ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Tuesday, January 22, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೪


ಮೂರವತಾರದ ಮಧ್ವನಲ್ಲಿ ಮಾಡಬೇಕಾದ ನಿಜವಾದ ಪ್ರಾರ್ಥನೆಯನ್ನು ಮಾಡಿ, ಮುಂದೆ, ಇಂಥಾ ಮಧ್ವರ ಸೇವೆಗೆ ತನ್ನನ್ನು ಅಣಿಮಾಡಿದ, ಮಧ್ವಾಂತರ್ಯಾಮಿಯ ಜ್ಞಾನವಿತ್ತ, ಹುಟ್ಟಿಸಿದ ತಂದೆ, ಬೆಳೆಸಿದ ಗುರುವಾದ ತ್ರಿವಿಕ್ರಮಪಂಡಿತರನ್ನು ತುತಿಸುತ್ತಾರೆ.

ತಮೋನುದಾನಂದಮವಾಪ ಲೋಕಃ 
ತತ್ವ-ಪ್ರದೀಪಾಕೃತಿ-ಗೋ-ಗಣೇನ ।
ಯದಾಸ್ಯ-ಶೀತಾಂಶು-ಭುವಾ ಗುರೂನ್ಸ್ತಾನ್ ತ್ರಿವಿಕ್ರಮಾರ್ಯಾನ್ ಪ್ರಣಮಾಮಿ ವರ್ಯಾನ್ ॥೧.೦೪ ॥

ಅದೊಂದು ಚಂದ್ರ ಬೆಳಗಿತ್ತು. ಕುಂದಿರದ ಜ್ಞಾನಚಂದಿರ ಬೆಳಗಿತ್ತು. ಲೋಗರು ಅಜ್ಞಾನ, ಸಂಶಯಗಳನ್ನು ಹುಟ್ಟಿಸುವ ಕತ್ತಲಲ್ಲಿ ಮರುಗುವುದನ್ನು ಕಂಡು, ಕರುಣೆಯಿಂದ ತನ್ನ ತತ್ವದ ಬೆಳದಿಂಗಳನ್ನು ಸೂಸಿತು. ಜನರು ಹುಟ್ಟಿಬಂದ ಈ ಜ್ಞಾನದ ಬೆಳಕಲ್ಲಿ ವಸ್ತುಗಳನ್ನು ಕಾಣುವವರಾದರು,  ಆನಂದಿಸಿದರು...
ಏನೀ ಒಗಟು? ಯಾರು ಈ ಜ್ಞಾನಚಂದ್ರ? ಯಾವ ಬೆಳದಿಂಗಳು? ಯಾವ ಕತ್ತಲು?
ಇವರೇ ಆನಂದತೀರ್ಥರ ಮಹಾನುಗ್ರಹಕ್ಕೆ ಪಾತ್ರರಾದ, ಹರಿಯಾಜ್ಞೆಯಿಂದ ರಚಿಸಿದ ಸತ್ಸೂತ್ರಭಾಷ್ಯವನ್ನು ವಿವರಿಸಲು ಪೂರ್ಣಪ್ರಜ್ಞರಿಂದಲೇ ಆಜ್ಞಪ್ತರಾದ, ಕವಿಕುಲತಿಲಕರಾದ ತ್ರಿವಿಕ್ರಮರೆಂಬ ಹಿರಿಯ ಜ್ಞಾನಚಂದ್ರ.
ಇವರ ಮುಖದಿಂದ ಹೊಮ್ಮಿದ ಆ ಬೆಳದಿಂಗಳೇ ತತ್ವಪ್ರದೀಪವೆಂಬ ಬ್ರಹ್ಮಸೂತ್ರ-ಭಾಷ್ಯದ ವ್ಯಾಖ್ಯಾನ(ಯದಾಸ್ಯ-ಶೀತಾಂಶು-ಭುವಾ) ಸೂತ್ರಾರ್ಥವಿಷಯಕವಾದ ಸಜ್ಜನರ ಎಲ್ಲ ಅಜ್ಞಾನ, ಸಂಶಯಗಳಿಗೆ ಕಾರಣವಾದ ತಮೋಗುಣವನ್ನು ದೂರೋಡಿಸುವ (ತಮೋನುದಾ) ಸ್ವಕ್ಷರಗಳ ಸಮೂಹ (ಗೋಗಣ). ನಿಶ್ಚಯಜ್ಞಾನವನ್ನು ಹೊಂದಿದ ಸಾತ್ವಿಕಲೋಕವು ಸ್ವರೂಪಾನಂದವನ್ನೇ ಅನುಭವಿಸಿತು(ಆನಂದಮವಾಪ ಲೋಕ:)
ಇಂಥಾ ಜ್ಞಾನದ ಬೆಳಕನಿತ್ತ ಹಿರಿಯರಾದ(ವರ್ಯಾನ್), ಗುರುಗಳಾದ(ಗುರೂನ್), ತ್ರಿವಿಕ್ರಮಾರ್ಯರಿಗೆ ಸಾಷ್ಟಾಂಗವೆರಗುವೆ( ಪ್ರಣಮಾಮಿ)
ಚಂದ್ರನಿಗೆ ಹೋಲಿಸಿದ ಕಾರಣ, ಅದರ ತಂಪು, ಆಹ್ಲಾದ, ಸೌಮ್ಯಭಾವ, ಮುಂತಾದ ಅನೇಕಗುಣಗಳು ತ್ರಿವಿಕ್ರಮರಲ್ಲು ಕಾಣುವುವೆಂಬ ಭಾವವು ಧ್ವನಿಸುತ್ತದೆ.
ಈ ಪದ್ಯವು ‘ಋದ್ಧಿ’ ಎಂಬ ಮತ್ತೊಂದು ಉಪಜಾತಿಯ ಪ್ರಭೇದ. ತತ್ವಪ್ರದೀಪದ ಅಧ್ಯಯನದಿಂದ ಆಗುವ ಜ್ಞಾನಾಭಿವೃದ್ಧಿಯನ್ನು ನಡೆಯಲ್ಲಿ ತೋರುವ ಕೌಶಲ.

No comments:

Post a Comment