ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Sunday, March 10, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೬(೯)


ಹದಿಮೂರು ಮಂತ್ರಗಳಲ್ಲಿ ಎಂಟನೇ ಮಂತ್ರ:
ತಮಗ್ರುವಃ ಕೇಶಿನೀಃ ಸಂ ಹಿ ರೇಭಿರ ಊರ್ಧ್ವಾಸ್ತಸ್ಥುರ್ಮಮ್ರುಷೀಃ ಪ್ರಾಯವೇ ಪುನಃ ।
ತಾಸಾಂ ಜರಾಂ ಪ್ರಮುಂಚನ್ನೇತಿ ನಾನದದಸುಂ ಪರಂ ಜನಯನ್ ಜೀವಮಸ್ತೃತಮ್ ॥

ತಮ್ಮನ್ನು ಕಾಪಾಡಲೆಂದು ಇದಿರು ನೋಡುತ್ತಾ (ಅಗ್ರುವಃ) ವೇದಕೇಶಿನಿಯರು, ವೇದವೆಂಬ ಕನ್ನೆಯರು (ಕೇಶಿನೀಃ) ಪರಿ ಪರಿಯಾಗಿ ಪ್ರಾರ್ಥಿಸಿದರು (ರೇಭಿರೇ). ಕೇಶವುಳ್ಳವರು ಕೇಶಿನಿಯರು, ಯಾರು ಈ ಕೇಶ! 'ಅಂತಃ ಸಮುದ್ರೇ' ಎಂದು ತಾವೇ ಹೇಳಿಕೊಂಡರು. ನೀರಲ್ಲಿ (ಕೇ) ಆರಾಮವಾಗಿರುವವ (ಶೇತೇ) ಕೇ ಶೇತೇ ಎಂದೇ ನಾರಾಯಣನು ಕೇಶ! ಅವನನ್ನು ಸದಾ ಸೇವಿಸುವವರು, ಅವನ ಸುಖವನ್ನು ಪಡೆದವರು, ಅವನ ಪರವಾದ ಅರ್ಥದ ಆವಿಷ್ಕಾರದಿಂದ ನಲಿದವರು, ವೇದಕನ್ನೆಯರು ಕೇಶಿನಿಯರು, ಮುತ್ತೈದೆಯರು!
ಇವರು ಇಂದೇಕೆ ಕಾಪಾಡುವವರ ಮೊರೆಹೋಗಿದ್ದಾರೆ? ನಾರಾಯಣನ ಪರವಾದ ಅರ್ಥವನ್ನು ತಮಗೆ ಹೇಳದೆ, ನಾನೇ ಬ್ರಹ್ಮ ಎಂದು ವಿರುದ್ಧವಾಗಿ ಆಡಿ ಈ ವಿದ್ಯಾನಾರಿಯರ ಕೇಶವನ್ನು ಕತ್ತರಿಸಿ, ಹಾದಿ ಬೀದಿಗಳಲ್ಲಿ ಇವರ ಮಾನಭಂಗ ಮಾಡುವವರಿಂದ ಕಾಪಾಡುವವರು ಯಾರೆಂದು ಅಂಗಲಾಚಿ ಬೇಡುತ್ತಿದ್ದಾರೆ!
ಇವರಿಗೆ ಮತ್ತೆ ಮುತ್ತೈದೆತನವನ್ನು ಕೊಟ್ಟು, ಸುಕೇಶಿನಿಯರನ್ನಾಗಿ ಮಾಡಿ, ಕಾಪಿಡಿದ ಧೀರ, ಮಧ್ವ! ಹೇಗೆ ಕಾಪಿಡಿದ?
ಬದುಕಿದ್ದೂ ಅಪವ್ಯಾಖ್ಯಾನಗಳಿಂದಾಗಿ ಸತ್ತಂತೆ ಇದ್ದ (ಮಮ್ರುಷೀಃ) ಈ ವಿದ್ಯೆಯ ಕನ್ನೆಯರಿಗೆ ತಾನು ನಾರಾಯಣನ ಪರವಾಗಿ ಅರ್ಥಾವಿಷ್ಕಾರ ಮಾಡಿ ಮತ್ತೆ ಯೌವನದ ಭಾಗ್ಯವಿತ್ತ (ಪ್ರಾಯವೇ ಪುನಃ). ಅವರನ್ನು ಮುಪ್ಪಿನಿಂದ ಬಿಡುಗಡೆಗೊಳಿಸಿ ಮತ್ತೆ ನಾರಾಯಣನ ಗುಣಗಳನ್ನು ಅವರ ಮುಖೇನ ಜಗತ್ತಿಗಿತ್ತ (ನಾನದದ). ಅವರಲ್ಲಿ ಎಂದೂ ಮಾಸದ ಪ್ರಾಣಶಕ್ತಿಯನ್ನು ಹುಟ್ಟಿಸಿ (ಅಸುಂ ಪರಂ ಜನಯನ್) ಭಯವಿಲ್ಲದ ಬಾಳನಿತ್ತ (ಜೀವಮಸ್ತೃತಮ್).
ಇಂಥಾ ಮಹೋಪಕಾರವನ್ನು ಮಾಡಲೆಂದೆ ಬಂದ ಮಧ್ವದೇವನನ್ನು ಅಭಿನಂದಿಸಲು ಉತ್ಕಂಠರಾಗಿ ನಿಂತರು ವಿದ್ಯಾನಾರಿಯರು (ಊರ್ಧ್ವಾಸ್ತಸ್ಥುಃ)

ಹದಿಮೂರು ಮಂತ್ರಗಳಲ್ಲಿ ಒಂಭತ್ತನೆಯ ಮಂತ್ರ:
ಅಧೀವಾಸಂ ಪರಿ ಮಾತೂ ರಿಹನ್ನಹ ತುವಿಗ್ರೇಭಿಃ ಸತ್ವಭಿರ್ಯಾತಿ ವಿ ಜ್ರಯಃ ।
ವಯೋ ದಧತ್ ಪದ್ವತೇ ರೇರಿಹತ್ ಸದಾನು ಶ್ಯೇನೀ ಸಚತೇ ವರ್ತನೀರಹ ॥

ತಮ್ಮನ್ನು ರಕ್ಷಿಸಲು ಬಂದ ಮಧ್ವನು, ಹೇಗೆ ಬಂದ! ಬಂದವ ಏನು ಮಾಡಿದ? ಅವನಿಗೆ ರಕ್ಷಿಸುವ ಕಲೆ ಹೇಗೆ ತಿಳಿದೀತು?
ಆಹಾ!! ತನ್ನ ಹಡೆದವ್ವ ವೇದವ್ಯಾಸನನ್ನು ಸದಾ ಧ್ಯಾನದಲ್ಲಿ ಆಸ್ವಾದಿಸುವ ಮರಿದುಂಬಿಯಲ್ಲವೆ ಇದು! (ಅಧೀವಾಸಂ ಪರಿ ಮಾತೂ ರಿಹನ್ನಹ) ವೇದಮಾತೆಯಾದ ವ್ಯಾಸನನ್ನು ಸೇರುವ ಯೋಗ್ಯತೆಯುಳ್ಳ ಎಲ್ಲಾ ಸಾತ್ವಿಕಜೀವರನ್ನೂ ಮೀರಿಸುವ ಯೋಗ್ಯತೆಯ ಜೀವೋತ್ತಮನಲ್ಲವೆ! (ತುವಿಗ್ರೇಭಿಃ ಸತ್ವಭಿರ್ಯಾತಿ ವಿ ಜ್ರಯಃ).
ನೆನಪಿದೆಯೇ... ತನ್ನ ಗುರುವಾದ ವ್ಯಾಸನ ಆಶ್ರಮಕ್ಕೆ ಹೊರಟ ಇವನ್ನನು ಸತ್ಯತೀರ್ಥನಂತಾ ಸಾತ್ವಿಕನೂ ಹಿಂಬಾಲಿಸಿ ಹೋಗಲಾಗಲಿಲ್ಲ!
ಇವನು, ತಾನು ಸವಿದ ವ್ಯಾಸನ ಹಣ್ಣನ್ನು ಜಗತ್ತಿಗುಣಿಸಲಲ್ಲವೇ, ಭಗವಂತನ ಗಾನರತರಾದ (ತುವಿಗ್ರೇಭಿಃ), ಕೇಳಿ ತಿಳಿಯಬಲ್ಲ ಸಾತ್ವಿಕರ ಕೂಡಿ (ಸತ್ವಭಿಃ), ಭಗವಂತನ ಗುಣಗಳನ್ನು ಪಸರಿಸಲು ( ವಿ ಜ್ರಯಃ) ಭುವಿಯಲ್ಲಿ ಸಂಚರಿಸಿದ (ಯಾತಿ).
ಹಾಗೆ ಸಜ್ಜನರ ಹೃದಯದಲ್ಲಿ ಮುಪ್ಪಿನಿಂದ ಬಡವಾಗಿದ್ದ ವಿದ್ಯೆಗೆ ಹೊಸಚೈತನ್ಯವನ್ನಿತ್ತ (ವಯೋ ದಧತ್). ಬೇಲಿಗಳ ಹಿಡಿತಕ್ಕೆ ಸಿಕ್ಕು ಬಳಲಿದ ಮನುಜರಿಗೆ(ಪದ್ವತೇ) ಅನುಗ್ರಹಿಸಲು, ಭಗವಂತನ ಗುಣಗಳ ರುಚಿಯನ್ನು ಅವರಲ್ಲಿಯೂ ಹುಟ್ಟಿಸಲು (ರೇರಿಹತ್) ಭೂಭಾಗವನ್ನು ತಿರುಗಿದ (ಶ್ಯೇನೀ). ಇವೆಲ್ಲವನ್ನೂ ತನ್ನ ನಿಯಾಮಕಶಕ್ತಿಯಾದ ಭಗವಂತನನ್ನು ಅನುಸರಿಸಿಯೇ ಮಾಡಿದ, ಭಗವತ್ಕಾರ್ಯಸಾಧಕ (ಸಚತೇ ವರ್ತನೀಃ).

Friday, March 8, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೬(೮)


ಮುಂದೆ, 'ವೇದಿಷದೇ ಪ್ರಿಯಧಾಮಾಯ ಸುದ್ಯುತೇ...' ಎಂದು ಆರಂಭವಾಗುವ ಋಗ್ವೇದದ ಒಟ್ಟು ಮಂತ್ರಗಳು ಹದಿಮೂರು. ದೀರ್ಘತಮಾ ಔಚತ್ಯನು ಋಷಿ. ಪ್ರಾಣಾಗ್ನಿ ದೇವತೇ. ಹನ್ನೊಂದು ಮಂತ್ರಗಳು ಜಾಗತೀ ಛಂದಸ್ಸಿನವು. ಹತ್ತನೆದ್ದು ತ್ರಿಷ್ಟುಪ್ ಕೂಡ. ಕೊನೆಯ ಎರಡು ಮಂತ್ರಗಳು ತ್ರಿಷ್ಟುಪ್ ಗಳು. ಮೊದಲ ಐದು ಮಂತ್ರಗಳು ಒಂದು ವರ್ಗ. ಎರಡನೇ ವರ್ಗ ಇನ್ನೈದು ಮಂತ್ರಗಳು. ಕಡೆಯ ಮೂರು ಮಂತ್ರಗಳು ಮೂರನೇ ವರ್ಗಕ್ಕೆ ಸೇರಿದವು. 'ಭೂಷನ್ನ ಯೋsಧಿ ಬಭ್ರೂಷು ನಮ್ನತೇ', ಎಂದು ಆರಂಭವಾಗುವ ಐದು ಮಂತ್ರಗಳು ಎರಡನೇ ಗಡಣಕ್ಕೆ ಸೇರಿದವು. ಅಲ್ಲೇ ವಿಶೇಷವಾಗಿ ಮಧ್ವಾವತಾರದ ಕಥೆಯ ವರ್ಣನೆಯಿದೆಯೆಂದೇ ನಾರಾಯಣಪಂಡಿತರು ಭಾವಪ್ರಕಾಶಿಕೆಯಲ್ಲಿ ಅದರ ಉಲ್ಲೇಖಮಾಡಿದರು.
ನಾವೀಗ, ಆ ಎರಡನೇ ವರ್ಗಕ್ಕೆ ಸೇರಿದ ಐದುಮಂತ್ರಗಳನ್ನು ಒಂದೊಂದಾಗಿ ಅರ್ಥೈಸಿಕೊಳ್ಳುವ ಯತಿಗಳಾಗುವ!
ಹದಿಮೂರು ಮಂತ್ರಗಳಲ್ಲಿ ಆರನೇ ಮಂತ್ರ -
ಭೂಷನ್ನ ಯೋsಧಿ ಬಭ್ರೂಷು ನಮ್ನತೇ ವೃಷೇವ ಪತ್ನೀರಭ್ಯೇತಿ ರೋರುವತ್     
ಓಜಾಯಮಾನಸ್ತನ್ವಶ್ಚ ಶುಂಭತೇ ಭೀಮೋ ನ ಶೃಂಗಾ ದವಿಧಾವ ದುರ್ಗೃಭಿಃ        

ಕೇವಲ ಭಗವಂತನ ಗುಣಗಳನ್ನು ಮಾತ್ರ ಹೊತ್ತು ನಿಂತ ವೇದವಿದ್ಯೆಯನ್ನು  (ಬಭ್ರೂಷು) ವ್ಯಾಖ್ಯಾನದಿಂದ ಅಲಂಕರಿಸುವ  ಇವನು (ಭೂಷನ್ನ ಯೋ) ಆ ವಿದ್ಯೆಗಳ ಅಭಿಮಾನಿದೇವತೆಗಳಿಂದ ಚೆನ್ನಾಗಿ ಕೊಂಡಾಡಲ್ಪಟ್ಟಿದ್ದಾನೆ (ನಮ್ನತೇ).
ಬೇರೆ ದೇವತೆಗಳ ಪರವಾಗಿ ಹೇಳುತ್ತಿವೆಯೇನೋ ಎಂಬಂತೆ ಭಾಸವಾಗುವ ಶ್ರುತಿಯ ಮಾತುಗಳನ್ನು(ಪತ್ನೀ:) ಬೇಗನೆ ಸಾರಿ, ಅವುಗಳ ನಿಜಭಾವವನ್ನು ತೋರಿಸುತ್ತಾನೆ (ವೃಷೇವ ಅಭ್ಯೇತಿ).
ವೇದಗಳಿಗೆ ಅಂಗಗಳಾದ ಶೀಕ್ಷಾ ಮೊದಲಾದ ಶಾಸ್ತ್ರಗಳನ್ನು ತನ್ನ ಮಾತಿನಿಂದಲೇ ಬೆಳಗುತ್ತಾನೆ (ಓಜಾಯಮಾನಸ್ತನ್ವಶ್ಚ). ಭೀಮ ಹೇಗೆ  ಶತಶೃಂಗದ ಶೃಂಗವನ್ನು ಪುಡಿಪುಡಿಗೈದನೋ (ಭೀಮೋ ನ ಶೃಂಗಾ ದವಿಧಾವ ದುರ್ಗೃಭಿಃ) ಹಾಗೆಯೇ ದುರ್ವಾದಿಭೀಮನಾದ ಮಧ್ವನೂ ಕೆಟ್ಟತರ್ಕಗಳಿಂದ ತುಂಬಿದ ಕುಭಾಷ್ಯಗಳೆಂಬ ಬೆಟ್ಟವನ್ನು ಪುಡಿಗೈಯುತ್ತಾನೆ (ದವಿಧಾವ)

ಹದಿಮೂರು ಮಂತ್ರಗಳಲ್ಲಿ ಏಳನೇ ಮಂತ್ರ:
ಸ ಸಂಸ್ತಿರೋ ವಿಷ್ಟಿರಃ ಸಂ ಗೃಭಾಯತಿ ಜಾನನ್ನೇವ ಜಾನತೀರ್ನಿತ್ಯ ಆ ಶಯೇ
ಪುನರ್ವರ್ಧಂತೇ ಅಪಿ ಯಂತಿ ದೇವ್ಯಮನ್ಯದ್ ವರ್ಪಃ ಪಿತ್ರೋಃ ಕೃಣ್ವತೇ ಸಚಾ

ಆ ಮಧ್ವನೇ (ಸ) ಕುಭಾಷ್ಯಗಳನ್ನು ಪುಡಿಗೈಯ್ಯಲು  ಸದ್ಭಾಷ್ಯಗಳನ್ನು ರಚಿಸುತ್ತಾನೆ. ಅಲ್ಲಿ ಮಧ್ವನು, ಕೆಲವೆಡೆ ಸಂಕ್ಷಿಪ್ತವಾಗಿ (ಸಂಸ್ತಿರಃ) ಕೆಲವೆಡೆ ವಿಸ್ತಾರವಾಗಿ (ವಿಷ್ಟಿರಃ) ಭಗವಂತನ ಭಾವವನ್ನು ತೆರೆದಿಡುತ್ತಾನೆ (ಸಂಗೃಭಾಯತಿ) ಸಂಕ್ಷೇಪವಿಸ್ತರಾಭ್ಯಾಂ ಹಿ ಪ್ರವದಂತಿ ಮನೀಷಿಣಃ ಅಲ್ಲವೇ!
ತನಗೆ ವೇದಾರ್ಥವೆಲ್ಲ ಚೆನ್ನಾಗಿ ತಿಳಿದಿದ್ದರೂ (ಜಾನನ್ನೇವ) ಸಾತ್ವಿಕಜೀವರ ಮೇಲಿನ ಕರುಣೆಯಿಂದ ಭಗವಂತನ ಗುಣಗಳನ್ನು ತಿಳಿಸುವ (ಜಾನತೀಃ) ವೇದಗಳಲ್ಲಿ ನಿತ್ಯವೂ (ನಿತ್ಯಂ) ವಿಹರಿಸುತ್ತಾನೆ (ಆಶೇತೇ).
ಅಪವ್ಯಾಖ್ಯಾನಗಳಿಂದ ಮುಚ್ಚಿಹೋಗಿದ್ದ ಸಚ್ಛಾಸ್ತ್ರಗಳ ಗಂಟು ಇವನ ನಲ್ನುಡಿಯಿಂದ ಮತ್ತೆ ಹೊಸಚೈತನ್ಯವನ್ನು ಪಡೆಯುತ್ತವೆ (ಪುನರ್ವರ್ಧಂತೇ). ತಮ್ಮ ನಿಜವಾದ ನೆಂಟನ ಬಳಿಸಾರುತ್ತವೆ (ಯಂತಿ ದೇವ್ಯಮ್). ನಮ್ಮ ತಂದೆಯಾದ ಪ್ರಾಣನಾರಾಯಣರ ಬೇರೆ ಬೇರೆ ಗುಣಗಳನ್ನು ಜೊತೆಯಾಗಿ ಆವಿಷ್ಕರಿಸಿ ತೋರುತ್ತವೆ (ಅನ್ಯದ್ ವರ್ಪಃ ಪಿತ್ರೋಃ ಕೃಣ್ವತೇ ಸಚಾ).

Thursday, March 7, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೬(೭)


ಐದನೇ ಮಂತ್ರ:
ತ್ವಂ ವಿಶ್ವಾ ದಧಿಷೇ ಕೇವಲಾನಿ ಯಾನ್ಯಾವಿರ್ಯಾ ಚ ಗುಹಾ ವಸೂನಿ  
ಕಾಮಮಿನ್ಮೇ ಮಘವನ್ ಮಾ ವಿ ತಾರಿಸ್ತ್ವಮಾಜ್ಞಾತಾ ತ್ವಮಿಂದ್ರಾಸಿ ದಾತಾ  

ಹೇ ಇಂದ್ರ (ಸರ್ವಾಂತರ್ಯಾಮಿ), ನೀನು (ತ್ವಂ) ಯಾವುವು ಕೇವಲ (ಯಾನಿ ಕೇವಲಾನಿ) ನಿನ್ನಿಂದ ಮಾತ್ರ ಕೊಡಲು ಶಕ್ಯವೋ (ವಿಶ್ವಾನಿ) ಅವುಗಳನ್ನು ನಿನ್ನ ಭಕ್ತರ ಪಾಲಿಗೆ ಪ್ರಕಟಗೊಳಿಸುವೆ (ಯಾನ್ಯಾವಿಃ). ಐಹಿಕವಾದ ಎಲ್ಲಾ ಭಾಗ್ಯಗಳನ್ನು ದಯಪಾಲಿಸುವೆ.
ಬೇಡಿದ ಭಕ್ತರಿಗೆ, (ಯಾನಿ) ಹೃದಯಗುಹೆಯಲ್ಲಿ (ಗುಹಾ) ಅವಿತಿರುವ ಬಿಂಬನ ಜ್ಞಾನವೆಂಬ ನಿಜ ಸಂಪತ್ತನ್ನು (ವಸೂನಿ) ಕೊಡುವೆ (ದಧಿಷೇ).
ಹೇ ಸಂಪತ್ತಿನ ಒಡೆಯ! (ಮಘವನ್), ನನ್ನ ಐಹಿಕ-ಆಮುಷ್ಮಿಕವಾದ ಎಲ್ಲಾ ಕಾಮವು (ಕಾಮಮಿನ್ಮೇ) ಯಾವುವೂ ಎಂದಿಗೂ ನಾಶಮಾಡದೆ ಕಾಪಿಡು (ಮಾ ವಿತಾರಿಃ).
ಭವದ ಹಾದಿಯಲ್ಲಿ ಏನೇನೋ ಆಸೆಗಳು, ಏನೇನೋ ಮೋಸಗಳು! ನನ್ನಪ್ಪ! ನೀನಲ್ಲವೇ ಅವೆಲ್ಲದುದರ ನಿಜವಾದ ಪ್ರೇರಕಶಕ್ತಿ! ನೀನಲ್ಲವೇ ನನ್ನಲ್ಲಿ ಇದ್ದು ಅವುಗಳನ್ನು ಬಯಸಿದ್ದು! (ತ್ವಮಾಜ್ಞಾತಾ) ನೀನೇ ಅಲ್ಲವೇ ಅವುಗಳನ್ನು ಕೊಡುವ ಕಾಲಕ್ಕೆ ಕೊಟ್ಟು ನನ್ನನ್ನು ಉದ್ಧರಿಸುವುದು! (ದಾತಾ)!

ಆರನೇ ಮಂತ್ರ:
ಯೋ ಅದಧಾಜ್ಜ್ಯೋತಿಷಿ ಜ್ಯೋತಿರಂತರ್ಯೋ ಅಸೃಜನ್ಮಧುನಾ ಸಂ ಮಧೂನಿ               
ಅಧ ಪ್ರಿಯಂ ಶೂಷಮಿಂದ್ರಾಯ ಮನ್ಮ ಬ್ರಹ್ಮಕೃತೋ ಬೃಹದುಕ್ಥಾದವಾಚಿ

ಬಲಜ್ಞಾನಸ್ವರೂಪನು (ಯೋ) ನೀನು ನನ್ನೊಳಗಷ್ಟೇ ತುಂಬಿಲ್ಲ ಸ್ವಾಮಿ! ಜ್ಯೋತಿಗಳ ರಾಜನಾದ ಸೂರ್ಯನೊಳಗಿದ್ದು ಅವನನ್ನು ಬೆಳಗಿಸುವೆ (ಅದಧಾಜ್ಜ್ಯೋತಿಷಿ ಜ್ಯೋತಿರಂತರ್ಯೋ). ದೀಪದಂತೆ ನಮಗೆ ಸಾಧನೆಯ ಹಾದಿದೋರುವ ವೇದಗಳ ಅಂತರಾರ್ಥದ ಆವಿಷ್ಕಾರದಿಂದ ಅವುಗಳಿಗೆ ಹೊಸಬೆಳಕನ್ನು ಇತ್ತೆ. ಮಧ್ವನಾಗಿ ಬಂದು, ಹೆಸರಿಗೆ ತಕ್ಕಂತೆ, ಮಧುರವಾದ ನುಡಿಗಳಿಂದ ವೇದವ್ಯಾಸನಿತ್ತ ಪ್ರಮೇಯಗಳೆಂಬ ಜೇನನ್ನು ಚಿಮ್ಮಿಸಿದೆ (ಅಸೃಜನ್ಮಧುನಾ ಸಂ ಮಧೂನಿ).
ಹೀಗೆ ಬಹುವಿಧದಿಂದ, ವೇದದೃಷ್ಟಾರನಾದ (ಬ್ರಹ್ಮಕೃತೋ) ಬೃಹದುಕ್ಥನೆಂಬ ನನ್ನಿಂದ ಇಂದ್ರನಾಮಕನಾದ ಪ್ರಾಣನಿಗೆ (ಇಂದ್ರಾಯ) ಅತ್ಯಂತ ಪ್ರಿಯವಾದ (ಪ್ರಿಯಂ) ಅಜ್ಞಾನವನ್ನು ಕರಗಿಸಿಬಿಡುವ (ಶೂಷಮ್) ಮನನೀಯವಾದ (ಮನ್ಮ) ಈ ಸ್ತುತಿಯು ಆಯಿತು (ಅವಾಚಿ).
ವೇದಗಳ ಅಂತರಾರ್ಥವನ್ನು ಬಲ್ಲ ಸಾತ್ವಿಕಜೀವರೆಲ್ಲರೂ ಬ್ರಹ್ಮಕೃತ್ಗಳೇ! ಬೃಹತ್ತಾದ ತತ್ವಗಳು ಮುಖ್ಯಪ್ರಾಣ ಹಾಗೂ ಅವನಂತರ್ಯಾಮಿಯು. ಅವರನ್ನು ತುತಿಸುವ ಮನುಜರೆಲ್ಲ ಬೃಹದುಕ್ಥರೇ!

Tuesday, March 5, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೬(೬)

ಮೂರನೇ ಮಂತ್ರ:
ಕ ಉ ನು ತೇ ಮಹಿಮನಃ ಸಮಸ್ಯಾಸ್ಮಾತ್ ಪೂರ್ವ ಋಷಯೋsನ್ತಮಾಪುಃ
ಯನ್ಮಾತರಂ ಚ ಪಿತರಂ ಚ ಸಾಕಮಜನಯಥಾಸ್ತನ್ವ: ಸ್ವಾಯಾ:

ನಿನ್ನ ಮಹಿಮೆಯನ್ನು (ಮಹಿಮನಃ) ಸಮಗ್ರವಾಗಿ (ಸಮಸ್ಯ) ನಮ್ಮ ಪೂರ್ವದ ಋಷಿಗಳಾದರೋ (ಅಸ್ಮಾತ್ ಋಷಯಃ) ಯಾರು ತಾನೇ ಬಲ್ಲರು! ಯಾರು ಸಂಪೂರ್ಣವಾಗಿ ಉಪಾಸಿಸಿರುವರು!?(ಕ ಉ)
ಯಾರೂ ಇಲ್ಲ ತಾನೇ! (ನು)
ನೀನು ನಮಗಾಗಿಯೇ, ಉಪಾಸನೆಯನ್ನು ಬಲಪಡಿಸಲೋಸುಗವೇ, ನಿನ್ನ ತಾಯಿಯಾದ ಶ್ರೀ (ಮಾತರಂ), ತಂದೆಯಾದ ಶ್ರೀರಮಣನ (ಪಿತರಮ್) ಜೊತೆಗೂಡಿ (ಸಾಕಂ), ಭುವಿಯಲ್ಲಿ ನಿನ್ನವತಾರರೂಪಗಳಿಂದ (ಸ್ವಾಯಾಸ್ತನ್ವಃ) ಪ್ರಾದುರ್ಭವಿಸುವೆ! (ಅಜನಯಥಾಃ) ನಿನ್ನ ಮಹಿಮೆಯನ್ನು ಪ್ರಕಟಿಸುವೆ!

ನಾಲ್ಕನೇ ಮಂತ್ರ:
ಚತ್ವಾರಿ ತೇ ಅಸುರ್ಯಾಣಿ ನಾಮಾದಾಭ್ಯಾನಿ ಮಹಿಷಸ್ಯ ಸಂತಿ
ತ್ವಮಂಗ ತಾನಿ ವಿಶ್ವಾನಿ ವಿತ್ಸೇ ಯೇಭಿಃ ಕರ್ಮಾಣಿ ಮಘವನ್ ಚಕರ್ಥ

ನಿನ್ನ ಬಿಂಬನಾಗಿ, ನಿನ್ನನ್ನು ಪ್ರೇರಿಸುವ, ನಿನ್ನ ನಿಯಾಮಕನಾದ (ಅಸುರ್ಯಾಣಿ)
((ಅಸುಂ ಪ್ರಾಣಂ ಯಾತಿ ನಿಯಮಯತಿ ಚ)) ಷಡ್ಗುಣಗಳಿಂದ ಮಹಿತನಾದ (ಮಹಿಷಸ್ಯ) ದೇಹನಾಶಾದಿ ದೋಷಗಳ ಸುಳಿವಿಲ್ಲದ (ಅದಾಭ್ಯಾನಿ) ನಾರಾಯಣನ ನಾಲ್ಕು ರೂಪಗಳಾದ (ಚತ್ವಾರಿ) ಅನಿರುದ್ಧ-ಪ್ರದ್ಯುಮ್ನ-ಸಂಕರ್ಷಣ-ವಾಸುದೇವವು ನಿನ್ನಲ್ಲಿ ಹಿರಿಸಂತಸದಿಂದ ತುಂಬಿಬಿಟ್ಟಿವೆ.
ನನ್ನ ಪ್ರೀತಿಯ ಓಡೆಯನೇ (ಅಂಗ, ಮಘವನ್), ಆ ನಿನ್ನ ಅಂತರ್ಯಾಮಿಯನ್ನು ನೀನೇ ಬಲ್ಲೆ (ತಾನಿ ವಿಶ್ವಾನಿ ವಿತ್ಸೇ) ಆ ಚತುರ್ವ್ಯೂಹನ ಪ್ರೇರಣೆಯಿಂದಲೇ ತಾನೇ ನೀನು ಸರ್ವವನ್ನೂ ಮಾಡುವಿ (ಯೇಭಿಃ ಕರ್ಮಾಣಿ ಚಕರ್ಥ)
ಅನಿರುದ್ಧ-ಪ್ರದ್ಯುಮ್ನ-ಸಂಕರ್ಷಣ-ವಾಸುದೇವನಿಗೆ ಅಧಿಷ್ಠಾನವಾದ ನಿನ್ನದೂ ನಾಲ್ಕು, ವಾಯು-ಪ್ರಾಣ-ಧಾರಣ-ಭಕ್ತಿ ಎಂಬ ರೂಪಗಳು ಸಾತ್ವಿಕರ ಹೃದಯದಲ್ಲಿ ತುಂಬಿವೆ.

Monday, March 4, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೬(೫)


ಮುಂದೆ, "ತಾಂ ಸು ತೇ ಕೀರ್ತಿಮ್", ಎಂದು ಆರಂಭವಾಗುವ ಆರು ಮಂತ್ರಗಳ ಸೂಕ್ತ. ಋಷಿ, ಬೃಹದುಕ್ಥ. ಛಂದಸ್ಸು, ತ್ರಿಷ್ಟುಪ್. ದೇವತೆ, ಇಂದ್ರನಾಮಕನಾದ ಮುಖ್ಯಪ್ರಾಣ.

ಮೊದಲ ಮಂತ್ರ :
ತಾಂ ಸು ತೇ ಕೀರ್ತಿಂ ಮಘವನ್ ಮಹಿತ್ವಾ ಯತ್ ತ್ವಾ ಭೀತೇ ರೋದಸೀ ಆಹ್ವಯೇತಾಮ್  
ಪ್ರಾವೋ ದೇವಾನ್ ಆತಿರೋ ದಾಸಮೋಜಃ ಪ್ರಜಾಯೈ ತ್ವಸ್ಯೈ ಯದಶಿಕ್ಷ ಇಂದ್ರ    

ಹೇ ಜಯಿಸುವ ದೇವನೇ (ಮಘವನ್), ಇಂದ್ರಿಯಗಳ ನಿಯಾಮಕನೇ (ಇಂದ್ರ), ಯಾವಾಗ (ಯತ್) ದುರ್ಜನರು ತಮ್ಮ ನಾಲಿಗೆಯನ್ನು ಹರಹಿ ಇಷ್ಟಬಂದಂತೆ ವೇದಗಳಿಗೆ ದುರರ್ಥಗಳನ್ನು ಹೇಳಿದರೋ, ಆವಾಗ, ಅಯ್ಯೋ! ನಮಗಿನ್ನಾರು ದಿಕ್ಕು ಎಂದು ಹೆದರಿ (ಭೀತೇ) ದೇವಲೋಕದಲ್ಲಿ ಸುರರು, ಭುವಿಯಲ್ಲಿ ಭೂಸುರರು (ರೋದಸೀ), ನಿನ್ನ ಅದ್ಭುತ ಕೀರ್ತಿಯನ್ನು (ಸುಕೀರ್ತಿಂ) ಪೂಜಿಸಿ (ಮಹಿತ್ವಾ) ಕೊಂಡಾಡಿದರು. ನಿನ್ನನ್ನು ಬೇಡಿದರು, ನಿಮ್ಮವರಾದ ನಮಗಾಗಿ ಮತ್ತೆ ಬಾ (ಆಹ್ವಯೇತಾಮ್). ಹುಟ್ಟಿಬಂದು, ಸಾತ್ವಿಕರಾದ ನಮ್ಮನ್ನು ಕಾಪಾಡು (ದೇವಾನ್ ಪ್ರಾವಃ). ಭಗವಂತನ ನಲ್ಗುಣಗಳನ್ನು ಕದ್ದು ಬೀಗುವ (ದಾಸ) ದುರುಳರನ್ನು ನಾಶಮಾಡು (ಆತಿರಃ). ಹನಮನಾಗಿ ರಾವಣನವರನ್ನು, ಭೀಮನಾಗಿ ಕೌರವರನ್ನು, ಮಧ್ವನಾಗಿ ಮಾಯಿಗಳನ್ನು.
ಅವರನ್ನು ತರಿದು, ಬೇಡಿಬಂದ ಸುಜನರಿಗೆ (ಪ್ರಜಾಯೈ ತ್ವಸ್ಯೈ) ಓಜಸ್ಸನ್ನು, ಭಗವಂತನನ್ನು ಕಾಣುವ ಸಾತ್ವಿಕಸಾಮರ್ಥ್ಯವನ್ನು (ಓಜಃ) ಉಪದೇಶಿಸು (ಶಿಕ್ಷಃ).
ನಿನ್ನನ್ನು ಆಹ್ವಾನಿಸಿ, ನೀನು ಕಲಿಸಿದ ಆತ್ಮದ ಪಾಠವನ್ನು ಚೆನ್ನಾಗಿ ಅರಿತು ನಿನ್ನನ್ನು ಮತ್ತೂ ಕೀರ್ತಿಸುತ್ತೇವೆ.

ಎರಡನೇ ಮಂತ್ರ:
ಯದಚರಸ್ತನ್ವಾ ವಾವೃಧಾನೋ ಬಲಾನೀಂದ್ರ ಪ್ರಬ್ರುವಾಣೋ ಜನೇಷು     
ಮಾಯೇತ್ ಸಾ ತೇ ಯಾನಿ ಯುದ್ಧಾನ್ಯಾಹುರ್ನಾದ್ಯ ಶತ್ರುಂ ನನು ಪುರಾ ವಿವಿತ್ಸೇ  

ಹೇ ಇಂದ್ರ, ಸರ್ವಸಮರ್ಥ, ಲೋಕದ ಕಣ್ಣಿಗೆ ಬೆಳೆದು (ವಾವೃಧಾನೋ) ಏನೇನು ಮಾಡಿದೆ ನೀನು!! (ಯದಚರಃ) ಆಹಾ! ಸಮುದ್ರದಾಟುವಲ್ಲಿ ಶರೀರದಿಂದ ಬೆಳೆದೆ. ಯುದ್ಧಭೂಮಿಯಲ್ಲಿ ಬಲರೂಪನಾಗಿ ಬೆಳೆದೆ. ವಾದದಲ್ಲಿ ಜ್ಞಾನರೂಪನಾಗಿ ಬೆಳಗಿದೆ. ನಿನ್ನವನಾದ, ನಿನ್ನ ಶಕ್ತಿಯಾದ, ನಿನ್ನ ಒಳಗಿನ ಬಲ (ಬಲಾನಿ), ಅದು ನಾರಾಯಣ! ಅವನನ್ನು ಜನರೆಲ್ಲರೂ (ಜನೇಷು) ತಿಳಿವಂತೆ ಸಾರಿ ಹೇಳಿದೆ (ಪ್ರಬ್ರುವಾಣಃ)
ಅಥವಾ
ನಿನ್ನ ಬಲವದು ಎಂಥಾದ್ದು ಎಂದು ಜನರಿಗೆ ಸಾರಿ ಹೇಳಿದೆ!
"ನಿಹಂತಾ ಶತ್ರುಸೈನ್ಯಾನಾಂ", "ಜರಢಸ್ಯ ಸುತಾ ಹತಾಃ", "ಯಸ್ಯ ತ್ರೀಣ್ಯುದಿತಾನಿ", ಇತ್ಯಾದಿಯಾಗಿ.
ನೀನು ಶತ್ರುಗಳನ್ನು ಗೆದ್ದದ್ದು (ಯುದ್ಧಾನಿ) ಎಂದು ಜನರಾಡುವುದು (ಆಹುಃ) ಒಂದು ಮೋಜು ಅಲ್ಲವೇ! (ಸಾ ಮಾಯೇತ್ ನನು) ಹೇಗೆ?
ನಿನಗೆ ಸಮನಾದ ಒಬ್ಬ ಎದುರಾಳಿಯು ಹಿಂದೆ ಯಾರಿದ್ದರು?!(ಪುರಾ) ಈಗಂತೂ ಇಲ್ಲ (ನಾದ್ಯ) ಎಂದೇ ನೀನು ಕಂಡಿರುವೆ (ವಿವಿತ್ಸೇ).
ಸಮಾನರಾದವರಲ್ಲಿ ಯುದ್ಧ. ನಿನಗೆ ಸಮನಾದ ಇನ್ನೊಬ್ಬ ಯೋದ್ಧಾ ಬ್ರಹ್ಮಾಂಡದಲ್ಲಿ ಎಲ್ಲಿರುವ? ನೀನು ಮಾಡಿದ ಯುದ್ಧವು ಒಂದು ಮೋಜು ಅಷ್ಟೇ!   

Sunday, February 3, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೬(೪)

ನಾಲ್ಕನೇ ಮಂತ್ರ -
ಪ್ರ ಯತ್ ಪಿತುಃ ಪರಮಾನ್ನೀಯತೇ ಪರ್ಯಾ ಪೃಕ್ಷುಧೋ ವೀರುಧೋ ದಂಸು ರೋಹತಿ    
ಉಭಾ ಯದಸ್ಯ ಜನುಷಂ ಯದಿನ್ವತ ಆದಿದ್ ಯವಿಷ್ಠೋ ಅಭವದ್ ಘೃಣಾ ಶುಚಿ:

ಇವನು ತನ್ನ ಹಡೆದ ತಂದೆಯಾದ (ಪಿತುಃ) ಸರ್ವೋತ್ತಮನ ದೆಸೆಯಿಂದ (ಪರಮಾತ್) ನಡೆಯುತ್ತಾನೆ, (ಪ್ರಣೀಯತೇ) ದೇಶ ದೇಶಗಳನ್ನು ಮಧ್ವನಾಗಿ ಸಂಚರಿಸುತ್ತಾನೆ. ತಂದೆಯ ಆಜ್ಞೆಯಂತೆ ನಡೆಯುತ್ತಾನೆ. ಅಲ್ಲಿ, ಎದುರಾಳಿಗಳು ಗೆಲ್ಲಬಯಸಿ ಒಡ್ಡುವ ಪ್ರಶ್ನೆಗಳನ್ನು (ಪೃಕ್ಷುಧೋ) ನಸೆಬಳ್ಳಿಯಂತೆ (ವೀರುಧೋ) ಹಲ್ಲುಗಳಲ್ಲಿ (ದಂಸು) ಇಟ್ಟು ಜಗಿದುಬಿಡುತ್ತಾನೆ (ಪರ್ಯಾರೋಹತಿ). ಪ್ರತಿವಾದಿಗಳನ್ನು ಅನಾಯಾಸವಾಗಿ ಗೆಲ್ಲುತ್ತಾನೆ ಎಂದು ಅರ್ಥ.
ಹಿಂದಿನ ಮಂತ್ರದಲ್ಲಿ ಇವನನ್ನು ವೃಷಭನೆಂದು ಕರೆದ ವೇದಪುರುಷ.
ವೃಷಭ ಎಂದರೆ, ಎತ್ತು. ಅದರ ನೆಲೆಯಲ್ಲೇ ಈ ಮಂತ್ರ ಹೀಗೆ ಹೇಳುತ್ತಿದೆ. ಈ ನಾರಾಯಣನ ಎತ್ತು, ಎಲ್ಲರನ್ನೂ ಎತ್ತಲೆಂದೆ ಬಂದ ಎತ್ತು, ತಂದೆಯಾದ ದೊಡೆತ್ತನ್ನು ಅನುಸರಿಸುವ ಎತ್ತು, ಬಂದ ಎದುರಾಳಿಗಳು ಎಸೆವ ಪ್ರಶ್ನೆಗಳೆಂಬ ತೆಳುವಲ್ಲಿಗಳನ್ನು ಮಾತ್ರ ಆರಾಮವಾಗಿ ಹಲ್ಲುಗಳಲ್ಲಿ ಇಟ್ಟು ಜಗಿದುಬಿಡುತ್ತದೆ.

ಇವನನ್ನು ನಡಿಲ್ಲಾಯದಂಪತಿಗಳಲ್ಲಿ ಇದ್ದು ಹುಟ್ಟಿಸಿದ (ಯದಸ್ಯ ಜನುಷಂ) ಆ ಎರಡು ಪರಶಕ್ತಿಗಳು, ಲಕ್ಷ್ಮೀ ನಾರಾಯಣರು (ಉಭಾ) ಇವನಲ್ಲಿ ಚೆನ್ನಾಗಿ ತುಂಬಿಬಿಟ್ಟಿದ್ದಾರೆ (ಇನ್ವತಃ) ಇವನೇ ಅವರ ಪ್ರೀತಿಯ ಮುಖ್ಯಾಧಿಷ್ಠಾನ ಅಲ್ಲವೇ!!
ಆದ್ದರಿಂದಲೇ (ಆದಿದ್) ಅವತಾರಗಳಲ್ಲಿ ಕಡೆಯದಾದ, ಸದಾ ನವತರುಣನಾದ (ಯವಿಷ್ಠೋ) ಮಧ್ವನು, ಸಜ್ಜನರ ಮೇಲೆ ಬಹಳ ಕರುಣೆಯುಳ್ಳವನಾದನು, ಒಳಗಿನ ಕತ್ತಲನ್ನು ಓಡಿಸುವ ಬೆಳಕಾದನು (ಘೃಣಾ) ಕಲಿಯುಗದ ಅಂಟಿಲ್ಲದೇ ಶುಚಿಯಾಗಿ ಇದ್ದನು (ಶುಚಿಃ) , ಸಾತ್ವಿಕರ ಕಲಿಮಲವನ್ನು ತೊಳೆದನು.

ಐದನೇ ಮಂತ್ರ -
ಆದೀನ್ಮಾತೃರಾವಿಶದ್ಯಾಸ್ವಾಶುಚಿರಹಿಮ್ಸ್ಯಮನ ಉರ್ವಿಯಾ ವಿವಾವೃಧೇ    
ಅನುಯತ್ಪೂರ್ವಾ ಅರುಹತ್ ಸನಾಜುವೋ ನಿನವ್ಯಾಸೀಷ್ವವರಾಸುಧಾವತೇ

ತಂದೆಯಾದ ನಾರಾಯಣನಿಂದಲೆ (ಆದೀದ್) ಸಪ್ತಮಾತೃಗಳಾದ ವಿದ್ಯೆಗಳಲ್ಲಿ, ಹಡೆದ ಅಂಜನಾ, ಕುಂತಿ, ನಡಿಲ್ಲಾಯ ಪತ್ನಿಯರಲ್ಲಿ (ಮಾತೃ) ಪ್ರವೇಶಿಸುತ್ತಾನೆ (ಆವಿಶದ್). ಹಾಗೆ ಮಣ್ಣಿನ ಹೆಣ್ಣುಗಳಲ್ಲಿ ಹೊಕ್ಕರೂ, ಸದಾ ಶುಚಿಯಾಗಿ ಇರುತ್ತಾನೆ (ಆಶುಚಿಃ). ವಿದ್ಯೆಗಳಲ್ಲಿ ಹೊಕ್ಕು ಅದರ ಅಪೂರ್ವಾರ್ಥಗಳನ್ನು ಬೆಳಗಿಸುತ್ತಾನೆ. ಹುಟ್ಟಿಬಂದವನಾದರು ಗರ್ಭವಾಸದ ಹಿಂಸೆಯಿಲ್ಲದವನು (ಆಹಿಂಸ್ಯಮಾನಃ), ವಿದ್ಯೆಗಳಲ್ಲಿ ಪರರಿಂದ ಸೋಲಿಸಬೇಕೆಂದು ಹಿಂಸಿಸಲ್ಪಟ್ಟರೂ ಅವರನ್ನು ಗೆದೆಯುವನು, ಮೂರು ಅವತಾರಗಳಲ್ಲಿ ವೈರಿಗಳಿಂದ ಹಿಂಸೆಗೊಳಗಾದರೂ, ನಿರ್ವಿಕಾರನಾಗಿಯೆ ಎಲ್ಲರನ್ನೂ ಮೀರಿಸಿ ನಿಲ್ಲುತ್ತಾನೆ (ಉರ್ವಿಯಾ ವಿವಾವೃಧೇ), ಜ್ಞಾನದಿಂದ, ಬಲದಿಂದ ಎಲ್ಲರನ್ನೂ ಮೀರಿ ಬೆಳೆಯುತ್ತಾನೆ.

'ತ್ರಿಷ್ವಪಿ ಏವಾವತಾರೇಷು’ ಎಂಬ ವಾಯುಸ್ತುತಿಯ ನುಡಿಯನ್ನು ಇಲ್ಲಿ ಸ್ಮರಿಸಬೇಕು.
ಹೀಗೆ ಸದಾ ಭಗವಂತನನ್ನೇ ಪ್ರತಿಪಾದಿಸುವ(ಸನಾಜುವಃ), ಪ್ರಾಚೀನವಾದ (ಪೂರ್ವಾ) ಪರವಿದ್ಯೆಗಳನ್ನು ನಿಜವಾಖ್ಯಾನದಿಂದ ಏರುತ್ತಾನೆ (ಅನು ಆರೋಹತಿ), ಚೆನ್ನಾಗಿ ವಿಮರ್ಶಿಸುತ್ತಾನೆ.
ಅರ್ವಾಚೀನಗಳಾದ (ನವ್ಯಾಸು) ಕಾವ್ಯ, ವ್ಯಾಕರಣ ಮುಂತಾದ ಅಪರವಿದ್ಯೆಗಳಲ್ಲಿ (ಅವರಾಸು) ಅನಾಯಾಸವಾಗಿ ಓಡುತ್ತಾನೆ, (ನಿಧಾವತೇ), ಬೇಗನೆ ದಣಿವಿಲ್ಲದೆ  ವಿವರಿಸುತ್ತಾನೆ.

Tuesday, January 29, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೬(೩)

ಎಡರನೇ ಮಂತ್ರ -
ಪೃಕ್ಷೋ ವಪುಃ ಪಿತುಮಾನ್ ನಿತ್ಯ ಆ ಶಯೇ ದ್ವಿತೀಯಮಾ ಸಪ್ತಶಿವಾಸು   ಮಾತೃಷು 
ತೃತೀಯಮಸ್ಯ ವೃಷಭಸ್ಯ ದೋಹಸೇ ದಶಪ್ರಮತಿಂ ಜನಯಂತ ಯೋಷಣಃ

(ಪೃಕ್ಷೋ) ಸೈನ್ಯಸೈನ್ಯಯಗಳನ್ನೇ ತಲೆಕೆಳಗೆ ಮಾಡುವವ, (ಪಿತುಮಾನ್) ಬಕಾಸುರನ ವಧೆಯ ಕಾಲದಲ್ಲಿ ಬಂಡಿ ಅನ್ನವನ್ನು ಉಂಡವ, (ದ್ವಿತೀಯಂ ವಪುಃ)ಎರಡನೇ ಅವತಾರ, ಭೀಮಸೇನ!!
ಅವನು, ಭಗವಂತನಿಂದ ಪ್ರೇರಿತನಾಗಿ (ನಿತ್ಯ) ಏಳು ಪಾವನವಾದ ವಿದ್ಯೆಗಳಲ್ಲಿ (ಸಪ್ತ ಶಿವಾಸು ಮಾತೃಷು) ಆರಾಮವಾಗಿ ವಿಹರಿಸುವವ (ಆ ಶಯೇ). ಯಾವುವು ಆ ಏಳು ವಿದ್ಯೆಗಳು?
ನಾಲ್ಕು ವೇದಗಳು, ಮಹಾಭಾರತ -ರಾಮಾಯಣಗಳೆಂಬ ಇತಿಹಾಸಗಳು, ಪಂಚರಾತ್ರ ಹಾಗೂ ಪುರಾಣಗಳು.
ಅಥವಾ ನಿತ್ಯವೂ, ರಣರಂಗದಲ್ಲಿ ಆರಾಮವಾಗಿ ಶತ್ರುಗಳನ್ನು ಸದೆದು ವಿಹರಿಸುವವ. ಪಾಂಡಿತ್ಯೇ ಚ ಪಟುತ್ವೇ ಚ ಶೂರತ್ವೇ ಅಪಿ ಬಲೇ ಅಪಿಚ ಭೀಮಸೇನಸಮೋ ನಾಸ್ತಿ", ಎಂಬ ಮಾತು ಲೋಕಜನೀನವೆ ಆಗಿದೆ.
ಇನ್ನು, ಅದೇ ಏಳು ವಿದ್ಯೆಗಳಲ್ಲಿ ನುರಿತ, ದೇವತೆಗಳ ಒಡೆಯನಾದ (ವೃಷಭಸ್ಯ) ಇವನ ಮೂರನೇ ಅವತಾರವನ್ನು (ತೃತೀಯಮ್) ದಶಪ್ರಮತಿ ಎಂದು ಕರೆಯುತ್ತಾರೆ. ಇವನನ್ನೇ ಜ್ಞಾನದ ದೋಹನಕ್ಕಾಗಿ (ದೋಹಸೇ) ವೇದಮಾನಿನಿಯರು ಹಡೆದರು (ಜನಯಂತ ಯೋಷಣಃ) ಇವರೇ, ನಡಿಲ್ಲಾಯರ ಪತ್ನಿಯಲ್ಲಿ ಸನ್ನಿಹಿತರಾಗಿ ಮಧ್ವನನ್ನು ಹಡೆದರು, ಜಗತ್ತಿಗಿತ್ತರು.
ನಾರಾಯಣಪಂಡಿತರೇ ಮುಂದೆ ಹೇಳುತ್ತಾರೆ, ಶ್ರೀ-ಶ್ರೀಧರ-ಪ್ರತತಿ-ಶಾರ-ಶರೀರ-ಯಷ್ಟಿ ಎಂದು.

ಮೂರನೇ ಮಂತ್ರ -
ನಿರ್ಯದೀಂ ಬುಧ್ನಾನ್ಮಹಿಷಸ್ಯ ವರ್ಪಸ ಈಶಾನಾಸ: ಶವಸಾ ಕ್ರಂತ ಸೂರಯಃ
ಯದೀಮನು ಪ್ರದಿವೋ ಮಧ್ವ ಆಧವೇ ಗುಹಾ ಸಂತಂ ಮಾತರಿಶ್ವಾ ಮಥಾಯತಿ

ಈ ಯಾವ ವೇದಮಾತೆಯ ಕುವರನಿಂದ, ಎಂಥವನಿಂದ? ಜ್ಞಾನವನ್ನು ಬೋಧಿಸುವವನಿಂದ (ಬುಧ್ನಾತ್) ಸರ್ವೋತ್ಕೃಷ್ಟನಾದ, ಮಹಿತನಾದ ಭಗವಂತನ (ಮಹಿಷಸ್ಯ) ಗುಣಗಳನ್ನು (ವರ್ಪಸ:) ಸುಲಭವಾಗಿ (ಶವಸಾ) ಶಿವನೇ ಮೊದಲಾದ ಜ್ಞಾನಿಗಳು (ಈಶಾನಾಸ: ಸೂರಯಃ) ನಿಶ್ಚಯವಾಗಿ ತಿಳಿದವರಾದರೋ (ನಿಃಕ್ರಂತ) , ಅಂಥಾ ಇವನು (ಯದೀಮ್) ಪೂರ್ಣಪ್ರಜ್ಞನು (ಪ್ರದಿವಃ) ಭಗವಂತನಲ್ಲಿ ಸದಾ ಗಮನವುಳ್ಳವನು, ಭಗವಂತನೆಡೆಗೆ ಸಾಧಕರನ್ನು ಕರೆದೊಯ್ಯುವವನು (ಮಾತರಿಶ್ವಾ) ಮಧ್ವನಾಗಿ ಭುವಿಯಲ್ಲಿ ಬಂದು, ಎಲ್ಲಾ ಸಜ್ಜನರ ಹೃದಯಗುಹೆಯಲ್ಲಿ ಇರುವ ಸರ್ವೋತ್ತಮನನ್ನು (ಆಧವೇ) ಕಡೆದು ಒಳಗೇ ದರ್ಶನ ಮಾಡಿಸುತ್ತಾನೆ. (ಗುಹಾ ಸಂತಂ ಮಥಾಯತಿ) ಅಥವಾ ವೇದಗಳೆಂಬ ಹಾಲ್ಗಡಲನ್ನು ವ್ಯಾಖ್ಯಾನವೆಂಬ ಕಡೆಗೊಲಿನಿಂದ ಮಥಿಸಿ, ಭಗವಂತನ ಸರ್ವೋತ್ತಮತ್ವಜ್ಞಾನವೆಂಬ ಅಮೃತವನ್ನು ಜಗತ್ತಿಗೆ ಉಣಿಸುತ್ತನೆ.