ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Sunday, March 17, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೯(೧)


ಆನಂದತೀರ್ಥರ ಭಾವವನ್ನು ಅವರ ಮುಖದಿಂದಲೇ ಅನುಭವಿಸಿದ ಹಿರಿಯಜೀವ ನಾರಾಯಣಪಂಡಿತರು. ಮಧ್ವರ   ಜೀವನಗಾಥೆಯನ್ನು ಅವರನುಗ್ರಹದಿಂದಲೆ ಬಣ್ಣಿಸಿದ ಕೃತಕೃತ್ಯರು. ತಮ್ಮನ್ನು ಅಸೂಕ್ಷ್ಮದೃಷ್ಟಿ, ಮಂದಬುದ್ಧಿ ಎಂದು ಕರೆದುಕೊಳ್ಳುವ ಪರಿಯನ್ನು ನೋಡಿದರೆ ತಿಳಿದೀತು, ಇದೆಷ್ಟು ಮಾಗಿದ ಜೀವವಿರಬೇಕು! ಗುರುಗಳಿಗೆ ಇನ್ನೆಷ್ಟು ಬಾಗಿದ ಮನಸ್ಸಿರಬೇಕು! ಹನುಮನೂ ಹೀಗೆ ವಿನಯದ ಮಾತನಾಡಿದ್ದ ತಾಯಿ ಸೀತೆಯ ಇದಿರು, "ಮತ್ತಃ ಪ್ರತ್ಯವರಃ ಕಶ್ಚಿನ್ನಾಸ್ತಿ ಸುಗ್ರೀವಸನ್ನಿಧೌ", ಎಂದು (ಅಮ್ಮ, ನನಗಿಂತ ಕಿರಿಯನಾದ ಇನ್ನೊಬ್ಬ ಕಪಿ ಸುಗ್ರೀವನ ಬಳಿಯಿಲ್ಲ). ಜೀವೋತ್ತಮನ ಬಾಯಲ್ಲಿ ಇಂಥಾ ಮಾತು! ಅದರ ಪ್ರತಿಬಿಂಬವೇ ಅವನ ಶಿಷ್ಯರ ನುಡಿಯಲ್ಲಿ! ಇದರಿಂದ ಮನಸ್ಸು ತಪಸ್ಸಿಗೆ ಕೂರಬೇಕು. ನಮ್ಮ ಮುಖವಾಡದ ಬದುಕು ಎಷ್ಟು ಅಸಹ್ಯವೆಂಬ ಸತ್ಯದರ್ಶನವಾಗಬೇಕು. ಆಗಲೇ ಅಲ್ಲವೇ ಉನ್ನತಿಯ ದಾರಿ ಕಾಣುವುದು. ಟೊಳ್ಳುತಲೆಯೊಳಗಿನ ಆರ್ಭಟವೇ ಮಧುರನಾದವೆಂದು ಬಗೆದ ಮನುಜರಿಗೆ ಇದು ಅರ್ಥವಾಗದ ಸಂಗತಿ. ಮೌನವೇ ನಿನಗೆ ಶರಣು!
ಮುಂದೆ ಸಾಗುವ.
‘ವಾಯೋರವತಾರಲೀಲಾಂ ವಕ್ಷ್ಯಾಮಿ’, ಎಂದು ಹೇಳಿದ್ದರು ಕವಿ ನಾರಾಯಣರು. ಅದರಲ್ಲಿ ವಾಯುವಿನ ಮೊದಲ ಅವತಾರವಾದ ಹನುಮಂತನ ಚರಿತೆಯನ್ನು ಮುಂದಿನ ಹತ್ತೊಂಭತ್ತು ಪದ್ಯಗಳಲ್ಲಿ ವರ್ಣಿಸುತ್ತಾರೆ.

ಶ್ರೀ-ವಲ್ಲಭಾಜ್ಞಾಂ ಸ-ಸುರೇಂದ್ರ-ಯಾಚ್ಞಾಂ ಸಂಭಾವ್ಯ ಸಂಭಾವ್ಯತಮಾಂ ತ್ರಿಲೋಕ್ಯಾಮ್ ।
ಪ್ರಾಣೇಶ್ವರಃ ಪ್ರಾಣಿ-ಗಣ-ಪ್ರಣೇತಾ ಗುರುಃ ಸತಾಂ ಕೇಸರಿಣೋ ಗೃಹೇsಭೂತ್ ॥     ೧.೯ ॥

ಸರ್ವಜೀವಜಾತದ ನಾಯಕ, ಜೀವಕಲಾಭಿಮಾನಿ, ಸುಜನರ ಗುರು, ಮುಖ್ಯಪ್ರಾಣನು ಹನುಮನಾಗುದಿಸಿದನು. ಕೇಸರಿಯ ಮಡದಿ ಅಂಜನೆಯಲ್ಲಿ! ಗೃಹ ಎಂದರೆ ಮನೆಯಲ್ಲವೆ? ಮಡದಿ ಹೇಗಾಯ್ತು? ಗೃಹಯತೇ, ಹಿಡಿಯುತ್ತಾಳೆ ಎಲ್ಲವನ್ನೂ, ಮನೆಯ ಸರ್ವಸ್ವವನ್ನೂ ಆದ್ದರಿಂದ ಹೆಂಡತಿಯೇ ಗೃಹ.
ಮೂರುಲೋಕದಲ್ಲಿ ಎಲ್ಲರಿಂದಲೂ ಮನ್ನಿಸಬೇಕಾದ ರಮೆಯರಸನ ಆಜ್ಞೆಗೆ ಮಣಿದು ಹುಟ್ಟಿದ. "ಸ್ವಾಮೀ! ನಮ್ಮನ್ನು ಕಾಡುವ ಹಗೆಗಳನ್ನು ಬಗಿಯಲು, ಮಿಗಿಲಾದ ಹರಿಯ ಸೊಗಸನ್ನು ಪೋಗಳಲು ಇಳೆಗಿಳಿದು ಬಾ", ಎಂಬ ಸಗ್ಗಿಗರ ಪ್ರಾರ್ಥನೆಯನ್ನು ಮನ್ನಿಸಿ ಹುಟ್ಟಿದ.
ಬಾಲಹನುಮನನ್ನು ಬಣ್ಣಿಸುವ ನಡೆಯ ಹೆಸರೂ "ಬಾಲಾ". ಭಾವಪ್ರಕಾಶಿಕೆಯಲ್ಲಿ ನಾರಾಯಣರು  ಪೂರ್ವಕಥಾನಕವನ್ನು ಉದಾಹರಿಸುತ್ತಾರೆ-
“ತೀರ್ಥವಿಘ್ನಕರಂ ದುಷ್ಟಗಜಂ ಹತ್ವಾ ಪ್ರತೋಷಿತಾಃ ।   ಭರದ್ವಾಜಾದಯೋ ಧನ್ಯಂ ಪುತ್ರಂ ಕೇಸರಿಣೇ ದದೌ "
ಪಾವನವಾದ ತೀರ್ಥವನ್ನು ಹಾಳುಗೆಡವಲು ಬಂದ ಆನೆಯ ರೂಪದ ದುಷ್ಟನನ್ನು ಕೊಂದ ಕೇಸರಿ. ಆ ಕಾರಣ, ಸಂತುಷ್ಟರಾದ ಭರದ್ವಾಜರೇ ಮೊದಲಾದ ಮುನಿಗಳು ಧನ್ಯನಾದ ಪುತ್ರನನ್ನು ಅವನಿಗಿತ್ತರು.
ಋಷಿಗಳ ಅನುಗ್ರಹದಿಂದ ಅವತರಿಸಿದ ಮುಖ್ಯಪ್ರಾಣ, ಹನುಮನಾಗಿ.
ಈ ಶ್ಲೋಕವನ್ನೇಕೆ ಕೊಟ್ಟರು ಕವಿಗಳು? ನಮಗೆ ಅಧ್ಯಾತ್ಮದ ಅರಿವು ಮೂಡಿಸಲು. ಯಾರೋ ತ್ರೇತೆಯಲ್ಲಿ ಇದ್ದ ಕಪಿಗೆ ಮುನಿಗಳು ಒಲಿದು ವರವಿತ್ತ ಕಾರಣ ಹುಟ್ಟಿದ ಹನುಮನ ಕಥೆಯಲ್ಲ ಅದು. ಒಳಗೆ ಒಂದು ಸೊಗಸಿದೆ. ಹನುಮ ನಮ್ಮ ಮಡದಿಗೆ ಹುಟ್ಟಬೇಕು. ಹನುಮನ ಅವತಾರ ನಮ್ಮಲ್ಲೂ ಆಗಬೇಕು. ಅದು ಹೇಗೆ? ನೋಡುವ!

No comments:

Post a Comment