ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Friday, March 29, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೧೧

ಹನುಮಂತನ ಗುಣಕಥನ ಇಲ್ಲಿಗೆ ಮುಗಿಲಿಲ್ಲ. ವಾಲ್ಮೀಕಿಗಳು ಹನುಮತ್ಸ್ವರೂಪವನ್ನು ಯಥಾರ್ಥವಾಗಿ ಉಪಾಸಿಸಿದ ಜ್ಞಾನಿ. ಅದಕ್ಕೆಂದೇ ಭಗವಂತ ಇವರ ಬಾಯಲ್ಲಿ ಭವಿಷ್ಯ ನುಡಿಸಿದ. ಮುಂದೆ ಈ ಹನುಮಂತನೇ ಮಧ್ವನಾಗಿ ಬಂದು ಮತ್ತೂ ವಿಶೇಷಗುಣಗಳನ್ನು ಅಭಿವ್ಯಕ್ತಗೊಳಿಸುವ ವಿಚಾರವನ್ನು ರಾಮಾಯಣದಲ್ಲಿ ಹೇಳಿದ್ದಾರೆ. ಎಲ್ಲಿ? ಇಲ್ಲಿ -
"ಸಸೂತ್ರವೃತ್ಯರ್ಥಪದಂ ಮಹಾರ್ಥಂ ಸಸಂಗ್ರಹಂ ಸಾಧ್ಯತಿ ವೈ ಕಪೀಂದ್ರಃ ನ ಹ್ಯಸ್ತಿ ಕಶ್ಚಿತ್ ಸದೃಶೋsಸ್ತಿ ಶಾಸ್ತ್ರೇ ವೈಶಾರದೇ ಛಂದಗತೌ ತಥೈವ "  ಮುಂದೆ ಮಧ್ವನಾಗಿ ಬಂದು ಸಾಧಿಸುತ್ತಾನೆ ಈ ಕಪೀಂದ್ರ! ತಂದೆ ವ್ಯಾಸ ರಚಿಸಿದ ಬ್ರಹ್ಮಸೂತ್ರಗಳಿಗೆ ಅನುವಾಖ್ಯಾನ-ಸರ್ವಶಾಸ್ತ್ರಾರ್ಥಸಂಗ್ರಹಗಳಿಂದ ಕೂಡಿದ ಭಾಷ್ಯವನ್ನು! ವಿಷ್ಣುವನ್ನು ಪ್ರತಿಪಾದಿಸುವ ಶಾಸ್ತ್ರಗಳಲ್ಲಿ, ವೇದಗಳನ್ನು ಅರ್ಥೈಸುವುದರಲ್ಲಿ ಇವನಿಗೆ ಸಮನಾದ ಇನ್ನೊಬ್ಬ ಜ್ಞಾನಿ ಯಾರಿದ್ದಾನೆ?!
ವಿಶಾರದ ಎಂದರೆ ವಿಷ್ಣು. 'ಮಾಯಾ ವೈಶಾರದೀ', ಎಂದು ಭಾಗವತ ಹೇಳಿತು. ಆದ್ದರಿಂದ ವೈಶಾರದೇ ಶಾಸ್ತ್ರೇ ಎಂದರೆ ವೈಷ್ಣವಶಾಸ್ತ್ರವೆಂದರ್ಥ.   ಸರ್ವಶಾಸ್ತ್ರಾರ್ಥಸಂಗ್ರಹಕ್ಕೆ ‘ಅಣುಭಾಷ್ಯ’ ಎಂತಲೂ ಹೆಸರು.

ತನ್ನ ನೋಟಕ್ಕೆ ನಿಚ್ಚ ಸಿಗುವ ಮೆಚ್ಚಾದ ದೈವ ರಾಮಚಂದ್ರನನ್ನು ಹನುಮನಾಗಿ ಲೋಕದೃಷ್ಟಿಯಲ್ಲಿ ಮೊದಲು ಕಂಡದ್ದು ಕಿಷ್ಕಿಂಧೆಯಲ್ಲಿ.
ಆ ಸೇವ್ಯ-ಸೇವಕರ ಸಮಾಗಮ ಹೇಗಿತ್ತು, ಮುಂದಿನ ಶ್ಲೋಕಗಳು ಹೇಳುತ್ತವೆ -

ಕರ್ಮಾಣಿ ಕುರ್ವನ್ ಪರಮಾದ್ಭುತಾನಿ ಸಭಾಸು ದೈವೀಷು ಸಭಾಜಿತಾನಿ
ಸುಗ್ರೀವಮಿತ್ರಂ ಸ ಜಗತ್ಪವಿತ್ರಂ ರಮಾಪತಿಂ ರಾಮತನುಂ ದದರ್ಶ

ಸಗ್ಗಿಗಳು ತಮ್ಮ ಸಭೆಗಳಲ್ಲಿ ಪ್ರೀತಿಯಿಂದ ತುತಿಸುತ್ತಾ ಸೇವಿಸುವಜಗತ್ತು ನಂಬಲಸದಳವಾದ ಕರ್ಮಗಳನ್ನು ಎಸಗುತ್ತ, ಸುಗ್ರೀವನ ಗೆಳೆಯನಾದ ಇವನು (ಹನುಮಂತ) ಕಂಡ  ರಮೆಯರಸನನ್ನು. (ಮುಂದೆ) ಸುಗ್ರೀವನಿಗೆ ಸ್ನೇಹ ಹಾಗೂ ರಕ್ಷಣೆಯನಿತ್ತು ಸಲಹುವ, ಪ್ರಕೃತಿಯ ಸೋಂಕಿಲ್ಲದ, ಪೂತಾತ್ಮನಾದ ರಾಮನನ್ನು!

'ಸಭಾಜ' ಎಂಬ ಧಾತುವಿನ ಅರ್ಥ, ಪ್ರೀತಿ ಹಾಗೂ ಸೇವೆ.
‘ಸುಗ್ರೀವಮಿತ್ರಂ’ ಎಂಬ ಶಬ್ದವನ್ನು ಎರಡು ಸಾಲಿನ ನಡುವೆ ಇಟ್ಟು ಚಮತ್ಕಾರವನ್ನು ಮಾಡಿದ ಕವಿಗೆ ನಮನ. ಅದು ಬಿಂಬನಾದ ರಾಮನಿಗೂ ಅನ್ವಯ, ಅವನ ಆಭಾಸಕನಿಗೂ ಅನ್ವಯ. ಮಿತ್ರ ಎಂದರೆ ಗೆಳೆಯ ಎಂದರ್ಥವಲ್ಲೆವೇ? ರಕ್ಷಣೆಯ ಅರ್ಥ ಹೇಗೆ?
ವೈಯಾಕರಣರು ‘ಮಿದ’ ಎಂಬ ಧಾತುವಿಗೆ ‘ಕ್ತ್ರ’ ಎಂಬ ಪ್ರತ್ಯಯವನ್ನು ಹೇಳುತ್ತಾರೆ. ನಮಗೆ ಪ್ರತ್ಯಕ್ಷರವನ್ನು ಬಿಡಿಸಿ ನೋಡುವ ಹುಚ್ಚು. ‘ತ್ರ’ ಎಂಬುದಕ್ಕೆ ತ್ರಾಣ, ರಕ್ಷಣಾ ಎಂಬರ್ಥವು ಜ್ಞಾನಿಗಳು ತೋರಿದ್ದಾರೆ. ‘ಗಾಯಂತಮ್ ತ್ರಾಯತೇ’ ಎಂದು ಗಾಯತ್ರೀ ತಾನೇ! ಅದಕ್ಕೆಂದೇ ಅವನು ಸುಗ್ರೀವನಿಗೆ ಮಿತ್ರ. ಅವನ ನೇಹಿಗನಾದ. ವಾಲಿಯಿಂದ ರಕ್ಷಣೆಯನಿತ್ತ.
ಮಾರುತಿಕೃತೇ ರವಿಜಂ ರರಕ್ಷ, ಎಂಬ ಮಾತು ಸ್ಮರಿಸೋಣ.
ಈ ಹನುಮಂತನಿಗೆ ರಾಮನು ಕಂಡದ್ದು ಅದೇ ಮೊದಲು. ಅವನಿಗೆ  ಸುಗ್ರೀವನಿಗೆ ಇವನು ಮಿತ್ರನಾಗುವದು ಹೇಗೆ ತಿಳಿಯಿತು?
ಅದಕ್ಕೆ ಹೇಳಿದ್ದು ಹನುಮಂತ ಅಂತ. ಜ್ಞಾನವಂತ. ಅವನಿಗೆ ತಿಳಿಯದ್ದೇನಿದೆ!
ರಾಮ ಸುಗ್ರೀವನಿಗೆ ಅಲ್ಲದೆ ಮತ್ತಾರಿಗೆ ಮಿತ್ರನಾಗುವ!? ಒಳ್ಳೆಯ ಮುಖದವರನ್ನು ಅಲ್ಲವೇ ಅವನು ಸಲಹುವುದು?
ಮುಖ ಎಂದರೆ ಸ್ವರೂಪ ಎಂಬುದು ಪ್ರಾಚೀನರ ಕಾಣ್ಕೆ. ಚೇತೋಮುಖಮ್, ಎಂಬ ಮಾತು ಉಪನಿಷತ್ತಿನದ್ದು.  ಅದಾದರೂ ಯಾಕೆ? ಯಾವುದು ಪ್ರಮುಖವೋ ಅದು ಮುಖ. ಒಳ್ಳೆಯ ಮುಖ ಎಂದರೂ, ಒಳ್ಳೆಯ ಜೀವರು (ಸಾತ್ವಿಕರು) ಎಂದರೂ ಒಂದೇ!
ನಮಗೂ ರಾಮನಿಗೂ ಸ್ನೇಹದ ನಂಟು ಬೆಸೆವ ಅಂತರಂಗದ ಭಂಟ ಹನುಮ!
ಸೀತೆಯನ್ನು ಕಳಕೊಂಡು ಹುಡುಕುತ್ತಾ ಬಂದ ರಾಮನನ್ನು ಹನುಮಂತ ಕಂಡ, ಕಿಷ್ಕಿಂಧೆಯಲ್ಲಿ. ಇದು ಲೋಗರ ನೋಟ. ಅವನಿಗೆ ಕಂಡದ್ದು ರಮಾಪತಿಯಾಗಿಯೇ ಬಂದ ರಾಮನನ್ನು! ರಮೆಯನ್ನು ಎಂದೂ ಅಗಲಿರದ ರಾಮನನ್ನು. ನಿತ್ಯಾವಿಯೋಗಿಯರಾದ ಸೀತಾರಾಮರನ್ನು ಕಂಡ!
ಛಂದಸ್ಸು ಭದ್ರಾ ಎಂಬ ಉಪಜಾತಿಪ್ರಬೇಧ. ಜೀವೋತ್ತಮ ಸರ್ವೋತ್ತಮರ ಸಮಾಗಮದ ಭದ್ರ ಪ್ರಸಂಗ.

No comments:

Post a Comment