ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Tuesday, January 22, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೫

ಈ ಕಾವ್ಯವು ಮಧ್ವಾಂತರ್ಯಾಮಿಯ ಕರ್ತೃತ್ವದ ಅನಾವರಣ ಎಂಬ ಆಧ್ಯಾತ್ಮಿಕಮುಖವನ್ನು ಹಿಂದೆಯೇ ನೋಡಿದೆವು. ಇದರ ಅಧಿಕಾರಿ ಯಾರು, ಇಲ್ಲಿಯ ವಿಷಯವೇನು, ಸಂಬಂಧವೇನು ಎಂಬುದನ್ನೂ ನೋಡಿದ್ದೆವು. ಇದರ ಅಧ್ಯಯನದ ಫಲವೇನು ಎಂಬುದನ್ನು ಆಗ ಭಗವಂತ ನುಡಿಸಿರಲಿಲ್ಲ. ಅದನ್ನು ನಾರಾಯಣರ ಮುಖದಿಂದಲೇ ಹೇಳುವ ಭಾಗ್ಯ ಈಗ.

ಮುಕುಂದ-ಭಕ್ತ್ಯೈ ಗುರು-ಭಕ್ತಿ-ಜಾಯೈ ಸತಾಂ ಪ್ರಸತ್ಯೈ ಚ ನಿರಂತರಾಯೈ ।
ಗರೀಯಸೀಂ ವಿಶ್ವ-ಗುರೋರ್ವಿಶುದ್ಧಾಂ ವಕ್ಷ್ಯಾಮಿ ವಾಯೋರವತಾರ-ಲೀಲಾಮ್ ॥೧.೦೫ ॥ 

ಗುರುಭಕ್ತಿಯ ಫಲವಾಗಿ ಹುಟ್ಟುವ ಮುಕುಂದನ ಭಕ್ತಿಗಾಗಿ ವಾಯುದೇವನ ಹನುಮಾನ್- ಭೀಮ ಹಾಗೂ ಈಗ ಇಲ್ಲಿ ವಿಶೇಷವಾಗಿ ತೋರುತ್ತಿರುವ ಮಧ್ವ ಎಂಬ ಅವತಾರಗಳ ಲೀಲೆಯನ್ನು ಹೇಳುವೆ.
ಗುರ್ವಂತರ್ಯಾಮಿಯ ಭಕ್ತಿಯೇ ಇಲ್ಲಿ ಪ್ರಯೋಜನ, ಭಕ್ತಿಗೆ ಮುಕ್ತಿಯು ಫಲ. ಮುಕ್ತಿಯನ್ನು ಕೊಡುವನೆಂದೆ ಅವನು ಮುಕುಂದನಲ್ಲವೆ!
ಅಂತರ್ಯಾಮಿಯ ಜ್ಞಾನವಾಗಬೇಕಾದರೆ, ಅಧಿಷ್ಠಾನದ ಅನುಗ್ರಹಬೇಕು. ಗುರುವಿಲ್ಲದೇ ದೇವ ಕಾಣುವವನಲ್ಲ.
‘ಗುರುದ್ವಾರಾ ಪ್ರಸಾದಕೃದಹಂ ತ್ವಿತಿ’ (ಗುರುವಿನ ಮೂಲಕವೇ ನನ್ನ ಪ್ರಸಾದ) ಎಂಬುದು ದೇವನ ಸತ್ಯಸಂಕಲ್ಪ. ಗುರುವಲ್ಲಿ ನಿಂತು ಪ್ರಸಾದವೀವನು ಅವನೇ, ‘ಅಗಮ್ಯತ್ವಾತ್ ಹರಿಸ್ತಸ್ಮಿನ್ ಆವಿಷ್ಠೋ ಮುಕ್ತಿದೋ ಭವೇತ್’ ಎಂಬುದು ಅಧ್ಯಾತ್ಮ.
ಗುರ್ವಂತರ್ಯಾಮಿಯ ಪ್ರಸಾದವಾಗಬೇಕಾದರೆ ಏನು ಮಾಡಬೇಕು?
ಯಥಾ ದೇವೇ ಪರಾ ಭಕ್ತಿಃ, ತಥಾ ಗುರೌ, ಭಗವಂತನಲ್ಲಿ ಮಾಡವ ಭಕ್ತಿಯನ್ನು ಗುರುವೆಂಬ ಪ್ರತಿಮೆಯಲ್ಲಿ ನಡೆಸಬೇಕು. ನವವಿಧಭಕ್ತಿಗೆ ಇದೇ ಮುಖ್ಯಪ್ರತಿಮೆ. ಹಾಗಾದರೆ, ಜಗದ್ಗುರುವಾದ ವಾಯುವಿನ ಅವತಾರಗಳ  ಲೀಲಾಶ್ರವಣದಿಂದ ಮುಕುಂದನಲ್ಲಿ ಭಕ್ತಿಯು ಹುಟ್ಟಿ, ಅದರಿಂದ ಅಂತರ್ಯಾಮಿಯ ಪ್ರಸಾದರೂಪವಾದ ಮುಕ್ತಿಯು ಲಭಿಸುವುದೇ ಫಲವೆಂಬುದು ಮಥಿತಾರ್ಥ.

ಆಚಾರ್ಯರ ಪಾದಸ್ಪರ್ಶದಿಂದ ಪಾವನವಾದ ಮನಸ್ಸಿನಿಂದ, ನಿತ್ಯವೂ ಅವರ ಅನೇಕ ಅದ್ಭುತಲೀಲೆಗಳನ್ನು ಕಣ್ಣಾರೆ ಕಂಡು ಅದರ ಸವಿಯನ್ನು ಉಂಡು, ಮೈಮರೆತು ಆತ್ಮಾನಂದವನ್ನು ಅನುಭವಿಸುತ್ತ ಇನ್ನೂ ತೃಪ್ತಿಯಿಲ್ಲದೆ ಸರ್ವಸಜ್ಜನರಿಗು ಎಣೆಯಿರದ ಸಂತಸವಾಗಲಿ ಎಂಬ ಬಯಕೆಯಿಂದ  ಹಂಚುವೆನು (ಸತಾಂ ಪ್ರಸತ್ಯೈ ಚ ನಿರಂತರಾಯೈ)
ವಿಶ್ವಕ್ಕೇ ಗುರುವಾದ ಇವರ ಲೀಲೆಯದು ಎಂಥಾದ್ದು?
ಮಹತ್ತರವಾದದ್ದು, ಪೂರ್ತಿ ಬಣ್ಣಿಸಲಾಗದ, ಅಳೆಯಲಾಗದ ಭಾರವತ್ತರವಾದುದು (ಗರೀಯಸೀಮ್)
ಕೊಂಕಿಲ್ಲದ್ದು, ಭಕ್ತರ ಮನಸ್ಸಿನ ಕೊಂಕನ್ನು ತೆಗೆಯುವಂತದ್ದು (ವಿಶುದ್ಧಾಂ). ಇಂಥಾ ಲೀಲೆಯನ್ನು ಹೇಳಹೊರಟಿರುವೇನೆಂದು ಪ್ರತಿಜ್ಞೆಯನ್ನು ಮಾಡುತ್ತಾರೆ.
ಈ ಪದ್ಯವು ‘ಮಾಯಾ’ ಎಂಬ ಉಪಜಾತಿಯ ಇನ್ನೊಂದು ಪ್ರಭೇದ. ಆವರಿಸಿರುವ ಮಾಯೆಯನ್ನು ಕಿತ್ತು ಮುಕ್ತಿಯ ಹಾದಿಯನ್ನು ತೋರುವ ಸಂಕೇತ.

No comments:

Post a Comment