ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Sunday, February 3, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೬(೪)

ನಾಲ್ಕನೇ ಮಂತ್ರ -
ಪ್ರ ಯತ್ ಪಿತುಃ ಪರಮಾನ್ನೀಯತೇ ಪರ್ಯಾ ಪೃಕ್ಷುಧೋ ವೀರುಧೋ ದಂಸು ರೋಹತಿ    
ಉಭಾ ಯದಸ್ಯ ಜನುಷಂ ಯದಿನ್ವತ ಆದಿದ್ ಯವಿಷ್ಠೋ ಅಭವದ್ ಘೃಣಾ ಶುಚಿ:

ಇವನು ತನ್ನ ಹಡೆದ ತಂದೆಯಾದ (ಪಿತುಃ) ಸರ್ವೋತ್ತಮನ ದೆಸೆಯಿಂದ (ಪರಮಾತ್) ನಡೆಯುತ್ತಾನೆ, (ಪ್ರಣೀಯತೇ) ದೇಶ ದೇಶಗಳನ್ನು ಮಧ್ವನಾಗಿ ಸಂಚರಿಸುತ್ತಾನೆ. ತಂದೆಯ ಆಜ್ಞೆಯಂತೆ ನಡೆಯುತ್ತಾನೆ. ಅಲ್ಲಿ, ಎದುರಾಳಿಗಳು ಗೆಲ್ಲಬಯಸಿ ಒಡ್ಡುವ ಪ್ರಶ್ನೆಗಳನ್ನು (ಪೃಕ್ಷುಧೋ) ನಸೆಬಳ್ಳಿಯಂತೆ (ವೀರುಧೋ) ಹಲ್ಲುಗಳಲ್ಲಿ (ದಂಸು) ಇಟ್ಟು ಜಗಿದುಬಿಡುತ್ತಾನೆ (ಪರ್ಯಾರೋಹತಿ). ಪ್ರತಿವಾದಿಗಳನ್ನು ಅನಾಯಾಸವಾಗಿ ಗೆಲ್ಲುತ್ತಾನೆ ಎಂದು ಅರ್ಥ.
ಹಿಂದಿನ ಮಂತ್ರದಲ್ಲಿ ಇವನನ್ನು ವೃಷಭನೆಂದು ಕರೆದ ವೇದಪುರುಷ.
ವೃಷಭ ಎಂದರೆ, ಎತ್ತು. ಅದರ ನೆಲೆಯಲ್ಲೇ ಈ ಮಂತ್ರ ಹೀಗೆ ಹೇಳುತ್ತಿದೆ. ಈ ನಾರಾಯಣನ ಎತ್ತು, ಎಲ್ಲರನ್ನೂ ಎತ್ತಲೆಂದೆ ಬಂದ ಎತ್ತು, ತಂದೆಯಾದ ದೊಡೆತ್ತನ್ನು ಅನುಸರಿಸುವ ಎತ್ತು, ಬಂದ ಎದುರಾಳಿಗಳು ಎಸೆವ ಪ್ರಶ್ನೆಗಳೆಂಬ ತೆಳುವಲ್ಲಿಗಳನ್ನು ಮಾತ್ರ ಆರಾಮವಾಗಿ ಹಲ್ಲುಗಳಲ್ಲಿ ಇಟ್ಟು ಜಗಿದುಬಿಡುತ್ತದೆ.

ಇವನನ್ನು ನಡಿಲ್ಲಾಯದಂಪತಿಗಳಲ್ಲಿ ಇದ್ದು ಹುಟ್ಟಿಸಿದ (ಯದಸ್ಯ ಜನುಷಂ) ಆ ಎರಡು ಪರಶಕ್ತಿಗಳು, ಲಕ್ಷ್ಮೀ ನಾರಾಯಣರು (ಉಭಾ) ಇವನಲ್ಲಿ ಚೆನ್ನಾಗಿ ತುಂಬಿಬಿಟ್ಟಿದ್ದಾರೆ (ಇನ್ವತಃ) ಇವನೇ ಅವರ ಪ್ರೀತಿಯ ಮುಖ್ಯಾಧಿಷ್ಠಾನ ಅಲ್ಲವೇ!!
ಆದ್ದರಿಂದಲೇ (ಆದಿದ್) ಅವತಾರಗಳಲ್ಲಿ ಕಡೆಯದಾದ, ಸದಾ ನವತರುಣನಾದ (ಯವಿಷ್ಠೋ) ಮಧ್ವನು, ಸಜ್ಜನರ ಮೇಲೆ ಬಹಳ ಕರುಣೆಯುಳ್ಳವನಾದನು, ಒಳಗಿನ ಕತ್ತಲನ್ನು ಓಡಿಸುವ ಬೆಳಕಾದನು (ಘೃಣಾ) ಕಲಿಯುಗದ ಅಂಟಿಲ್ಲದೇ ಶುಚಿಯಾಗಿ ಇದ್ದನು (ಶುಚಿಃ) , ಸಾತ್ವಿಕರ ಕಲಿಮಲವನ್ನು ತೊಳೆದನು.

ಐದನೇ ಮಂತ್ರ -
ಆದೀನ್ಮಾತೃರಾವಿಶದ್ಯಾಸ್ವಾಶುಚಿರಹಿಮ್ಸ್ಯಮನ ಉರ್ವಿಯಾ ವಿವಾವೃಧೇ    
ಅನುಯತ್ಪೂರ್ವಾ ಅರುಹತ್ ಸನಾಜುವೋ ನಿನವ್ಯಾಸೀಷ್ವವರಾಸುಧಾವತೇ

ತಂದೆಯಾದ ನಾರಾಯಣನಿಂದಲೆ (ಆದೀದ್) ಸಪ್ತಮಾತೃಗಳಾದ ವಿದ್ಯೆಗಳಲ್ಲಿ, ಹಡೆದ ಅಂಜನಾ, ಕುಂತಿ, ನಡಿಲ್ಲಾಯ ಪತ್ನಿಯರಲ್ಲಿ (ಮಾತೃ) ಪ್ರವೇಶಿಸುತ್ತಾನೆ (ಆವಿಶದ್). ಹಾಗೆ ಮಣ್ಣಿನ ಹೆಣ್ಣುಗಳಲ್ಲಿ ಹೊಕ್ಕರೂ, ಸದಾ ಶುಚಿಯಾಗಿ ಇರುತ್ತಾನೆ (ಆಶುಚಿಃ). ವಿದ್ಯೆಗಳಲ್ಲಿ ಹೊಕ್ಕು ಅದರ ಅಪೂರ್ವಾರ್ಥಗಳನ್ನು ಬೆಳಗಿಸುತ್ತಾನೆ. ಹುಟ್ಟಿಬಂದವನಾದರು ಗರ್ಭವಾಸದ ಹಿಂಸೆಯಿಲ್ಲದವನು (ಆಹಿಂಸ್ಯಮಾನಃ), ವಿದ್ಯೆಗಳಲ್ಲಿ ಪರರಿಂದ ಸೋಲಿಸಬೇಕೆಂದು ಹಿಂಸಿಸಲ್ಪಟ್ಟರೂ ಅವರನ್ನು ಗೆದೆಯುವನು, ಮೂರು ಅವತಾರಗಳಲ್ಲಿ ವೈರಿಗಳಿಂದ ಹಿಂಸೆಗೊಳಗಾದರೂ, ನಿರ್ವಿಕಾರನಾಗಿಯೆ ಎಲ್ಲರನ್ನೂ ಮೀರಿಸಿ ನಿಲ್ಲುತ್ತಾನೆ (ಉರ್ವಿಯಾ ವಿವಾವೃಧೇ), ಜ್ಞಾನದಿಂದ, ಬಲದಿಂದ ಎಲ್ಲರನ್ನೂ ಮೀರಿ ಬೆಳೆಯುತ್ತಾನೆ.

'ತ್ರಿಷ್ವಪಿ ಏವಾವತಾರೇಷು’ ಎಂಬ ವಾಯುಸ್ತುತಿಯ ನುಡಿಯನ್ನು ಇಲ್ಲಿ ಸ್ಮರಿಸಬೇಕು.
ಹೀಗೆ ಸದಾ ಭಗವಂತನನ್ನೇ ಪ್ರತಿಪಾದಿಸುವ(ಸನಾಜುವಃ), ಪ್ರಾಚೀನವಾದ (ಪೂರ್ವಾ) ಪರವಿದ್ಯೆಗಳನ್ನು ನಿಜವಾಖ್ಯಾನದಿಂದ ಏರುತ್ತಾನೆ (ಅನು ಆರೋಹತಿ), ಚೆನ್ನಾಗಿ ವಿಮರ್ಶಿಸುತ್ತಾನೆ.
ಅರ್ವಾಚೀನಗಳಾದ (ನವ್ಯಾಸು) ಕಾವ್ಯ, ವ್ಯಾಕರಣ ಮುಂತಾದ ಅಪರವಿದ್ಯೆಗಳಲ್ಲಿ (ಅವರಾಸು) ಅನಾಯಾಸವಾಗಿ ಓಡುತ್ತಾನೆ, (ನಿಧಾವತೇ), ಬೇಗನೆ ದಣಿವಿಲ್ಲದೆ  ವಿವರಿಸುತ್ತಾನೆ.