ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Thursday, January 17, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೩

ಮಧ್ವ ಎಂಬ ಪ್ರಾಣನ ಮೂರನೇ ಅವತಾರದ ಮಹಿಮೆಯು ಭವದಿಂದ ಬಿಡುಗಡೆ ಬಯಸುವ ಎಲ್ಲರಿಂದಲೂ ನಿಶ್ಚಯವಾಗಿ ಶ್ರೋತವ್ಯವು, ಮಂತವ್ಯವು ಹಾಗೂ ನಿದಿಧ್ಯಾಸಿತವ್ಯವು ಎಂದು ಹಿಂದೆಯೇ ಮನಗಂಡಿದ್ದೇವೆ. ಶ್ರವಣ ಮಾಡಬೇಕಾದ ನಮ್ಮ ಮಧ್ವನ ಕೀರ್ತಿಯದು ಎಂಥಾದ್ದು? ನಾರಾಯಣರನ್ನೇ ಕೇಳಿ.

ಅಪಿ ತ್ರಿಲೋಕ್ಯಾ ಬಹಿರುಲ್ಲಸಂತೀ 
ತಮೋ ಹರಂತೀ ಮುರಾಂತರಂ ಚ
ದಿಶ್ಯಾದ್ದೃಶಂ ನೋ ವಿಶದಾಂ ಜಯಂತೀ 
ಮಧ್ವಸ್ಯ ಕೀರ್ತಿರ್ದಿನನಾಥ -ದೀಪ್ತಿಮ್ ॥೦೧.೦೩
 
ಮಧ್ವನ ಕೀರ್ತಿಯು ಲೋಕ - ಲೋಕಗಳ ಹೊರಗೂ, ಮುಕ್ತಚೇತನರಿಂದ ಸ್ತುತವಾಗಿ ಬೆಳಗುವಂತದ್ದು. ಮತ್ತೆ, ಇಲ್ಲಿರುವ ಅಮುಕ್ತರಾದ, ಸಾತ್ವಿಕರ ಒಳಗಿನ ಅಜ್ಞಾನವೆಂಬ ಕತ್ತಲನ್ನು ಕಳೆಯುವಂತದ್ದು.
ನಿಜವಲ್ಲವೆ, ದಿನನಾಥನಾದ ಸೂರ್ಯನ ದೀಪ್ತಿಯನ್ನು ಮೀರಿಸಿ ಬೆಳಗುವ ಕೀರ್ತಿ ಮಧ್ವರದ್ದು. ಸೂರ್ಯನ ಪ್ರಕಾಶವಾದರೋ ಲೋಕದ ವಸ್ತುಗಳನ್ನು ಮಾತ್ರ ತೋರುವದು. ಮಧ್ವರ ಕೀರ್ತಿಯೆಂಬ ಪ್ರಕಾಶವು ಪರಮಾತ್ಮನನ್ನೇ ತೋರುವುದು. ನೋಡುವ ತಾಕತ್ತು ಮಾತ್ರ ನಮ್ಮಲ್ಲಿ ಇಲ್ಲ.
ಅದಕ್ಕಾಗಿಯೇ ಕಲೆತು ಪ್ರಾರ್ಥಿಸೋಣ- ದಿಶ್ಯಾದ್ದೃಶಂ ನೋ ವಿಶದಾಂ ಎಂದು.
ವಿಸ್ತಾರವಾದ ಕಾಣ್ಕೆಯನ್ನು ನಮಗೆ ಕೊಡಲಿ. ಎಂಥಾ ಕಾಣ್ಕೆ? ಸರ್ವಜೀವರ ನಾಮರೂಪಗುಣಕ್ರಿಯೆಯ ಅಂತರ್ಯಾಮಿಯಾದ ಬ್ರಹ್ಮನನ್ನು ಕಾಣುವ ಜ್ಞಾನದೃಷ್ಟಿಯನ್ನು ನಮಗೆಲ್ಲಾ ಕೊಡಲಿ.
ಜ್ಞಾನಜ್ಯೋತಿಯನ್ನು ಹೊತ್ತಿಸಲು ಬಂದ ಮಧ್ವನಲ್ಲಿ ಉಚಿತವಾದ ಬಿನ್ನಹ! ಬೇಡಬೇಕಾದ ನಿಜವಾದ ವರ.
ಇವನ ಹೆಸರೇ ಹೇಳುತ್ತದೆ, ಇವನು ಬ್ರಹ್ಮಜ್ಞಾನವೀವ ಗುರುವೆಂದು. 'ಮಧು' ಎಂದರೆ ಆನಂದ, ಪೂರ್ಣಾನಂದನಾದ ಬ್ರಹ್ಮನೇ ಮಧು. ಅವನನ್ನು 'ವಾತಿ', ಸೇವಿಸಲು ಸಾಗುತ್ತಾನೆ, ಭಕ್ತರನ್ನು ಅವನ ಬಳಿ ಸಾಗಿಸುತ್ತಾನೆ ಆದ್ದರಿಂದ ಇವನು ಮಧ್ವ. ಮಧು +ವ.

ಈ ಪದ್ಯವು 'ಮಾಲಾ' ಎಂಬ ಉಪಜಾತಿಯ ಇನ್ನೊಂದು ಪ್ರಭೇದ.
ಸೂರ್ಯನ ಪ್ರಕಾಶವನ್ನು ಜಯಿಸಿದ ಮಧ್ವರ ಕೀರ್ತಿಯನ್ನು ಸಾರುವ ವೈಜಯಂತೀಮಾಲಾ.

No comments:

Post a Comment