ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Sunday, August 11, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೨೪


ಪ್ರೇಷ್ಠೋ ನ ರಾಮಸ್ಯ ಬಭೂವ ತಸ್ಮಾನ್ನ ರಾಮ-ರಾಜ್ಯೇsಸುಲಭಂ ಚ ಕಿಂಚಿತ್
ತತ್ಪಾದ-ಸೇವಾ-ರತಿರೇಷ ನೈಚ್ಛತ್ ತಥಾsಪಿ ಭೋಗಾನ್ ನನು ಸಾ ವಿರಕ್ತಿಃ ೦೧.೨೪

ರಾಮನಿಗೆ ಇವನಿಗಿಂತ ನೆಚ್ಚಾದ ಮತ್ತೊಬ್ಬ ಭಕ್ತನಿರಲಿಲ್ಲ. ರಾಮನಾಳಿದ ನಾಡಿನಲ್ಲಿ ದುರ್ಲಭವಾದುದೂ ಯಾವುದೂ ಇರಲಿಲ್ಲ. ಆದರೂ ಈತ ತನ್ನೊಡೆಯನ ಪಾದಸೇವೆಯ ಸುಖವನ್ನು ಬಿಟ್ಟು ಮತ್ತೇನನ್ನೂ ಬಯಸಲಿಲ್ಲ. ಇದಲ್ಲವೇ ನಿಜವಾದ ವೈರಾಗ್ಯ!!

ರಾಮನಿಗೆ ಇವನಿಗಿಂತ ಪ್ರಿಯನಾದ ಮತ್ತೊಬ್ಬನಿರಲಿಲ್ಲ ಎಂದರೇ, ಸೀತೆಯನ್ನು ಹೊರತುಪಡಿಸಿ, ಇರಲಿಲ್ಲ, ಎಂದು ತಿಳಿಯಬೇಕು. ಅನಾದಿಕಾಲದಿಂದಲೂ ಇವಳನ್ನು ಬಿಡದೆ ತನ್ನೆದೆ ಮೇಲೆ ಹೊತ್ತು, ತನ್ನನ್ನೇ ಇತ್ತು, ಪತ್ನಿಯಾಗಿ ಸ್ವೀಕರಿಸಿ ಜಗತ್ತಿನ ಬಂಡಿಯನ್ನು ಇವಳೊಂದಿಗೆ ಸೇರಿ ತಾನೇ ನಡೆಸುವನು ಈ ಪುರುಷೋತ್ತಮ ಶ್ರೀರಾಮ.

ರಾಮರಾಜ್ಯದಲ್ಲಿ ಸಿಗದ ವಸ್ತುವೇ ಇರಲಿಲ್ಲ, ಎಂದ ಕವಿ. ಹೇಗಿತ್ತು ರಾಮನ ರಾಜ್ಯ?
ಹನುಮನ ಮುಖದಿಂದಲೇ ಕೇಳಿ:

ಪ್ರಶಾಸತೀಶೇ ಪೃಥವೀ ಬಭೂವ ವಿರಿಂಚಲೋಕಸ್ಯ ಸಮಾ ಗುಣೋನ್ನತೌ
ಸ್ವಾಮೀ ರಾಮನು ಆಳಿದ ಆ ರಾಜ್ಯ, ಬ್ರಹ್ಮನ ಲೋಕವನ್ನು ಸರಿಗಟ್ಟುವಂತಿತ್ತು.

ಸಮಸ್ತ-ರೋಗಾದಿಭಿರುಜ್ಝಿತಾಶ್ಚ ಸರ್ವೇ ಸಹಸ್ರಾಯುಷ ಊರ್ಜಿತಾ ಧನೈಃ
ಯಾರಿಗೂ ದೇಹದ ಹಾಗೂ ಮನಸ್ಸಿನ ರೋಗಗಳಿರಲಿಲ್ಲ. ಎಲ್ಲರೂ ಬಾಳುತ್ತಿದ್ದರು ಸಾವಿರ ವರ್ಷಗಳ ಬಾಳನ್ನು. ಎಲ್ಲರೂ ಹಣವಂತರೇ.

ಸರ್ವೇsಜರಾ ನಿತ್ಯಬಲೋಪಪನ್ನಾ ಯಥೇಷ್ಟಸಿದ್ಧ್ಯಾ ಚ ಸದೋಪಪನ್ನಾ
ಸಮಸ್ತದೋಷೈಃ ಸದಾ ವಿಹೀನಾಃ ಸರ್ವೇ ಸುರೂಪಾಶ್ಚ ಸದಾ ಮಹೋತ್ಸವಾಃ
ಎಲ್ಲರೂ ಮುಪ್ಪಿಲ್ಲದವರೇ, ಅದರಿಂದ ಉಂಟಾಗುವ ಅಂಗವೈಕಲ್ಯವಿಲ್ಲದವರು. ಬಲದಿಂದ ಕೂಡಿದವರು. ಅವರವರಿಗೆ ಲಭಿಸಿದ ಸಿದ್ಧಿಯಿಂದ ನಿತ್ಯವೂ ಎಲ್ಲವನ್ನೂ ಹೊಂದಿದವರು.
ಯಾವ ದೋಷಗಳಿಲ್ಲದ, ಸುಂದರರಾದ, ನಿತ್ಯೋತ್ಸವದ ಜನರು, ಅಯೋಧ್ಯೆಯವರು.

ಸರ್ವೇ ಮನೋವಾಕ್ತನುಭಿಸ್ಸದೈವ ವಿಷ್ಣುಂ ಯಜಂತೇ ನತು ಕಂಚಿದನ್ಯಮ್
ಸಮಸ್ತರತ್ನೋದ್ಭರಿತಾ ಚ ಪೃಥ್ವೀ ಯಥೇಷ್ಟಧಾನ್ಯಾ ಬಹುದುಗ್ಧಗೋಮತೀ
ಎಲ್ಲರೂ ದಿನವೂ ಮನಸ್ಸು ಮಾತು ತನುಗಳನ್ನು ವಿಷ್ಣುವಿನಲ್ಲೇ ಇರಿಸಿ ಜೀವನಯಜ್ಞವನ್ನು ಆಚರಿಸುವವರು. ಬೇರೆ ದೇವತೆಗಳನ್ನು ಸರ್ವೋತ್ತಮರೆಂದು ಎಂದೂ ತಿಳಿಯದ ತತ್ವಜ್ಞರು.
ಸಮಸ್ತಸಂಪತ್ತುಗಳ ಆಗರ, ಬೇಕಾದಷ್ಟು ಬಾರಿ ಫಲವೀವ ಭೂಮಿ.
ಕೆಚ್ಚಲಲ್ಲಿ ಇಲ್ಲವೆನಿಸದಷ್ಟು ಹಾಲು ಕರೆವ ಗೋವುಗಳು.

ನ ಕಸ್ಯಚಿದ್ ದುಃಖಮಭೂತ್ ಕಥಂಚಿನ್ನ ವಿತ್ತಹೀನಶ್ಚ ಬಭೂವ ಕಶ್ಚನ
ನಾಧರ್ಮಶೀಲೋ ನಚ ಕಶ್ಚನಾಪ್ರಜೋ ನ ದುಷ್ಪ್ರಜೋ ನೈವ ಕುಭಾರ್ಯಕಶ್ಚ 
ಯಾರಿಗೂ, ಯಾವ ರೀತಿಯಿಂದಲೂ ನೋವಿನ ಬಾಧೆಯಿರಲಿಲ್ಲ.
ಯಾವನೂ ಯಾವವಿಧದಿಂದಲೂ ಇರುವ ಸಂಪತ್ತನ್ನು ಕಳಕೊಳ್ಳುತ್ತಿರಲಿಲ್ಲ.
ಯಾವನೂ ಧರ್ಮಮಾರ್ಗವನ್ನು ಬಿಟ್ಟು ಬಾಳುತ್ತಿರಲಿಲ್ಲ. ಮಕ್ಕಳಿಲ್ಲದೆ ಯಾರೂ ಕೊರಗುತ್ತಿರಲಿಲ್ಲ. ಕೆಟ್ಟ ಮಕ್ಕಳು, ಕೆಟ್ಟ ಹೆಂಡತಿ, ಕೆಟ್ಟ ಗಂಡ ಎಂಬ ವೈಮನಸ್ಯ ಯಾರಿಗೂ ಇರಲಿಲ್ಲ.

ಯಥೇಷ್ಟಮಾಲ್ಯಾಭರಾಣುಲೇಪನಾ ಯಥೇಷ್ಟಪಾನಾಶನವಾಸಸೋsಖಿಲಾಃ
ಬೇಕಾದಷ್ಟು ಆಭರಣಗಳನ್ನು ತೊಟ್ಟು, ಗಂಧವನ್ನು ಪೂಸಿ, ಇಷ್ಟವಿದ್ದಷ್ಟು ಕುಡಿದು, ತಿಂದು, ಉಟ್ಟು ಮೆರೆವವರು ಅಯೋಧ್ಯೆಯ ನಾಡಿಗರು.

ಇಂಥಾ ರಾಜ್ಯದಲ್ಲಿ ಇದ್ದೂ, ರಾಜನಿಗೆ ಅತ್ಯಂತಪ್ರೀತಿಪಾತ್ರನಾಗಿದ್ದರೂ ಈ ಯಾವುದನ್ನೂ ಬಯಸದೇ, ಕೇವಲ ರಾಮನಲ್ಲಿ ಭಕ್ತಿಯನ್ನು ಬೇಡಿ ಪಡೆದನು. ವಿರಕ್ತಿಗೆ ಇವನಲ್ಲವೇ ದೃಷ್ಟಾಂತ! 
ಎಲ್ಲವೂ ಇದ್ದಾಗಲೂ ತೊರೆದು ಮೀರಿನಿಲ್ಲುವುದು ವಿರಕ್ತಿ. ಏನಿಲ್ಲದಿದ್ದಾಗ ತೊರೆದಂತೆ ತೋರುವದಲ್ಲ.

ಛಂದಸ್ಸು ಭದ್ರಾ ಎಂಬ ಉಪಜಾತಿಯ ಪ್ರಬೇಧ.
ರಾಮಭದ್ರನಲ್ಲಿ ಕಡೆವರೆಗೂ ಭದ್ರವಾಗಿ ಉಳಿವ ಭಕ್ತಿಯೊಂದನ್ನೇ ಬೇಡು. ಮಿಕ್ಕ ಎಲ್ಲವನ್ನೂ ಅಭದ್ರವೆಂದು ಬಗೆದು ಬಿಡು ಎಂಬ ಸಂಕೇತ.

No comments:

Post a Comment