ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Wednesday, December 12, 2018

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಪೂರ್ವಭಣಿತಿ(6/6)

ಮಧ್ವವಿಜಯವು ಒಂದು ಮಹಾಕಾವ್ಯವಷ್ಟೇ ಅಲ್ಲ ಅದೊಂದು ಉದ್ಗ್ರಂಥ. ಕವಿ ವೇದವೇದಾಂತಾದಿ ಶಾಸ್ತ್ರಗಳಲ್ಲಿ ನುರಿತವನಲ್ಲದಿದ್ದರೆ ಇಂಥಾ ಕೃತಿಯನ್ನು ರಚಿಸಲಾರ. ಇದರ ಅಧ್ಯಯನವು ಒಂದು ಹಿರಿಯ ಶಾಸ್ತ್ರಪ್ರಪಂಚವನ್ನು ತೆರೆದಿಡುತ್ತದೆ. ಹದಿನೈದನೇ ಸರ್ಗವು ತತ್ವವಾದದ ಮಂಡನೆಗಾಗಿಯೇ ಮೀಸಲಿಟ್ಟಂತಿದೆ. ಅನೇಕ ತತ್ವವಾದದ ಪ್ರಮೇಯಗಳನ್ನು ಅಲ್ಲದೆ, ಮೀಮಾಂಸ -ವ್ಯಾಕರಣ -ಛಂದಸ್ಸು ಮೊದಲಾದ ಶಾಸ್ತ್ರಗಳ ವಿಶಾಲವಾದ ವಿನ್ಯಾಸವನ್ನು ಅಧ್ಯೇತೃಗಳು ಸಾಕ್ಷಾತ್ಕರಿಸಿಕೊಳ್ಳಬಹುದು
   ಇದು ಮಧ್ವವಿಜಯದ ಮೂರನೇ ಮುಖ. ಕಾವ್ಯವನ್ನು ತಾನು ಯಾವುದೇ ಆಸೆಯಿಂದಾಲೀ, ಫಲಕ್ಕಾಗಲೀ ರಚಿಸಿದ್ದಲ್ಲವೆಂದು ನಾರಾಯಣರು ಹೇಳಿದ್ದು ಹಿಂದೆಯೇ ನೋಡಿದೆವು. ಮತ್ತೆ ಯಾಕಾಗಿ ರಚನೆ? ಅವರನ್ನೇ ಕೇಳಿ -

ಮಧ್ವವಿಜಯಂ ವ್ಯಧಾತ್ ಗುರುಗಿರಾ ಸದಾನಂದದಃ

ಪ್ರಸೀದತು ತತಃ ಸದಾ ದಶಮತಿಃ ನಾರಾಯಣಃ

ಗುರುಗಳ ಮಾತನ್ನು ಪಾಲಿಸಿ, ನಾರಾಯಣನೆಂಬುವನು ಮಧ್ವವಿಜಯವನ್ನು ಮಾಡಿದನು. ಇದರಿಂದ ಸಜ್ಜೀವರಿಗೆ ಸ್ವರೂಪಾನಂದವನ್ನು ಕೊಡುವ, ಅಂತರ್ಯಾಮಿಯಾದ ನಾರಾಯಣನ ಜೊತೆಯಿರುವ ದಶಪ್ರಮತಿಯು ಎಂದೆಂದೂ ಪ್ರೀತನಾಗಲಿ. ಪ್ರಾಣ ನಾರಾಯಣರ ಪ್ರೀತಿಯೇ ಇದರ ಫಲ. ಅಂತರ್ಯಾಮಿಯು ಒಲಿಯಬೇಕಾದರೆ,ಅವನ ಅಂತರ್ಯಾಮಿತ್ವದ ಅರಿವು ಉಂಟಾಗಬೇಕು. ಮಧ್ವನೆಂಬೊಬ್ಬ ದಾರ್ಶನಿಕನು ಎಲ್ಲೋ ಉಡುಪಿಯ ಹತ್ತಿರದ ಪಾಜಕದಲ್ಲಿ ಹುಟ್ಟಿದ, ಗ್ರಂಥಗಳನ್ನು ಹೆಣೆದ, ಬದರಿಯಲ್ಲಿ ಕಾಣದಾದ ಎಂಬ ಬಾಹ್ಯ ಘಟನೆಗಳ ಮೊತ್ತವಿದಲ್ಲ. ನಮ್ಮೊಳಗಿನ ಪ್ರಾಣಾತ್ಮನೇ ನಮ್ಮನ್ನು ತತ್ವಮಾರ್ಗದಲ್ಲಿ ನಡೆಸಲು ನಮ್ಮ ಅಂತರಂಗದಲ್ಲಿ ತೋರುವ ಲೀಲೆ ಮಧ್ವವಿಜಯ. ಇದು ಒಳಗಿನ ಮಧ್ವನ ಕಥೆ. ನಮ್ಮ ಬಿಂಬ ಪ್ರಜ್ಞೆಯನ್ನು ಬಡಿದೆಬ್ಬಿಸುವ ಕಥೆ. ಆದ್ದರಿಂದಲೇ ನಾರಾಯಣ ಪಂಡಿತರು ಹೇಳುತ್ತಾರೆ -
'ಗಮನಾಸನಸಂಕಥಾದಿಲೀಲಾಃ ಶೃತಿಮಾತ್ರೇಣ ಭವಾಪವರ್ಗದಾತ್ರೀಃ' ಎಂದು. ಮಧ್ವರ ನಡೆನುಡಿಗಳನ್ನು ನೆನೆದವ -ವೈಕುಂಠಕ್ಕೆ ಓಡಿದವ. ಇದೇ ಮಧ್ವವಿಜಯದ ಮುಖ್ಯಾರ್ಥ
  ಮಧ್ವನ ಒಳಗಿರುವ ಮಧ್ವನ ಅಚಿಂತ್ಯವಾದ ಮಹಾಕರ್ತೃತ್ವದ ಅನುಸಂಧಾನದ ಆಧ್ಯಾತ್ಮಿಕಾರ್ಥ
  ಇವೇ ಭಾವೀ ನಾಲ್ಮೊಗನವಿಜಯದ ನಾಲ್ಕು ಮುಖಗಳು.

Tuesday, December 11, 2018

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಪೂರ್ವಭಣಿತಿ(5/6)

ಶಬ್ದಗಳ ಚಮತ್ಕಾರದಿಂದ ಸೊಗಸಾದ, ಹೃದಯಂಗಮವಾದ ಅರ್ಥವನ್ನು ಸಹೃದಯರಿಗೆ ಉಣಬಡಿಸುವ ಮೋಡಿಯೇ ಕಾವ್ಯ. ಸ್ವಭಾವದಿಂದ ನಾರಾಯಣರದ್ದು ಕವಿಹೃದಯ. ಮನೆತನವೇ ಕವಿತ್ವದ ಹಂದರ. ಮನೆಯಲ್ಲಿರುವವರೆಲ್ಲಾ ಕವಿಗಳೇ. ಇಂಥಾ ಪರಿಸರದಲ್ಲಿದ್ದು ಬೆಳೆದ ನಾರಾಯಣ ಪಂಡಿತರು ಅದರ ಪೂರ್ಣವಿಕಾಸವನ್ನು ಮಧ್ವವಿಜಯದಲ್ಲಿ ಸೂಸಿದ್ದಾರೆ. ಅವರ ಮಾತಿನ ಧಾಟಿಯೇ ಅನುಪ್ರಾಸಾಲಂಕಾರ. ಹೆಜ್ಜೆ ಹೆಜ್ಜೆಗೂ ತಮ್ಮ ಕಾವ್ಯದಲ್ಲಿ ಒಂದಲ್ಲ ಒಂದು ಕಾವ್ಯ ಚಮತ್ಕಾರನ್ನು ತೋರಿದ್ದಾರೆ. ಯಮಕ, ಏಕಾಕ್ಷರಗಳೇ ಮೊದಲಾದ ಶಬ್ದಾಲಂಕಾರಗಳಲ್ಲದೆ ಅದ್ಭುತವಾದ ಬಂಧಗಳನ್ನು ಹೆಣೆದಿದ್ದಾರೆ. ಸ್ವಭಾವೋಕ್ತಿ, ಪರಿಕರ, ಉಪಮಾ, ಶ್ಲೇಷ, ಅರ್ಥಾಂತರನ್ಯಾಸ ರೂಪಕವೇ ಮೊದಲಾದ ಮೂವತ್ತಕ್ಕೂ ಮೀರಿ ಅರ್ಥಾಲಂಕಾರಗಳಿಂದ ತಮ್ಮ ಕೃತಿಯನ್ನು ಸಿಂಗರಿಸಿದ್ದಾರೆ. ಭಕ್ತಿ, ಶಾಂತ, ವೀರ, ಅದ್ಭುತ, ಶೃಂಗಾರಾದಿ ರಸಗಳನ್ನು ಸಹೃದಯನ ಅಂತರಂಗದಿ ಚಿಮ್ಮಿಸಿ ಅದರ ಒರೆತದಿಂದ ಮನಸ್ಸನ್ನು ತೋಯಿಸಿದ್ದಾರೆ. ಕಾವ್ಯದ ಪ್ರತಿಅಂಶವನ್ನೂ ವಿಶೇಷವಾದ ಆಧ್ಯಾತ್ಮಿಕ ಅರ್ಥದ ಆವಿಷ್ಕಾರಕ್ಕೆ ಬಳಸಿಕೊಂಡದ್ದು ಇವರ ಆಧ್ಯಾತ್ಮಿಕ ಹೃದಯಕ್ಕೆ ಸಾಕ್ಷಿ

   ಪ್ರೌಢವಾದ ಭಾಷೆ, ಬಿಗಿಯಾದ ಛಂದಸ್ಸಿನ ನಡೆ ಇವು ನಾರಾಯಣ ಪಂಡಿತರ ವೈಶಿಷ್ಟ್ಯ. ಮಧ್ವವಿಜಯಭಾವಸಂಗ್ರಹ ಮಾಡುತ್ತಾ ಕಾವ್ಯರಸಾಸ್ವಾದನೆಯನ್ನೂ ಮಾಡುವ. ಇದು ಮಧ್ವವಿಜಯದ ಎರಡನೇ ಮುಖ.

Monday, December 10, 2018

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಪೂರ್ವಭಣಿತಿ(4/6)

ಅಭೂತಪೂರ್ವವಾದ ಮಹಾಕಾವ್ಯವನ್ನು ಪರಿಶೀಲಿಸಿದವರಿಗೆ ತನ್ನ ತಾನೇ ಅರಿವಾಗುವ ನಾಲ್ಕು ಸಂಗತಿಗಳು -ಇಲ್ಲಿನ ಅಪ್ರತಿಮ ಇತಿಹಾಸನಿಷ್ಠೆ, ಹೃದಯಂಗಮವಾದ ಕಾವ್ಯಸೌಂದರ್ಯ, ತಳಸ್ಪರ್ಶಿಯಾದ ಶಾಸ್ತ್ರವೈದುಷ್ಯ ಹಾಗೂ ಗಹನವಾದ ಅಧ್ಯಾತ್ಮ. ಕಾವ್ಯದ ಪ್ರಭಂಧೃವಿನಲ್ಲಿ ಹಾಸುಹೊಕ್ಕಾದ ಗುಣ ಚತುಷ್ಟಯಗಳು ಪ್ರಬಂಧದಲ್ಲಿ ಹೆಜ್ಜೆ ಹೆಜ್ಜೆಗೂ ಪ್ರತಿಫಲಿಸಿವೆ. ಶ್ರೀಮಧ್ವರನ್ನು ಪರಿಚಯಿಸುವ ಯಶೋಗಾಥೆಯ ನಾಲ್ಕು ಮುಖಗಳು ಇವು. ಭಾವಿ ಚತುರ್ಮುಖನ ವಿಜಯಚರಿತೆಯ ಚತುರ್ಮುಖ ದರ್ಶನ
    ಅದರಲ್ಲಿ ಮೊದಲನೆಯದಾಗಿ ಒಬ್ಬ ಸಂಶೋಧಕನಲ್ಲಿ ಇರಬೇಕಾದ ಇತಿಹಾಸನಿಷ್ಠೆಯ ಮುಖವನ್ನು ಪರಿಚಯಿಸಿಕೊಳ್ಳೋಣ. ನಾರಾಯಣ ಪಂಡಿತರೇ ಹೇಳುವಂತೆ-

    ಆಚಾರ್ಯಮಧ್ವರು ಭರತಖಂಡದ ಉದ್ದಗಲವನ್ನೂ ಸಂಚರಿಸಿದವರು. ಎಷ್ಟೋ ಜನರು ಆಚಾರ್ಯರ ಸಂಪರ್ಕಕ್ಕೆ ಬಂದಿರುವರು. ಅವರೆಲ್ಲರೂ ನೋಡಿದ್ದನ್ನು ಹೇಳಿದ್ದನ್ನು ನಾನು ಬರೆದಿಲ್ಲ. ಕೆಲವೊಂದು ಘಟನೆಗಳು ಮಾನವನ ಬುದ್ಧಿಗೆ ನಿಲುಕದ್ದು ಎಂದು ನಾನೇ ಕೈಬಿಟ್ಟಿದ್ದೇನೆ. ಇನ್ನು ಕೆಲವನ್ನು ಹೇಳುತ್ತಿದ್ದರೆ ಗ್ರಂಥವೇ ಮುಗಿಯದೆಂಬ ಭೀತಿಗೆ ನಿಲ್ಲಿಸಿದ್ದೇನೆ. ಹಲವು ಮಂದಿ ಒಂದೇ ಕಥೆಯನ್ನು ತಿರುಚಿಲ್ಲದೇ ಹೇಳಿದ್ದಾರೆ, ಅದನ್ನು ಸಂಪೂರ್ಣವಾಗಿ ನಮೂದಿಸಿದ್ದೇನೆ. ನಾನು ದೇವರಾಣೆ ಕಂಡಿದ್ದೇನೆ ಎಂದು ಹೇಳಿದವರ ಮಾತನ್ನು ಸ್ವೀಕರಿಸಿದ್ದೇನೆ. ಇಬ್ಬರ ಕಥಾಪ್ರಸ್ತುತಿಯಲ್ಲಿ ಏನಾದರೂ ವಿರೋಧ ಕಂಡುಬಂದರೆ, ಹೆಚ್ಚು ಪ್ರಮಾಣಗಳನ್ನು ಕೊಟ್ಟ ವ್ಯಕ್ತಿಯ ಕಥೆಯನ್ನು ಸ್ವೀಕರಿಸಿದ್ದೇನೆ. ಇನ್ನು ಕೆಲವು ಆಚಾರ್ಯರ ಅಂತರಂಗದ ಶಿಷ್ಯರು 'ನಮಗೆ ಗುರುಗಳು ಹೀಗೆ ಹೇಳಿದ್ದರು ' ಎಂದು ಹೇಳಿದರೆ ಅದನ್ನು ಸುಮ್ಮನೇ ಪರೀಕ್ಷೆಗೆ ಒಡ್ಡದೆ ಹೇಳಿಬಿಟ್ಟಿದ್ದೇನೆ

    ಕೊನೆಯದಾಗಿ ನಾನು ಮಧ್ವವಿಜಯ ಮಹಾಕಾವ್ಯವನ್ನು ನನ್ನ ಕವಿತಾಚಾತುರ್ಯ ಪ್ರದರ್ಶನಕ್ಕಾಗಿಯೋ, ಇದೊಂದು ದೊಡ್ಡ ಕಾವ್ಯವಾಗಬೇಕೆಂಬ ಆಸೆಯಿಂದಲೋ, ನನ್ನ ಗುರುವಿನ ಕೀರ್ತಿ ಎಲ್ಲೆಡೆ ಹಬ್ಬಲಿ ಎಂಬ ಮತಪ್ರಚಾರದ ಗುಂಗಿನಲ್ಲೋ, ಅವರೊಬ್ಬ ದೊಡ್ಡ ವ್ಯಕ್ತಿ ಎಂದು ನನ್ನ ಶಬ್ದಗಳಲ್ಲಿ ತೋರುವುದಕ್ಕೋ ರಚಿಸಿರುವುದಲ್ಲ. ದೊಡ್ಡವರು ತಮ್ಮ ಸೂಕ್ಷ್ಮದೃಷ್ಟಿಯಿತ್ತು ಹುಡುಕಿ ನೋಡಬಹುದು

    ಕೇಳಿದಿರಾ ಕವಿಯ ಪ್ರಾಮಾಣಿಕತೆಯನ್ನು? ವಸ್ತುನಿಷ್ಠೆಯನ್ನು? ಮುಂದಿನ ಸಂಶೋಧಕ ಜನಾಂಗಕ್ಕೆ ಮಾದರಿಯಾಗಿ ನಿಂತುಬಿಟ್ಟರು. ನಮ್ಮ ಮಧ್ವವಿಜಯಭಾವಸಂಗ್ರಹಣೆಯ ಹಾದಿಯಲ್ಲಿ ಮೊತ್ತಮೊದಲು ಇತಿಹಾಸದ ಭಾಗವನ್ನು ಸಂಗ್ರಹಿಸೋಣ. ಮುಂದೆ ಕಾವ್ಯಚಮತ್ಕಾರದ ಎರಡನೇ ಮುಖವನ್ನು ನೋಡೋಣ.

MadhwaVijaya Kannada 

Sunday, December 9, 2018

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಪೂರ್ವಭಣಿತಿ(3/6)


ಸಮಸ್ತ ಜೀವರ ಅಂತರ್ಯಾಮಿ, ಜಗತ್ತಿನ ಮೂಲ, ಎಲ್ಲರ ಉಸಿರು ತಾನು ಮಾನವಾಕೃತಿಯಾಗಿ, ಇದೇ ಕಲಿಯುಗದ ಹದಿಮೂರನೇ ಶತಕದಲ್ಲಿ ಉಡುಪಿಯ ಸಮೀಪದ ಪಾಜಕದಲ್ಲಿ ಉದಿಸಿತು. ಮಂತ್ರಪ್ರತಿಪಾದ್ಯನಾದ ವ್ಯಾಸರ ಸಿದ್ಧಾಂತವನ್ನು ಸಜ್ಜನರ ಹೃದಯದಲ್ಲಿ ಅರಳಿಸಿ ತೋರುವ ಕಾರ್ಯ ಈ ರೂಪದ ಮೂಲೋದ್ದೇಶವಾಗಿತ್ತು. ಅದಾವ ಶಿವಾದಿ ಸುರರೇ ಸುಜ್ಞಾನದ ಆವಿಷ್ಕಾರಕ್ಕಾಗಿ ನಿತ್ಯ ಉಪಾಸಿಸುವ 'ಮಧ್ವ' ಎಂಬ ಮಂತ್ರಸಿದ್ಧವಾದ ರೂಪವೇ ಈಗ ಕೇವಲ ಅಜ್ಞ-ಜ್ಞಾನಾರ್ಥಿ-ಜ್ಞಾನಯೋಗ್ಯವಾದ ಸಾತ್ವಿಕಲೋಕದ ಉದ್ಧಾರಕ್ಕಾಗಿ ದೃಷ್ಟಿಗೋಚರವಾಯಿತು. ಆಹಾ ! ಎಂಥಾ ಸೊಬಗು ! ಅಂತರ್ಯಾಮಿಯೇ ಮೈದಾಳಿಬಂದಂತೆ, ಲಕ್ಷಣಗಳೆಲ್ಲಾ ಇಲ್ಲಿ ಲಕ್ಷವಿಟ್ಟನ್ತೆ, ನಡುರಾತ್ರಿಯಲ್ಲಿ ಅನಂತ ಸೂರ್ಯರನ್ನು ಕಂಡಂತೆ, ಭರತಭುವಿಯಲ್ಲಿ ವಾಯುದೇವನ ಕೊನೆಯ ಅವತಾರ ಸಾಕಾರಗೊಂಡಿತು. ಆ ಅದ್ಭುತದ ಅನುಭವ ಪಡೆದ ಕ್ರಿಮಿ, ಕೀಟ, ಲತಾ ತರುಗಳೇ ಭಾಗ್ಯವತ್ತರವಾದವುಗಳು.
   ಆ ಕಾಲವಾದಮೇಲೆ ಮುಂದಿನ ಜನತೆಗೆ ಆ ಭುವನವಿಲಕ್ಷಣರೂಪ-ಗುಣ -ಕ್ರಿಯೆಗಳ ವಿವರ ಹೇಗೆ ತಿಳಿಯಬೇಕು? ತಿಳಿಯದೇ ಹೋದರೆ ಅದರಂತರ್ಯಾಮಿಯ ಅನುಗ್ರಹ ಹೇಗಾಗಬೇಕು? ಅನುಗ್ರಹವಿಲ್ಲದಿದ್ದರೆ ಬಿಡುಗಡೆಯೆಂತು? ಬ್ರಹ್ಮವಸ್ತು ಯೋಚಿಸಿತು. ಸರ್ವಾಂತರ್ಯಾಮಿಯಾದ ಮಧ್ವನ ಗುಣ-ರೂಪ-ಕ್ರಿಯೆಯ ಜ್ಞಾನ ಅವನಂತರ್ಯಾಮಿಯ ಕರ್ತೃತ್ವ ವಿಜ್ಞಾನವುಂಟಾಗಬೇಕು! ಭಕ್ತಿಯು ಪರಿಪಕ್ವಗೊಂಡು, ಬುದ್ಧಿಯು ಅಗ್ರಸ್ಥಾನವನ್ನು ಹೊಂದಿ, ಜೀವವು ಮಾಗಿ, ಉನ್ನತ ವಿದ್ಯೆಯ ತುದಿಯಲ್ಲಿ ನಿರ್ವಾತದೇಶ ದೀಪದಂತೆ ಬೆಳಗುತ್ತಿದ್ದ ಮಧ್ವಪರಮಾನುಗ್ರಹಕ್ಕೆ ಪಾತ್ರವಾಗಿದ್ದ ತ್ರಿವಿಕ್ರಮಪುತ್ರನಾದ ನಾರಾಯಣಕವಿಯನ್ನು ನಾರಾಯಣನು ಹೊಕ್ಕನು. ವಾಣೀ ತನ್ನ ನಲ್ಲನ ಕೊಂಡಾಡಲು ಅಲ್ಲೇ ನಾರಾಯಣನ ಜಿಹ್ವೆಯಲ್ಲೇ ನೆಲೆನಿಂತಳು. ಸರ್ವಾಕ್ಷರಾಭಿಮಾನಿಗಳು ಸಂತಸದಿಂದ ತಾವೇ ಬಂದರು.
   ಸಮಸ್ತ ಸಾತ್ವಿಕಲೋಕವು ಮಧ್ವಾಂತರ್ಯಾಮಿಯ ಕರ್ತೃತ್ವವನ್ನು ಅನುಭವಿಸಿ ಬಿಂಬಸಾಧನೆಯಾಗುವ ಅತ್ಯದ್ಭುತವಾದ ಕಾವ್ಯವು ಹೊಮ್ಮಿತು, ಚಿಮ್ಮಿತು - ಶ್ರೀಮಧ್ವವಿಜಯ !

Saturday, December 8, 2018

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಪೂರ್ವಭಣಿತಿ(2/6)


ತ್ರಿವಿಕ್ರಮವಿಪಶ್ಚಿತೋ ಗುಣನಿಧೇಃ ಸುಶಿಷ್ಯಾಃ ಸುತಾಃ ಸತಾಮಭಿಮಾತಾಸ್ತ್ರಯೋ ಯಸ್ತ್ರಿತೀಯೋsತ್ರ ನಾರಾಯಣಃ ॥ ಸ ಮಧ್ವವಿಜಯಂ ವ್ಯಧಾತ್..... |
   ತಮ್ಮ ಮಾತಲ್ಲೇ ಹೇಳುವಂತೆ, ನಾರಾಯಣಪಂಡಿತರು ಜ್ಞಾನಿಶ್ರೇಷ್ಠರಾದ ಗುಣಗಳ ಖನಿಯಾದ ಶ್ರೀತ್ರಿವಿಕ್ರಮಪಂಡಿತರ ಮೂವರು ಮಕ್ಕಳಲ್ಲಿ ಕೊನೆಯವರು. ತಂದೆಯಿಂದ ತಿಳಿಯಬೇಕಾದ್ದನ್ನು ತಿಳಿದವರು. ಸಜ್ಜನರಿಗೆ ಬಹಳ ಹತ್ತಿರದವರು. ಕಬೆನಾಡಿನ ಪೆಜತ್ತಾಯ ವಂಶಕ್ಕೆ ಸೇರಿದವರು. ಯಾವ ಮಹಾತ್ಮರ ಪಾದಧೂಳಿಯಿಂದ ತಮ್ಮ ತಂದೆ ನವಜೀವನವನ್ನು ಪಡೆದರೋ, ಜೀವನದಲ್ಲಿ ನವದರ್ಶನವುಂಟಾಯಿತೋ ಆ ಮಹಾಮಹಿಮರ ಜೀವನದ ಘಟನೆಗಳನ್ನು ಹೆಣೆಯಲು ಮುಂದಾದರು.
   ಯಾರವರು? ನಾರಾಯಣಪಂಡಿತರನ್ನೇ ಕೇಳಿ -ಪ್ರಾಣಾಧೀಶಃ ಪ್ರಾಣ ಉಕ್ಥೋ ಜ್ಯೇಷ್ಠ ಶ್ರೇಷ್ಠಃ ಅಖಿಲೇಶ್ವರಃ ಪಾಪ್ಮನಾ ಅವಿದ್ಧಃ ಇತ್ಯಾದಿನಾನೋಪನಿಷದೀರಿತಃ ॥ ಸ ದೇವಶ್ರೇಷ್ಠಃ ಇತ್ಯಾದಿಭಾರತಾದ್ಯೈಃ ವರ್ಣಿತಃ ಪ್ರಾಣ ಇತ್ಯೇವ ಲೋಕೈಃ ಸ ಮಹಾಮಹಿಮಾ ಹ್ಯತಃ ॥ ಯಾರನ್ನು ವೇದಗಳಲ್ಲಿ ಭಾರತಾದಿಗಳಲ್ಲಿ ಜೀವೋತ್ತಮನೆಂದು, ಮುಖ್ಯಪ್ರಾಣನೆಂದು, ಸರ್ವಜ್ಞನೆಂದು, ಮಹಾಮಹಿಮನೆಂದು ದೇವತೆಗಳು ಕೊಂಡಾಡಿದ್ದಾರೋ, ಆ ಮೂರವತಾರದ ಪ್ರಾಣನೇ ನಾರಾಯಣಪಂಡಿತರ ನಾಯಕ, ಗುರು, ಸ್ವರೂಪೋದ್ಧಾರಕ.
ತೃತೀಯಮಸ್ಯ ವೃಷಭಸ್ಯ ದೋಹಸೇ ದಶಪ್ರಮತಿಂ ಜನಯಂತ ಯೋಷಣಃ ॥   ಎಂದು ವೇದಗಳು ಸಾರಿದಂತೆ, ಈ ಮುಖ್ಯಪ್ರಾಣನು ರಾಮನ ಸೇವೆಗೆ ಹನುಮಂತನಾಗಿ, ಕೃಷ್ಣನ ಪೂಜೆಗೆ ಭೀಮಸೇನನಾಗಿ, ಈಗ ವೇದಶಾಸ್ತ್ರಗಳ ಅಂತರಂಗವನ್ನು ಕಡೆದು ಉಣಿಸಲು ಪೂರ್ಣಪ್ರಮತಿ, ಮಧ್ವ ಎಂಬ ರೂಪದಿಂದ ಹುಟ್ಟಿ ಬಂದನು.

Friday, December 7, 2018

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಪೂರ್ವಭಣಿತಿ(1/6)

॥   ಹರಿಃ ಓಂ  ॥
 ॥   ಶ್ರೀಗುರುಭ್ಯೋ ನಮಃ   ॥

ಶ್ರೀಮಧ್ವವಿಜಯಭಾವಸಂಗ್ರಹ 
      

     
ಭಾರತೀಯ ಸಂಸ್ಕೃತಸಾಹಿತ್ಯದ ಇತಿಹಾಸದಲ್ಲಿ ಒಂದು ಅಪೂರ್ವವಾದ ಕ್ರಾಂತಿಯನ್ನು ಮಾಡಿದವರು ಶ್ರೀತ್ರಿವಿಕ್ರಮಪಂಡಿತಾಚಾರ್ಯರ ಪುತ್ರರಾದ ನಾರಾಯಣಪಂಡಿತಾಚಾರ್ಯರು. ಮಹಾಭಾರತ -ರಾಮಾಯಣ -ಭಾಗವತವೇ ಮೊದಲಾದ ಪ್ರಾಚೀನಗ್ರಂಥಗಳನ್ನು ಆಧರಿಸಿ ಅಂದಿನ ಕವಿಗಳು ತಮ್ಮ ಕಾವ್ಯಪ್ರಯೋಗಗಳನ್ನು ನಡೆಸುತ್ತಿರುವಾಗಲೇ ತಮ್ಮ ಆತ್ಮೋದ್ಧಾರಗೈದ ಗುರುಗಳ ಯಶೋಗಾಥೆಯನ್ನು ಚಿತ್ರಿಸಲು ನಿಂತವರು ನಾರಾಯಾಣಪಂಡಿತರು. ಒಬ್ಬ ಮಹಾಕವಿ ತನ್ನ ಸಮಕಾಲೀನ ವ್ಯಕ್ತಿಯ ಜೀವನಕಥೆಯನ್ನು ಕಾವ್ಯವಾಗಿ ಹಾಡಿದ್ದು ಅದೇ ಮೊದಲು.
       ಅವರ ಜಾಡನ್ನೇ ಹಿಡಿದು ಮುಂದೆ ಸಾವಿರಾರು ಮಹಾಪುರುಷರ ಜೀವನಗಾಥೆಯನ್ನು ಕಾವ್ಯಾತ್ಮಕವಾಗಿ ರಚಿಸುವುದಕ್ಕೆ ಕವಿಗಳು ಮುಂದಾದರು. ಇದು ಬಯಾಗ್ರಫಿ ಎಂಬ ಒಂದು ಹೊಸ ಸಾಹಿತ್ಯಪ್ರಕಾರವನ್ನೇ ಹುಟ್ಟು ಹಾಕಿತು.
      ಇಂದಿನ ಬಯಾಗ್ರಫಿಗಳು ವಿವರಣಾತ್ಮಕ ಹಾಗೂ ಶುಷ್ಕವಾದ ಭಾಷೆಯಿಂದ ಕೇವಲ ಒಂದು ಪಂಗಡದ ಜನರನ್ನು ಆಕರ್ಷಿಸುತ್ತಿದ್ದರೆ, ನಾರಾಯಣಪಂಡಿತರು ರಚಿಸಿದ ತನ್ನ ಗುರುಗಳ ಬಯಾಗ್ರಫಿ ಶಾಸ್ತ್ರಾತ್ಮಕವಾದ ಕಾವ್ಯವಾಯಿತು, ಕಾವ್ಯಾತ್ಮಕವಾದ ಶಾಸ್ತ್ರವಾಯಿತು. ಸಂಸ್ಕೃತತರುಣಿ ಟೊಂಕಕಟ್ಟಿ ನಲಿಯಲು ಒಂದು ಅದ್ಭುತರಂಗಮಂಚವಾಯಿತು.
     ಎಲ್ಲಾ ಸರಿ, ನಾರಾಯಣಪಂಡಿತರಂಥ ಕವಿಶ್ರೇಷ್ಠರು ರಚಿಸಿದ ಆ ಯಶೋಗಾಥೆಯ ನಾಯಕನಾರು? ಅವರ ಸಂಬಂಧ ಎಂಥದ್ದು? ಅದರ ಪೂರ್ವತಯಾರಿ ಹೇಗಿತ್ತು? ಮುಂದೆ ನೋಡೋಣ.

Madhwavijaya - ಅಧ್ಯಯನ ಆರಂಭಿಸುವ ಮೊದಲು

ವಿಜ್ಞಾಪನೆ


ಈ ಇ-ಪುಸ್ತಕವನ್ನು ಅಧ್ಯಾತ್ಮದಲ್ಲಿ ಆಸಕ್ತಿಯುಳ್ಳವರಿಗಾಗಿ ನೀಡಲಾಗಿದೆ. ಆದ್ದರಿಂದ  ಇದನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ  ಬಳಸಿಕೊಳ್ಳಬಾರದಾಗಿ ಕೋರಿಕೆ. ಈ ಪುಸ್ತಕವನ್ನು ಬರೆಯುವವರು ತಮಗೆ ಅರ್ಥವಾದ ರೀತಿಯಲ್ಲಿ ಬರೆದುಕೊಂಡಿರಬಹುದು. ಆದ್ದರಿಂದ ಇಲ್ಲಿ ಉಲ್ಲೇಖಿಸಿರುವ ಗ್ರಂಥಕ್ಕನುಗುಣವಾಗಿ ಏನಾದರೂ ತಪ್ಪು ಅಂಶ ಕಂಡುಬಂದರೆ ಅದಕ್ಕೆ ಬರೆದುಕೊಂಡ ನಾವೇ ಹೊಣೆಗಾರರು.  ಈ ಪುಸ್ತಕದ ಮುಖಪುಟದಲ್ಲಿ ಬಳಸಲಾದ ಚಿತ್ರ ಅಂತರ್ಜಾಲದಿಂದ ತೆಗೆದುಕೊಂಡಿದ್ದು, ಒಂದು ವೇಳೆ  ಆ ಬಗ್ಗೆ ಯಾರದ್ದಾದರೂ  ಆಕ್ಷೇಪವಿದ್ದರೆ ದಯವಿಟ್ಟು ನಮಗೆ ಬರೆದು ತಿಳಿಸಿ. ಅದನ್ನು ತಕ್ಷಣ ತೆಗೆದು ಹಾಕಲಾಗುವುದು.
ನಮ್ಮ ಸಂಪರ್ಕ ಕೊಂಡಿ:     https://madhwavijaya.blogspot.com/


ಮಂಗಳಶ್ಲೋಕ

ಸರ್ವೇಶಂ ಪ್ರಾಣದಂ ವಂದೇ ಗುಹಾಸಂತಂ ರಮಾಧವಮ್  ।
ಸರ್ಪೇಶಾದ್ಯಾರಾಧ್ಯ-ಪೂರ್ಣವರ್ಪೇಂನ್ವಿತ-ಸುದರ್ಶತಮ್

ಯದುಕ್ತೋsಸ್ಯಪಿತಾಭಾಸಕಾಖಣಾಶ್ಮಸಮೋ ಹ್ಯಸೌ
ಅಮೃತೇತ್ಯಾತ್ಮವಿನ್ನೇತಾ ಮಧ್ವೋ  ದೀಧೀತ ಮದ್ಧೃದಿ

ಸತ್ಕರ್ತಾ ಸಾಧು-ಸುಪ್ರೀತೋ ವ್ಯಾಕುರ್ವೀತ ಯಥಾಯಥಮ್
ಸತ್ಯಜ್ಞಾನಸ್ವನಂತೋsಸೌ ವಾಜಿನೀವಸುರಾತ್ಮವಿತ್

ಯೋ ಮಧ್ವವಿಜಯಂ ಪರಂ ಮಧುರಂ ಮಧುರಯಾ ಗಿರಾ
ವ್ಯಾಚಕ್ರೇ ಸುಮತಯೇ ನಿತ್ಯಂ  ಗುರುಪಾದಮಭಿವಾದಯೇ

*********