ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Thursday, January 10, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೦೧(೨)


'ಇಷ್ಟ ವಿಶಿಷ್ಟವಾದ ದೈವವನ್ನು ನಮಿಸು ' ಇದು ಶಾಸ್ತ್ರದ ಆಜ್ಞೆ. ಕಾಂತನಾದ್ದರಿಂದ ಇಷ್ಟ, ಅನಂತಕಲ್ಯಾಣ ಗುಣಗಳ ಖನಿಯಾದ್ದರಿಂದ ವಿಶಿಷ್ಟ. ಶ್ರೀ ಹಾಗೂ ಮುಖ್ಯಪ್ರಾಣರ ನಾಥ, ಒಡೆಯ. ಶ್ರೀ ಎಂದರೆ ಭಾರತೀ.'ಶಂ ರೂಪಾನೇ ನಿತ್ಯರತೇರಿಯಂ ಶ್ರೀಃ ' ಎಂಬ ಮಾತು ಇಲ್ಲಿ ಪ್ರಮಾಣ. ಅವಳು ಸಮಸ್ತ ವೇದವಿದ್ಯೆಯ ಅಭಿಮಾನಿನೀ,  ಭಕ್ತಿ ಹಾಗೂ ವಿದ್ಯೆಯ ಅಧಿದೇವತೆ. ಅವಳನ್ನು ಪುನಃ ಉಜ್ಜೀವನಗೊಳಿಸಿದ ಪ್ರಾಣನ ಮೂರನೇ ಅವತಾರವೇ ಮಧ್ವ. ಸತ್ತಂತೆ ಇದ್ದ ವೇದವಿದ್ಯೆಗೆ ಪ್ರಾಣವಿತ್ತವನು ಶ್ರೀಪ್ರಾಣ, ಮಧ್ವ.
ತಮಗ್ರುವಃ ಕೇಶಿನೀಃ ಸಂ ಹಿ ರೇಭಿರೇ ಊರ್ಧ್ವಾಸ್ತಸ್ಥುರ್ಮಮ್ರುಷೀಃ ಪ್ರಾಯವೇ ಪುನಃ ತಾಸಾಂ ಜರಾಂ ಪ್ರಮುಂಚನ್ನೇತಿ ನಾನದದಸುಂ ಪರಂ ಜನಯನ್ ಜೀವಮಮೃತಮ್ ಭಗವಂತನೆಡೆಗೆ ಕರೆದೊಯ್ಯಬೇಕಿದ್ದ ವೇದವಿದ್ಯೆಗಳನ್ನು ಅಪವ್ಯಾಖ್ಯಾನಗಳಿಂದ ಕೊಂದುಹಾಕಿದ್ದರು. ತನ್ನ ನಲ್ನುಡಿಗಳಿಂದ ಪ್ರಾಣನೇ ಮತ್ತೆ ವೇದಗಳಿಗೆ (ಅಂದರೆ ಅದರ ಅಭಿಮಾನಿನಿಗೆ) ಜೀವವಿತ್ತನು. ಇದುವೇ ಮಧ್ವಾವತಾರದ ಮೂಲ ಉದ್ದೇಶವಲ್ಲವೇ? ಅಂತಹ ಶ್ರೀಪ್ರಾಣನ ನಾಥನಾದ, ಮಧ್ವಾಂತರ್ಯಾಮಿಯಾದ, ಸರ್ವಾಂತರ್ಯಾಮಿಯಾದ ನಾರಾಯಣನಿಗೆ ನಮಸ್ಕರಿಸುವೆ.
ಏನು ನಮಸ್ಕಾರದ ನಿಜವಾದ ಅರ್ಥ?  ಹಿರಿಯರು ಉಸುರಿದರು - ನಮೇ ಮಮಾದಿಕಂ ಕಿಂಚ ಕಿಂತು ಏತದ್ವಿಷ್ಣವೇs ಖಿಲಮ್ ಇತ್ಯೇಷ ಹಿ ನಮಸ್ಕಾರಃ ಎಂದು. 'ಮಮಕಾರಸ್ಯ ನಿಷೇಧೋ ನಮ ಇತ್ಯತ ' ಎಂದೂ. ನಂದೇನದೋ ಸ್ವಾಮಿ, ನಿನ್ನದೇ ಇದೆಲ್ಲವೂ ಎಂಬ ಭಾವವೇ ನಮಸ್ಕಾರ. ಹೀಗೆ ನಮಸ್ಕರಿಸುವವನೇ ಈ ಗ್ರಂಥಾಧ್ಯಯನಕ್ಕೆ ಮುಖ್ಯ ಅಧಿಕಾರಿ. ಹೀಗೆ ನಮಸ್ಕರಿಸಲ್ಪಡುವ ಮಧ್ವಾಂತರ್ಯಾಮಿಯೇ ಇಲ್ಲಿಯ ವಿಷಯ. ಅವರವರ ಭಾವಕ್ಕೆ ಇಲ್ಲಿಯ ಪ್ರತಿಮಾತೂ ಸಂಬಂಧಿಸುವುದೇ ಸಂಬಂಧ. ಹೀಗೆ ಅಧಿಕಾರಿ -ವಿಷಯ ಹಾಗೂ ಸಂಬಂಧವನ್ನು ತಿಳಿದು, ಮಧ್ವನ ಒಳಗಾಡುವ ಮಧ್ವನ ಕರ್ತೃತ್ವದ ಅನುಸಂಧಾನವನ್ನು ಮಾಡುತ್ತಾ ಚತುರ್ಮುಖವಾದ ಈ ಮಹಾಕಾವ್ಯನ್ನು ಮುಟ್ಟುವ, ಆಸ್ವಾದಿಸುವ.
ಈ ಪದ್ಯದ ಛಂದಸ್ಸು ‘ವಾಣೀ’ ಎಂಬ ಒಂದು ಉಪಜಾತಿಯ ಪ್ರಭೇದ. ಇಂದ್ರವಜ್ರ ಹಾಗೂ ಉಪೇಂದ್ರವಜ್ರ ಎಂಬ ಎರಡು ಛಂದಸ್ಸುಗಳ ವಿವಿಧ ಬಗೆಯ ಪ್ರಯೋಗವೇ ಉಪಜಾತಿ. ತನ್ನ ನಲ್ಲನ ಗುಣಗಳನ್ನು ತಾನೇ ವರ್ಣಿಸುವೆನೆಂದು ಸರ್ವವಾಗಧೀಶ್ವರಿಯಾದ ವಾಣಿಯೇ ಬಂದಳೇನೋ ಎಂಬಂಥಾ ಸೊಗಸಾದ ಪ್ರಯೋಗ ನಾರಾಯಣರದ್ದು. ಹನ್ನೊಂದು ಅಕ್ಷರಗಳ ಈ ಛಂದಸ್ಸಿಗೆ ರುದ್ರನೇ ದೇವತೆ. ಜಗದ್ಗುರುವನ್ನು ಮಂಗಳಸ್ವರೂಪನಾದ ಶಿವನ ನಡೆಯಲ್ಲಿ ನೋಡುವ ಬಗೆ.


No comments:

Post a Comment