ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Wednesday, August 14, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೨೭


ಸ್ವಾನಂದ-ಹೇತೌ ಭಜತಾಂ ಜನಾನಾಂ ಮಗ್ನಃ ಸದಾ ರಾಮ-ಕಥಾ-ಸುಧಾಯಾಮ್
ಅಸಾವಿದಾನೀಂ ಚ ನಿಷೇವಮಾಣೋ ರಾಮಂ ಪತಿಂ ಕಿಂಪುರುಷೇ ಕಿಲಾsಸ್ತೇ ೦೧.೨೭

ಈಗಲೂ ಇವನು ಸೇವಿಸುತ್ತಾ ನೆಲೆಸಿರುವನಲ್ಲವೇ ತನ್ನೊಡೆಯನಾದ ರಾಮನನ್ನು ಕಿಂಪುರುಷ ಖಂಡದಲ್ಲಿ! ಭಜಿಸುವ ಭಕುತರಿಗೆ ಸ್ವಾನಂದಾವಿರ್ಭಾವರೂಪವಾದ ಮುಕ್ತಿಯನ್ನೀವ ರಾಮನ ಕಥೆಯೆಂಬ ಸೊದೆಯಲ್ಲಿ ಮೀಯುತ್ತ! 
ರಾಮಾವತಾರವು ಸಮಾಪ್ತಿಯಾದ ತರುವಾಯ, ಇವನು ನಡೆದದ್ದು ಬದರಿಗೆ.

ಮರುತ್ಸುತೋsಥೋ ಬದರೀಮವಾಪ್ಯ ನಾರಾಯಣಸ್ಯೈವ ಪದಂ ಸಿಷೇವೇ
ಮಾರುತಿಯ ಕುವರ ತಾನು ಬದರಿಯನ್ನು ಸೇರಿ, ಅಲ್ಲಿ ನಾರಾಯಣನ ಪಾದವನ್ನು ಸೇವಿಸಿದ.

ಸಮಸ್ತಶಾಸ್ತ್ರೋದ್ಭರಿತಂ ಹರೇರ್ವಚೋ ಮುದಾ ತದಾ ಶ್ರೋತ್ರಪುಟೇನ ಸಂಭರನ್
ವದನ್ಶ್ಚ ತತ್ವಂ ವಿಬುಧರ್ಷಭಾಣಾಂ ಸದಾ ಮುನೀನಾಂ ಚ ಸುಖಂ ಹ್ಯುವಾಸ
ಅಲ್ಲಿ, ನಾರಾಯಣನ ಮುಖದಿಂದ ಸರ್ವಜ್ಞನಾದರೂ ಲೋಕಶಿಕ್ಷಣಕ್ಕೆ ಮತ್ತೂ ಮತ್ತೂ ಸಮಸ್ತಶಾಸ್ತ್ರವನ್ನು ಕಿವಿಯಲ್ಲಿ ತುಂಬಿಕೊಂಡು, ಅಲ್ಲಿದ್ದ ಋಷಿಗಳಿಗೆ ನಿರಂತರ ತತ್ವವನ್ನುಪದೇಶಿಸುತ್ತ ಸುಖದಿಂದ ಇದ್ದ.

ರಾಮನ ಆಜ್ಞೆಯಂತೆ ಇನ್ನೊಂದು ರೂಪದಿಂದ ಕಿಂಪುರುಷಖಂಡದಲ್ಲಿ ನೆಲೆನಿಂತ,
ರಾಮಾಜ್ಞಯಾ ಕಿಂಪುರುಷೇ ರಾಜ್ಯಂ ಚಕಾರ ರೂಪೇಣ ತಥಾsಪರೇಣ
ಅಲ್ಲಿ,
ಇತ್ಥಂ ಸ ಗಾಯಞ್ಛತಕೋಟಿ ವಿಸ್ತರಂ ರಾಮಾಯಣಂ ಭಾರತಪಞ್ಚರಾತ್ರಮ್
ವೇದಾನ್ಶ್ಚ ಸರ್ವಾನ್ ಸಹಿತಬ್ರಹ್ಮಸೂತ್ರಾನ್ ವ್ಯಾಚಕ್ಷಾಣೋ ನಿತ್ಯಸುಖೋದ್ಭರೋsಭೂತ್
ಹಾಡುತ್ತಾ ನೂರುಕೋಟಿ ಬಿತ್ತರದ ಮೂಲರಾಮಾಯಣವನ್ನು, ಮಹಾಭಾರತದ ಜೊತೆಗೆ ಪಂಚರಾತ್ರವನ್ನು,  ಬ್ರಹ್ಮಸೂತ್ರಗಳ ಜೊತೆ ಸಮಸ್ತವೇದಗಳನ್ನು, ಸಾರಿದ ಭಕ್ತರಿಗೆ ಅವೆಲ್ಲವನ್ನೂ ಬಿಡಿಸಿ ಬಿಡಿಸಿ ಉಪದೇಶಿಸುತ್ತ, ಆನಂದದಿಂದ ತುಂಬಿಹೋದನು.

ಮತ್ತೊಂದು ರೂಪದಿಂದ ಹರಿಯ ಮಂದಿರಗಳಲ್ಲಿ ನೆಲೆನಿಂತ,

ರೂಪೈಸ್ತಥಾsನ್ಯೈಶ್ಚ ಸಮಸ್ತಸದ್ಮನ್ಯುವಾಸ ವಿಷ್ಣೋಸ್ಸತತಂ ಯಥೇಷ್ಟಮ್
ಬರಿಯ ಹೊರಗಿನ ವಿಷ್ಣುದೇವಾಲಯಗಳಲ್ಲಿ ಅಲ್ಲ,
ಹರಿಯ ಅಂತರ್ಯಾಮಿತ್ವವನ್ನು ನಿತ್ಯ ಅನುಭವಿಸುವ ಸಾತ್ವಿಕರೆಲ್ಲರ ಹೃದಯವೇ ಹರಿಮಂದಿರ. ಅಲ್ಲಿ ನೆಲೆನಿಂತನಿವನು.
ಈಶಾವಾಸ್ಯಮಿದಂ ಸರ್ವಂ’ ಅಲ್ಲವೇ. ಬ್ರಹ್ಮಾಂಡದ ಸಮಸ್ತ ಜೀವರ ಒಳಗೆ ನಿಂತು ರಾಮನ ಪೂಜಾರೂಪವಾದ ಶ್ವಾಸೋಚ್ಛ್ವಾಸಗಳನ್ನು ಮಾಡಿಸುವ ಉಸಿರು.

ಹೊರಗೆ ಕಿಂಪುರುಷಖಂಡದಲ್ಲಿ ಚಿರಕಾಲ ರಾಮನ ಸೇವೆಮಾಡುತ್ತಾ ಸಾರಿಬಂದ ಸಾಧಕರನ್ನು ದಡಸೇರಿಸುವ ಪರಿಸರ.
ಒಳಗೆ, ಜೀವನೊಳಗೆ ಮುಖ್ಯಾಮೃತನಾದ ರಾಮನನ್ನು ಸೇವಿಸುತ್ತಾ ಅವರವರ ಯೋಗ್ಯತೆಗೆ ತಕ್ಕಂತೆ ವಿಷ್ಣುಪ್ರಜ್ಞೆಯನ್ನು ಉದ್ಬೋಧಿಸಿ ಸಂಸಾರದ ವಿಷವನ್ನು ಪರಿಹರಿಸುವ ಅಮೃತನಾದ.

ಹೀಗೆ, ಸ್ವರೂಪದಿಂದ ಸುಗ್ರೀವರಾದ, ಒಳ್ಳೆಯ ಮುಖದ ಸಾತ್ವಿಕಜೀವರನ್ನು ರಾಮನೊಟ್ಟಿಗೆ ಬೆಸೆದು, ದುಷ್ಟರು ಎಳೆದೊಯ್ದ ಶುದ್ಧಜ್ಞಾನರೂಪಳಾದ ಸೀತೆಯನ್ನು ಹುಡುಕಿ ತಂದು ರಾಮನಿಗೊಪ್ಪಿಸಿ, ರಾಮಭಕ್ತಿಯನ್ನು ಜಗತ್ತಿನೆಲ್ಲೆಡೆ ಹಾಡುತ್ತಾ ಸಾರುತ್ತಾ, ಒಳಗಿದ್ದು ಪ್ರೇರಕನಾಗಿ, ಹೊರಗೆ ಪಾಲಕನಾಗಿ, ರಾಮಭಕ್ತರಿಗೆ ಭರವಸೆಯ ಬೆಳಕಾಗಿ ಸದಾ ಸಲಹುವ ಮುಖ್ಯಪ್ರಾಣನ ಶ್ರೀಮದ್ಧನುಮದವತಾರದ ಕಥೆಯನ್ನು ಇಲ್ಲಿಗೆ ಮುಗಿಸುತ್ತಾರೆ ಕವಿ, ನಾರಾಯಣಪಂಡಿತಾಚಾರ್ಯರು.

No comments:

Post a Comment