ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Monday, January 28, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೬(೨)


ತಾಂ ಮಂತ್ರವರ್ಣೈಃ ಅನುವರ್ಣನೀಯಾಮ್ ಎಂದು, ವಾಯುದೇವರ ಮಧ್ವಾವತಾರದ ಲೀಲೆಯನ್ನು ವೇದಗಳೇ ಕೊಂಡಾಡುತ್ತಿವೆ ಎಂದು ಕವಿ ನುಡಿದ.
ಇದು ದಿಟವೆಂದು ಅರಿವಾಗುವುದು ವೇದಗಳನ್ನು ನೇರವಾಗಿ ಪರಿಶೀಲಿಸಿದಾಗ. ಯಾವುವು ಆ ಮಂತ್ರವರ್ಣಗಳು?
ನಾರಾಯಣರನ್ನೇ ಕೇಳೋಣ.
'ಬಳಿತ್ಥಾ ತದ್ವಪುಷೇ ಧಾಯಿ ದರ್ಶತಮ್', 'ಭೂಷನ್ನ ಯೋsಧಿ ಬಭ್ರೂಷು ನಮ್ನತೇ', 'ತಾಮ್ ಸು ತೇ ಕೀರ್ತಿಂ ಮಘವನ್ ಮಾಹಿತ್ವಾ', ಎಂಬ ಸೂಕ್ತಗಳು.
'ವಿಷ್ಣೋಃ ಪದೇ ಪರಮೇ ಮಧ್ವ ಉತ್ಸಃ', 'ವಿದ್ವಾನ್ ಮಧ್ವ ಉಜ್ಜಭಾರಾ ದೃಶೇ ಕಮ್', ಇತ್ಯಾದಿ ಮಂತ್ರವರ್ಣಗಳು, ಎಂದು ತಾವೇ ಭಾವಪ್ರಕಾಶಿಕೆಯಲ್ಲಿ ಬೆಳಗಿಸಿದ್ದಾರೆ.
ವೇದಪುರುಷನು ಜೀವೋತ್ತಮನ ಲೀಲೆಯನ್ನು ಹೇಗೆ ಕೊಂಡಾಡಿದ್ದಾನೆ ಎಂಬ ವಿಚಾರವು ನನ್ನ ಅಂತರಂಗದ ಗುರುಗಳ ಅನುಗ್ರಹಬಲದಿಂದ ಇನ್ನೂ ಹೆಚ್ಚು ಅನುಗ್ರಹವನ್ನು ಬಯಸಿ ಹರಿಪ್ರೀತಿಗಾಗಿ, ಕಿಂಚಿತ್ತು ವಿವರಿಸಲ್ಪಡುತ್ತದೆ. ಅಲ್ಲದೆ ವೇದಮುಖೇನ ಮಧ್ವನ ಗುಣಗಾನ ಮಾಡುವ ಭಾಗ್ಯ ನಮ್ಮದಾಗಲಿ ಎಂಬ ವಿಶೇಷ ಆಶಯವೂ ಇದೆ.
ಇಲ್ಲಿಂದ ಮುಂದೆ, ಒಂದೊಂದು ಸೂಕ್ತವನ್ನು ಹಿಡಿದು, ನಾರಾಯಣರು ಬಣ್ಣಿಸುವ ವಾಯ್ವವತಾರಗಳ ಲೀಲೆಯನ್ನು ಹೇಗೆ ವೇದಗಳೇ ಕೊಂಡಾಡಿವೆ ಎಂಬುದನ್ನು ನೋಡೋಣ[1].
ಬಳಿತ್ಥಾ ತದ್ವಪುಷೇ... ಎಂದು ಆರಂಭವಾಗುವ ಋಗ್ವೇದದ ಮಂತ್ರಗಳ ಋಷಿ ದೀರ್ಘತಮನು. ಹದಿಮೂರು ಋಕ್ ಗಳ ಸೂಕ್ತ. ಹನ್ನೊಂದು ಮಂತ್ರಗಳು ಜಗತೀ ಛಂದಸ್ಸಿನವು. ಕಡೆಯ ಎರಡು ತ್ರಿಷ್ಟುಪ್ ಗಳು. ದೇವತೇ ಪ್ರಾಣಾಗ್ನಿ.  ಮೊದಲ ಐದು ಮಂತ್ರಗಳು ಒಂದು ವರ್ಗವೆಂದು ಕರೆಯಲ್ಪಡುತ್ತವೆ. ಈ ವರ್ಗದಲ್ಲೇ ವಿಶೇಷವಾಗಿ ಮಧ್ವಾವತಾರದ ವಿವರವಿರುವುದರಿಂದ ಅದನ್ನು ಒಂದೊಂದಾಗಿ ನೋಡುವ.
ಮೊದಲ ಮಂತ್ರ -
ಬಳಿತ್ಥಾ ತದ್ವಪುಷೇ ಧಾಯಿ ದರ್ಶತಮ್ ದೇವಸ್ಯ ಭರ್ಗಃ ಸಹಸೋ ಯತೋ ಜನಿ
ಯದೀಮುಪ ಹ್ವರತೇ ಸಾಧತೇ ಮಾತಿರ್ಋತಸ್ಯ ಧೇನಾ ಅನಯಂತ  ಸಸ್ರುತಃ

(ಸಹಸಃ)ಸರ್ವಾಂತರ್ಯಾಮಿಯಾದ, ಸರ್ವಸ್ವಾಮಿಯಾದ ದೇವನ  (ದೇವಸ್ಯ) (ಭರ್ಗಃ) ತೇಜಸ್ಸು, ಅಂದರೆ ನಿಜಸ್ವರೂಪವು (ಯತೋ ಜನಿ) ಯಾರಿಂದ ಅಭಿವ್ಯಕ್ತವಾಯಿಯೋ, ಅಥವಾ, (ಯತೋ) ಯ ಎಂದರೆ ಜ್ಞಾನ, ತೀವ್ರಗಮನಾದಿಗುಣದ ವಾಯುದೇವನಿಂದ ವೇದಾರ್ಥಮಥನದಿಂದ ಎಲ್ಲರ ಅರಿವಿಗೆ ಬಂತೋ, ಅಂಥಾ ಆ ಪ್ರಾಣತತ್ವವು (ಬಟ್) ಬಲರೂಪವಾಗಿದೆ, (ದರ್ಶತಮ್) ಜ್ಞಾನರೂಪವಾಗಿದೆ.  (ದೇವಸ್ಯ ಭರ್ಗಃ) ಭಗವಂತನನ್ನು ಹೊತ್ತುತಿರುಗುತ್ತಿದೆ. ವಾಯುವಾಹನನೆಂದೇ  ದೇವನನ್ನು ನಮಿಸುತ್ತೇವೆ ಅಲ್ಲವೇ. (ಇತ್ಥಾ) ಮೂಲರೂಪದಲ್ಲಿ ಹೇಗೋ ಹಾಗೆಯೇ ಬಲಜ್ಞಾನರೂಪದ ಪ್ರಾಣತತ್ವವು, (ವಪುಷೇ) ಮೂರು ಅವತಾರಗಳಿಗಾಗಿ (ಧಾಯಿ) ಹೊತ್ತುಬಂತು.
(ಯದೀಮ್ ಉಪಹ್ವರತೇ) ಅವನೇ ಶ್ರೀರಾಮನ ಹತ್ತಿರ ಬಂದವನು, ರಾಮನ ಹತ್ತಿರವಿದ್ದು ಸೇವಿಸುವವನು. (ಸಾಧತೇ) ರಾಮನ ಆದೇಶವನ್ನು ಸಾಧಿಸುವವನು. ಯಾರವನು? (ಮತಿಃ) ಹನುಮಾನ್ ನಾಮಕನು. ಹನು ಎಂದರೆ ಮತಿಯೆಂದು ಪ್ರತನರ ಮಾತು. ಹನುಮಾನ್ ಎಂದರೆ ಜ್ಞಾನವಾನ್, ಮತಿಮಾನ್ ಎಂದೇ ಅರ್ಥ. ಹನ ಜ್ಞಾನೇ ಎಂದೇ ಧಾತು ಅಲ್ಲವೇ. ಏನು ಮಾಡಿದ ಹನುಮನಾಗಿ? (ಸಸ್ರುತಃ) ಆನಂದದ ಅಮೃತವನ್ನು ಕರೆಯುವ, (ಋತಸ್ಯ) ಸತ್ಯವಚನನಾದ ರಾಮನ (ಧೇನಾಃ) ಸಂದೇಶವನ್ನು ಲಂಕೆಗೆ (ಅನಯಂತ)  ಹೊತ್ತುಹೋದ, ಅಲ್ಲಿಂದ ಸೀತೆಯ ಮಾತನ್ನು ರಾಮನಿಗೆ ತಂದು ಮುಟ್ಟಿಸಿದ. ಯಾರೂ ಮಾಡಲಾಗದ ಅಪಾರವಾದ ಸೇವೆಗೈದ. ರಾಮಸೀತೆಯರ ಪ್ರೀತಿಗೆ ಪಾತ್ರನಾದ. ಇದೆ ಇವನ ಪ್ರಥಮಾವತಾರದ ಲೀಲೆ.



[1] ಸೂಚನೆ:
ವೇದಗಳಲ್ಲಿ ಮುಖ್ಯಪ್ರಾಣನ ಅವತಾರಗಳ ವಿವರ ವಿಶದವಾಗಿ ಬಂದಿದೆ. ಅದರಲ್ಲಿ ಮಧ್ವಾವತಾರಾದ ವಿವರವನ್ನು  ನಾರಾಯಣಪಂಡಿತರು ಬಹುವಾಗಿ ಭಾವಪ್ರಕಾಶಿಕೆಯಲ್ಲಿ ವೇದಮಂತ್ರಗಳನ್ನು ಉದಾಹರಿಸುವ ಮೂಲಕ ತೋರಿದ್ದಾರೆ. ಈ ಎಲ್ಲಾ ಮಂತ್ರಗಳು ಅವರೇ ಉದಾಹರಿಸಿರುವುದು. ಇಲ್ಲಿ ಬಂದ ವಿವರಗಳನ್ನು ಅವರೇ ಮುಂದಿನ ಸರ್ಗಗಳಲ್ಲಿ ವರ್ಣಿಸುತ್ತಾರೆ. ಕಥೆಯ ಹಾಸು ತಿಳಿದಿಲ್ಲದವರಿಗೆ ಇದೊಂದು ಮೇಲುನೋಟ. ಮುಂದೆ ಆ ಆ ಸರ್ಗಗಳಲ್ಲಿ ಮತ್ತೆ ಇದರದ್ದೇ ಒಳನೋಟ.

No comments:

Post a Comment