ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Friday, March 29, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೧೨

ಲೋಕದೃಷ್ಟಿಯಲ್ಲಿ ದಶರಥನ ಮಗ, ರಾಮನೆಂಬ ಹೆಸರಿನವ, ಸೀತೆಯನ್ನು ಕಳಕೊಂಡು ಇತ್ತ ಬಂದ, ಅವನನ್ನು ಹನುಮ ಕಂಡ. ನಿಜವಾಗಿ ಹನುಮ ಕಂಡದ್ದು ರಮಾಪತಿಯಾದ ರಾಮನನ್ನು. ಈ ರಾಮ ಸಾಕ್ಷಾತ್ ನಾರಾಯಣ, ಬ್ರಹ್ಮ ಎಂದರಿತು ಕಂಡ. ಸಾಕ್ಷಾತ್ ಬ್ರಹ್ಮಪಿತಾ ಅಸೌ ಇತಿ ಜಾನನ್ ಪಾದಯೋಃ ಪೇತೇ, ಸುಗ್ರೀವ ಇವನನ್ನು ಕಂಡು ಹೆದರಿದ್ದ. ಜಗತ್ಪವಿತ್ರವಾದ, ಈ ಬ್ರಹ್ಮವಸ್ತುವೇ ಮುಂದೆ ಬಂದಿದೆ ಎಂದು ತಿಳಿದವರಿಗೆ ಯಾವ ಭಯ! ಭಯ ಅಜ್ಞಾನದ ಕಾರ್ಯ. ಅಜ್ಞಾನಕಿಂತ ಅಪವಿತ್ರವಾದ ಇನ್ನೊಂದು ವಸ್ತುವಿಲ್ಲ. ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ! ಹನುಮ ಇವನನ್ನು ಕಂಡದ್ದು ಜಗತ್ಪವಿತ್ರನೆಂದು. ಜ್ಞಾನಮೂರ್ತಿಯೆಂದು. ಹಾಗೆ ಉಪಾಸಿಸುವವರಿಗೆ ಅಜ್ಞಾನವು ಇಲ್ಲ, ಅದರ ಬೆನ್ನಿಗೆ ಬರುವ ಭಯವೂ ಇಲ್ಲ! ಹೀಗೆ ಕಂಡ ಹನುಮಂತ ಏನು ಮಾಡಿದ?

ಪದಾರವಿಂದ-ಪ್ರಣತೋ ಹರೀಂದ್ರಸ್ತದಾ ಮಹಾಭಕ್ತಿ-ಭರಾಭಿನುನ್ನಃ
ಅಗ್ರಾಹಿ ಪದ್ಮೋರ-ಸುಂದರಾಭ್ಯಾಂ ದೋರ್ಭ್ಯಾಂ ಪುರಾಣೇನ ಪೂರುಷೇಣ ೦೧.೧೨      

ಆಗ, ಮಿಗಿಲಾದ ಭಕ್ತಿಯೆಂಬ ಭಾರವನ್ನು ತಡೆಯಲಾರದೆ ಎಂಬಂತೆ ಕಪಿಗಳೊಡೆಯ ತನ್ನೊಡೆಯನ ಅಡಿದಾವರೆಗೆ ಮೈಚೆಲ್ಲಿ ನಮಿಸಿದ. ಅವನನ್ನು ಎತ್ತಿ ಹಿಡಿದ ಪರಿಪೂರ್ಣನಾದ ಪುರುಷೋತ್ತಮ ಶ್ರೀರಾಮ, ತನ್ನ ಕಮಲದ ಕೇಸರದಂತೆ ಕೆಂಪಾಗಿ ಕಂಗೊಳಿಸುವ ಮುದ್ದಾದ ಕೈಗಳಿಂದ.
ಪೂರುಷ - ಪುರು ಎಂದರೆ ಪೂರ್ಣವಾದುದು. ಪೂರು ಎಂದು ಎಳೆದು ಹೇಳಿದರೆ, ಪರಿಪೂರ್ಣವಾದುದು ಎಂದರ್ಥ.
ಮತ್ತು, ಪುರುಷ ಎಂದು ಹೇಳುವಲ್ಲಿ ಪೂರುಷ ಎಂದು ಅಧಿಕಮಾಡಿ ಹೇಳಿದ್ದು ಅವನು ಪುರುಷೋತ್ತಮ ಎಂದು. ಆಧಿಕ್ಯೇ ಅಧಿಕಮ್ ಅಲ್ಲವೇ. ಆದ್ದರಿಂದಲೇ ಅವನು ಪರಿಪೂರ್ಣನಾದ ಪುರುಷೋತ್ತಮ.
ಈ ಭಾಗದ ವಿವರಣೆ ಹನುಮನು ತನ್ನ ನಿಜಾನುಭವವನ್ನು ಮಧ್ವನಾಗಿ ಹೇಳಿಕೊಂಡ ತಾತ್ಪರ್ಯನಿರ್ಣಯದ ಮಾತನ್ನು ನೆನಪಿಸುವಂತಿದೆ. "ಉತ್ಥಾಪ್ಯ ಚೈನಮರವಿಂದದಲಾಯತಾಕ್ಷಃ ಚಕ್ರಾಂಕಿತೇನ ವರದೇನ ಕರಾಂಬುಜೇನ", ಎಂದು(ಮಹಾಭಾರತ ತಾತ್ಪರ್ಯ ನಿರ್ಣಯ ೬.೧). ಕವಿಗೆ ಕೈಬಣ್ಣ ಕಂಡಿತು. ಮಧ್ವಕವಿರಾಜನಿಗೆ ಅವುಗಳ ಮೇಲಿದ್ದ ಚಕ್ರದ ಗುರುತೂ ಕಂಡಿತು (ಚಕ್ರಾಂಕಿತೇನ ಕರಾಂಬುಜೇನ). ಅವನೇ ಅಲ್ಲವೇ ಅದರ ಸ್ಪರ್ಶಾನಂದವನ್ನು ಅನುಭವಿಸಿದ ಧನ್ಯ!
ಛಂದಸ್ಸು ಮಾಲಾ ಎಂಬ ಉಪಜಾತಿ. ರಾಮನನ್ನು ಸಾತ್ವಿಕನಾದ ಸುಗ್ರೀವನ ಭಾಗ್ಯದ ಬಾಗಿಲಲ್ಲಿ ನಿಲ್ಲಿಸಿ ಹನುಮನು ಹಾಕಿದ ಮಾಲೆ.

No comments:

Post a Comment