ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Friday, March 8, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೬(೮)


ಮುಂದೆ, 'ವೇದಿಷದೇ ಪ್ರಿಯಧಾಮಾಯ ಸುದ್ಯುತೇ...' ಎಂದು ಆರಂಭವಾಗುವ ಋಗ್ವೇದದ ಒಟ್ಟು ಮಂತ್ರಗಳು ಹದಿಮೂರು. ದೀರ್ಘತಮಾ ಔಚತ್ಯನು ಋಷಿ. ಪ್ರಾಣಾಗ್ನಿ ದೇವತೇ. ಹನ್ನೊಂದು ಮಂತ್ರಗಳು ಜಾಗತೀ ಛಂದಸ್ಸಿನವು. ಹತ್ತನೆದ್ದು ತ್ರಿಷ್ಟುಪ್ ಕೂಡ. ಕೊನೆಯ ಎರಡು ಮಂತ್ರಗಳು ತ್ರಿಷ್ಟುಪ್ ಗಳು. ಮೊದಲ ಐದು ಮಂತ್ರಗಳು ಒಂದು ವರ್ಗ. ಎರಡನೇ ವರ್ಗ ಇನ್ನೈದು ಮಂತ್ರಗಳು. ಕಡೆಯ ಮೂರು ಮಂತ್ರಗಳು ಮೂರನೇ ವರ್ಗಕ್ಕೆ ಸೇರಿದವು. 'ಭೂಷನ್ನ ಯೋsಧಿ ಬಭ್ರೂಷು ನಮ್ನತೇ', ಎಂದು ಆರಂಭವಾಗುವ ಐದು ಮಂತ್ರಗಳು ಎರಡನೇ ಗಡಣಕ್ಕೆ ಸೇರಿದವು. ಅಲ್ಲೇ ವಿಶೇಷವಾಗಿ ಮಧ್ವಾವತಾರದ ಕಥೆಯ ವರ್ಣನೆಯಿದೆಯೆಂದೇ ನಾರಾಯಣಪಂಡಿತರು ಭಾವಪ್ರಕಾಶಿಕೆಯಲ್ಲಿ ಅದರ ಉಲ್ಲೇಖಮಾಡಿದರು.
ನಾವೀಗ, ಆ ಎರಡನೇ ವರ್ಗಕ್ಕೆ ಸೇರಿದ ಐದುಮಂತ್ರಗಳನ್ನು ಒಂದೊಂದಾಗಿ ಅರ್ಥೈಸಿಕೊಳ್ಳುವ ಯತಿಗಳಾಗುವ!
ಹದಿಮೂರು ಮಂತ್ರಗಳಲ್ಲಿ ಆರನೇ ಮಂತ್ರ -
ಭೂಷನ್ನ ಯೋsಧಿ ಬಭ್ರೂಷು ನಮ್ನತೇ ವೃಷೇವ ಪತ್ನೀರಭ್ಯೇತಿ ರೋರುವತ್     
ಓಜಾಯಮಾನಸ್ತನ್ವಶ್ಚ ಶುಂಭತೇ ಭೀಮೋ ನ ಶೃಂಗಾ ದವಿಧಾವ ದುರ್ಗೃಭಿಃ        

ಕೇವಲ ಭಗವಂತನ ಗುಣಗಳನ್ನು ಮಾತ್ರ ಹೊತ್ತು ನಿಂತ ವೇದವಿದ್ಯೆಯನ್ನು  (ಬಭ್ರೂಷು) ವ್ಯಾಖ್ಯಾನದಿಂದ ಅಲಂಕರಿಸುವ  ಇವನು (ಭೂಷನ್ನ ಯೋ) ಆ ವಿದ್ಯೆಗಳ ಅಭಿಮಾನಿದೇವತೆಗಳಿಂದ ಚೆನ್ನಾಗಿ ಕೊಂಡಾಡಲ್ಪಟ್ಟಿದ್ದಾನೆ (ನಮ್ನತೇ).
ಬೇರೆ ದೇವತೆಗಳ ಪರವಾಗಿ ಹೇಳುತ್ತಿವೆಯೇನೋ ಎಂಬಂತೆ ಭಾಸವಾಗುವ ಶ್ರುತಿಯ ಮಾತುಗಳನ್ನು(ಪತ್ನೀ:) ಬೇಗನೆ ಸಾರಿ, ಅವುಗಳ ನಿಜಭಾವವನ್ನು ತೋರಿಸುತ್ತಾನೆ (ವೃಷೇವ ಅಭ್ಯೇತಿ).
ವೇದಗಳಿಗೆ ಅಂಗಗಳಾದ ಶೀಕ್ಷಾ ಮೊದಲಾದ ಶಾಸ್ತ್ರಗಳನ್ನು ತನ್ನ ಮಾತಿನಿಂದಲೇ ಬೆಳಗುತ್ತಾನೆ (ಓಜಾಯಮಾನಸ್ತನ್ವಶ್ಚ). ಭೀಮ ಹೇಗೆ  ಶತಶೃಂಗದ ಶೃಂಗವನ್ನು ಪುಡಿಪುಡಿಗೈದನೋ (ಭೀಮೋ ನ ಶೃಂಗಾ ದವಿಧಾವ ದುರ್ಗೃಭಿಃ) ಹಾಗೆಯೇ ದುರ್ವಾದಿಭೀಮನಾದ ಮಧ್ವನೂ ಕೆಟ್ಟತರ್ಕಗಳಿಂದ ತುಂಬಿದ ಕುಭಾಷ್ಯಗಳೆಂಬ ಬೆಟ್ಟವನ್ನು ಪುಡಿಗೈಯುತ್ತಾನೆ (ದವಿಧಾವ)

ಹದಿಮೂರು ಮಂತ್ರಗಳಲ್ಲಿ ಏಳನೇ ಮಂತ್ರ:
ಸ ಸಂಸ್ತಿರೋ ವಿಷ್ಟಿರಃ ಸಂ ಗೃಭಾಯತಿ ಜಾನನ್ನೇವ ಜಾನತೀರ್ನಿತ್ಯ ಆ ಶಯೇ
ಪುನರ್ವರ್ಧಂತೇ ಅಪಿ ಯಂತಿ ದೇವ್ಯಮನ್ಯದ್ ವರ್ಪಃ ಪಿತ್ರೋಃ ಕೃಣ್ವತೇ ಸಚಾ

ಆ ಮಧ್ವನೇ (ಸ) ಕುಭಾಷ್ಯಗಳನ್ನು ಪುಡಿಗೈಯ್ಯಲು  ಸದ್ಭಾಷ್ಯಗಳನ್ನು ರಚಿಸುತ್ತಾನೆ. ಅಲ್ಲಿ ಮಧ್ವನು, ಕೆಲವೆಡೆ ಸಂಕ್ಷಿಪ್ತವಾಗಿ (ಸಂಸ್ತಿರಃ) ಕೆಲವೆಡೆ ವಿಸ್ತಾರವಾಗಿ (ವಿಷ್ಟಿರಃ) ಭಗವಂತನ ಭಾವವನ್ನು ತೆರೆದಿಡುತ್ತಾನೆ (ಸಂಗೃಭಾಯತಿ) ಸಂಕ್ಷೇಪವಿಸ್ತರಾಭ್ಯಾಂ ಹಿ ಪ್ರವದಂತಿ ಮನೀಷಿಣಃ ಅಲ್ಲವೇ!
ತನಗೆ ವೇದಾರ್ಥವೆಲ್ಲ ಚೆನ್ನಾಗಿ ತಿಳಿದಿದ್ದರೂ (ಜಾನನ್ನೇವ) ಸಾತ್ವಿಕಜೀವರ ಮೇಲಿನ ಕರುಣೆಯಿಂದ ಭಗವಂತನ ಗುಣಗಳನ್ನು ತಿಳಿಸುವ (ಜಾನತೀಃ) ವೇದಗಳಲ್ಲಿ ನಿತ್ಯವೂ (ನಿತ್ಯಂ) ವಿಹರಿಸುತ್ತಾನೆ (ಆಶೇತೇ).
ಅಪವ್ಯಾಖ್ಯಾನಗಳಿಂದ ಮುಚ್ಚಿಹೋಗಿದ್ದ ಸಚ್ಛಾಸ್ತ್ರಗಳ ಗಂಟು ಇವನ ನಲ್ನುಡಿಯಿಂದ ಮತ್ತೆ ಹೊಸಚೈತನ್ಯವನ್ನು ಪಡೆಯುತ್ತವೆ (ಪುನರ್ವರ್ಧಂತೇ). ತಮ್ಮ ನಿಜವಾದ ನೆಂಟನ ಬಳಿಸಾರುತ್ತವೆ (ಯಂತಿ ದೇವ್ಯಮ್). ನಮ್ಮ ತಂದೆಯಾದ ಪ್ರಾಣನಾರಾಯಣರ ಬೇರೆ ಬೇರೆ ಗುಣಗಳನ್ನು ಜೊತೆಯಾಗಿ ಆವಿಷ್ಕರಿಸಿ ತೋರುತ್ತವೆ (ಅನ್ಯದ್ ವರ್ಪಃ ಪಿತ್ರೋಃ ಕೃಣ್ವತೇ ಸಚಾ).

No comments:

Post a Comment