ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Monday, March 4, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೬(೫)


ಮುಂದೆ, "ತಾಂ ಸು ತೇ ಕೀರ್ತಿಮ್", ಎಂದು ಆರಂಭವಾಗುವ ಆರು ಮಂತ್ರಗಳ ಸೂಕ್ತ. ಋಷಿ, ಬೃಹದುಕ್ಥ. ಛಂದಸ್ಸು, ತ್ರಿಷ್ಟುಪ್. ದೇವತೆ, ಇಂದ್ರನಾಮಕನಾದ ಮುಖ್ಯಪ್ರಾಣ.

ಮೊದಲ ಮಂತ್ರ :
ತಾಂ ಸು ತೇ ಕೀರ್ತಿಂ ಮಘವನ್ ಮಹಿತ್ವಾ ಯತ್ ತ್ವಾ ಭೀತೇ ರೋದಸೀ ಆಹ್ವಯೇತಾಮ್  
ಪ್ರಾವೋ ದೇವಾನ್ ಆತಿರೋ ದಾಸಮೋಜಃ ಪ್ರಜಾಯೈ ತ್ವಸ್ಯೈ ಯದಶಿಕ್ಷ ಇಂದ್ರ    

ಹೇ ಜಯಿಸುವ ದೇವನೇ (ಮಘವನ್), ಇಂದ್ರಿಯಗಳ ನಿಯಾಮಕನೇ (ಇಂದ್ರ), ಯಾವಾಗ (ಯತ್) ದುರ್ಜನರು ತಮ್ಮ ನಾಲಿಗೆಯನ್ನು ಹರಹಿ ಇಷ್ಟಬಂದಂತೆ ವೇದಗಳಿಗೆ ದುರರ್ಥಗಳನ್ನು ಹೇಳಿದರೋ, ಆವಾಗ, ಅಯ್ಯೋ! ನಮಗಿನ್ನಾರು ದಿಕ್ಕು ಎಂದು ಹೆದರಿ (ಭೀತೇ) ದೇವಲೋಕದಲ್ಲಿ ಸುರರು, ಭುವಿಯಲ್ಲಿ ಭೂಸುರರು (ರೋದಸೀ), ನಿನ್ನ ಅದ್ಭುತ ಕೀರ್ತಿಯನ್ನು (ಸುಕೀರ್ತಿಂ) ಪೂಜಿಸಿ (ಮಹಿತ್ವಾ) ಕೊಂಡಾಡಿದರು. ನಿನ್ನನ್ನು ಬೇಡಿದರು, ನಿಮ್ಮವರಾದ ನಮಗಾಗಿ ಮತ್ತೆ ಬಾ (ಆಹ್ವಯೇತಾಮ್). ಹುಟ್ಟಿಬಂದು, ಸಾತ್ವಿಕರಾದ ನಮ್ಮನ್ನು ಕಾಪಾಡು (ದೇವಾನ್ ಪ್ರಾವಃ). ಭಗವಂತನ ನಲ್ಗುಣಗಳನ್ನು ಕದ್ದು ಬೀಗುವ (ದಾಸ) ದುರುಳರನ್ನು ನಾಶಮಾಡು (ಆತಿರಃ). ಹನಮನಾಗಿ ರಾವಣನವರನ್ನು, ಭೀಮನಾಗಿ ಕೌರವರನ್ನು, ಮಧ್ವನಾಗಿ ಮಾಯಿಗಳನ್ನು.
ಅವರನ್ನು ತರಿದು, ಬೇಡಿಬಂದ ಸುಜನರಿಗೆ (ಪ್ರಜಾಯೈ ತ್ವಸ್ಯೈ) ಓಜಸ್ಸನ್ನು, ಭಗವಂತನನ್ನು ಕಾಣುವ ಸಾತ್ವಿಕಸಾಮರ್ಥ್ಯವನ್ನು (ಓಜಃ) ಉಪದೇಶಿಸು (ಶಿಕ್ಷಃ).
ನಿನ್ನನ್ನು ಆಹ್ವಾನಿಸಿ, ನೀನು ಕಲಿಸಿದ ಆತ್ಮದ ಪಾಠವನ್ನು ಚೆನ್ನಾಗಿ ಅರಿತು ನಿನ್ನನ್ನು ಮತ್ತೂ ಕೀರ್ತಿಸುತ್ತೇವೆ.

ಎರಡನೇ ಮಂತ್ರ:
ಯದಚರಸ್ತನ್ವಾ ವಾವೃಧಾನೋ ಬಲಾನೀಂದ್ರ ಪ್ರಬ್ರುವಾಣೋ ಜನೇಷು     
ಮಾಯೇತ್ ಸಾ ತೇ ಯಾನಿ ಯುದ್ಧಾನ್ಯಾಹುರ್ನಾದ್ಯ ಶತ್ರುಂ ನನು ಪುರಾ ವಿವಿತ್ಸೇ  

ಹೇ ಇಂದ್ರ, ಸರ್ವಸಮರ್ಥ, ಲೋಕದ ಕಣ್ಣಿಗೆ ಬೆಳೆದು (ವಾವೃಧಾನೋ) ಏನೇನು ಮಾಡಿದೆ ನೀನು!! (ಯದಚರಃ) ಆಹಾ! ಸಮುದ್ರದಾಟುವಲ್ಲಿ ಶರೀರದಿಂದ ಬೆಳೆದೆ. ಯುದ್ಧಭೂಮಿಯಲ್ಲಿ ಬಲರೂಪನಾಗಿ ಬೆಳೆದೆ. ವಾದದಲ್ಲಿ ಜ್ಞಾನರೂಪನಾಗಿ ಬೆಳಗಿದೆ. ನಿನ್ನವನಾದ, ನಿನ್ನ ಶಕ್ತಿಯಾದ, ನಿನ್ನ ಒಳಗಿನ ಬಲ (ಬಲಾನಿ), ಅದು ನಾರಾಯಣ! ಅವನನ್ನು ಜನರೆಲ್ಲರೂ (ಜನೇಷು) ತಿಳಿವಂತೆ ಸಾರಿ ಹೇಳಿದೆ (ಪ್ರಬ್ರುವಾಣಃ)
ಅಥವಾ
ನಿನ್ನ ಬಲವದು ಎಂಥಾದ್ದು ಎಂದು ಜನರಿಗೆ ಸಾರಿ ಹೇಳಿದೆ!
"ನಿಹಂತಾ ಶತ್ರುಸೈನ್ಯಾನಾಂ", "ಜರಢಸ್ಯ ಸುತಾ ಹತಾಃ", "ಯಸ್ಯ ತ್ರೀಣ್ಯುದಿತಾನಿ", ಇತ್ಯಾದಿಯಾಗಿ.
ನೀನು ಶತ್ರುಗಳನ್ನು ಗೆದ್ದದ್ದು (ಯುದ್ಧಾನಿ) ಎಂದು ಜನರಾಡುವುದು (ಆಹುಃ) ಒಂದು ಮೋಜು ಅಲ್ಲವೇ! (ಸಾ ಮಾಯೇತ್ ನನು) ಹೇಗೆ?
ನಿನಗೆ ಸಮನಾದ ಒಬ್ಬ ಎದುರಾಳಿಯು ಹಿಂದೆ ಯಾರಿದ್ದರು?!(ಪುರಾ) ಈಗಂತೂ ಇಲ್ಲ (ನಾದ್ಯ) ಎಂದೇ ನೀನು ಕಂಡಿರುವೆ (ವಿವಿತ್ಸೇ).
ಸಮಾನರಾದವರಲ್ಲಿ ಯುದ್ಧ. ನಿನಗೆ ಸಮನಾದ ಇನ್ನೊಬ್ಬ ಯೋದ್ಧಾ ಬ್ರಹ್ಮಾಂಡದಲ್ಲಿ ಎಲ್ಲಿರುವ? ನೀನು ಮಾಡಿದ ಯುದ್ಧವು ಒಂದು ಮೋಜು ಅಷ್ಟೇ!   

No comments:

Post a Comment