ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Monday, March 18, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೯(೨)


ತೀರ್ಥವಿಘ್ನಕರಂ ದುಷ್ಟಗಜಂ ಹತ್ವಾ ಪ್ರತೋಷಿತಾಃ ಭರದ್ವಾಜಾದಯೋ ಧನ್ಯಂ ಪುತ್ರಂ ಕೇಸರಿಣೇ ದದೌ
ಹನುಮಂತನು ಹುಟ್ಟುವುದು ಅಂದರೆ, ಪ್ರಕೃಷ್ಟಜ್ಞಾನವು  ಉದಿಸುವುದು ಎಂದು ಅರ್ಥ. ಹನು ಎಂದರೆ ಜ್ಞಾನ (ಹನುಶಬ್ದೋ ಜ್ಞಾನವಾಚೀ). ಇಂಥಾ ಪ್ರಕೃಷ್ಟಜ್ಞಾನವನ್ನು ಪಡೆವ ಅಧಿಕಾರಿ ಯಾರು? ಕೇಸರಿ. ಕ ಎಂದರೆ ಬ್ರಹ್ಮ ಅವನಲ್ಲಿಯೇ ಇವನ ಗಮನ (ಸರತಿ), ಸಂಸಾರದ ಆಮಿಷಗಳಿಂದ ನಿರ್ಗಮನ. ವಿರಕ್ತನಾದ ಮುಮುಕ್ಷು ಎಂದು ಅರ್ಥ.
ಇವನಿಗೆ ಹನುಮತನೆಂಬ ಬ್ರಹ್ಮಜ್ಞಾನವನ್ನು ಕೊಟ್ಟವರು ಯಾರು? ಭರದ್ವಾಜಾದಿ ಮುನಿಗಳು. ಜ್ಞಾನಿಗಳು ಎಂದು ಅರ್ಥ.
ಕೊಡುವುದು ಎಂದರೆ ಏನು? ಉಪದೇಶಿಸುವುದು ಎಂದು ಅರ್ಥ. ಹೇಗೆ ಉಪದೇಶ ಮಾಡಿದರು? ಪ್ರತೋಷಿತಾಃ, ಬಹಳ ಸಂತುಷ್ಟರಾಗಿ ಉಪದೇಶಿಸಿದರು. ಅದನ್ನೇ ಹೇಳಿದ್ದು," ಯದ್ದದ್ಯಾತ್ ಸುಪ್ರಸನ್ನಧೀಃ ಶಿಷ್ಯಾಯ ಸತ್ಯಂ ಭವತಿ", ಎಂದು.
ಅವರು ಸಂತುಷ್ಟರಾಗುವುದು ಹೇಗೆ? ತೀರ್ಥವಿಘ್ನಕರಂ ದುಷ್ಟಗಜಂ ಹತ್ವಾ! ತೀರ್ಥ ಎಂದರೆ ಶಾಸ್ತ್ರ. ಅದರ ಅಧ್ಯಯನಕ್ಕೆ ಬರುವ ದೊಡ್ಡ ವಿಘ್ನ, ಅದು ಮದವೇರಿದ ಗಜ, ಅಹಂಕಾರದಿಂದ ಕುರುಡಾದ ಮನಸ್ಸು. ಪಾತ್ರೆಯನ್ನು ತೊಳೆಯದೆ ಅಮೃತವನ್ನು ಹಾಕಿದರೆ ಏನಾದೀತು! ದುಷ್ಟ ಮನಸ್ಸಿನಲ್ಲಿ ಎಷ್ಟೇ ಸದ್ವಿಚಾರವನ್ನು ತುಂಬಿದರು ಅದು ಕೆಸರಿಗೆ ಸೇರಿ ಕೆಸರೇ ಆಗಿಬಿಡುತ್ತದೆ. ಮೊದಲು ಮನಸ್ಸಿನ ದುಷ್ಟತನವನ್ನು ಕೊಲ್ಲಬೇಕು. ಕೊಲ್ಲುವುದು ಎಂದರೆ ಏನು?
ಅದರ ಒಂದೊಂದು ನಡೆಯನ್ನು ಸೂಕ್ಷ್ಮವಾಗಿ ವಿಮರ್ಶಿಸುವುದು ಎಂದು ಅರ್ಥ.
"ಹನನಂ ವಿಮರ್ಶ ಏವ", ಎಂದು ಆಚಾರ್ಯರ ಮಾತು. ಪದೇ ಪದೇ, ಕುಳಿತಾಗ, ನಿಂತಾಗ, ಜಗಳಾಡುವಾಗ, ತಿನ್ನುವಾಗ, ಬೈವಾಗ, ಹೊಗಳಿಕೊಳ್ಳುವಾಗ, ಆತ್ಮವನ್ನು ಅವಲೋಕಿಸುತ್ತಿರಬೇಕು. ಅದು ಹೇಗೆ ಸಾಧ್ಯ? ವಿಮರ್ಶೆಗೆ ಮನಸ್ಸನ್ನು ಒಳಪಡಿಸುವುದು ಹೇಗೆ? ಉತ್ತರ ಭಾಗವತದಲ್ಲಿದೆ:
"ಅಸಂಕಲ್ಪಾಜ್ಜಯೇತ್ ಕಾಮಂ ಕ್ರೋಧಮ್ ಕಾಮವಿವರ್ಜನಾತ್ ಅರ್ಥಾನರ್ಥೇಕ್ಷಯಾ ಲೋಭಂ ಭಯಂ ತತ್ವಾವಮರ್ಶನಾತ್ ಅನ್ವೀಕ್ಷಕ್ಯಾ ಶೋಕಮೋಹೌ ದಂಭಂ ಮಹದುಪಾಸಯಾ ಯೋಗಾಂತರಾಯಾನ್ ಮೌನೇನ ಹಿಂಸಾ ಕಾಯಾದನೀಹಯಾ" ೦೭.೧೬.೨೨-೨೩
ಮನಸ್ಸಿನ ಎಲ್ಲಾ ಕೊಳೆಗಳನ್ನು ಕೊಲ್ಲುವ ಹಾದಿ ಇಲ್ಲಿದೆ. ಮದವನ್ನು ಕೊಲ್ಲಲು ಕೇಸರಿಯಾದವನು ವಿಶೇಷವಾಗಿ ಮಹಾತ್ಮರ ಉಪಾಸನೆ ಮಾಡಬೇಕು.
ಕೇಳಿಲ್ಲವೇ,"ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನೋ ತತ್ವದರ್ಶಿನಃ " ಎಂಥಾ ಜ್ಞಾನವನ್ನು ಕೊಡುವರು? ಧನ್ಯವಾದ, ಪುತ್ರನನ್ನು, ಹನುಮಂತನನ್ನು ಕೊಡುವರು.
ಧನ್ಯ ಎಂದರೆ  'ಸಂಪತ್ತಿನಿಂದ ಕೂಡಿದ' ಎಂದು ಅರ್ಥ. ಸಿರಿವಂತನಾದ ಮಗ, ಇಹದಲ್ಲಿ ಸಕಲ ಸಾತ್ವಿಕಸಂಪತ್ತಿನಿಂದ ಕೂಡಿದ ಜ್ಞಾನ. ಪರದಲ್ಲಿ ನರಕಾದಿಗಳಿಂದ ಪಾರುಮಾಡುವ, ಮೋಕ್ಷಕ್ಕೆ ಕರೆದೊಯ್ಯುವ ತಾಕತ್ತಿನ ಜ್ಞಾನವನ್ನು ಇತ್ತು ಸಲಹುವರು.
ಇದೇ ಕೇಸರಿಗೆ ಹನುಮಂತ ಹುಟ್ಟಿದ ಎಂಬ ಕಥೆಯ ಅಧ್ಯಾತ್ಮ.
ನಾವೂ ಕೇಸರಿಗಳಾಗುವ ಪಾಠ! ಮನಸ್ಸನ್ನು ಹಿರಿಯರ ಪಾದರಜೋಭಿಷೇಕದಿಂದ ತೊಳೆಯುವ ಹಠ. ಅವರು ತಾವೇ ಸಂತುಷ್ಟರಾಗಿ ಹನುಮಂತನನ್ನು ನಮ್ಮ ಪಾಲಿಗೆ ಹುಟ್ಟಿಸುತ್ತಾರೆ, ಇದು ದಿಟ.

No comments:

Post a Comment