ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Sunday, March 10, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೬(೯)


ಹದಿಮೂರು ಮಂತ್ರಗಳಲ್ಲಿ ಎಂಟನೇ ಮಂತ್ರ:
ತಮಗ್ರುವಃ ಕೇಶಿನೀಃ ಸಂ ಹಿ ರೇಭಿರ ಊರ್ಧ್ವಾಸ್ತಸ್ಥುರ್ಮಮ್ರುಷೀಃ ಪ್ರಾಯವೇ ಪುನಃ ।
ತಾಸಾಂ ಜರಾಂ ಪ್ರಮುಂಚನ್ನೇತಿ ನಾನದದಸುಂ ಪರಂ ಜನಯನ್ ಜೀವಮಸ್ತೃತಮ್ ॥

ತಮ್ಮನ್ನು ಕಾಪಾಡಲೆಂದು ಇದಿರು ನೋಡುತ್ತಾ (ಅಗ್ರುವಃ) ವೇದಕೇಶಿನಿಯರು, ವೇದವೆಂಬ ಕನ್ನೆಯರು (ಕೇಶಿನೀಃ) ಪರಿ ಪರಿಯಾಗಿ ಪ್ರಾರ್ಥಿಸಿದರು (ರೇಭಿರೇ). ಕೇಶವುಳ್ಳವರು ಕೇಶಿನಿಯರು, ಯಾರು ಈ ಕೇಶ! 'ಅಂತಃ ಸಮುದ್ರೇ' ಎಂದು ತಾವೇ ಹೇಳಿಕೊಂಡರು. ನೀರಲ್ಲಿ (ಕೇ) ಆರಾಮವಾಗಿರುವವ (ಶೇತೇ) ಕೇ ಶೇತೇ ಎಂದೇ ನಾರಾಯಣನು ಕೇಶ! ಅವನನ್ನು ಸದಾ ಸೇವಿಸುವವರು, ಅವನ ಸುಖವನ್ನು ಪಡೆದವರು, ಅವನ ಪರವಾದ ಅರ್ಥದ ಆವಿಷ್ಕಾರದಿಂದ ನಲಿದವರು, ವೇದಕನ್ನೆಯರು ಕೇಶಿನಿಯರು, ಮುತ್ತೈದೆಯರು!
ಇವರು ಇಂದೇಕೆ ಕಾಪಾಡುವವರ ಮೊರೆಹೋಗಿದ್ದಾರೆ? ನಾರಾಯಣನ ಪರವಾದ ಅರ್ಥವನ್ನು ತಮಗೆ ಹೇಳದೆ, ನಾನೇ ಬ್ರಹ್ಮ ಎಂದು ವಿರುದ್ಧವಾಗಿ ಆಡಿ ಈ ವಿದ್ಯಾನಾರಿಯರ ಕೇಶವನ್ನು ಕತ್ತರಿಸಿ, ಹಾದಿ ಬೀದಿಗಳಲ್ಲಿ ಇವರ ಮಾನಭಂಗ ಮಾಡುವವರಿಂದ ಕಾಪಾಡುವವರು ಯಾರೆಂದು ಅಂಗಲಾಚಿ ಬೇಡುತ್ತಿದ್ದಾರೆ!
ಇವರಿಗೆ ಮತ್ತೆ ಮುತ್ತೈದೆತನವನ್ನು ಕೊಟ್ಟು, ಸುಕೇಶಿನಿಯರನ್ನಾಗಿ ಮಾಡಿ, ಕಾಪಿಡಿದ ಧೀರ, ಮಧ್ವ! ಹೇಗೆ ಕಾಪಿಡಿದ?
ಬದುಕಿದ್ದೂ ಅಪವ್ಯಾಖ್ಯಾನಗಳಿಂದಾಗಿ ಸತ್ತಂತೆ ಇದ್ದ (ಮಮ್ರುಷೀಃ) ಈ ವಿದ್ಯೆಯ ಕನ್ನೆಯರಿಗೆ ತಾನು ನಾರಾಯಣನ ಪರವಾಗಿ ಅರ್ಥಾವಿಷ್ಕಾರ ಮಾಡಿ ಮತ್ತೆ ಯೌವನದ ಭಾಗ್ಯವಿತ್ತ (ಪ್ರಾಯವೇ ಪುನಃ). ಅವರನ್ನು ಮುಪ್ಪಿನಿಂದ ಬಿಡುಗಡೆಗೊಳಿಸಿ ಮತ್ತೆ ನಾರಾಯಣನ ಗುಣಗಳನ್ನು ಅವರ ಮುಖೇನ ಜಗತ್ತಿಗಿತ್ತ (ನಾನದದ). ಅವರಲ್ಲಿ ಎಂದೂ ಮಾಸದ ಪ್ರಾಣಶಕ್ತಿಯನ್ನು ಹುಟ್ಟಿಸಿ (ಅಸುಂ ಪರಂ ಜನಯನ್) ಭಯವಿಲ್ಲದ ಬಾಳನಿತ್ತ (ಜೀವಮಸ್ತೃತಮ್).
ಇಂಥಾ ಮಹೋಪಕಾರವನ್ನು ಮಾಡಲೆಂದೆ ಬಂದ ಮಧ್ವದೇವನನ್ನು ಅಭಿನಂದಿಸಲು ಉತ್ಕಂಠರಾಗಿ ನಿಂತರು ವಿದ್ಯಾನಾರಿಯರು (ಊರ್ಧ್ವಾಸ್ತಸ್ಥುಃ)

ಹದಿಮೂರು ಮಂತ್ರಗಳಲ್ಲಿ ಒಂಭತ್ತನೆಯ ಮಂತ್ರ:
ಅಧೀವಾಸಂ ಪರಿ ಮಾತೂ ರಿಹನ್ನಹ ತುವಿಗ್ರೇಭಿಃ ಸತ್ವಭಿರ್ಯಾತಿ ವಿ ಜ್ರಯಃ ।
ವಯೋ ದಧತ್ ಪದ್ವತೇ ರೇರಿಹತ್ ಸದಾನು ಶ್ಯೇನೀ ಸಚತೇ ವರ್ತನೀರಹ ॥

ತಮ್ಮನ್ನು ರಕ್ಷಿಸಲು ಬಂದ ಮಧ್ವನು, ಹೇಗೆ ಬಂದ! ಬಂದವ ಏನು ಮಾಡಿದ? ಅವನಿಗೆ ರಕ್ಷಿಸುವ ಕಲೆ ಹೇಗೆ ತಿಳಿದೀತು?
ಆಹಾ!! ತನ್ನ ಹಡೆದವ್ವ ವೇದವ್ಯಾಸನನ್ನು ಸದಾ ಧ್ಯಾನದಲ್ಲಿ ಆಸ್ವಾದಿಸುವ ಮರಿದುಂಬಿಯಲ್ಲವೆ ಇದು! (ಅಧೀವಾಸಂ ಪರಿ ಮಾತೂ ರಿಹನ್ನಹ) ವೇದಮಾತೆಯಾದ ವ್ಯಾಸನನ್ನು ಸೇರುವ ಯೋಗ್ಯತೆಯುಳ್ಳ ಎಲ್ಲಾ ಸಾತ್ವಿಕಜೀವರನ್ನೂ ಮೀರಿಸುವ ಯೋಗ್ಯತೆಯ ಜೀವೋತ್ತಮನಲ್ಲವೆ! (ತುವಿಗ್ರೇಭಿಃ ಸತ್ವಭಿರ್ಯಾತಿ ವಿ ಜ್ರಯಃ).
ನೆನಪಿದೆಯೇ... ತನ್ನ ಗುರುವಾದ ವ್ಯಾಸನ ಆಶ್ರಮಕ್ಕೆ ಹೊರಟ ಇವನ್ನನು ಸತ್ಯತೀರ್ಥನಂತಾ ಸಾತ್ವಿಕನೂ ಹಿಂಬಾಲಿಸಿ ಹೋಗಲಾಗಲಿಲ್ಲ!
ಇವನು, ತಾನು ಸವಿದ ವ್ಯಾಸನ ಹಣ್ಣನ್ನು ಜಗತ್ತಿಗುಣಿಸಲಲ್ಲವೇ, ಭಗವಂತನ ಗಾನರತರಾದ (ತುವಿಗ್ರೇಭಿಃ), ಕೇಳಿ ತಿಳಿಯಬಲ್ಲ ಸಾತ್ವಿಕರ ಕೂಡಿ (ಸತ್ವಭಿಃ), ಭಗವಂತನ ಗುಣಗಳನ್ನು ಪಸರಿಸಲು ( ವಿ ಜ್ರಯಃ) ಭುವಿಯಲ್ಲಿ ಸಂಚರಿಸಿದ (ಯಾತಿ).
ಹಾಗೆ ಸಜ್ಜನರ ಹೃದಯದಲ್ಲಿ ಮುಪ್ಪಿನಿಂದ ಬಡವಾಗಿದ್ದ ವಿದ್ಯೆಗೆ ಹೊಸಚೈತನ್ಯವನ್ನಿತ್ತ (ವಯೋ ದಧತ್). ಬೇಲಿಗಳ ಹಿಡಿತಕ್ಕೆ ಸಿಕ್ಕು ಬಳಲಿದ ಮನುಜರಿಗೆ(ಪದ್ವತೇ) ಅನುಗ್ರಹಿಸಲು, ಭಗವಂತನ ಗುಣಗಳ ರುಚಿಯನ್ನು ಅವರಲ್ಲಿಯೂ ಹುಟ್ಟಿಸಲು (ರೇರಿಹತ್) ಭೂಭಾಗವನ್ನು ತಿರುಗಿದ (ಶ್ಯೇನೀ). ಇವೆಲ್ಲವನ್ನೂ ತನ್ನ ನಿಯಾಮಕಶಕ್ತಿಯಾದ ಭಗವಂತನನ್ನು ಅನುಸರಿಸಿಯೇ ಮಾಡಿದ, ಭಗವತ್ಕಾರ್ಯಸಾಧಕ (ಸಚತೇ ವರ್ತನೀಃ).

No comments:

Post a Comment