ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Wednesday, August 14, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೨೭


ಸ್ವಾನಂದ-ಹೇತೌ ಭಜತಾಂ ಜನಾನಾಂ ಮಗ್ನಃ ಸದಾ ರಾಮ-ಕಥಾ-ಸುಧಾಯಾಮ್
ಅಸಾವಿದಾನೀಂ ಚ ನಿಷೇವಮಾಣೋ ರಾಮಂ ಪತಿಂ ಕಿಂಪುರುಷೇ ಕಿಲಾsಸ್ತೇ ೦೧.೨೭

ಈಗಲೂ ಇವನು ಸೇವಿಸುತ್ತಾ ನೆಲೆಸಿರುವನಲ್ಲವೇ ತನ್ನೊಡೆಯನಾದ ರಾಮನನ್ನು ಕಿಂಪುರುಷ ಖಂಡದಲ್ಲಿ! ಭಜಿಸುವ ಭಕುತರಿಗೆ ಸ್ವಾನಂದಾವಿರ್ಭಾವರೂಪವಾದ ಮುಕ್ತಿಯನ್ನೀವ ರಾಮನ ಕಥೆಯೆಂಬ ಸೊದೆಯಲ್ಲಿ ಮೀಯುತ್ತ! 
ರಾಮಾವತಾರವು ಸಮಾಪ್ತಿಯಾದ ತರುವಾಯ, ಇವನು ನಡೆದದ್ದು ಬದರಿಗೆ.

ಮರುತ್ಸುತೋsಥೋ ಬದರೀಮವಾಪ್ಯ ನಾರಾಯಣಸ್ಯೈವ ಪದಂ ಸಿಷೇವೇ
ಮಾರುತಿಯ ಕುವರ ತಾನು ಬದರಿಯನ್ನು ಸೇರಿ, ಅಲ್ಲಿ ನಾರಾಯಣನ ಪಾದವನ್ನು ಸೇವಿಸಿದ.

ಸಮಸ್ತಶಾಸ್ತ್ರೋದ್ಭರಿತಂ ಹರೇರ್ವಚೋ ಮುದಾ ತದಾ ಶ್ರೋತ್ರಪುಟೇನ ಸಂಭರನ್
ವದನ್ಶ್ಚ ತತ್ವಂ ವಿಬುಧರ್ಷಭಾಣಾಂ ಸದಾ ಮುನೀನಾಂ ಚ ಸುಖಂ ಹ್ಯುವಾಸ
ಅಲ್ಲಿ, ನಾರಾಯಣನ ಮುಖದಿಂದ ಸರ್ವಜ್ಞನಾದರೂ ಲೋಕಶಿಕ್ಷಣಕ್ಕೆ ಮತ್ತೂ ಮತ್ತೂ ಸಮಸ್ತಶಾಸ್ತ್ರವನ್ನು ಕಿವಿಯಲ್ಲಿ ತುಂಬಿಕೊಂಡು, ಅಲ್ಲಿದ್ದ ಋಷಿಗಳಿಗೆ ನಿರಂತರ ತತ್ವವನ್ನುಪದೇಶಿಸುತ್ತ ಸುಖದಿಂದ ಇದ್ದ.

ರಾಮನ ಆಜ್ಞೆಯಂತೆ ಇನ್ನೊಂದು ರೂಪದಿಂದ ಕಿಂಪುರುಷಖಂಡದಲ್ಲಿ ನೆಲೆನಿಂತ,
ರಾಮಾಜ್ಞಯಾ ಕಿಂಪುರುಷೇ ರಾಜ್ಯಂ ಚಕಾರ ರೂಪೇಣ ತಥಾsಪರೇಣ
ಅಲ್ಲಿ,
ಇತ್ಥಂ ಸ ಗಾಯಞ್ಛತಕೋಟಿ ವಿಸ್ತರಂ ರಾಮಾಯಣಂ ಭಾರತಪಞ್ಚರಾತ್ರಮ್
ವೇದಾನ್ಶ್ಚ ಸರ್ವಾನ್ ಸಹಿತಬ್ರಹ್ಮಸೂತ್ರಾನ್ ವ್ಯಾಚಕ್ಷಾಣೋ ನಿತ್ಯಸುಖೋದ್ಭರೋsಭೂತ್
ಹಾಡುತ್ತಾ ನೂರುಕೋಟಿ ಬಿತ್ತರದ ಮೂಲರಾಮಾಯಣವನ್ನು, ಮಹಾಭಾರತದ ಜೊತೆಗೆ ಪಂಚರಾತ್ರವನ್ನು,  ಬ್ರಹ್ಮಸೂತ್ರಗಳ ಜೊತೆ ಸಮಸ್ತವೇದಗಳನ್ನು, ಸಾರಿದ ಭಕ್ತರಿಗೆ ಅವೆಲ್ಲವನ್ನೂ ಬಿಡಿಸಿ ಬಿಡಿಸಿ ಉಪದೇಶಿಸುತ್ತ, ಆನಂದದಿಂದ ತುಂಬಿಹೋದನು.

ಮತ್ತೊಂದು ರೂಪದಿಂದ ಹರಿಯ ಮಂದಿರಗಳಲ್ಲಿ ನೆಲೆನಿಂತ,

ರೂಪೈಸ್ತಥಾsನ್ಯೈಶ್ಚ ಸಮಸ್ತಸದ್ಮನ್ಯುವಾಸ ವಿಷ್ಣೋಸ್ಸತತಂ ಯಥೇಷ್ಟಮ್
ಬರಿಯ ಹೊರಗಿನ ವಿಷ್ಣುದೇವಾಲಯಗಳಲ್ಲಿ ಅಲ್ಲ,
ಹರಿಯ ಅಂತರ್ಯಾಮಿತ್ವವನ್ನು ನಿತ್ಯ ಅನುಭವಿಸುವ ಸಾತ್ವಿಕರೆಲ್ಲರ ಹೃದಯವೇ ಹರಿಮಂದಿರ. ಅಲ್ಲಿ ನೆಲೆನಿಂತನಿವನು.
ಈಶಾವಾಸ್ಯಮಿದಂ ಸರ್ವಂ’ ಅಲ್ಲವೇ. ಬ್ರಹ್ಮಾಂಡದ ಸಮಸ್ತ ಜೀವರ ಒಳಗೆ ನಿಂತು ರಾಮನ ಪೂಜಾರೂಪವಾದ ಶ್ವಾಸೋಚ್ಛ್ವಾಸಗಳನ್ನು ಮಾಡಿಸುವ ಉಸಿರು.

ಹೊರಗೆ ಕಿಂಪುರುಷಖಂಡದಲ್ಲಿ ಚಿರಕಾಲ ರಾಮನ ಸೇವೆಮಾಡುತ್ತಾ ಸಾರಿಬಂದ ಸಾಧಕರನ್ನು ದಡಸೇರಿಸುವ ಪರಿಸರ.
ಒಳಗೆ, ಜೀವನೊಳಗೆ ಮುಖ್ಯಾಮೃತನಾದ ರಾಮನನ್ನು ಸೇವಿಸುತ್ತಾ ಅವರವರ ಯೋಗ್ಯತೆಗೆ ತಕ್ಕಂತೆ ವಿಷ್ಣುಪ್ರಜ್ಞೆಯನ್ನು ಉದ್ಬೋಧಿಸಿ ಸಂಸಾರದ ವಿಷವನ್ನು ಪರಿಹರಿಸುವ ಅಮೃತನಾದ.

ಹೀಗೆ, ಸ್ವರೂಪದಿಂದ ಸುಗ್ರೀವರಾದ, ಒಳ್ಳೆಯ ಮುಖದ ಸಾತ್ವಿಕಜೀವರನ್ನು ರಾಮನೊಟ್ಟಿಗೆ ಬೆಸೆದು, ದುಷ್ಟರು ಎಳೆದೊಯ್ದ ಶುದ್ಧಜ್ಞಾನರೂಪಳಾದ ಸೀತೆಯನ್ನು ಹುಡುಕಿ ತಂದು ರಾಮನಿಗೊಪ್ಪಿಸಿ, ರಾಮಭಕ್ತಿಯನ್ನು ಜಗತ್ತಿನೆಲ್ಲೆಡೆ ಹಾಡುತ್ತಾ ಸಾರುತ್ತಾ, ಒಳಗಿದ್ದು ಪ್ರೇರಕನಾಗಿ, ಹೊರಗೆ ಪಾಲಕನಾಗಿ, ರಾಮಭಕ್ತರಿಗೆ ಭರವಸೆಯ ಬೆಳಕಾಗಿ ಸದಾ ಸಲಹುವ ಮುಖ್ಯಪ್ರಾಣನ ಶ್ರೀಮದ್ಧನುಮದವತಾರದ ಕಥೆಯನ್ನು ಇಲ್ಲಿಗೆ ಮುಗಿಸುತ್ತಾರೆ ಕವಿ, ನಾರಾಯಣಪಂಡಿತಾಚಾರ್ಯರು.

Tuesday, August 13, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೨೫-೨೬


ಅವನ ಚರಣಾರವಿಂದದ ಸೇವೆಯೇ ಇವನಿಗೆ ಪರಮಾನಂದ.

ನಮೋನಮೋ ನಾಥ ನಮೋನಮಸ್ತೇ ನಮೋನಮೋ ರಾಮ ನಮೋನಮಸ್ತೇ
ಪುನಃಪುನಸ್ತೇ ಚರಣಾರವಿಂದಂ ನಮಾಮಿ ನಾಥೇತಿ ನಮನ್ ಸ ರೇಮೇ ೦೧.೨೫

"ಓ ಎನ್ನೊಡೆಯನೇ ನಿನಗೆ ನಮನಗಳು! ರಾಮಾ ನಿನಗೆ ನಮೋನಮಃ! ಮತ್ತೆ ಮತ್ತೆ ನಿನ್ನಡಿದಾವರೆಗೆರಗುವೆ ಸ್ವಾಮೀ!", ಹೀಗೆ ಹಾಡುತ್ತ ಬಾಗುತ್ತ ರಮಿಸಿದನು ಇವನು!

ಕಿಂ ವರ್ಣಯಾಮಃ ಪರಮಂ ಪ್ರಸಾದಂ ಸೀತಾ-ಪತೇಸ್ತತ್ರ ಹರಿ-ಪ್ರಬರ್ಹೇ
ಮುಞ್ಚನ್ ಮಹೀಂ ನಿತ್ಯ-ನಿಷೇವಣಾರ್ಥಂ ಸ್ವಾತ್ಮಾನಮೇವೈಷ ದದೌ ಯದಸ್ಮೈ ೦೧.೨೬

ಎಂತು ಬಣ್ಣಿಪುದು ಕಪಿವರನಾದ ಹನುಮನಲ್ಲಿ ಸೀತಾಪತಿಯು ಮಾಡಿದ ಹಿರಿಯ ಹಸಾದವನ್ನು!
ತನ್ನವತಾರ ಕೊನೆಗೊಳಿಸಿ ಭುವಿಯನ್ನು ತೊರೆವಾಗ, ಇವನಿಗೆ ತನ್ನನ್ನೇ ಕೊಟ್ಟು ನಡೆದನು, ಅನುಗಾಲ ಸೇವೆಗಿರಲೆಂದು.

ರಾಮ, ಇವನನ್ನು ಗಟ್ಟಿಯಾಗಿ ತಬ್ಬಿ, ಹೊರಡುವ ಮುನ್ನ ಹೀಗೆಂದ, "ನಿನ್ನ ಸರ್ವೇಂದ್ರಿಯವ್ಯಾಪಾರಗಳಿಗೆ ಸದಾ ಗೋಚರನಾಗುವೆ ನಾನು. ಇದು ದಿಟ", ಎಂದು!
ಅಥಾsಹ ವಾಯುನಂದನಂ ಸ ರಾಘವಃ ಸಮಾಶ್ಲಿಷನ್ ತವಾಹಮಕ್ಷಗೋಚರಃ ಸದಾ ಭವಾಮಿ ನಾನ್ಯಥಾ
ಆಗಲೂ ಭಕ್ತಿಯಿಂದ ತಲೆಬಾಗಿ ಇವನು ಬೇಡಿದ್ದು ಇಷ್ಟೇ, ವಿಧೇಹಿ ಪಾದಪಙ್ಕಜೇ ತವೇಶ ಭಕ್ತಿಮುತ್ತಮಾಮ್
"ಸ್ವಾಮೀ, ನಿನ್ನ ಅಡಿದಾವರೆಗಳಲ್ಲಿ ಸಾಟಿಯಿರದ ಭಕ್ತಿಯನ್ನು ದಯಪಾಲಿಸು".

Sunday, August 11, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೨೪


ಪ್ರೇಷ್ಠೋ ನ ರಾಮಸ್ಯ ಬಭೂವ ತಸ್ಮಾನ್ನ ರಾಮ-ರಾಜ್ಯೇsಸುಲಭಂ ಚ ಕಿಂಚಿತ್
ತತ್ಪಾದ-ಸೇವಾ-ರತಿರೇಷ ನೈಚ್ಛತ್ ತಥಾsಪಿ ಭೋಗಾನ್ ನನು ಸಾ ವಿರಕ್ತಿಃ ೦೧.೨೪

ರಾಮನಿಗೆ ಇವನಿಗಿಂತ ನೆಚ್ಚಾದ ಮತ್ತೊಬ್ಬ ಭಕ್ತನಿರಲಿಲ್ಲ. ರಾಮನಾಳಿದ ನಾಡಿನಲ್ಲಿ ದುರ್ಲಭವಾದುದೂ ಯಾವುದೂ ಇರಲಿಲ್ಲ. ಆದರೂ ಈತ ತನ್ನೊಡೆಯನ ಪಾದಸೇವೆಯ ಸುಖವನ್ನು ಬಿಟ್ಟು ಮತ್ತೇನನ್ನೂ ಬಯಸಲಿಲ್ಲ. ಇದಲ್ಲವೇ ನಿಜವಾದ ವೈರಾಗ್ಯ!!

ರಾಮನಿಗೆ ಇವನಿಗಿಂತ ಪ್ರಿಯನಾದ ಮತ್ತೊಬ್ಬನಿರಲಿಲ್ಲ ಎಂದರೇ, ಸೀತೆಯನ್ನು ಹೊರತುಪಡಿಸಿ, ಇರಲಿಲ್ಲ, ಎಂದು ತಿಳಿಯಬೇಕು. ಅನಾದಿಕಾಲದಿಂದಲೂ ಇವಳನ್ನು ಬಿಡದೆ ತನ್ನೆದೆ ಮೇಲೆ ಹೊತ್ತು, ತನ್ನನ್ನೇ ಇತ್ತು, ಪತ್ನಿಯಾಗಿ ಸ್ವೀಕರಿಸಿ ಜಗತ್ತಿನ ಬಂಡಿಯನ್ನು ಇವಳೊಂದಿಗೆ ಸೇರಿ ತಾನೇ ನಡೆಸುವನು ಈ ಪುರುಷೋತ್ತಮ ಶ್ರೀರಾಮ.

ರಾಮರಾಜ್ಯದಲ್ಲಿ ಸಿಗದ ವಸ್ತುವೇ ಇರಲಿಲ್ಲ, ಎಂದ ಕವಿ. ಹೇಗಿತ್ತು ರಾಮನ ರಾಜ್ಯ?
ಹನುಮನ ಮುಖದಿಂದಲೇ ಕೇಳಿ:

ಪ್ರಶಾಸತೀಶೇ ಪೃಥವೀ ಬಭೂವ ವಿರಿಂಚಲೋಕಸ್ಯ ಸಮಾ ಗುಣೋನ್ನತೌ
ಸ್ವಾಮೀ ರಾಮನು ಆಳಿದ ಆ ರಾಜ್ಯ, ಬ್ರಹ್ಮನ ಲೋಕವನ್ನು ಸರಿಗಟ್ಟುವಂತಿತ್ತು.

ಸಮಸ್ತ-ರೋಗಾದಿಭಿರುಜ್ಝಿತಾಶ್ಚ ಸರ್ವೇ ಸಹಸ್ರಾಯುಷ ಊರ್ಜಿತಾ ಧನೈಃ
ಯಾರಿಗೂ ದೇಹದ ಹಾಗೂ ಮನಸ್ಸಿನ ರೋಗಗಳಿರಲಿಲ್ಲ. ಎಲ್ಲರೂ ಬಾಳುತ್ತಿದ್ದರು ಸಾವಿರ ವರ್ಷಗಳ ಬಾಳನ್ನು. ಎಲ್ಲರೂ ಹಣವಂತರೇ.

ಸರ್ವೇsಜರಾ ನಿತ್ಯಬಲೋಪಪನ್ನಾ ಯಥೇಷ್ಟಸಿದ್ಧ್ಯಾ ಚ ಸದೋಪಪನ್ನಾ
ಸಮಸ್ತದೋಷೈಃ ಸದಾ ವಿಹೀನಾಃ ಸರ್ವೇ ಸುರೂಪಾಶ್ಚ ಸದಾ ಮಹೋತ್ಸವಾಃ
ಎಲ್ಲರೂ ಮುಪ್ಪಿಲ್ಲದವರೇ, ಅದರಿಂದ ಉಂಟಾಗುವ ಅಂಗವೈಕಲ್ಯವಿಲ್ಲದವರು. ಬಲದಿಂದ ಕೂಡಿದವರು. ಅವರವರಿಗೆ ಲಭಿಸಿದ ಸಿದ್ಧಿಯಿಂದ ನಿತ್ಯವೂ ಎಲ್ಲವನ್ನೂ ಹೊಂದಿದವರು.
ಯಾವ ದೋಷಗಳಿಲ್ಲದ, ಸುಂದರರಾದ, ನಿತ್ಯೋತ್ಸವದ ಜನರು, ಅಯೋಧ್ಯೆಯವರು.

ಸರ್ವೇ ಮನೋವಾಕ್ತನುಭಿಸ್ಸದೈವ ವಿಷ್ಣುಂ ಯಜಂತೇ ನತು ಕಂಚಿದನ್ಯಮ್
ಸಮಸ್ತರತ್ನೋದ್ಭರಿತಾ ಚ ಪೃಥ್ವೀ ಯಥೇಷ್ಟಧಾನ್ಯಾ ಬಹುದುಗ್ಧಗೋಮತೀ
ಎಲ್ಲರೂ ದಿನವೂ ಮನಸ್ಸು ಮಾತು ತನುಗಳನ್ನು ವಿಷ್ಣುವಿನಲ್ಲೇ ಇರಿಸಿ ಜೀವನಯಜ್ಞವನ್ನು ಆಚರಿಸುವವರು. ಬೇರೆ ದೇವತೆಗಳನ್ನು ಸರ್ವೋತ್ತಮರೆಂದು ಎಂದೂ ತಿಳಿಯದ ತತ್ವಜ್ಞರು.
ಸಮಸ್ತಸಂಪತ್ತುಗಳ ಆಗರ, ಬೇಕಾದಷ್ಟು ಬಾರಿ ಫಲವೀವ ಭೂಮಿ.
ಕೆಚ್ಚಲಲ್ಲಿ ಇಲ್ಲವೆನಿಸದಷ್ಟು ಹಾಲು ಕರೆವ ಗೋವುಗಳು.

ನ ಕಸ್ಯಚಿದ್ ದುಃಖಮಭೂತ್ ಕಥಂಚಿನ್ನ ವಿತ್ತಹೀನಶ್ಚ ಬಭೂವ ಕಶ್ಚನ
ನಾಧರ್ಮಶೀಲೋ ನಚ ಕಶ್ಚನಾಪ್ರಜೋ ನ ದುಷ್ಪ್ರಜೋ ನೈವ ಕುಭಾರ್ಯಕಶ್ಚ 
ಯಾರಿಗೂ, ಯಾವ ರೀತಿಯಿಂದಲೂ ನೋವಿನ ಬಾಧೆಯಿರಲಿಲ್ಲ.
ಯಾವನೂ ಯಾವವಿಧದಿಂದಲೂ ಇರುವ ಸಂಪತ್ತನ್ನು ಕಳಕೊಳ್ಳುತ್ತಿರಲಿಲ್ಲ.
ಯಾವನೂ ಧರ್ಮಮಾರ್ಗವನ್ನು ಬಿಟ್ಟು ಬಾಳುತ್ತಿರಲಿಲ್ಲ. ಮಕ್ಕಳಿಲ್ಲದೆ ಯಾರೂ ಕೊರಗುತ್ತಿರಲಿಲ್ಲ. ಕೆಟ್ಟ ಮಕ್ಕಳು, ಕೆಟ್ಟ ಹೆಂಡತಿ, ಕೆಟ್ಟ ಗಂಡ ಎಂಬ ವೈಮನಸ್ಯ ಯಾರಿಗೂ ಇರಲಿಲ್ಲ.

ಯಥೇಷ್ಟಮಾಲ್ಯಾಭರಾಣುಲೇಪನಾ ಯಥೇಷ್ಟಪಾನಾಶನವಾಸಸೋsಖಿಲಾಃ
ಬೇಕಾದಷ್ಟು ಆಭರಣಗಳನ್ನು ತೊಟ್ಟು, ಗಂಧವನ್ನು ಪೂಸಿ, ಇಷ್ಟವಿದ್ದಷ್ಟು ಕುಡಿದು, ತಿಂದು, ಉಟ್ಟು ಮೆರೆವವರು ಅಯೋಧ್ಯೆಯ ನಾಡಿಗರು.

ಇಂಥಾ ರಾಜ್ಯದಲ್ಲಿ ಇದ್ದೂ, ರಾಜನಿಗೆ ಅತ್ಯಂತಪ್ರೀತಿಪಾತ್ರನಾಗಿದ್ದರೂ ಈ ಯಾವುದನ್ನೂ ಬಯಸದೇ, ಕೇವಲ ರಾಮನಲ್ಲಿ ಭಕ್ತಿಯನ್ನು ಬೇಡಿ ಪಡೆದನು. ವಿರಕ್ತಿಗೆ ಇವನಲ್ಲವೇ ದೃಷ್ಟಾಂತ! 
ಎಲ್ಲವೂ ಇದ್ದಾಗಲೂ ತೊರೆದು ಮೀರಿನಿಲ್ಲುವುದು ವಿರಕ್ತಿ. ಏನಿಲ್ಲದಿದ್ದಾಗ ತೊರೆದಂತೆ ತೋರುವದಲ್ಲ.

ಛಂದಸ್ಸು ಭದ್ರಾ ಎಂಬ ಉಪಜಾತಿಯ ಪ್ರಬೇಧ.
ರಾಮಭದ್ರನಲ್ಲಿ ಕಡೆವರೆಗೂ ಭದ್ರವಾಗಿ ಉಳಿವ ಭಕ್ತಿಯೊಂದನ್ನೇ ಬೇಡು. ಮಿಕ್ಕ ಎಲ್ಲವನ್ನೂ ಅಭದ್ರವೆಂದು ಬಗೆದು ಬಿಡು ಎಂಬ ಸಂಕೇತ.

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೨೩


ಸೇವಕಜನರಲ್ಲೇ ಇವನಿಗೆ ಸಮನಾದ ಮತ್ತೊಬ್ಬ ಜೀವನಿಲ್ಲ. ಇವನಂತೆ ಆತ್ಮನಿವೇದನೆ ಮಾಡಿಕೊಂಡ ಭಕ್ತನಿಲ್ಲ. ಅದಕೆ ರಾಮ ತನ್ನನ್ನು ತಾನು ಇವನಿಗೆ ಅರ್ಪಿಸಿಕೊಂಡ.

ಹೃದೋರು-ಸೌಹಾರ್ದ-ಭೃತಾsಧಿಮೌಲಿ ನ್ಯಸ್ತೇನ ಹಸ್ತೇನ ದಯಾರ್ದ್ರ-ದೃಷ್ಟ್ಯಾ
ಸೇವಾ-ಪ್ರಸನ್ನೋsಮೃತ-ಕಲ್ಪ-ವಾಚಾ ದಿದೇಶ ರಾಮಃ ಸಹ-ಭೋಗಮಸ್ಮೈ ೦೧.೨೩

ಮಾಡಿದ ಸೇವೆಗೊಲಿದು, ಸೊದೆತುಂಬಿದ ನಲ್ನುಡಿಗಳನಾಡಿ, ಕರುಣೆಯಿಂದ ತೊಯ್ದ ಕಂಗಳಿಂದ ನೋಡಿ, ಎದೆತುಂಬ ತುಂಬಿದ ಪ್ರೀತಿಯಿಂದ ಇವನ ತಲೆಯ ಮೇಲೆ ಕೈಯನಿರಿಸಿ ಕೊಟ್ಟನಿವನಿಗೆ ರಾಮ, ಜೊತೆಗುಣ್ಣುವ ಬ್ರಹ್ಮಪದವನ್ನು!
ಅಮೃತದಂಥಾ ಮಾತನ್ನಾಡಿದ ರಾಮ.
"ಮದ್ಭಕ್ತೌ ಜ್ಞಾನಪೂರ್ತೌ ಅನುಪಧಿಕಬಲಪ್ರೋನ್ನತೌ ಸ್ಥೈರ್ಯಧೈರ್ಯಸ್ವಾಭಾವ್ಯಾಧಿಕ್ಯತೇಜ-ಸ್ಸುಮತಿಶಮದಮೇಷ್ವಸ್ಯ ತುಲ್ಯೋ ನ ಕಶ್ಚಿತ್ ಶೇಷೋ ರುದ್ರಸ್ಸುಪರ್ಣೋsಪ್ಯುರುಗಣಸಮಿತೌ  ನೋ ಸಹಸ್ರಾಂಶತುಲ್ಯಾಃ " ಎಂಬೀತ್ಯಾದಿ ಹನುಮನ ಬಗೆಗಿನ ಪ್ರಶಂಸೆಯ ಮಾತು.
ತ್ರಿವಿಕ್ರಮಪಂಡಿತರೂ ಈ ಪ್ರಸಂಗವನ್ನು ಬಣ್ಣಿಸಿದ್ದಾರೆ, ವಾಯುಸ್ತುತಿಯಲ್ಲಿ,
"ಸಹಭುಜಮಕರೋದ್ರಾಮನಾಮಾ ಮುಕುಂದಃ, ದುಷ್ಪ್ರಾಪೇ ಪಾರಮೇಷ್ಠ್ಯೇ ಕರತಲಮತುಲಂ ಮೂರ್ಧ್ನಿ ವಿನ್ಯಸ್ಯ ಧನ್ಯಂ ತನ್ವನ್ ಭೂಯಃ ಪ್ರಭೂತಪ್ರಣಯವಿಕಸಿತಾಬ್ಜೇಕ್ಷಣಸ್ತ್ವೇಕ್ಷಮಾಣಃ ", ಎಂದು.

ಛಂದಸ್ಸು ಆರ್ದ್ರಾ ಎಂಬ ಉಪಜಾತಿಪ್ರಬೇಧ.
ದಯಾರ್ದ್ರ ರಾಮ, ಭಕ್ತ್ಯಾರ್ದ್ರ ಹನುಮ. ಇಬ್ಬರ ಸವಿ ಸಂಬಂಧದ ನೇಮ.