ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Tuesday, January 29, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೬(೩)

ಎಡರನೇ ಮಂತ್ರ -
ಪೃಕ್ಷೋ ವಪುಃ ಪಿತುಮಾನ್ ನಿತ್ಯ ಆ ಶಯೇ ದ್ವಿತೀಯಮಾ ಸಪ್ತಶಿವಾಸು   ಮಾತೃಷು 
ತೃತೀಯಮಸ್ಯ ವೃಷಭಸ್ಯ ದೋಹಸೇ ದಶಪ್ರಮತಿಂ ಜನಯಂತ ಯೋಷಣಃ

(ಪೃಕ್ಷೋ) ಸೈನ್ಯಸೈನ್ಯಯಗಳನ್ನೇ ತಲೆಕೆಳಗೆ ಮಾಡುವವ, (ಪಿತುಮಾನ್) ಬಕಾಸುರನ ವಧೆಯ ಕಾಲದಲ್ಲಿ ಬಂಡಿ ಅನ್ನವನ್ನು ಉಂಡವ, (ದ್ವಿತೀಯಂ ವಪುಃ)ಎರಡನೇ ಅವತಾರ, ಭೀಮಸೇನ!!
ಅವನು, ಭಗವಂತನಿಂದ ಪ್ರೇರಿತನಾಗಿ (ನಿತ್ಯ) ಏಳು ಪಾವನವಾದ ವಿದ್ಯೆಗಳಲ್ಲಿ (ಸಪ್ತ ಶಿವಾಸು ಮಾತೃಷು) ಆರಾಮವಾಗಿ ವಿಹರಿಸುವವ (ಆ ಶಯೇ). ಯಾವುವು ಆ ಏಳು ವಿದ್ಯೆಗಳು?
ನಾಲ್ಕು ವೇದಗಳು, ಮಹಾಭಾರತ -ರಾಮಾಯಣಗಳೆಂಬ ಇತಿಹಾಸಗಳು, ಪಂಚರಾತ್ರ ಹಾಗೂ ಪುರಾಣಗಳು.
ಅಥವಾ ನಿತ್ಯವೂ, ರಣರಂಗದಲ್ಲಿ ಆರಾಮವಾಗಿ ಶತ್ರುಗಳನ್ನು ಸದೆದು ವಿಹರಿಸುವವ. ಪಾಂಡಿತ್ಯೇ ಚ ಪಟುತ್ವೇ ಚ ಶೂರತ್ವೇ ಅಪಿ ಬಲೇ ಅಪಿಚ ಭೀಮಸೇನಸಮೋ ನಾಸ್ತಿ", ಎಂಬ ಮಾತು ಲೋಕಜನೀನವೆ ಆಗಿದೆ.
ಇನ್ನು, ಅದೇ ಏಳು ವಿದ್ಯೆಗಳಲ್ಲಿ ನುರಿತ, ದೇವತೆಗಳ ಒಡೆಯನಾದ (ವೃಷಭಸ್ಯ) ಇವನ ಮೂರನೇ ಅವತಾರವನ್ನು (ತೃತೀಯಮ್) ದಶಪ್ರಮತಿ ಎಂದು ಕರೆಯುತ್ತಾರೆ. ಇವನನ್ನೇ ಜ್ಞಾನದ ದೋಹನಕ್ಕಾಗಿ (ದೋಹಸೇ) ವೇದಮಾನಿನಿಯರು ಹಡೆದರು (ಜನಯಂತ ಯೋಷಣಃ) ಇವರೇ, ನಡಿಲ್ಲಾಯರ ಪತ್ನಿಯಲ್ಲಿ ಸನ್ನಿಹಿತರಾಗಿ ಮಧ್ವನನ್ನು ಹಡೆದರು, ಜಗತ್ತಿಗಿತ್ತರು.
ನಾರಾಯಣಪಂಡಿತರೇ ಮುಂದೆ ಹೇಳುತ್ತಾರೆ, ಶ್ರೀ-ಶ್ರೀಧರ-ಪ್ರತತಿ-ಶಾರ-ಶರೀರ-ಯಷ್ಟಿ ಎಂದು.

ಮೂರನೇ ಮಂತ್ರ -
ನಿರ್ಯದೀಂ ಬುಧ್ನಾನ್ಮಹಿಷಸ್ಯ ವರ್ಪಸ ಈಶಾನಾಸ: ಶವಸಾ ಕ್ರಂತ ಸೂರಯಃ
ಯದೀಮನು ಪ್ರದಿವೋ ಮಧ್ವ ಆಧವೇ ಗುಹಾ ಸಂತಂ ಮಾತರಿಶ್ವಾ ಮಥಾಯತಿ

ಈ ಯಾವ ವೇದಮಾತೆಯ ಕುವರನಿಂದ, ಎಂಥವನಿಂದ? ಜ್ಞಾನವನ್ನು ಬೋಧಿಸುವವನಿಂದ (ಬುಧ್ನಾತ್) ಸರ್ವೋತ್ಕೃಷ್ಟನಾದ, ಮಹಿತನಾದ ಭಗವಂತನ (ಮಹಿಷಸ್ಯ) ಗುಣಗಳನ್ನು (ವರ್ಪಸ:) ಸುಲಭವಾಗಿ (ಶವಸಾ) ಶಿವನೇ ಮೊದಲಾದ ಜ್ಞಾನಿಗಳು (ಈಶಾನಾಸ: ಸೂರಯಃ) ನಿಶ್ಚಯವಾಗಿ ತಿಳಿದವರಾದರೋ (ನಿಃಕ್ರಂತ) , ಅಂಥಾ ಇವನು (ಯದೀಮ್) ಪೂರ್ಣಪ್ರಜ್ಞನು (ಪ್ರದಿವಃ) ಭಗವಂತನಲ್ಲಿ ಸದಾ ಗಮನವುಳ್ಳವನು, ಭಗವಂತನೆಡೆಗೆ ಸಾಧಕರನ್ನು ಕರೆದೊಯ್ಯುವವನು (ಮಾತರಿಶ್ವಾ) ಮಧ್ವನಾಗಿ ಭುವಿಯಲ್ಲಿ ಬಂದು, ಎಲ್ಲಾ ಸಜ್ಜನರ ಹೃದಯಗುಹೆಯಲ್ಲಿ ಇರುವ ಸರ್ವೋತ್ತಮನನ್ನು (ಆಧವೇ) ಕಡೆದು ಒಳಗೇ ದರ್ಶನ ಮಾಡಿಸುತ್ತಾನೆ. (ಗುಹಾ ಸಂತಂ ಮಥಾಯತಿ) ಅಥವಾ ವೇದಗಳೆಂಬ ಹಾಲ್ಗಡಲನ್ನು ವ್ಯಾಖ್ಯಾನವೆಂಬ ಕಡೆಗೊಲಿನಿಂದ ಮಥಿಸಿ, ಭಗವಂತನ ಸರ್ವೋತ್ತಮತ್ವಜ್ಞಾನವೆಂಬ ಅಮೃತವನ್ನು ಜಗತ್ತಿಗೆ ಉಣಿಸುತ್ತನೆ.

Monday, January 28, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೬(೨)


ತಾಂ ಮಂತ್ರವರ್ಣೈಃ ಅನುವರ್ಣನೀಯಾಮ್ ಎಂದು, ವಾಯುದೇವರ ಮಧ್ವಾವತಾರದ ಲೀಲೆಯನ್ನು ವೇದಗಳೇ ಕೊಂಡಾಡುತ್ತಿವೆ ಎಂದು ಕವಿ ನುಡಿದ.
ಇದು ದಿಟವೆಂದು ಅರಿವಾಗುವುದು ವೇದಗಳನ್ನು ನೇರವಾಗಿ ಪರಿಶೀಲಿಸಿದಾಗ. ಯಾವುವು ಆ ಮಂತ್ರವರ್ಣಗಳು?
ನಾರಾಯಣರನ್ನೇ ಕೇಳೋಣ.
'ಬಳಿತ್ಥಾ ತದ್ವಪುಷೇ ಧಾಯಿ ದರ್ಶತಮ್', 'ಭೂಷನ್ನ ಯೋsಧಿ ಬಭ್ರೂಷು ನಮ್ನತೇ', 'ತಾಮ್ ಸು ತೇ ಕೀರ್ತಿಂ ಮಘವನ್ ಮಾಹಿತ್ವಾ', ಎಂಬ ಸೂಕ್ತಗಳು.
'ವಿಷ್ಣೋಃ ಪದೇ ಪರಮೇ ಮಧ್ವ ಉತ್ಸಃ', 'ವಿದ್ವಾನ್ ಮಧ್ವ ಉಜ್ಜಭಾರಾ ದೃಶೇ ಕಮ್', ಇತ್ಯಾದಿ ಮಂತ್ರವರ್ಣಗಳು, ಎಂದು ತಾವೇ ಭಾವಪ್ರಕಾಶಿಕೆಯಲ್ಲಿ ಬೆಳಗಿಸಿದ್ದಾರೆ.
ವೇದಪುರುಷನು ಜೀವೋತ್ತಮನ ಲೀಲೆಯನ್ನು ಹೇಗೆ ಕೊಂಡಾಡಿದ್ದಾನೆ ಎಂಬ ವಿಚಾರವು ನನ್ನ ಅಂತರಂಗದ ಗುರುಗಳ ಅನುಗ್ರಹಬಲದಿಂದ ಇನ್ನೂ ಹೆಚ್ಚು ಅನುಗ್ರಹವನ್ನು ಬಯಸಿ ಹರಿಪ್ರೀತಿಗಾಗಿ, ಕಿಂಚಿತ್ತು ವಿವರಿಸಲ್ಪಡುತ್ತದೆ. ಅಲ್ಲದೆ ವೇದಮುಖೇನ ಮಧ್ವನ ಗುಣಗಾನ ಮಾಡುವ ಭಾಗ್ಯ ನಮ್ಮದಾಗಲಿ ಎಂಬ ವಿಶೇಷ ಆಶಯವೂ ಇದೆ.
ಇಲ್ಲಿಂದ ಮುಂದೆ, ಒಂದೊಂದು ಸೂಕ್ತವನ್ನು ಹಿಡಿದು, ನಾರಾಯಣರು ಬಣ್ಣಿಸುವ ವಾಯ್ವವತಾರಗಳ ಲೀಲೆಯನ್ನು ಹೇಗೆ ವೇದಗಳೇ ಕೊಂಡಾಡಿವೆ ಎಂಬುದನ್ನು ನೋಡೋಣ[1].
ಬಳಿತ್ಥಾ ತದ್ವಪುಷೇ... ಎಂದು ಆರಂಭವಾಗುವ ಋಗ್ವೇದದ ಮಂತ್ರಗಳ ಋಷಿ ದೀರ್ಘತಮನು. ಹದಿಮೂರು ಋಕ್ ಗಳ ಸೂಕ್ತ. ಹನ್ನೊಂದು ಮಂತ್ರಗಳು ಜಗತೀ ಛಂದಸ್ಸಿನವು. ಕಡೆಯ ಎರಡು ತ್ರಿಷ್ಟುಪ್ ಗಳು. ದೇವತೇ ಪ್ರಾಣಾಗ್ನಿ.  ಮೊದಲ ಐದು ಮಂತ್ರಗಳು ಒಂದು ವರ್ಗವೆಂದು ಕರೆಯಲ್ಪಡುತ್ತವೆ. ಈ ವರ್ಗದಲ್ಲೇ ವಿಶೇಷವಾಗಿ ಮಧ್ವಾವತಾರದ ವಿವರವಿರುವುದರಿಂದ ಅದನ್ನು ಒಂದೊಂದಾಗಿ ನೋಡುವ.
ಮೊದಲ ಮಂತ್ರ -
ಬಳಿತ್ಥಾ ತದ್ವಪುಷೇ ಧಾಯಿ ದರ್ಶತಮ್ ದೇವಸ್ಯ ಭರ್ಗಃ ಸಹಸೋ ಯತೋ ಜನಿ
ಯದೀಮುಪ ಹ್ವರತೇ ಸಾಧತೇ ಮಾತಿರ್ಋತಸ್ಯ ಧೇನಾ ಅನಯಂತ  ಸಸ್ರುತಃ

(ಸಹಸಃ)ಸರ್ವಾಂತರ್ಯಾಮಿಯಾದ, ಸರ್ವಸ್ವಾಮಿಯಾದ ದೇವನ  (ದೇವಸ್ಯ) (ಭರ್ಗಃ) ತೇಜಸ್ಸು, ಅಂದರೆ ನಿಜಸ್ವರೂಪವು (ಯತೋ ಜನಿ) ಯಾರಿಂದ ಅಭಿವ್ಯಕ್ತವಾಯಿಯೋ, ಅಥವಾ, (ಯತೋ) ಯ ಎಂದರೆ ಜ್ಞಾನ, ತೀವ್ರಗಮನಾದಿಗುಣದ ವಾಯುದೇವನಿಂದ ವೇದಾರ್ಥಮಥನದಿಂದ ಎಲ್ಲರ ಅರಿವಿಗೆ ಬಂತೋ, ಅಂಥಾ ಆ ಪ್ರಾಣತತ್ವವು (ಬಟ್) ಬಲರೂಪವಾಗಿದೆ, (ದರ್ಶತಮ್) ಜ್ಞಾನರೂಪವಾಗಿದೆ.  (ದೇವಸ್ಯ ಭರ್ಗಃ) ಭಗವಂತನನ್ನು ಹೊತ್ತುತಿರುಗುತ್ತಿದೆ. ವಾಯುವಾಹನನೆಂದೇ  ದೇವನನ್ನು ನಮಿಸುತ್ತೇವೆ ಅಲ್ಲವೇ. (ಇತ್ಥಾ) ಮೂಲರೂಪದಲ್ಲಿ ಹೇಗೋ ಹಾಗೆಯೇ ಬಲಜ್ಞಾನರೂಪದ ಪ್ರಾಣತತ್ವವು, (ವಪುಷೇ) ಮೂರು ಅವತಾರಗಳಿಗಾಗಿ (ಧಾಯಿ) ಹೊತ್ತುಬಂತು.
(ಯದೀಮ್ ಉಪಹ್ವರತೇ) ಅವನೇ ಶ್ರೀರಾಮನ ಹತ್ತಿರ ಬಂದವನು, ರಾಮನ ಹತ್ತಿರವಿದ್ದು ಸೇವಿಸುವವನು. (ಸಾಧತೇ) ರಾಮನ ಆದೇಶವನ್ನು ಸಾಧಿಸುವವನು. ಯಾರವನು? (ಮತಿಃ) ಹನುಮಾನ್ ನಾಮಕನು. ಹನು ಎಂದರೆ ಮತಿಯೆಂದು ಪ್ರತನರ ಮಾತು. ಹನುಮಾನ್ ಎಂದರೆ ಜ್ಞಾನವಾನ್, ಮತಿಮಾನ್ ಎಂದೇ ಅರ್ಥ. ಹನ ಜ್ಞಾನೇ ಎಂದೇ ಧಾತು ಅಲ್ಲವೇ. ಏನು ಮಾಡಿದ ಹನುಮನಾಗಿ? (ಸಸ್ರುತಃ) ಆನಂದದ ಅಮೃತವನ್ನು ಕರೆಯುವ, (ಋತಸ್ಯ) ಸತ್ಯವಚನನಾದ ರಾಮನ (ಧೇನಾಃ) ಸಂದೇಶವನ್ನು ಲಂಕೆಗೆ (ಅನಯಂತ)  ಹೊತ್ತುಹೋದ, ಅಲ್ಲಿಂದ ಸೀತೆಯ ಮಾತನ್ನು ರಾಮನಿಗೆ ತಂದು ಮುಟ್ಟಿಸಿದ. ಯಾರೂ ಮಾಡಲಾಗದ ಅಪಾರವಾದ ಸೇವೆಗೈದ. ರಾಮಸೀತೆಯರ ಪ್ರೀತಿಗೆ ಪಾತ್ರನಾದ. ಇದೆ ಇವನ ಪ್ರಥಮಾವತಾರದ ಲೀಲೆ.



[1] ಸೂಚನೆ:
ವೇದಗಳಲ್ಲಿ ಮುಖ್ಯಪ್ರಾಣನ ಅವತಾರಗಳ ವಿವರ ವಿಶದವಾಗಿ ಬಂದಿದೆ. ಅದರಲ್ಲಿ ಮಧ್ವಾವತಾರಾದ ವಿವರವನ್ನು  ನಾರಾಯಣಪಂಡಿತರು ಬಹುವಾಗಿ ಭಾವಪ್ರಕಾಶಿಕೆಯಲ್ಲಿ ವೇದಮಂತ್ರಗಳನ್ನು ಉದಾಹರಿಸುವ ಮೂಲಕ ತೋರಿದ್ದಾರೆ. ಈ ಎಲ್ಲಾ ಮಂತ್ರಗಳು ಅವರೇ ಉದಾಹರಿಸಿರುವುದು. ಇಲ್ಲಿ ಬಂದ ವಿವರಗಳನ್ನು ಅವರೇ ಮುಂದಿನ ಸರ್ಗಗಳಲ್ಲಿ ವರ್ಣಿಸುತ್ತಾರೆ. ಕಥೆಯ ಹಾಸು ತಿಳಿದಿಲ್ಲದವರಿಗೆ ಇದೊಂದು ಮೇಲುನೋಟ. ಮುಂದೆ ಆ ಆ ಸರ್ಗಗಳಲ್ಲಿ ಮತ್ತೆ ಇದರದ್ದೇ ಒಳನೋಟ.

Saturday, January 26, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೬(೧)

ಮಧ್ವ-ಪ್ರಸಂಗ -ಪರಮೋತ್ಸವ-ಲಂಪಟೋsಸೌ ಎಂದು ತನ್ನನ್ನು ತಾನೇ, ಮಧ್ವರ ಚರಿತೆಗಳ ಹಾಡುವ ಹುಚ್ಚು ನನಗೆ, ಎಂದು ನಾರಾಯಣರು ಹೇಳಿಕೊಳ್ಳುತ್ತಾರೆ. ಹುಚ್ಚು ಹೃದಯದಲ್ಲಿ ಅರಳಿದಾಗ, ಅದು ಭಕ್ತಿಯ ಮಹಾರೂಪವನ್ನು ತಾಳಿದಾಗ, ತನ್ನ ತಾನೇ ಮಧ್ವವಿಜಯವು ಮೂಡಿಬರುವುದು.

ತಾಂ ಮಂತ್ರ-ವರ್ಣೈರನುವರ್ಣನೀಯಾಂ ಶರ್ವೇಂದ್ರ-ಪೂರ್ವೈರಪಿ ವಕ್ತುಕಾಮೇ
ಸಂಕ್ಷಿಪ್ನು-ವಾಕ್ಯೇ ಮಯಿ ಮಂದ-ಬುದ್ಧೌ ಸಂತೋ ಗುಣಾಢ್ಯಾ ಕರುಣಾಂ ಕ್ರಿಯಾಸುಃ ೧.೦೬

ಹಿಂದೆ ವಾಯುದೇವನ ಪ್ರಥಮಾವತಾರವಾದ ಹನುಮಂತನ ಚರಿತೆಯನ್ನು ಬಗೆಬಗೆಯಾಗಿ ಜಗತ್ತಿಗಿತ್ತವರು ವಾಲ್ಮೀಕಿಮಹರ್ಷಿ. ಭೀಮನ ಗಾಥೆಯನ್ನು ಹಾಡಿದವರು ಸಾಕ್ಷಾತ್ ವ್ಯಾಸನೇ!
ಇನ್ನು ವೇದಗಳೇ ಜಗದ್ಗುರುವಿನ ಹಿರಿಮೆಯನ್ನು ಸಾರುತ್ತಿವೆ! ಶಿವ, ಇಂದ್ರರೆ ಮೊದಲಾದ ಸಗ್ಗಿಗಳು ಅಪೌರುಷೇಯದ ಮಾತುಗಳಿಂದ ಆನಂದತೀರ್ಥರ ಲೀಲೆಗಳನ್ನು ಕೊಂಡಾಡುತಿದ್ದಾರೆ! (ತಾಂ ಮಂತ್ರವರ್ಣೈಃ ಅನುವರ್ಣನೀಯಾಂ, ಶರ್ವೇಂದ್ರಪೂರ್ವೈಃ ಅಪಿ).
ಈ ಮೂರನೇ ಅವತಾರದ ಅಧಿಕೃತ ದಾಖಲೆಯನ್ನು ನನ್ನಿಂದ ಮಾಡಿಸುವ ಸಂಕಲ್ಪ ಆ ದೊಡ್ಡವಸ್ತುವಿಗಿದೆ. ವ್ಯಾಸ ವಾಲ್ಮೀಕಿಗಳಾರು! ಯಾಥರದವ ನಾನು! ಅವರದ್ದಾದರೋ ವೇದವೇ ಮಾತು! ನನ್ನದು ಚುಟುಕಾದ, ತೊದಲು ನುಡಿಗಳು (ಸಂಕ್ಷಿಪ್ನು-ವಾಕ್ಯೇ), ಅವರೋ ಸರ್ವಜ್ಞರು! ನನ್ನ ಬುದ್ಧಿಯೇ ಪೀಚು(ಮಂದ-ಬುದ್ಧೌ), ಆದರೂ ನನ್ನ ಗುರುವಿನ ಲೀಲೆಯನ್ನು ಬಣ್ಣಿಸುವ ತವಕ ನನಗೆ(ವಕ್ತುಕಾಮೇ). ಇದು ದೇವರ ಆಣತಿ! ಗುರುಗಳೇ ಪ್ರೇರಿಸಿದ್ದು! ನನ್ನ ತಂದೆಯ ಹಿರಿಯಾಸೆ! ( ಮಧ್ವವಿಜಯಂ  ವ್ಯಧಾತ್  ಗುರುಗಿರಾ...)
ದಯಮಾಡಿ, ದೋಷಗಳನ್ನು ಮಾತ್ರ ನೋಡದೆ, ಪ್ರೋತ್ಸಾಹಿಸುವ, ಗುಣಗಳನ್ನು ಕೊಂಡಾಡುವ ಮನಸ್ಸಂಪತ್ತುಳ್ಳ ಸಜ್ಜನರು ನನ್ನಲ್ಲಿ (ಮಯಿ) ಕರುಣೆದೋರಲಿ ಎಂದು ಮಾತ್ರ ಬಿನ್ನವಿಸುವೆ! (ಸಂತೋ ಗುಣಾಢ್ಯಾ ಕರುಣಾಂ ಕ್ರಿಯಾಸುಃ)
ಈ ಪದ್ಯದ ಛಂದಸ್ಸು ‘ಇಂದ್ರವಜ್ರ’. ಸರ್ವದೇವೇಂದ್ರನಾದ ಮುಖ್ಯಪ್ರಾಣನಲ್ಲಿ ಸಾಗಿ ರಮಿಸುವ  ಆಶಯವನ್ನು ಎಲ್ಲಾ ಸಜ್ಜನರಲ್ಲಿ ಮೂಡಿಸುವ ನಡೆಯ ಮೋಡಿ.

Tuesday, January 22, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೫

ಈ ಕಾವ್ಯವು ಮಧ್ವಾಂತರ್ಯಾಮಿಯ ಕರ್ತೃತ್ವದ ಅನಾವರಣ ಎಂಬ ಆಧ್ಯಾತ್ಮಿಕಮುಖವನ್ನು ಹಿಂದೆಯೇ ನೋಡಿದೆವು. ಇದರ ಅಧಿಕಾರಿ ಯಾರು, ಇಲ್ಲಿಯ ವಿಷಯವೇನು, ಸಂಬಂಧವೇನು ಎಂಬುದನ್ನೂ ನೋಡಿದ್ದೆವು. ಇದರ ಅಧ್ಯಯನದ ಫಲವೇನು ಎಂಬುದನ್ನು ಆಗ ಭಗವಂತ ನುಡಿಸಿರಲಿಲ್ಲ. ಅದನ್ನು ನಾರಾಯಣರ ಮುಖದಿಂದಲೇ ಹೇಳುವ ಭಾಗ್ಯ ಈಗ.

ಮುಕುಂದ-ಭಕ್ತ್ಯೈ ಗುರು-ಭಕ್ತಿ-ಜಾಯೈ ಸತಾಂ ಪ್ರಸತ್ಯೈ ಚ ನಿರಂತರಾಯೈ ।
ಗರೀಯಸೀಂ ವಿಶ್ವ-ಗುರೋರ್ವಿಶುದ್ಧಾಂ ವಕ್ಷ್ಯಾಮಿ ವಾಯೋರವತಾರ-ಲೀಲಾಮ್ ॥೧.೦೫ ॥ 

ಗುರುಭಕ್ತಿಯ ಫಲವಾಗಿ ಹುಟ್ಟುವ ಮುಕುಂದನ ಭಕ್ತಿಗಾಗಿ ವಾಯುದೇವನ ಹನುಮಾನ್- ಭೀಮ ಹಾಗೂ ಈಗ ಇಲ್ಲಿ ವಿಶೇಷವಾಗಿ ತೋರುತ್ತಿರುವ ಮಧ್ವ ಎಂಬ ಅವತಾರಗಳ ಲೀಲೆಯನ್ನು ಹೇಳುವೆ.
ಗುರ್ವಂತರ್ಯಾಮಿಯ ಭಕ್ತಿಯೇ ಇಲ್ಲಿ ಪ್ರಯೋಜನ, ಭಕ್ತಿಗೆ ಮುಕ್ತಿಯು ಫಲ. ಮುಕ್ತಿಯನ್ನು ಕೊಡುವನೆಂದೆ ಅವನು ಮುಕುಂದನಲ್ಲವೆ!
ಅಂತರ್ಯಾಮಿಯ ಜ್ಞಾನವಾಗಬೇಕಾದರೆ, ಅಧಿಷ್ಠಾನದ ಅನುಗ್ರಹಬೇಕು. ಗುರುವಿಲ್ಲದೇ ದೇವ ಕಾಣುವವನಲ್ಲ.
‘ಗುರುದ್ವಾರಾ ಪ್ರಸಾದಕೃದಹಂ ತ್ವಿತಿ’ (ಗುರುವಿನ ಮೂಲಕವೇ ನನ್ನ ಪ್ರಸಾದ) ಎಂಬುದು ದೇವನ ಸತ್ಯಸಂಕಲ್ಪ. ಗುರುವಲ್ಲಿ ನಿಂತು ಪ್ರಸಾದವೀವನು ಅವನೇ, ‘ಅಗಮ್ಯತ್ವಾತ್ ಹರಿಸ್ತಸ್ಮಿನ್ ಆವಿಷ್ಠೋ ಮುಕ್ತಿದೋ ಭವೇತ್’ ಎಂಬುದು ಅಧ್ಯಾತ್ಮ.
ಗುರ್ವಂತರ್ಯಾಮಿಯ ಪ್ರಸಾದವಾಗಬೇಕಾದರೆ ಏನು ಮಾಡಬೇಕು?
ಯಥಾ ದೇವೇ ಪರಾ ಭಕ್ತಿಃ, ತಥಾ ಗುರೌ, ಭಗವಂತನಲ್ಲಿ ಮಾಡವ ಭಕ್ತಿಯನ್ನು ಗುರುವೆಂಬ ಪ್ರತಿಮೆಯಲ್ಲಿ ನಡೆಸಬೇಕು. ನವವಿಧಭಕ್ತಿಗೆ ಇದೇ ಮುಖ್ಯಪ್ರತಿಮೆ. ಹಾಗಾದರೆ, ಜಗದ್ಗುರುವಾದ ವಾಯುವಿನ ಅವತಾರಗಳ  ಲೀಲಾಶ್ರವಣದಿಂದ ಮುಕುಂದನಲ್ಲಿ ಭಕ್ತಿಯು ಹುಟ್ಟಿ, ಅದರಿಂದ ಅಂತರ್ಯಾಮಿಯ ಪ್ರಸಾದರೂಪವಾದ ಮುಕ್ತಿಯು ಲಭಿಸುವುದೇ ಫಲವೆಂಬುದು ಮಥಿತಾರ್ಥ.

ಆಚಾರ್ಯರ ಪಾದಸ್ಪರ್ಶದಿಂದ ಪಾವನವಾದ ಮನಸ್ಸಿನಿಂದ, ನಿತ್ಯವೂ ಅವರ ಅನೇಕ ಅದ್ಭುತಲೀಲೆಗಳನ್ನು ಕಣ್ಣಾರೆ ಕಂಡು ಅದರ ಸವಿಯನ್ನು ಉಂಡು, ಮೈಮರೆತು ಆತ್ಮಾನಂದವನ್ನು ಅನುಭವಿಸುತ್ತ ಇನ್ನೂ ತೃಪ್ತಿಯಿಲ್ಲದೆ ಸರ್ವಸಜ್ಜನರಿಗು ಎಣೆಯಿರದ ಸಂತಸವಾಗಲಿ ಎಂಬ ಬಯಕೆಯಿಂದ  ಹಂಚುವೆನು (ಸತಾಂ ಪ್ರಸತ್ಯೈ ಚ ನಿರಂತರಾಯೈ)
ವಿಶ್ವಕ್ಕೇ ಗುರುವಾದ ಇವರ ಲೀಲೆಯದು ಎಂಥಾದ್ದು?
ಮಹತ್ತರವಾದದ್ದು, ಪೂರ್ತಿ ಬಣ್ಣಿಸಲಾಗದ, ಅಳೆಯಲಾಗದ ಭಾರವತ್ತರವಾದುದು (ಗರೀಯಸೀಮ್)
ಕೊಂಕಿಲ್ಲದ್ದು, ಭಕ್ತರ ಮನಸ್ಸಿನ ಕೊಂಕನ್ನು ತೆಗೆಯುವಂತದ್ದು (ವಿಶುದ್ಧಾಂ). ಇಂಥಾ ಲೀಲೆಯನ್ನು ಹೇಳಹೊರಟಿರುವೇನೆಂದು ಪ್ರತಿಜ್ಞೆಯನ್ನು ಮಾಡುತ್ತಾರೆ.
ಈ ಪದ್ಯವು ‘ಮಾಯಾ’ ಎಂಬ ಉಪಜಾತಿಯ ಇನ್ನೊಂದು ಪ್ರಭೇದ. ಆವರಿಸಿರುವ ಮಾಯೆಯನ್ನು ಕಿತ್ತು ಮುಕ್ತಿಯ ಹಾದಿಯನ್ನು ತೋರುವ ಸಂಕೇತ.

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೪


ಮೂರವತಾರದ ಮಧ್ವನಲ್ಲಿ ಮಾಡಬೇಕಾದ ನಿಜವಾದ ಪ್ರಾರ್ಥನೆಯನ್ನು ಮಾಡಿ, ಮುಂದೆ, ಇಂಥಾ ಮಧ್ವರ ಸೇವೆಗೆ ತನ್ನನ್ನು ಅಣಿಮಾಡಿದ, ಮಧ್ವಾಂತರ್ಯಾಮಿಯ ಜ್ಞಾನವಿತ್ತ, ಹುಟ್ಟಿಸಿದ ತಂದೆ, ಬೆಳೆಸಿದ ಗುರುವಾದ ತ್ರಿವಿಕ್ರಮಪಂಡಿತರನ್ನು ತುತಿಸುತ್ತಾರೆ.

ತಮೋನುದಾನಂದಮವಾಪ ಲೋಕಃ 
ತತ್ವ-ಪ್ರದೀಪಾಕೃತಿ-ಗೋ-ಗಣೇನ ।
ಯದಾಸ್ಯ-ಶೀತಾಂಶು-ಭುವಾ ಗುರೂನ್ಸ್ತಾನ್ ತ್ರಿವಿಕ್ರಮಾರ್ಯಾನ್ ಪ್ರಣಮಾಮಿ ವರ್ಯಾನ್ ॥೧.೦೪ ॥

ಅದೊಂದು ಚಂದ್ರ ಬೆಳಗಿತ್ತು. ಕುಂದಿರದ ಜ್ಞಾನಚಂದಿರ ಬೆಳಗಿತ್ತು. ಲೋಗರು ಅಜ್ಞಾನ, ಸಂಶಯಗಳನ್ನು ಹುಟ್ಟಿಸುವ ಕತ್ತಲಲ್ಲಿ ಮರುಗುವುದನ್ನು ಕಂಡು, ಕರುಣೆಯಿಂದ ತನ್ನ ತತ್ವದ ಬೆಳದಿಂಗಳನ್ನು ಸೂಸಿತು. ಜನರು ಹುಟ್ಟಿಬಂದ ಈ ಜ್ಞಾನದ ಬೆಳಕಲ್ಲಿ ವಸ್ತುಗಳನ್ನು ಕಾಣುವವರಾದರು,  ಆನಂದಿಸಿದರು...
ಏನೀ ಒಗಟು? ಯಾರು ಈ ಜ್ಞಾನಚಂದ್ರ? ಯಾವ ಬೆಳದಿಂಗಳು? ಯಾವ ಕತ್ತಲು?
ಇವರೇ ಆನಂದತೀರ್ಥರ ಮಹಾನುಗ್ರಹಕ್ಕೆ ಪಾತ್ರರಾದ, ಹರಿಯಾಜ್ಞೆಯಿಂದ ರಚಿಸಿದ ಸತ್ಸೂತ್ರಭಾಷ್ಯವನ್ನು ವಿವರಿಸಲು ಪೂರ್ಣಪ್ರಜ್ಞರಿಂದಲೇ ಆಜ್ಞಪ್ತರಾದ, ಕವಿಕುಲತಿಲಕರಾದ ತ್ರಿವಿಕ್ರಮರೆಂಬ ಹಿರಿಯ ಜ್ಞಾನಚಂದ್ರ.
ಇವರ ಮುಖದಿಂದ ಹೊಮ್ಮಿದ ಆ ಬೆಳದಿಂಗಳೇ ತತ್ವಪ್ರದೀಪವೆಂಬ ಬ್ರಹ್ಮಸೂತ್ರ-ಭಾಷ್ಯದ ವ್ಯಾಖ್ಯಾನ(ಯದಾಸ್ಯ-ಶೀತಾಂಶು-ಭುವಾ) ಸೂತ್ರಾರ್ಥವಿಷಯಕವಾದ ಸಜ್ಜನರ ಎಲ್ಲ ಅಜ್ಞಾನ, ಸಂಶಯಗಳಿಗೆ ಕಾರಣವಾದ ತಮೋಗುಣವನ್ನು ದೂರೋಡಿಸುವ (ತಮೋನುದಾ) ಸ್ವಕ್ಷರಗಳ ಸಮೂಹ (ಗೋಗಣ). ನಿಶ್ಚಯಜ್ಞಾನವನ್ನು ಹೊಂದಿದ ಸಾತ್ವಿಕಲೋಕವು ಸ್ವರೂಪಾನಂದವನ್ನೇ ಅನುಭವಿಸಿತು(ಆನಂದಮವಾಪ ಲೋಕ:)
ಇಂಥಾ ಜ್ಞಾನದ ಬೆಳಕನಿತ್ತ ಹಿರಿಯರಾದ(ವರ್ಯಾನ್), ಗುರುಗಳಾದ(ಗುರೂನ್), ತ್ರಿವಿಕ್ರಮಾರ್ಯರಿಗೆ ಸಾಷ್ಟಾಂಗವೆರಗುವೆ( ಪ್ರಣಮಾಮಿ)
ಚಂದ್ರನಿಗೆ ಹೋಲಿಸಿದ ಕಾರಣ, ಅದರ ತಂಪು, ಆಹ್ಲಾದ, ಸೌಮ್ಯಭಾವ, ಮುಂತಾದ ಅನೇಕಗುಣಗಳು ತ್ರಿವಿಕ್ರಮರಲ್ಲು ಕಾಣುವುವೆಂಬ ಭಾವವು ಧ್ವನಿಸುತ್ತದೆ.
ಈ ಪದ್ಯವು ‘ಋದ್ಧಿ’ ಎಂಬ ಮತ್ತೊಂದು ಉಪಜಾತಿಯ ಪ್ರಭೇದ. ತತ್ವಪ್ರದೀಪದ ಅಧ್ಯಯನದಿಂದ ಆಗುವ ಜ್ಞಾನಾಭಿವೃದ್ಧಿಯನ್ನು ನಡೆಯಲ್ಲಿ ತೋರುವ ಕೌಶಲ.

Thursday, January 17, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೩

ಮಧ್ವ ಎಂಬ ಪ್ರಾಣನ ಮೂರನೇ ಅವತಾರದ ಮಹಿಮೆಯು ಭವದಿಂದ ಬಿಡುಗಡೆ ಬಯಸುವ ಎಲ್ಲರಿಂದಲೂ ನಿಶ್ಚಯವಾಗಿ ಶ್ರೋತವ್ಯವು, ಮಂತವ್ಯವು ಹಾಗೂ ನಿದಿಧ್ಯಾಸಿತವ್ಯವು ಎಂದು ಹಿಂದೆಯೇ ಮನಗಂಡಿದ್ದೇವೆ. ಶ್ರವಣ ಮಾಡಬೇಕಾದ ನಮ್ಮ ಮಧ್ವನ ಕೀರ್ತಿಯದು ಎಂಥಾದ್ದು? ನಾರಾಯಣರನ್ನೇ ಕೇಳಿ.

ಅಪಿ ತ್ರಿಲೋಕ್ಯಾ ಬಹಿರುಲ್ಲಸಂತೀ 
ತಮೋ ಹರಂತೀ ಮುರಾಂತರಂ ಚ
ದಿಶ್ಯಾದ್ದೃಶಂ ನೋ ವಿಶದಾಂ ಜಯಂತೀ 
ಮಧ್ವಸ್ಯ ಕೀರ್ತಿರ್ದಿನನಾಥ -ದೀಪ್ತಿಮ್ ॥೦೧.೦೩
 
ಮಧ್ವನ ಕೀರ್ತಿಯು ಲೋಕ - ಲೋಕಗಳ ಹೊರಗೂ, ಮುಕ್ತಚೇತನರಿಂದ ಸ್ತುತವಾಗಿ ಬೆಳಗುವಂತದ್ದು. ಮತ್ತೆ, ಇಲ್ಲಿರುವ ಅಮುಕ್ತರಾದ, ಸಾತ್ವಿಕರ ಒಳಗಿನ ಅಜ್ಞಾನವೆಂಬ ಕತ್ತಲನ್ನು ಕಳೆಯುವಂತದ್ದು.
ನಿಜವಲ್ಲವೆ, ದಿನನಾಥನಾದ ಸೂರ್ಯನ ದೀಪ್ತಿಯನ್ನು ಮೀರಿಸಿ ಬೆಳಗುವ ಕೀರ್ತಿ ಮಧ್ವರದ್ದು. ಸೂರ್ಯನ ಪ್ರಕಾಶವಾದರೋ ಲೋಕದ ವಸ್ತುಗಳನ್ನು ಮಾತ್ರ ತೋರುವದು. ಮಧ್ವರ ಕೀರ್ತಿಯೆಂಬ ಪ್ರಕಾಶವು ಪರಮಾತ್ಮನನ್ನೇ ತೋರುವುದು. ನೋಡುವ ತಾಕತ್ತು ಮಾತ್ರ ನಮ್ಮಲ್ಲಿ ಇಲ್ಲ.
ಅದಕ್ಕಾಗಿಯೇ ಕಲೆತು ಪ್ರಾರ್ಥಿಸೋಣ- ದಿಶ್ಯಾದ್ದೃಶಂ ನೋ ವಿಶದಾಂ ಎಂದು.
ವಿಸ್ತಾರವಾದ ಕಾಣ್ಕೆಯನ್ನು ನಮಗೆ ಕೊಡಲಿ. ಎಂಥಾ ಕಾಣ್ಕೆ? ಸರ್ವಜೀವರ ನಾಮರೂಪಗುಣಕ್ರಿಯೆಯ ಅಂತರ್ಯಾಮಿಯಾದ ಬ್ರಹ್ಮನನ್ನು ಕಾಣುವ ಜ್ಞಾನದೃಷ್ಟಿಯನ್ನು ನಮಗೆಲ್ಲಾ ಕೊಡಲಿ.
ಜ್ಞಾನಜ್ಯೋತಿಯನ್ನು ಹೊತ್ತಿಸಲು ಬಂದ ಮಧ್ವನಲ್ಲಿ ಉಚಿತವಾದ ಬಿನ್ನಹ! ಬೇಡಬೇಕಾದ ನಿಜವಾದ ವರ.
ಇವನ ಹೆಸರೇ ಹೇಳುತ್ತದೆ, ಇವನು ಬ್ರಹ್ಮಜ್ಞಾನವೀವ ಗುರುವೆಂದು. 'ಮಧು' ಎಂದರೆ ಆನಂದ, ಪೂರ್ಣಾನಂದನಾದ ಬ್ರಹ್ಮನೇ ಮಧು. ಅವನನ್ನು 'ವಾತಿ', ಸೇವಿಸಲು ಸಾಗುತ್ತಾನೆ, ಭಕ್ತರನ್ನು ಅವನ ಬಳಿ ಸಾಗಿಸುತ್ತಾನೆ ಆದ್ದರಿಂದ ಇವನು ಮಧ್ವ. ಮಧು +ವ.

ಈ ಪದ್ಯವು 'ಮಾಲಾ' ಎಂಬ ಉಪಜಾತಿಯ ಇನ್ನೊಂದು ಪ್ರಭೇದ.
ಸೂರ್ಯನ ಪ್ರಕಾಶವನ್ನು ಜಯಿಸಿದ ಮಧ್ವರ ಕೀರ್ತಿಯನ್ನು ಸಾರುವ ವೈಜಯಂತೀಮಾಲಾ.

Tuesday, January 15, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೨(೨)


ವಾಸುದೇವಾಯ ವೇದವ್ಯಾಸಾಯ ಚ, ಎಂದು ನಾರಾಯಣರೇ ತಮ್ಮ ಭಾವಪ್ರಕಾಶಿಕೆಯಲ್ಲಿ ಈ ಪದ್ಯಕ್ಕೆ ಎರಡರ್ಥಗಳನ್ನು ತೋರಿದ್ದಾರೆ.  ಒಂದು, ಮಧ್ವರು ತಮ್ಮ ಅವತಾರದ ಪೂರ್ಣಾವಿಷ್ಕಾರಕ್ಕೆ ಉಪಾಸಿಸಿದ ವೇದಮೂರ್ತಿ ವ್ಯಾಸರೂಪನನ್ನು. ಎರಡು, ಕಲಿಯುಗದ ಸಕಲ ಸಾತ್ವಿಕರ ಉಪಾಸನೆಗೆಂದೆ ಕಡಲಿಂದ ಹೊತ್ತು ತಂದು ತಮ್ಮ ಕೈಯಿಂದ ಪೂಜಿಸಿದ ಕೃಷ್ಣನನ್ನು.
ಒಂದು, ರಜತಗಿರಿಯಲ್ಲಿ ಕಂಡು ಸೇವಿಸಿದ ವ್ಯಾಸನ ಪರವಾದ ಅರ್ಥ. ಇನ್ನೊಂದು, ರಜತಪೀಠಪುರದಲ್ಲಿ ಲೋಕಕಲ್ಯಾಣಕ್ಕಾಗಿ ಸ್ಥಾಪಿಸಿದ ಕೃಷ್ಣನ ಪರವಾದ ಅರ್ಥ.
ನಾರಾಯಣಕವಿಯ ಆಧ್ಯಾತ್ಮಿಕ ಹೃದಯಕ್ಕೆ ಈ ಶ್ಲೋಕವೇ ಹಿಡಿದ ಕನ್ನಡಿ. ಯತ್ಪಾಲಿತಮ್,, ಯಾರ ರಕ್ಷಣೆಯಲ್ಲಿ,, ನಿತ್ಯವೂ, ಅನಾಕುಲಂ,, ಒಳಗಿನ ಹಾಗೂ ಹೊರಗಿನ ಶತ್ರುಗಳ ಭಯವಿಲ್ಲದ,, ಅನಾವಿಲಾತ್ಮ,, ಕೊಳಕಿಲ್ಲದ, ಪಾವನವಾದ ಮನಸ್ಸಿನ ,, ಗೋಕುಲಂ,, ಗೋವು ಹಾಗೂ ಗೋಪಾಲಕರ ಕುಲವು,, ಉಲ್ಲಲಾಸ,, ಚೆನ್ನಾಗಿ ಶೋಭಿಸಿತೋ, ಅಂಥಾ, ಕೃಷ್ಣೆಯ; ರುಗ್ಮಿಣಿಯ ರಮಣನಾದ, ಲೋಕರ ಪ್ರಿಯನಾದ, ನೀರದದಂತೆ ನೀಲವಾದ ಮೈಬಣ್ಣದ ವಾಸುದೇವ -ಕೃಷ್ಣನಿಗೆ ನಮಸ್ಕಾರ.
ಜ್ಞಾನ ಹಾಗೂ ಬಲರೂಪವಾದ ವ್ಯಾಸಕೃಷ್ಣನಿಗೆ ನಮಸ್ಕರಿಸಿ, ತಮ್ಮ ಗುರುವಿನ ಮಹಿಮೆಯೂ ಹೀಗೆ ಬಲಕಾರ್ಯ ಜ್ಞಾನಕಾರ್ಯ ಎರಡರಲ್ಲೂ ಪೂರ್ಣವಾದುದೆಂದು ಧೇನಿಸಿ, ಮುಂದೆ ಮಧ್ವರ ಮಹಿಮೆಯನ್ನು ಕೊಂಡಾಡುತ್ತಾರೆ.
ಈ ಪದ್ಯದ ಛಂದಸ್ಸು ‘ಕೀರ್ತಿ’ಯಂಬ ಉಪಜಾತಿಯ ಒಂದು ಪ್ರಭೇದ. ಇಲ್ಲಿ ‘ಶ್ಲೇಷ’ವೆಂಬ ಅರ್ಥಾಲಂಕಾರವಿದೆ. ಒಂದೇ ಶಬ್ದದಿಂದ ಬಹಳ ಅರ್ಥಗಳನ್ನು ಹೊಮ್ಮಿಸುವ ಅಲಂಕಾರ. ಒಂದೇ ಪದ್ಯದಿಂದ ವ್ಯಾಸ ಹಾಗೂ ಕೃಷ್ಣನ ಕೀರ್ತಿಯನ್ನು ಸಾರುವ ಶ್ಲೇಷ. ಎರಡಲ್ಲ ಅದು ಒಂದೇ ಎಂಬ ಐಕ್ಯವನ್ನು ತೋರುವ ವಿಶೇಷ.

Friday, January 11, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೨(೧)

ಯಾಭ್ಯಾಂ ಶುಶ್ರಷುರಾಸೀ: ಎಂಬ ತಂದೆಯ ಪ್ರಸಿದ್ಧವಾದ ವಾಯುಸ್ತುತಿಯ ಸೊಬಗನ್ನು ಹೊತ್ತು ಬಂತು ಮಗ ನಾರಾಯಣನ ಮುಂದಿನ ಪದ್ಯ,

ಅನಾಕುಲಂ ಗೋಕುಲಮುಲ್ಲಲಾಸ  
ಯತ್ಪಾಲಿತಂ ನಿತ್ಯಮನಾವಿಲಾತ್ಮ
ತಸ್ಮೈ ನಮೋ ನೀರದ - ನೀಲ- ಭಾಸೇ 
ಕೃಷ್ಣಾಯ ಕೃಷ್ಣಾ - ರಮಣ - ಪ್ರಿಯಾಯ ೦೧.೦೨

ಮಂಗಳಪದ್ಯವೊಂದು ಹಿಂದೆ ಆಯಿತಲ್ಲವೆ, ಮತ್ತೆ ಏಕೆ ಕೃಷ್ಣನ ಸ್ತುತಿ? ಹಿಂದೆ ಆದದ್ದು ಸರ್ವಾವತಾರಬೀಜನಾದ ನಾರಾಯಣನ ಸ್ತುತಿ. ಮಧ್ವವೆಂಬ ಈ ರೂಪ ವಿಶೇಷವಾಗಿ ಜ್ಞಾನಕಾರ್ಯಕ್ಕಾಗಿ ಆದದ್ದು. ಜಗದ್ಗುರುಗಳ ಗುರುವಾದ ವ್ಯಾಸನೆ ನನ್ನ ನಿಜಗುರುವೆಂದು ಜಗತ್ತಿಗೆ ಸಾರಿದವರು ಮಧ್ವರೊಬ್ಬರೆ.
ತಮೇವ ಶಾಸ್ತ್ರಪ್ರಭವಂ ಪ್ರಣಮ್ಯ ಜಗದ್ಗುರೂಣಾಂ ಗುರುಮ್ ಅಂಜಸೈವ ವಿಶೇಷತೋ ಮೇ... ಎಂದು.
ವ್ಯಾಸನ ವಿಶೇಷ ಉಪಾಸನೆಯ ಫಲವೇ ಮಧ್ವರಿತ್ತ ಅಧ್ಯಾತ್ಮ ಸಂಪತ್ತು. ಹನುಮನಾಗಿ ರಾಮನ ಸೇವೆಗೈದಂತೆ, ಭೀಮನಾಗಿ ಕೃಷ್ಣನ ಪೂಜಿಸಿದಂತೆ, ಮಧ್ವನಾಗಿ ವ್ಯಾಸನ ನುಡಿಗಳ ವ್ಯಾಖ್ಯಾನವೆಂಬೋ ಭಗವತ್ಕಾರ್ಯವನ್ನು ಸಾಧಿಸಿದ ತನ್ನ ಆಚಾರ್ಯವರ್ಯರ ಬಿಂಬನಾದ ಶಬ್ದಬ್ರಹ್ಮನಾದ  ಅಕಾರವಾಚ್ಯನಾದ ವ್ಯಾಸನನ್ನು ಅಕಾರದಿಂದಲೇ ತುತಿಸುತ್ತಾರೆ ನಾರಾಯಣರು, ಅನಾಕುಲಮ್ ಎಂಬ ಪದ್ಯದಿಂದ.
ಯತ್ಪಾಲಿತಂ, ಯಾರ ರಕ್ಷಣೆಯಲ್ಲಿ , ನಿತ್ಯಂ,, ನಾಶವಿಲ್ಲದ,, ಅನಾದಿಯಾದ, ಅನಾಕುಲಂ,, ಲುಪ್ತವಾಗುವ, ತಿರೋಹಿತವಾಗುವ, ಅಪವ್ಯಾಖ್ಯಾನಗಳಿಗೆ ಗುರಿಯಾಗುವ ಭಯವನ್ನು ಕಳೆದುಕೊಂಡ,, ಅನಾವಿಲಾತ್ಮ,, ಅಪಪಾಠಗಳೆಂಬ, ಸ್ವರವರ್ಣವ್ಯತ್ಯಾಸವೆಂಬ ಕಾಲುಷ್ಯಕ್ಕೆ ಒಳಗಾಗದ,, ಗೋಕುಲಂ,, ವೇದಸಮೂಹವು,, ಉಲ್ಲಲಾಸ, ಸಜ್ಜನರ ನಾಲಿಗೆ ಎದೆಯಲ್ಲಿ ನಲಿದಾಡಿತೋ, ಅಂಥಾ ಕೃಷ್ಣಾ - ರಮಣ - ಪ್ರಿಯಾಯ,, ಕೃಷ್ಣೆಯ ನಿಜನಲ್ಲನಾದ ಭೀಮನ ಪ್ರಿಯನಿಗೆ, ನೀರದ - ನೀಲ - ಭಾಸೇ,, ನೀರ್ದುಂಬಿದ ನೀಲಮೇಘದಂತಾ ಮೈಮಾಟದವನಿಗೆ,, ಕೃಷ್ಣಾಯ,, ವಸಿಷ್ಠನ ವಂಶವನ್ನು ಬೆಳಗಿದ ವ್ಯಾಸನೆಂಬೋ ದೈವಕ್ಕೆ ನಮಃ.
ನಮಃ ಶಬ್ದದ ಅರ್ಥವನ್ನು ಹಿಂದೆಯೇ ನೋಡಿದೆವು. ಸರ್ವಸಮರ್ಪಣೆಯೆ ನಮಶ್ಶಬ್ದದ ಅರ್ಥ. ಜಗದ್ಗುರುವಿನ ಗುರುವಾದ ವ್ಯಾಸನಲ್ಲಿ ಸರ್ವಸಮರ್ಪಣೆ. ನನ್ನ ಉದ್ಧಾರದ ಭಾರಹೊತ್ತ ಮಧ್ವನ ಗುರುವಲ್ಲಿ ನನ್ನನ್ನೇ ಅರ್ಪಿಸಿಕೊಳ್ಳುವ ಬಗೆ.
ಉಲ್ಲಲಾಸ ಎಂಬ ಪದಕ್ಕೆ, ಸಜ್ಜನರ ನಾಲಿಗೆ ಎದೆಯಲ್ಲಿ ನಲಿದಾಡಿದ ವೇದಸಮೂಹವೆಂಬ ಅರ್ಥವನ್ನು ಆವಿಷ್ಕರಿಸಿದೆವು. ಈ ಭಾವವನ್ನು ತಂದೆ ತ್ರಿವಿಕ್ರಮಪಂಡಿತರು ತತ್ವಪ್ರದೀಪದಲ್ಲಿ ತೋರಿದ್ದಾರೆ - ಜಿಹ್ವಾಸೂಲ್ಲಸಿತಾ ಸತಾಂ ಪ್ರತಿಪದಂ ತತ್ವಪ್ರತಿದ್ಯೋತಿಕಾ ನೃತ್ಯಂತೀ ಪರಮೇರಿತೈವ ಪರಮಾ ವಾಗೀಶ್ವರೀ ಶ್ರೀಸ್ಸ್ವಯಮ್ ಯಸ್ಯಾಸ್ಯಾದುದಿತಾಖಿಲಾಗಮವಪುಃ... ಎಂದು!
ಹೀಗೆ ಒಂದೊಂದು ಪದದ ಒಳಗಿನ ಭಾವವನ್ನು ನಾರಾಯಣರ ಮಾತಿನ ಅನುಗ್ರಹದಿಂದ ಹೆಕ್ಕಿ ಸವಿಯುವ.
ಈ ಪದ್ಯಕ್ಕೆ ಇನ್ನೊಂದು ಬಗೆಯ ಅರ್ಥವಿದೆ. ಅದನ್ನು ಮುಂದೆ ನೋಡುವ.

Thursday, January 10, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೧(೨)


'ಇಷ್ಟ ವಿಶಿಷ್ಟವಾದ ದೈವವನ್ನು ನಮಿಸು ' ಇದು ಶಾಸ್ತ್ರದ ಆಜ್ಞೆ. ಕಾಂತನಾದ್ದರಿಂದ ಇಷ್ಟ, ಅನಂತಕಲ್ಯಾಣ ಗುಣಗಳ ಖನಿಯಾದ್ದರಿಂದ ವಿಶಿಷ್ಟ. ಶ್ರೀ ಹಾಗೂ ಮುಖ್ಯಪ್ರಾಣರ ನಾಥ, ಒಡೆಯ. ಶ್ರೀ ಎಂದರೆ ಭಾರತೀ.'ಶಂ ರೂಪಾನೇ ನಿತ್ಯರತೇರಿಯಂ ಶ್ರೀಃ ' ಎಂಬ ಮಾತು ಇಲ್ಲಿ ಪ್ರಮಾಣ. ಅವಳು ಸಮಸ್ತ ವೇದವಿದ್ಯೆಯ ಅಭಿಮಾನಿನೀ,  ಭಕ್ತಿ ಹಾಗೂ ವಿದ್ಯೆಯ ಅಧಿದೇವತೆ. ಅವಳನ್ನು ಪುನಃ ಉಜ್ಜೀವನಗೊಳಿಸಿದ ಪ್ರಾಣನ ಮೂರನೇ ಅವತಾರವೇ ಮಧ್ವ. ಸತ್ತಂತೆ ಇದ್ದ ವೇದವಿದ್ಯೆಗೆ ಪ್ರಾಣವಿತ್ತವನು ಶ್ರೀಪ್ರಾಣ, ಮಧ್ವ.
ತಮಗ್ರುವಃ ಕೇಶಿನೀಃ ಸಂ ಹಿ ರೇಭಿರೇ ಊರ್ಧ್ವಾಸ್ತಸ್ಥುರ್ಮಮ್ರುಷೀಃ ಪ್ರಾಯವೇ ಪುನಃ ತಾಸಾಂ ಜರಾಂ ಪ್ರಮುಂಚನ್ನೇತಿ ನಾನದದಸುಂ ಪರಂ ಜನಯನ್ ಜೀವಮಮೃತಮ್ ಭಗವಂತನೆಡೆಗೆ ಕರೆದೊಯ್ಯಬೇಕಿದ್ದ ವೇದವಿದ್ಯೆಗಳನ್ನು ಅಪವ್ಯಾಖ್ಯಾನಗಳಿಂದ ಕೊಂದುಹಾಕಿದ್ದರು. ತನ್ನ ನಲ್ನುಡಿಗಳಿಂದ ಪ್ರಾಣನೇ ಮತ್ತೆ ವೇದಗಳಿಗೆ (ಅಂದರೆ ಅದರ ಅಭಿಮಾನಿನಿಗೆ) ಜೀವವಿತ್ತನು. ಇದುವೇ ಮಧ್ವಾವತಾರದ ಮೂಲ ಉದ್ದೇಶವಲ್ಲವೇ? ಅಂತಹ ಶ್ರೀಪ್ರಾಣನ ನಾಥನಾದ, ಮಧ್ವಾಂತರ್ಯಾಮಿಯಾದ, ಸರ್ವಾಂತರ್ಯಾಮಿಯಾದ ನಾರಾಯಣನಿಗೆ ನಮಸ್ಕರಿಸುವೆ.
ಏನು ನಮಸ್ಕಾರದ ನಿಜವಾದ ಅರ್ಥ?  ಹಿರಿಯರು ಉಸುರಿದರು - ನಮೇ ಮಮಾದಿಕಂ ಕಿಂಚ ಕಿಂತು ಏತದ್ವಿಷ್ಣವೇs ಖಿಲಮ್ ಇತ್ಯೇಷ ಹಿ ನಮಸ್ಕಾರಃ ಎಂದು. 'ಮಮಕಾರಸ್ಯ ನಿಷೇಧೋ ನಮ ಇತ್ಯತ ' ಎಂದೂ. ನಂದೇನದೋ ಸ್ವಾಮಿ, ನಿನ್ನದೇ ಇದೆಲ್ಲವೂ ಎಂಬ ಭಾವವೇ ನಮಸ್ಕಾರ. ಹೀಗೆ ನಮಸ್ಕರಿಸುವವನೇ ಈ ಗ್ರಂಥಾಧ್ಯಯನಕ್ಕೆ ಮುಖ್ಯ ಅಧಿಕಾರಿ. ಹೀಗೆ ನಮಸ್ಕರಿಸಲ್ಪಡುವ ಮಧ್ವಾಂತರ್ಯಾಮಿಯೇ ಇಲ್ಲಿಯ ವಿಷಯ. ಅವರವರ ಭಾವಕ್ಕೆ ಇಲ್ಲಿಯ ಪ್ರತಿಮಾತೂ ಸಂಬಂಧಿಸುವುದೇ ಸಂಬಂಧ. ಹೀಗೆ ಅಧಿಕಾರಿ -ವಿಷಯ ಹಾಗೂ ಸಂಬಂಧವನ್ನು ತಿಳಿದು, ಮಧ್ವನ ಒಳಗಾಡುವ ಮಧ್ವನ ಕರ್ತೃತ್ವದ ಅನುಸಂಧಾನವನ್ನು ಮಾಡುತ್ತಾ ಚತುರ್ಮುಖವಾದ ಈ ಮಹಾಕಾವ್ಯನ್ನು ಮುಟ್ಟುವ, ಆಸ್ವಾದಿಸುವ.
ಈ ಪದ್ಯದ ಛಂದಸ್ಸು ‘ವಾಣೀ’ ಎಂಬ ಒಂದು ಉಪಜಾತಿಯ ಪ್ರಭೇದ. ಇಂದ್ರವಜ್ರ ಹಾಗೂ ಉಪೇಂದ್ರವಜ್ರ ಎಂಬ ಎರಡು ಛಂದಸ್ಸುಗಳ ವಿವಿಧ ಬಗೆಯ ಪ್ರಯೋಗವೇ ಉಪಜಾತಿ. ತನ್ನ ನಲ್ಲನ ಗುಣಗಳನ್ನು ತಾನೇ ವರ್ಣಿಸುವೆನೆಂದು ಸರ್ವವಾಗಧೀಶ್ವರಿಯಾದ ವಾಣಿಯೇ ಬಂದಳೇನೋ ಎಂಬಂಥಾ ಸೊಗಸಾದ ಪ್ರಯೋಗ ನಾರಾಯಣರದ್ದು. ಹನ್ನೊಂದು ಅಕ್ಷರಗಳ ಈ ಛಂದಸ್ಸಿಗೆ ರುದ್ರನೇ ದೇವತೆ. ಜಗದ್ಗುರುವನ್ನು ಮಂಗಳಸ್ವರೂಪನಾದ ಶಿವನ ನಡೆಯಲ್ಲಿ ನೋಡುವ ಬಗೆ.


Wednesday, January 9, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೧(೧)

ಸರ್ಗ-ಒಂದು

ಓಂ

ಅವತಾರಿಕಾ
ಪ್ರಾಣಮುಖ್ಯರಾದ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ಅಂತೇವಾಸಿಯಾದ ಕವಿಕುಲತಿಲಕ ಶ್ರೀತ್ರಿವಿಕ್ರಮಪಂಡಿತಾಚಾರ್ಯರ ಸುಪುತ್ರ, ಪೂರ್ಣಪ್ರಜ್ಞಾತ್ಮನ ದರ್ಶನ ಪಡೆದ ಮಹಾತ್ಮ, ಶ್ರೀಮನ್ನಾರಾಯಣಪಂಡಿತನೆಂಬೋ ಋಷಿಯು, ಜಗದ್ಗುರುವಿನ ವಿಜಯಗಾಥೆಯನ್ನು ಶಬ್ದಗಳಲ್ಲಿ ಪೋಣಿಸಬಯಸಿ, ವಿವಿಧ ಛಂದಸ್ಸುಗಳೆಂಬ ಕುಸುಮಗಳಲ್ಲಿ ಹೆಣೆಯೇ ಆದಿಯಲ್ಲಿ ಮಧ್ವಾಂತರ್ಯಾಮಿಯಾದ ಸರ್ವಕಾರಣನಾದ ನಾರಾಯಣನನ್ನು ಭಕ್ತಿಯಿಂದ ತುತಿಸುತ್ತಾರೆ-ಕಾಂತಾಯ ಎಂಬ ಪದ್ಯದಲ್ಲಿ.

ಕಾಂತಾಯ ಕಲ್ಯಾಣ-ಗುಣೈಕ-ಧಾಮ್ನೇ 
ನವ-ದ್ಯುನಾಥ-ಪ್ರತಿಮ-ಪ್ರಭಾಯ
ನಾರಾಯಣಾಖಿಲ -ಕಾರಣಾಯ 
ಶ್ರೀ -ಪ್ರಾಣ -ನಾಥಾಯ ನಮಸ್ಕರೋಮಿ ೦೧.೦೧

ಕಾಂತಿ ಎಂದರೆ ಇಚ್ಛೆ. ಕಾಂತನು ಬಹಳ ಇಷ್ಟವಾದವನು. ಕ ಎಂದರೆ ಆನಂದ. ಕಾಂತನು ಆನಂದಪೂರ್ಣನು. ಕ ಎಂದರೆ ಸಂಪತ್ತು.
'ಕಖೌ ಗಘೌ ಚ ಸಂಪತ್ತೌ' ಸರ್ವೈಶ್ವರ್ಯಪೂರ್ಣನು. ಕ ಎಂದರೆ ಬ್ರಹ್ಮ. ಅವನ ಅಂತರ್ಯಾಮಿಯು. ಕ ಎಂದರೆ ಜೀವ. ಸರ್ವಾಂತರ್ಯಾಮಿಯಾದ್ದರಿಂದ ಕಾಂತ.
ಕಲ್ಯಾಣ ಗುಣೈಕ ಧಾಮ್ನೇ -ಶೋಭನವಾದ ಎಲ್ಲಾ ಸದ್ಗುಣಗಳ ಖನಿ. ಭಕ್ತರು ಮತ್ತೆ ಮತ್ತೆ ಕೊಂಡಾಡುವ ಅನಂತಗುಣಗಳ ಸಾಂದ್ರ. ಸಮಸ್ತಗುಣಪೂರ್ಣನಾದ್ದರಿಂದಲೇ ಸರ್ವೋತ್ತಮ.
ನಮಗೆಲ್ಲಾ ಇಷ್ಟವಾದ, ಗುಣಪೂರ್ಣವಾದ ಆ ವಸ್ತು ಹೇಗಿದೆ? ಹುಟ್ಟಿಬರುವ ಸೂರ್ಯಪ್ರಕಾಶವನ್ನು ಹೋಲುವಂತಿದೆ.
ಹುಟ್ಟಿಬರುವ ಸೂರ್ಯಪ್ರಕಾಶವೂ ಇವನದೇ ನಿಜವಾದ ಹಸಾದ. ಅವನ ಒಳಗಿದ್ದು ಬೆಳಗುವ ಗಾಯತ್ರಿಯ ಪ್ರಸಾದ. ನನಗಿಷ್ಟವಾದ, ಗುಣಪೂರ್ಣನಾದ, ನನ್ನ ಅಂತರ್ಯಾಮಿಯೇ ಸೂರ್ಯನ ಒಳಗಿದ್ದು ಬೆಳಗುವವ- 'ನವದ್ಯುನಾಥ ಪ್ರತಿಮಪ್ರಭಾಯ ' ಯಾರವನು? ನಾರಾಯಣ.
ಅಖಿಲಕಾರಣನಾದ ನಾರಾಯಣ. ನನಗೂ, ವಿಶ್ವಕ್ಕೂ, ಶ್ರೀತತ್ವಕ್ಕೂ ಕಾರಣನಾದ ನಾರಾಯಣ. ಎಲ್ಲವನ್ನೂ ಮಾಡುವನಾದ್ದರಿಂದ ಎಲ್ಲದಕ್ಕೂ ಕಾರಣ. "ಸರ್ವಕರ್ತಾ " ಆದ್ದರಿಂದ ನಾರಾಯಣ. ಜಗತ್ತಿನ ತಾಯಿಯಾದ 'ಶ್ರೀ ' ಜಗತ್ತಿನ ಗುರುವಾದ 'ಪ್ರಾಣ ' ಇವರಿಬ್ಬರಿಗೂ ನಾಥ -"ಶ್ರೀಪ್ರಾಣನಾಥಾಯ".ಇವರಿಬ್ಬರಿಂದ ಸಮಸ್ತ ಚೇತನಾಚೇತನದ ಮೂಲಕಾರಣನಾದ ನಾರಾಯಣ, ನಿನಗೆ ನಮಸ್ಕಾರವನ್ನು ಮಾಡುವೆ, ನಮಸ್ಕರೋಮಿ.
ಈ ಶ್ಲೋಕದ ಇನ್ನೂ ಹಲವು ಮುಖಗಳನ್ನು ತೇಯ್ದು  ಹೆಕ್ಕಿ ನೋಡುವ.