ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Friday, March 22, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೧೦


"ಧನ್ಯನಾದ ಮಗ ನಿನಗಾಗಲಿ", ಎಂದು ಹರಸಿದರು ಜ್ಞಾನಿಗಳು. ಧನ್ಯ ಎಂದರೇ 'ಶ್ರೀಮಂತ' ಎಂದು ಹಿಂದೆ ನೋಡಿದೆವು. ಯಾರೀ ಶ್ರೀಮಂತ? ಎಂಥವನು ಇವನು? ಹಾಡಿದ ಕವಿ –

ಯೇಯೇ ಗುಣಾ ನಾಮ ಜಗತ್ಪ್ರಸಿದ್ಧಾಃ ಯಂ ತೇಷುತೇಷು ಸ್ಮ ನಿದರ್ಶಯಂತಿ
ಸಾಕ್ಷಾನ್ಮಹಾಭಾಗವತ-ಪ್ರಬರ್ಹಂ ಶ್ರೀಮಂತಮೇನಂ ಹನುಮಂತಮಾಹುಃ ೧.೧೦

ಈ ಸೃಷ್ಟಿಯಲ್ಲಿ ಏನೇನು ಗುಣ ಎಂದು ಪ್ರಸಿದ್ಧವಾಗಿದೆಯೋ, ಆ ಎಲ್ಲಾ ಗುಣಗಳ ಉದಾಹರಣೆಗೆ ಯಾರನ್ನು ವಾಲ್ಮೀಕಿ-ವ್ಯಾಸರು ಬೆರಳಿಟ್ಟು ಜಗತ್ತಿಗೆ ತೋರಿದ್ದಾರೋ, ಅವನನ್ನೇ, ಮುಖ್ಯವಾದ ಅರ್ಥದಲ್ಲಿ ಮಹಾಭಗವದ್ಭಕ್ತರಲ್ಲಿ ಹಿರಿಯನಾದವನನ್ನೇ, ಸಮಸ್ತಗುಣಸಂಪತ್ತಿನಿಂದ ಕೂಡಿದ ಸಿರಿವಂತನನ್ನೇ, ಹನುಮಂತನೆಂದು ವೈದಿಕ-ಲೌಕಿಕ ಮಾತುಗಳು ಕರೆದವು.
ಹನು ಎಂದರೆ ಜ್ಞಾನವೆಂದು ತಿಳಿದೆವು. ಹನುಮಾನ್ ಎಂದರೆ ಜ್ಞಾನವಾನ್. ಜ್ಞಾನವೇ ಮೊದಲಾದ ಸಮಸ್ತಗುಣಗಳ ಆಕರ.
ಸರ್ವಗುಣಗಳ ನಿದರ್ಶನ ಇವನೆಂದು ಸಾರಿದರು ವಾಲ್ಮೀಕಿಮಹರ್ಷಿ. ಅವರು ಯಾವ ಯಾವ ಗುಣಗಳನ್ನು ಇವನಲ್ಲಿ ಕಂಡರು? ಇಲ್ಲಿದೆ ನಾರಾಯಣರು ಉದಾಹರಿಸಿದ ಭಾವಪ್ರಕಾಶಿಕೆಯಲ್ಲಿಯ ಕೆಲ ನುಡಿಗಳು, ಉತ್ತರರಾಮಾಯಣದ ಭಾಗದಿಂದ:
"ಪರಾಕ್ರಮೌದಾರ್ಯ-ಯಶಃಪ್ರತಾಪೈಃ ಸೌಂದರ್ಯ-ಮಾಧುರ್ಯ-ನಯಾನಯೈಶ್ಚ ಗಾಂಭೀರ್ಯ-ಚಾತುರ್ಯ-ಸುವೀರ್ಯ-ಧೈರ್ಯೈರ್ಹನೂಮತಃ ಕೋsಭ್ಯಧಿಕಸ್ತ್ರಿಲೋಕ್ಯಾಮ್ "  ಪರಾಕ್ರಮ ಸೋಲಿಸುವ ತಾಕತ್ತು, ಔದಾರ್ಯ  ಈವ ಮನಸ್ಸು, ಯಶಃ  ಪೆರ್ಮೆ, ಪ್ರತಾಪ ಸೋಲಿಸಲಾಗದ ಶಕ್ತಿ, ಸೌಂದರ್ಯ ಕಣ್ಸೆಳೆವ ಸೊಬಗು, ಮಾಧುರ್ಯ ಮುದ್ದಾದ ಮಾತು, ನಯ ಪೂರ್ವಾಪರವಿಚಾರದ ವಿವೇಕ, ಅನಯ ಮೋಸಕ್ಕೆ ಪ್ರತಿತಂತ್ರ, ಗಾಂಭೀರ್ಯ ಅಳಿಯಲಾಗದ ಗತ್ತು, ಚಾತುರ್ಯ ಸಮಸ್ಯೆಯನ್ನು ಥಟ್ಟೆಂದು ಗುರುತಿಸಿ ಅದನ್ನು ಬಗೆಹರಿಸುವ ಪರಿ, ಸುವೀರ್ಯ ಯಾರೂ ಅಳಿಸಲಾಗದ ಅಂತಃಸತ್ವ, ಧೈರ್ಯ ಮುನ್ನುಗ್ಗಿ ಬರುವ ಅನಿಷ್ಟವನ್ನು ಎದುರಿಸಿ ನಿಲ್ಲುವ ಶಕ್ತಿ, ಇವೆಲ್ಲಾ ಹನುಮಂತನಲ್ಲಿ ಇದ್ದಾವಪ್ಪ ಮತ್ತೆ ಮೂರುಲೋಕದ ಜೀವರಾಶಿಗೂ ಊಹಿಸಲಾಗದ ಪರಿಯಲ್ಲಿ.
"ಪ್ರಜಾ ಮಿಮಂಕ್ಷೋರಿವ ಸಾಗರಸ್ಯ ಲೋಕಾನ್ ದಿಧಕ್ಷೋರಿವ ಪಾವಕಸ್ಯ ಸರ್ವಾನ್ ಜಿಹೀರ್ಷೋರಿವ ಚಾಂತಕಸ್ಯ ಹನೂಮತಃ ಸ್ಥಾಸ್ಯತಿ ಕಃ ಪುರಸ್ತಾತ್ " ಸೃಷ್ಟಿಯನ್ನೇ ಸಮಾಧಿಮಾಡುವ ಪ್ರಳಯಜಲದೆದಿರು ನಿಲ್ವವರುಂಟೆ? ಮೂರುಲೋಕವನ್ನೇ ಸುಡುವ ಕೊನೆಯ ಬೆಂಕಿಯ ಮುಂದೆ ಆಡುವವರುಂಟೆ? ಎಲ್ಲರನ್ನೂ ಮುಗಿಸಿಬಿಡುವ ಜವರಾಯನೆದಿರು ಮಾತಾಡುವರುಂಟೆ? ಆಹಾ! ಹನುಮಂತನೆದಿರು ನಿಲ್ವ ಗಟ್ಟಿಗರುಂಟೆ?

No comments:

Post a Comment