಹೊಂದುವೆ! ಅಲ್ಲೇ ಅಲ್ಲವೇ ಹರಿಯನ್ನು ಬಯಸುವ ಸಕಲ ಸಾತ್ವಿಕರು ಸ್ವರೂಪಾನಂದವನ್ನು ಅನುಭವಿಸುತ್ತಾರೆ! ಉರುಕ್ರಮನ ನಿಜತತ್ವವನ್ನು ಸಾರಿದ ಮಧ್ವನೆ ಅಲ್ಲವೇ ಹರಿಯ ಆತ್ಮಬಂಧು. ಆ ಮಹಾವಿಷ್ಣುವಿನ ಹಿರಿದಾದ ತಾಣದಲ್ಲಿ ಇವನೇ ಎಲ್ಲರಿಗಿಂತಲೂ ಮೇಲೇರಿದವ, ಅಲ್ಲಿ ಎಲ್ಲರಿಗೂ ಮೀರಿದ ಆನಂದವನ್ನು ಅನುಭವಿಸುವವ.

ಎರಡನೇ ಮಂತ್ರ:
"ಏಕಃ ಸಮುದ್ರಃ", ಎಂದು ಆರಂಭವಾಗುವ ಹತ್ತನೇ ಮಂಡಲದ ಏಳು ಸೂಕ್ತಗಳ ದೇವತೆಯು ಪ್ರಾಣಾಗ್ನಿ. ಕಂಡ ಋಷಿ ತ್ರಿತ. ಛಂದಸ್ಸು ತ್ರಿಷ್ಟುಪ್. ಏಳರಲ್ಲಿ ಇದು ಐದನೇ ಮಂತ್ರ:

ಸಪ್ತ ಸ್ವಸೃರರುಷೀರ್ವಾವಶಾನೋ ವಿದ್ವಾನ್ ಮಧ್ವ ಉಜ್ಜಭಾರಾ ದೃಶೇ ಕಮ್    
ಅಂತರ್ಯೇಮೇ ಅಂತರಿಕ್ಷೇ ಪುರಾಜಾ ಇಚ್ಚನ್ ವವ್ರಿಮವಿದತ್ ಪೂಷಣಸ್ಯ ॥

ತತ್ವವನ್ನು ಜಗತ್ತಿನಲ್ಲಿ ಪ್ರಕಟಿಸಬೇಕು ಎಂಬ ಅಭಿಲಾಷೆಯಿಂದ, ವಿದ್ವಾನ್ ಮಧ್ವನು, ಆನಂದವನ್ನು ಕರೆವಂಥಾ, ಸ್ವತಂತ್ರನಾದ ಬ್ರಹ್ಮನನ್ನು ಪ್ರತಿಪಾದಿಸುವ ಸಪ್ತಮಹಾವಿದ್ಯೆಗಳನ್ನು ತನ್ನ ಮುದ್ದಾದ ವ್ಯಾಖ್ಯಾನದಿಂದ ಉದ್ಧರಿಸಿದ, ಸುಜನರಿಗೆಲ್ಲಾ ಸತ್ಯದ ದರ್ಶನವಾಗಲಿ ಎಂಬ ಇಚ್ಛೆಯಿಂದ!
ಇವನು ನಮ್ಮ ದೇಹವೆಂಬ ಪುರದಲ್ಲಿ ನಮ್ಮೊಂದಿಗೆ ಹುಟ್ಟುವ ತಾತ್ವಿಕರ ಹೃದಯದೊಳಗಾಡುವ ಹಿರಿಯ ದೈವ! ಇವನನ್ನು ಸಲಹುವ, ಪೂರ್ಣಜ್ಞಾನಬಲರೂಪನಾದ ವಿಷ್ಣುವಿನ ಗುಣಗಡಣವನ್ನು ಅವನ ಪ್ರೇರಣೆಯಿಂದಲೇ ಚೆನ್ನಾಗಿ ತಿಳಿದವನು, ಚೆನ್ನಾಗಿ ತಿಳಿಸುವವನು.

Thursday, March 14, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೬(೧೧)


ಹದಿಮೂರು ಮಂತ್ರಗಳಲ್ಲಿ ಹನ್ನೆರಡನೇ ಮಂತ್ರ:
ರಥಾಯ ನಾವಮುತ ನೋ ಗೃಹಾಯ ನಿತ್ಯಾರಿತ್ರಾಂ ಪದ್ವತೀಂ ರಾಸ್ಯಗ್ನೇ ।            
ಆಸ್ಮಾಕಂ ವೀರಾನ್ ಉತ ನೋ ಮಘೋನೋ ಜನಾಂಶ್ಚ ಯಾ ಪಾರಯಾಚ್ಛರ್ಮ ಯಾ ಚ ॥

ಹೇ ಸರ್ವಜ್ಞ, ಅಜ್ಞಾನನಾಶಕ (ಅಗ್ನೇ)! ಕೊಡು ನಮಗೆ ಸಂಸಾರಸಾಗರವನ್ನು ಹಾಯಿಸುವ ದೋಣಿಯನ್ನು (ನಾವಂ ರಾಸಿ), ಆನಂದದ ಚಿಲುಮೆಯಾದ(ರಥಾಯ) ನನ್ನ ಬಿಂಬನ ಮನೆಗೆ (ಗೃಹಾಯ) ಕೊಂಡೊಯ್ಯುವ ದೋಣಿಯನ್ನು! ಭಕ್ತಿಯೆಂಬ ಹುಟ್ಟುಗೊಲಿಂದ ಭಗವಂತನೆಡೆಗೆ ಸಾಗುವ ದೋಣಿಯನ್ನು (ಅರಿತ್ರಾಂ ಪದ್ವತೀಂ)!
ನನ್ನಷ್ಟೇ ಅಲ್ಲ, ಮತ್ತೆ ನನ್ನಂಥಾ ಎಷ್ಟೋ ವೀರರು(ಆಸ್ಮಾಕಂ ವೀರಾನ್ ಉತ) ಈ ದೋಣಿಯಲ್ಲಿ ಸಾಗಲು ಸಜ್ಜಾಗಿದ್ದಾರೆ, ಅವರಿಗೆ ಗಟ್ಟಿಯಾದ ದೋಣಿಯನ್ನೀಯು. ನನ್ನ ಆತ್ಮಬಂಧುಗಳಾದ ಎಲ್ಲಾ ಸಾತ್ವಿಕರನ್ನೂ, ಜ್ಞಾನಸಂಪತ್ತಿನಿಂದ ಕೂಡಿದವರನ್ನೂ (ಮಘೋನೋ ಜನಾಂಶ್ಚ) ದಡಮುಟ್ಟಿಸು! ಸ್ವರೂಪಾನಂದವನ್ನು ನಿತ್ಯವೂ ಕೊಟ್ಟು ಸಲಹು!
ಇದೇ ನಮ್ಮ ಅಂತರಂಗದ ಪ್ರಾರ್ಥನೆ.

ಹದಿಮೂರು ಮಂತ್ರಗಳಲ್ಲಿ ಹದಿಮೂರನೇ ಮಂತ್ರ: 
ಅಭೀ ನೋ ಅಗ್ನ ಉಕ್ಥಮಿಜ್ಜುಗುರ್ಯಾ ದ್ಯಾವಾಕ್ಷಾಮಾ ಸಿಂಧವಶ್ಚ ಸ್ವಗೂರ್ತಾಃ ।  
ಗವ್ಯಂ ಯವ್ಯಂ ಯಂತೋ ದೀರ್ಘಾಹೇಷಮ್ ವರಮರುಣ್ಯೋ ವರಂತ ॥      

ಹೇ ಸರ್ವತತ್ವಾಭಿಮಾನಿನೇತಾ (ಅಗ್ನೇ)! ನಾವು ಮಾಡಿದ ಈ ಸ್ತುತಿಯನ್ನು ಸ್ವೀಕರಿಸು (ಉಕ್ಥಮಿಜ್ಜುಗುರ್ಯಾ)
ನಿನ್ನ ಅನುಗ್ರಹದಿಂದ ಭೂಮಿ ಅಂತರಿಕ್ಷಗಳು (ದ್ಯಾವಾಕ್ಷಾಮಾ), ಮೇಲೇರಿಸುವ, ಕರುಣೆಯ ಕಡಲಾದ ತತ್ವನಿಯಾಮಕಸುರರು (ಸಿಂಧವಶ್ಚ ಸ್ವಗೂರ್ತಾ:), ವೇದಪ್ರತಿಪಾದ್ಯನಾದ (ಗವ್ಯಂ), ಧ್ಯಾನದ ಸ್ಥಿತಿಯಲ್ಲಿ ಆತ್ಮದಲ್ಲಿ ಗೋಚರಿಸುವ (ಯವ್ಯಂ) ಪರಬ್ರಹ್ಮನನ್ನು ಸೇರಿಸುವವರಾಗಲಿ (ಯಂತೋ). ದಿನದಿನವೂ (ದೀರ್ಘಾಹ) ನಮಗೆ ಇಷ್ಟವಾದ, ಆತ್ಮಕ್ಕೆ ಪುಷ್ಟಿಯನ್ನೀವ ಜ್ಞಾನಾನ್ನದ (ಇಷಮ್) ವರವನ್ನು ಕರೆಯಲಿ (ವರಂತ)!

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೬(೧೦)


ಹದಿಮೂರು ಮಂತ್ರಗಳಲ್ಲಿ ಹತ್ತನೇ ಮಂತ್ರ:
ಅಸ್ಮಾಕಮಗ್ನೇ ಮಘವತ್ಸು ದೀದಿಹ್ಯಧ ಶ್ವಸೀವಾನ್ ವೃಷಭೋ ದಮೂನಾಃ ।       
ಅವಾಸ್ಯಾ ಶಿಶುಮತೀರದೀದೇರ್ವರ್ಮೇವ ಯುತ್ಸು ಪರಿಜರ್ಭುರಾಣಃ ॥

ಹೇ ನಮ್ಮೊಳಗಿನ ದೀಪವೇ, ನಮ್ಮ ಪ್ರೇರಕಶಕ್ತಿಯೇ (ಅಗ್ನೇ)! ಸಾತ್ವಿಕವಾದ ಸಂಪತ್ತಿನಿಂದ ತುಂಬಿರುವ ನಮ್ಮ ಮನೆ-ಮನಗಳಲ್ಲಿ (ಅಸ್ಮಾಕಂ ಮಘವತ್ಸು) ಬೆಳಗು (ದೀದಿಹಿ), ನಿನ್ನೊಳಗಿನ ಅಗ್ನಿಯ ಅರಿವುಕೊಡು. ನಮಗೆ ಉಸಿರಿತ್ತ ದೈವವೇ, ನಮ್ಮ ಉಸಿರು ಉಸಿರು ನಿನ್ನ ಸೇವೆಗಿರಲಿ, ಎಲ್ಲವೂ ನಿನ್ನಿಂದ ಆದದ್ದು ಎಂಬ ಅರಿವು ಇರಲಿ (ಶ್ವಸೀವಾನ್). ಜೀವೋತ್ತಮನಾದ, ವಿಷ್ಣುಭಕ್ತರಲ್ಲಿ ಅಗ್ರಣಿಯಾದ ನೀನು (ವೃಷಭಃ), ನಮ್ಮ ಎಲ್ಲಾ ಅಶುಭವಾದ ನಡೆ-ನುಡಿಗಳನ್ನು ದಮನ ಮಾಡು (ದಮೂನಾಃ). ನಮ್ಮದು ಹುಡುಗು ಬುದ್ಧಿ ಸ್ವಾಮಿ!! (ಶಿಶುಮತಿ). ಊಟ-ನಿದ್ದೆ-ಮೈಥುನಗಳಲ್ಲಿ ಜಾರಿ ಹೋದ ಮನಸ್ಸು ನಮ್ಮದು! ಆ ಇಳಿಜಾರಿನಿಂದ ನಮ್ಮನ್ನು ಎತ್ತು, ಬಳಕಿನೂರಿಗೆ ಸಾಗಿಸು(ಅವಾಸ್ಯ ಅದೀದೇಃ). ಅಜ್ಞಾನದ ವಿರುದ್ಧ ಮಾಡುವ ತತ್ವವಾದದ ಯುದ್ಧದಲ್ಲಿ ಸೋಲದಂತೆ ನಮ್ಮನ್ನು ಕಾವ ಕವಚವಾಗು (ವರ್ಮೇವ ಯುತ್ಸು ಪರಿಜರ್ಭುರಾಣಃ).
ನಾವೆಲ್ಲರೂ ನಿತ್ಯ ಮಾಡಬೇಕಾದ ವಾಯುಸ್ತುತಿ ಇದೇ ಅಲ್ಲವೇ!!

ಇನ್ನು ಇಲ್ಲಿಂದ ಕಡೆಯ ವರ್ಗದ ಮೂರು ಮಂತ್ರಗಳನ್ನು ನೋಡುವ.

ಹದಿಮೂರು ಮಂತ್ರಗಳಲ್ಲಿ ಹನ್ನೊಂದನೇ ಮಂತ್ರ:
ಇದಮಗ್ನೇ ಸುಧಿತಂ ದುರ್ಧಿತಾದಧಿ ಪ್ರಿಯಾದು ಚಿನ್ಮನ್ಮನಃ ಪ್ರೇಯೋ ಅಸ್ತು ತೇ ।    
ಯತ್ ತೇ ಶುಕ್ರಂ ತನ್ವೋ ರೋಚತೇ ಶುಚಿ ತೇನಾಸ್ಮಭ್ಯಂ ವನಸೇ ರತ್ನಮಾ ತ್ವಮ್ ॥       

ಹೇ ಸರ್ವಜ್ಞ (ಅಗ್ನೇ)! ತತ್ವವಾದದ ಯುದ್ಧ ಗೆದಿಯ ಬಯಸುವ ನಾವು ನೀನು ಹೇಳಿದ, ವೇದಕ್ಕೆ ದುಷ್ಟ ಅರ್ಥಗಳನ್ನು ಹೇಳಿ ಹಾಳುಗೆಡವಿದ ಅಪವ್ಯಾಖ್ಯಾನಗಳನ್ನು ಮೆಟ್ಟಿ ನಿಲ್ಲುವ, (ದುರ್ಧಿತಾದಧಿ) ನಿನ್ನ ಈ ಯಥಾರ್ಥವಾದ ವ್ಯಾಖ್ಯಾನಗಳು ಏನಿವೇ, ಅದನ್ನು ಚನ್ನಾಗಿ ಪರಿಗ್ರಹಿಸಿದ್ದೇವೆ (ಸುಧಿತಂ). ಮನನೀಯವಾದ (ಮನ್ಮನಃ), ಹೃದ್ಯವಾದ (ಪ್ರಿಯಾದು) ನಿನ್ನ ವ್ಯಾಖ್ಯಾನವು ಸರ್ವಥಾ ನಮಗೆ ಅಭೀಷ್ಟವನ್ನೀಯಲಿ (ಪ್ರೇಯೋ ಅಸ್ತು).
ನಿನ್ನ ಜ್ಞಾನಾವತಾರವಾದ ಮಧ್ವ ಎಂಬ ರೂಪವು, ಶುದ್ಧವಾದುದು (ಶುಚಿ), ತೇಜೋಮಯವಾದುದು (ಶುಕ್ರಮ್) ಆನಂದವನ್ನು ತಂದಿದೆ (ರೋಚತೇ). ನೀನು, ನಮಗೆಲ್ಲಾ (ಅಸ್ಮಭ್ಯಂ) ಸ್ವರೂಪಾನಂದವನ್ನು (ರತ್ನಮಾ) ವಿತರಿಸು (ವನಸೇ).