ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Wednesday, January 9, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೧(೧)

ಸರ್ಗ-ಒಂದು

ಓಂ

ಅವತಾರಿಕಾ
ಪ್ರಾಣಮುಖ್ಯರಾದ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ಅಂತೇವಾಸಿಯಾದ ಕವಿಕುಲತಿಲಕ ಶ್ರೀತ್ರಿವಿಕ್ರಮಪಂಡಿತಾಚಾರ್ಯರ ಸುಪುತ್ರ, ಪೂರ್ಣಪ್ರಜ್ಞಾತ್ಮನ ದರ್ಶನ ಪಡೆದ ಮಹಾತ್ಮ, ಶ್ರೀಮನ್ನಾರಾಯಣಪಂಡಿತನೆಂಬೋ ಋಷಿಯು, ಜಗದ್ಗುರುವಿನ ವಿಜಯಗಾಥೆಯನ್ನು ಶಬ್ದಗಳಲ್ಲಿ ಪೋಣಿಸಬಯಸಿ, ವಿವಿಧ ಛಂದಸ್ಸುಗಳೆಂಬ ಕುಸುಮಗಳಲ್ಲಿ ಹೆಣೆಯೇ ಆದಿಯಲ್ಲಿ ಮಧ್ವಾಂತರ್ಯಾಮಿಯಾದ ಸರ್ವಕಾರಣನಾದ ನಾರಾಯಣನನ್ನು ಭಕ್ತಿಯಿಂದ ತುತಿಸುತ್ತಾರೆ-ಕಾಂತಾಯ ಎಂಬ ಪದ್ಯದಲ್ಲಿ.

ಕಾಂತಾಯ ಕಲ್ಯಾಣ-ಗುಣೈಕ-ಧಾಮ್ನೇ 
ನವ-ದ್ಯುನಾಥ-ಪ್ರತಿಮ-ಪ್ರಭಾಯ
ನಾರಾಯಣಾಖಿಲ -ಕಾರಣಾಯ 
ಶ್ರೀ -ಪ್ರಾಣ -ನಾಥಾಯ ನಮಸ್ಕರೋಮಿ ೦೧.೦೧

ಕಾಂತಿ ಎಂದರೆ ಇಚ್ಛೆ. ಕಾಂತನು ಬಹಳ ಇಷ್ಟವಾದವನು. ಕ ಎಂದರೆ ಆನಂದ. ಕಾಂತನು ಆನಂದಪೂರ್ಣನು. ಕ ಎಂದರೆ ಸಂಪತ್ತು.
'ಕಖೌ ಗಘೌ ಚ ಸಂಪತ್ತೌ' ಸರ್ವೈಶ್ವರ್ಯಪೂರ್ಣನು. ಕ ಎಂದರೆ ಬ್ರಹ್ಮ. ಅವನ ಅಂತರ್ಯಾಮಿಯು. ಕ ಎಂದರೆ ಜೀವ. ಸರ್ವಾಂತರ್ಯಾಮಿಯಾದ್ದರಿಂದ ಕಾಂತ.
ಕಲ್ಯಾಣ ಗುಣೈಕ ಧಾಮ್ನೇ -ಶೋಭನವಾದ ಎಲ್ಲಾ ಸದ್ಗುಣಗಳ ಖನಿ. ಭಕ್ತರು ಮತ್ತೆ ಮತ್ತೆ ಕೊಂಡಾಡುವ ಅನಂತಗುಣಗಳ ಸಾಂದ್ರ. ಸಮಸ್ತಗುಣಪೂರ್ಣನಾದ್ದರಿಂದಲೇ ಸರ್ವೋತ್ತಮ.
ನಮಗೆಲ್ಲಾ ಇಷ್ಟವಾದ, ಗುಣಪೂರ್ಣವಾದ ಆ ವಸ್ತು ಹೇಗಿದೆ? ಹುಟ್ಟಿಬರುವ ಸೂರ್ಯಪ್ರಕಾಶವನ್ನು ಹೋಲುವಂತಿದೆ.
ಹುಟ್ಟಿಬರುವ ಸೂರ್ಯಪ್ರಕಾಶವೂ ಇವನದೇ ನಿಜವಾದ ಹಸಾದ. ಅವನ ಒಳಗಿದ್ದು ಬೆಳಗುವ ಗಾಯತ್ರಿಯ ಪ್ರಸಾದ. ನನಗಿಷ್ಟವಾದ, ಗುಣಪೂರ್ಣನಾದ, ನನ್ನ ಅಂತರ್ಯಾಮಿಯೇ ಸೂರ್ಯನ ಒಳಗಿದ್ದು ಬೆಳಗುವವ- 'ನವದ್ಯುನಾಥ ಪ್ರತಿಮಪ್ರಭಾಯ ' ಯಾರವನು? ನಾರಾಯಣ.
ಅಖಿಲಕಾರಣನಾದ ನಾರಾಯಣ. ನನಗೂ, ವಿಶ್ವಕ್ಕೂ, ಶ್ರೀತತ್ವಕ್ಕೂ ಕಾರಣನಾದ ನಾರಾಯಣ. ಎಲ್ಲವನ್ನೂ ಮಾಡುವನಾದ್ದರಿಂದ ಎಲ್ಲದಕ್ಕೂ ಕಾರಣ. "ಸರ್ವಕರ್ತಾ " ಆದ್ದರಿಂದ ನಾರಾಯಣ. ಜಗತ್ತಿನ ತಾಯಿಯಾದ 'ಶ್ರೀ ' ಜಗತ್ತಿನ ಗುರುವಾದ 'ಪ್ರಾಣ ' ಇವರಿಬ್ಬರಿಗೂ ನಾಥ -"ಶ್ರೀಪ್ರಾಣನಾಥಾಯ".ಇವರಿಬ್ಬರಿಂದ ಸಮಸ್ತ ಚೇತನಾಚೇತನದ ಮೂಲಕಾರಣನಾದ ನಾರಾಯಣ, ನಿನಗೆ ನಮಸ್ಕಾರವನ್ನು ಮಾಡುವೆ, ನಮಸ್ಕರೋಮಿ.
ಈ ಶ್ಲೋಕದ ಇನ್ನೂ ಹಲವು ಮುಖಗಳನ್ನು ತೇಯ್ದು  ಹೆಕ್ಕಿ ನೋಡುವ.

No comments:

Post a Comment