ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Tuesday, May 21, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೧೯


ಯುದ್ಧದ ಮಧ್ಯೇ ಲಕ್ಷ್ಮಣನೇ ಮೊದಲಾದ ರಾಮನ ಪಡೆಯವರು ಉರಗಬಂಧನಕ್ಕೆ ಸಿಕ್ಕು ಮೂರ್ಛಿತರಾಗುತ್ತರೆ. ಅವರಿಗೆ ಮತ್ತೆ ಜೀವನವಿತ್ತ ಪ್ರಾಣನ ಇನ್ನೊಂದು ಲೀಲಾಕಥನ-

ರಾಮಾರ್ಚನೇ ಯೋ ನಯತಃ ಪ್ರಸೂನಂ ದ್ವಾಭ್ಯಾಂ ಕರಾಭ್ಯಾಮಭವತ್ ಪ್ರಯತ್ನಃ   
ಏಕೇನ ದೋಷ್ಣಾ ನಯತೋ ಗಿರೀನ್ದ್ರಂ ಸಞ್ಜೀವನಾದ್ಯಾಶ್ರಯಮಸ್ಯ ನಾಭೂತ್ ೦೧.೧೯

ರಾಮನ ಪಾದಾರ್ಚನೆಗೆ ಹೂಗಳನ್ನು ಬೊಗಸೆ ತುಂಬ ಹೊತ್ತು ತರುವಾಗ ಪಟ್ಟಷ್ಟು ಪ್ರಯತ್ನವನ್ನೂ ಇವನು ಮಾಡಲಿಲ್ಲ ಒಂದೇ ಕೈಯಲ್ಲಿ ಸಞ್ಜೀವನಾದಿ ಔಷಧಿಗಳ ಖನಿಯಾದ ಗಂಧಮಾದನಪರ್ವತವನ್ನು ಹೊತ್ತು ಬರುವಾಗ ಕೂಡ.
ಅದು ಸಾಮಾನ್ಯವಾದ ಬೆಟ್ಟವಲ್ಲ. "ಯೋಜನಾನಾಂ ಶತಮ್ ಉಚ್ಛಃ ತಾವದ್ ವಿಸ್ತಾರವಾನ್", ನೂರು ಯೋಜನಗಳಷ್ಟು ಎತ್ತರದ್ದು ಅಷ್ಟೇ ಬಿತ್ತರದ್ದು. ಅದನ್ನು ಒಂದೇ ಕೈಯಿಂದ ಕಲ್ಲುಚೂರಿನಂತೆ ಒಂದೇ ಕ್ಷಣದಲ್ಲಿ ತಂದ ಇವನು.
ಆದರೇ ರಾಮನ ಪಾದಸೇವೆಗೆ ಹೊತ್ತು ತರುವ ಹೊಗಳನ್ನು ಎರಡೂ ಕೈಯಿಂದ ಭಾರವೇನೋ ಎಂಬಂತೆ ನಿಧಾನವಾಗಿ ಸಾಗಿ ಬರುತ್ತಾನೆ.
 "ಸಞ್ಜೀವನಾದ್ಯಾಶ್ರಯಮ್", ಎಂದು ಹೇಳಿದ್ದಾರೆ. ಸಞ್ಜೀವನವೇ ಮುಂತಾದವುಗಳಿಗೆ ಆಶ್ರಯವಾದ ಪರ್ವತ ಎಂದು. ಯಾವುವು ಅವು?
"ಮೃತಸಞ್ಜೀವನೀ ಮುಖ್ಯಾ ಸಂಧಾನಕರಣೀ ಪರಾ ಸವರ್ಣಕರಣೀ ಚೈವ ವಿಶಲ್ಯಕರಣೀತಿ ಚ[1] "
ಮೃತಸಞ್ಜೀವನೀ, ಸಂಧಾನಕರಣೀ, ಸವರ್ಣಕರಣೀ ಹಾಗೂ ವಿಶಲ್ಯಕರಣೀ ಎಂದು ನಾಲ್ಕು ಬಗೆಯ ಔಷಧಿಗಳ ತಾಣ ಆ ಪರ್ವತ.
ಛಂದಸ್ಸು ಇಂದ್ರವಜ್ರಾ.


[1]  ವಾಲ್ಮೀಕಿ ರಾಮಾಯಣ ಯುದ್ಧಕಾಂಡ (ಅಧ್ಯಾಯ ೭೪)

Monday, May 20, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೧೮


ಜಾಜ್ವಲ್ಯಮಾನೋಜ್ವಲ-ರಾಘವಾಗ್ನೌ ಚಕ್ರೇ ಸ ಸುಗ್ರೀವ-ಸುಯಾಯಜೂಕೇ
ಆಧ್ವರ್ಯವಂ ಯುದ್ಧ-ಮಖೇ ಪ್ರತಿಪ್ರಸ್ಥಾತ್ರಾ ಸುಮಿತ್ರಾ-ತನಯೇನ ಸಾಕಮ್ ೦೧.೧೮

ಸುಗ್ರೀವನ ಯಜಮಾನಿಕೆಯಲ್ಲಿ ನಡೆದ ಯುದ್ಧವೆಂಬೋ ಮಾರಣಹೋಮದಲ್ಲಿ ಲಕ್ಷ್ಮಣನ ಜೊತೆಗೂಡಿ ಇವನು ದಗದಗ ಉರಿವ ರಾಮನೆಂಬ ಅಗ್ನಿಯಲ್ಲಿ ರಕ್ಕಸರ ತಲೆಗಳನ್ನು ಹೋಮಿಸಿಬಿಟ್ಟ!
‘ಯಾಯಜೂಕ’ ಎಂದರೆ ಹೋಮಮಾಡುವ ಯಜಮಾನ.
‘ಅಧ್ವರ್ಯು’ ಎಂದು ಯಜುರ್ವೇದವನ್ನು ಬಲ್ಲ, ಪ್ರಧಾನಹೋಮವನ್ನು ಮಾಡುವ ಋತ್ವಿಕ್. ‘ಅಧ್ವರ’ ಎಂದರೆ ಯಜ್ಞ. ಅದನ್ನು ಸದಾ ಮಾಡುವ ಬಯಕೆಯುಳ್ಳವನು, ಅದು ನಡೆವಲ್ಲಿ ತಾನಿರುವವನು ಅದಕ್ಕೆ ಅವನಿಗೆ ಅಧ್ವರ್ಯು ಎಂದು ಹೆಸರು.
ಅಧ್ವರ್ಯುವಿನ ಸಹಾಯಕ ಪ್ರತಿಪ್ರಸ್ಥಾತಾ. ಯಜುರ್ವೇದವನ್ನು ಬಲ್ಲ ಒಬ್ಬ ಋತ್ವಿಕ್. ಪ್ರತಿಯೊಂದನ್ನೂ ಎಲ್ಲೆಲ್ಲಿ ಸ್ಥಾಪಿಸಬೇಕು, ನಡೆಸಬೇಕು ಎಂದು ಬಲ್ಲ ಜಾಣ. ಅದಕ್ಕೆ ಅವನಿಗೆ ಪ್ರತಿಪ್ರಸ್ಥಾತಾ ಎಂದು ಹೆಸರು.

ಈ ಪದ್ಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಯಜ್ಞ ಯಾಗಗಳ ಪರಿಭಾಷೆಯನ್ನು ಅರಿಯಬೇಕು. ಅದಕ್ಕಾಗಿಯೇ ಈ ಭಾಗ -
ಸೋಮಯಾಗದಲ್ಲಿ ಪ್ರಧಾನವಾಗಿ ನಾಲ್ಕು ಜನ ಋತ್ವಿಜರು. ಹೋತಾ, ಅಧ್ವರ್ಯು, ಉದ್ಗಾತಾ ಹಾಗೂ ಬ್ರಹ್ಮ ಎಂದು. ಅದರಲ್ಲಿ ಋಗ್ವೇದವನ್ನು ಬಲ್ಲ, ಶಸ್ತ್ರ ಮಂತ್ರಗಳನ್ನು ಶಂಸನ ಮಾಡುವ ಋತ್ವಿಕ್ ಹೋತಾ. ಅಧ್ವರ್ಯು ತಾನು ಹೋಮಿಸುತ್ತಾನೆ. ಉದ್ಗಾತಾ ಸಾಮವೇದವನ್ನು ಬಲ್ಲ ಹಾಡುಗಾರ. ಅವನು ಸಾಮಗಾನ ಮಾಡುತ್ತಾನೆ. ಬ್ರಹ್ಮ ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವ, ಯಜ್ಞದ ಪೂರ್ಣಾಪ್ತಿಯನ್ನು ಹೊಂದಿಸುವ ಋತ್ವಿಕ್. ಈ ನಾಲ್ವರಿಗೆ ಮೂರು ಮೂರರಂತೆ ಹನ್ನೆರಡು ಸಹಾಯಕರು. ಹೋತನಿಗೆ ಮೈತ್ರಾವರುಣ, ಅಚ್ಛಾವಾಕ ಹಾಗೂ ಗ್ರಾವಸ್ತುಕ್ ಎಂದು ಮೂರು ಸಹಾಯಕ ಋತ್ವಿಜರು. ಅಧ್ವರ್ಯುವಿಗೆ ಪ್ರತಿಪ್ರಸ್ಥಾತಾ, ನೇಷ್ಟಾ ಹಾಗೂ ಉನ್ನೇತಾ ಎಂಬ ಮೂವರು ಸಹಾಯಕರು. ಉದ್ಗಾತನಿಗೆ ಪ್ರಸ್ತೋತಾ, ಪ್ರತಿಹರ್ತಾ ಹಾಗೂ ಸುಬ್ರಹ್ಮಣ್ಯ ಎಂಬ ಮೂವರು ಹಾಗೂ ಕಡೆಗೆ ಬ್ರಹ್ಮನಿಗೆ ಬ್ರಾಹ್ಮಣಾಚ್ಛಂಸಿ, ಆಗ್ನೀಧ್ರ ಹಾಗೂ ಪೋತಾ ಎಂಬ ಮೂರು ಜನ  ಋತ್ವಿಜರು ಸಹಾಯಕರು. ಒಟ್ಟಿಗೆ ಹದಿನಾರು ಋತ್ವಿಜರ ಪಡೆ ಒಂದು ಯಜ್ಞವನ್ನು ನಡೆಸುತ್ತದೆ.

ಇಲ್ಲಿ, ರಾಮನಿಗೆ ತಾನು ಸೀತೆಯನ್ನು ತಂದುಕೊಡುವದಾಗಿ ಅಂದು ಅಗ್ನಿಮುಖದಲ್ಲಿ ಶಪಥಮಾಡಿದ ಸುಗ್ರೀವನು ಯುದ್ಧವೆಂಬೋ ಯಾಗಕ್ಕೆ ಯಜಮಾನನಾದ.
ಶಪಥ ಮಾಡಿದ್ದು ಸುಗ್ರೀವ. ಆದರೆ ಅಗ್ನಿಗೆ ಆಜ್ಯವನ್ನು ಅಳೆದಳೆದು ಹೋಮಿಸಿದ ಅಧ್ವರ್ಯು, ಹನುಮ.
ಅವನ ಸಹಾಯಕ್ಕೆ ನಿಂತವನು ಲಕ್ಷಣನೆಂಬ ಪ್ರತಿಪ್ರಸ್ಥಾತಾ. ಈ ಇಡಿಯ ಯುದ್ಧವೆಂಬ ಯಜ್ಞವು ಯಾರಲ್ಲಿ ಸಮರ್ಪಿತವಾಯಿತು?
ರಾಮನೆಂಬೋ ನಿಗಿನಿಗಿವ ದಳ್ಳುರಿಯಲ್ಲಿ!  
ಛಂದಸ್ಸು ಇಂದ್ರವಜ್ರ.