ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Tuesday, April 16, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೧೪


ಕರ್ಣಾಂತಮಾನೀಯ ಗುಣ-ಗ್ರಹೀತ್ರಾ ರಾಮೇಣ ಮುಕ್ತೋ ರಣ-ಕೋವಿದೇನ ।
ಸ್ಫುರನ್ನಸೌ ವೈರಿ-ಭಯಂಕರೋsಭೂತ್ ಸತ್ಪಕ್ಷಪಾತೀ ಪ್ರದರೋ ಯಥಾಗ್ರ್ಯಃ  ॥೦೧.೧೪  

ಸಮರತಂತ್ರದಲ್ಲಿ ಜಾಣನಾದ, ರಾಮಚಂದ್ರ ಬಿಟ್ಟ ಬಾಣ!
ಹೆದೆಯನ್ನು ಕಿವಿವರೆಗೂ ಎಳೆದು, ಏನೋ ಗುಟ್ಟನುಸುರಿ ಬಿಟ್ಟ ಈ ಹನುಮನೆಂಬ ಪ್ರತಿಯಿಲ್ಲದ ಬಾಣ!
ರಾಮನೆಸೆತಕ್ಕೆ ಗಗನದಲ್ಲಿ ಚಿಮ್ಮಿ ಸಾಗಿದ ಈ ಬಾಣ, ಹಗೆಗಳ ಎದೆಯಲ್ಲಿ ದುಗುಡವನ್ನು ಹುಟ್ಟಿಸಿತು, ಸುಜನರ ಗಡಣಕ್ಕೆ ಹರುಷವ ತಂದಿತು.
ಇದೊಂದು ಅದ್ಭುತವಾದ ಪದ್ಯ.
ಗುಣ ಎಂಬ ಶಬ್ದಕ್ಕೆ ಎರಡು ಅರ್ಥ -  ೧.ನಿರ್ದುಷ್ಟವಾದುದು, ೨.ಬಿಲ್ಲಿಗೆ ಕಟ್ಟುವ ಮೌರ್ವೀ.
ರಾಮನೆಂಬ ರಣಕೋವಿದನ ಕೈಯಲ್ಲಿ ಒಂದು ಬಿಲ್ಲು. ಅದಕ್ಕೆ ಹನುಮನೆಂಬ ಬಾಣವನ್ನು ಹೂಡಿದ. ಮೌರ್ವೀಯನ್ನು (ಗುಣ) ಕಿವಿಯವರೆಗು ಎಳೆದು ಬಾಣವನ್ನು ಎಸೆವರು ವೀರರು. ಇಲ್ಲಿ ರಾಮನೂ ಹನುಮನ ಗುಣವನ್ನು ಹಿಡಿದು ಕಿವಿಯವರೆಗೂ ಸೆಳೆದು, ಅಲ್ಲಿ ಗುಟ್ಟಾಗಿ ಏನನ್ನೋ ಉಸುರಿ ಎಸೆದ.
ಯಾವ ಗುಣಗಳನ್ನು ಹಿಡಿದು ಸೆಳೆದ?
ರಾಮನೇ ಹನುಮನ ಗುಣಗಳನ್ನು ಸಾರಿದ್ದು ಹೀಗೆ -
"ನಾನೃಗ್ವೇದವಿನೀತಸ್ಯ ನಾಯಜುರ್ವೇದ ಧಾರಿಣಃ । ನಾಸಾಮವೇದವಿದುಷಃ ಶಕ್ಯಮೇವಂ ಪ್ರಭಾಷಿತುಮ್ ॥
ತ್ವಯ್ಯೇವ ಹನುಮನ್ನಸ್ತಿ ಬಲಂ ಬುದ್ಧಿಃ ಪರಾಕ್ರಮಃ । ದೇಶಕಾಲನುವೃತ್ತಿಶ್ಚ ನಯಶ್ಚ ನಯಪಂಡಿತ ॥
ಶೌರ್ಯಂ ದಾಕ್ಷ್ಯಂ ಬಲಂ ಧೈರ್ಯಂ ಪ್ರಾಜ್ಞತಾ ನಯಸಾಧನಮ್ । ವಿಕ್ರಮಶ್ಚ ಪ್ರಭಾವಶ್ಚ ಹನೂಮತಿ ಕೃತಾಲಯಾಃ"
"ಚತುರ್ವೇದಗಳ ತಳವನ್ನು ಅಳಿದವನಲ್ಲದಿರೇ ಹೀಗೆ ಮಾತನಾಡಲೂ ಆಗದು! (ಹನುಮನ ಮಾತಿನ ಜಾಣ್ಮೆಯನ್ನು ಕುರಿತು ರಾಮನು ಲಕ್ಷ್ಮಣನಿಗೆ ಹೇಳಿದ ಮಾತು)
ಹನುಮ! ತಾಕತ್ತು, ಬುದ್ಧಿ, ವೈರಿಯನ್ನು ಸೆದೆವ ಚಾತಿ, ದೇಶ ಕಾಲಗಳಿಗೆ ತಕ್ಕ ನಡತೆ, ವಿವೇಕ, ಶೌರ್ಯ, ದಿಟ್ಟತನ ಹಾಗೂ ಇನ್ನೊಬ್ಬರ ಮೇಲೆ ಪ್ರಭಾವ ಬೀರುವ ತೇಜಸ್ಸು, ನಿನ್ನಲ್ಲಿ ಮನೆಮಾಡಿವೆ ಈ ಎಲ್ಲಾ ನಲ್ಗುಣಗಳು".
ಈ ಗುಣಗಳನ್ನು ಹಿಡಿದು ಬಳಿಸೆಳೆದ.
ರಾಮ ಹೇಳಿದ ಗುಟ್ಟದು ಏನು? ಹನುಮನನ್ನೇ ಕೇಳಬೇಕು -
"ನ ಕಶ್ಚಿದೀಶಸ್ತ್ವದೃತೇsಸ್ತಿ ಸಾಧನೇ ಸಮಸ್ತಕಾರ್ಯಪ್ರವರಸ್ಯ ಮೇsಸ್ಯ । ಅತಸ್ತ್ವಮೇವ ಪ್ರತಿ ಯಾಹಿ ದಕ್ಷಿಣಾಂ ದಿಶಂ ಸಮಾದಾಯ ಮದಙ್ಗುಲೀಯಕಮ್"
"ನಿನ್ನ ಹೊರೆತಿನ್ನಾರೂ ಇಲ್ಲ ಸಮರ್ಥರು ನನ್ನ ಕಾರ್ಯವನ್ನು ಸಾಧಿಸುವ ಮಲ್ಲರು! ಹೋಗು ತೆಂಕಣದೆಡೆಗೆ ಇಗೋ ಈ ನನ್ನ ಉಂಗುರದೊಟ್ಟಿಗೆ!"
ಈ ಗುಟ್ಟನ್ನು ಉಸುರಿ ಎಸೆದ ಪ್ರತಿಯಿಲ್ಲದ( ಅಗ್ರ್ಯ)ಬಾಣವನ್ನು (ಪ್ರದರ).
ಪ್ರದರ ಎಂದರೆ ಬಾಣ. ಏಕೆ ಆ ಹೆಸರು? ಪ್ರ + ದರ, ಚೆನ್ನಾಗಿ ಸೀಳಿಬಿಡುವ ತಾಕತ್ತಿನದು.
ಅಗ್ರ್ಯ ಎಂದರೆ ಶ್ರೇಷ್ಠ. ಅಷ್ಟೇ ಅಲ್ಲ, ಎಲ್ಲಕ್ಕಿಂತ ಮುನ್ನುಗ್ಗಿ ಸಾಗುವ ವೇಗದ್ದು ಎಂದೂ ಅರ್ಥ. ಎಲ್ಲಾ ಕಪಿಗಳು ಸಮುದ್ರವನ್ನು ದಾಟುವ ಚಾತಿಯಿಲ್ಲದೆ ಕೈಚೆಲ್ಲಿ ಕೂತಾಗ, ನೂರು ಯೋಜನದ ಸಾಗರವನ್ನು ಲೀಲೆಯಲಿ ದಾಟಿದ ಅಗ್ರೇಸರಬಾಣ ಇದು!
ಸತ್ಪಕ್ಷಪಾತೀ - ಬಾಣ ಹೋಗಿ ಬಿತ್ತು ವೈರಿಯ ಪಕ್ಷದಲ್ಲಿ. ಸೀತಾಕೃತಿಗೆ, ವಿಭೀಷಣನಿಗೆ, ದಡದ ಆಚೆ ಇದ್ದ ಎಲ್ಲಾ ಕಪಿಗಳಿಗೆ ಪ್ರೀತಿಯನ್ನು ತಂದಿತ್ತು, ಹಗೆಗಳ ಬಗೆಗೆ ಬೆಂಕಿ ಹಾಕಿ ಮರಳಿತು.
ಛಂದಸ್ಸು ಶಾಲಾ ಎಂಬ ಉಪಜಾತಿಯ ಪ್ರಭೇದ.

No comments:

Post a Comment