ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Wednesday, June 5, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೨೨


ರಾಮನ ಸಾಮ್ರಾಜ್ಯಾಭಿಷೇಕವಾಯಿತು. ಸೂರ್ಯವಂಶದ ಕೀರ್ತಿಕೇತು ಮುಗಿಲಲ್ಲಿ ರಾರಾಜಿಸಿತು. ಪಟ್ಟಾಭಿಷೇಕದ ಕೊನೆಯಲ್ಲಿ ನಡೆದೊಂದು ರೋಚಕಕಥೆಯನ್ನು ವಾಲ್ಮೀಕಿ ಉತ್ತರರಾಮಾಯಣದಲ್ಲಿ ಬಿತ್ತರಿಸಿದ್ದು, ಕವಿಯ ಮಾತಿನ ಮೋಡಿಯಲ್ಲಿ,

ರಾಜ್ಯಾಭಿಷೇಕೇsವಸಿತೇsತ್ರ ಸೀತಾ ಪ್ರೇಷ್ಠಾಯ ನಸ್ತಾಂ ಭಜತಾಂ ದಿಶೇತಿ
ರಾಮಸ್ಯ ವಾಣ್ಯಾ ಮಣಿ-ಮಞ್ಜು-ಮಾಲಾ-ವ್ಯಾಜೇನ ದೀರ್ಘಾಂ ಕರುಣಾಂ ಬಬನ್ಧ ೦೧.೨೨

ರಾಜ್ಯಾಭಿಷೇಕ ಕೊನೆಗೊಳ್ಳಲಾಗ, ಹನುಮನಿಗಲ್ಲವೇ ತಾಯಿ ಸೀತೆ ಮಣಿಮಯರಮಣೀಯಹಾರವನ್ನು ನೀಡಿದ್ದು, ಹಾರದ ನೆವದಲ್ಲಿ ಸಾಟಿಯಿರದ ಕರುಣೆಯನೆ ಇತ್ತದ್ದು! "ನಮ್ಮ ಸೇವಕರಲ್ಲೇ ಬಹಳ ನೆಚ್ಚಾದವರಿಗೆ ಕೊಡು", ಎಂಬ ರಾಮನ ಸೊಲ್ಲಿನಿಂದ.

ಉತ್ತರರಾಮಾಯಣದಲ್ಲಿ ಬಂದ ಕಥೆಯನ್ನು ಆದಿಕವಿವಾಲ್ಮೀಕಿಯ ಮಾತಿನಿಂದ ಸವಿಯುವ -
ಮಣಿಪ್ರವರಜುಷ್ಟಂ ಮುಕ್ತಾಹಾರಮನುತ್ತಮಮ್ ಸೀತಾಯೈ ಪ್ರದದೌ ರಾಮಶ್ಚಂದ್ರರಶ್ಮಿಸಮಪ್ರಭಮ್
ಸೀತೆಗಿತ್ತ ರಾಮ, ಅಪೂರ್ವಮುತ್ತುಗಳ ರಾಶಿಯನ್ನೇ ತಂದು ಪೋಣಿಸಿ ಮಾಡಿದ, ಚಂದ್ರಿಕೆಯಂತೆ ಬೆಳಗುವ ಮುಕ್ತಾಹಾರವನ್ನು.
ಅವಮುಚ್ಯಾsತ್ಮನಃ ಕಂಠಾತ್ ಹಾರಂ ಜನಕನಂದಿನೀ ಆವೈಕ್ಷತ ಹರೀನ್ ಸರ್ವಾನ್ ಭರ್ತಾರಂ ಚ ಮುಹುರ್ಮುಹುಃ
ಕೊರಳಿಂದ ತೆಗೆದಿತ್ತ ಈ ಹಾರವನ್ನು ಕೈಯಲ್ಲಿ ಹಿಡಿದು, ಕಪಿಗಳನ್ನು ಮತ್ತು ತನ್ನ ಪತಿಯನ್ನು ಹೀಗೆ ಮತ್ತೆ ಮತ್ತೆ ನೋಡುತ್ತಲಿದ್ದಳು, ಜನಕಾತ್ಮಜೇ.
ತಾಮಿಙ್ಗಿತಜ್ಞಃ ಸಂಪ್ರೇಕ್ಷ್ಯ ಬಭಾಷೇ ಜನಕಾತ್ಮಜಾಮ್ ಪ್ರದೇಹಿ ಸುಭಗೇ ಹಾರಂ ಯಸ್ಯ ತುಷ್ಟಾಸಿ ಭಾಮಿನಿ
ಅವಳ ಮನದಿಂಗಿತವನರಿತ ರಾಮ ಅಂದ, "ನಿನಗಿಷ್ಟದರಿಗೆ ಕೊಡು", ಎಂದು.
ದದೌ ಸಾ ವಾಯುಪುತ್ರಾಯ ತಂ ಹಾರಮಸಿತೇಕ್ಷಣಾ
ಕೊಟ್ಟಳು ಆ ಬೆಲೆಕಟ್ಟಲಾಗದ ಹಾರವನ್ನು, ಕೊಳಕಿಲ್ಲದ ನೋಟದ ಸೀತೆ, ನಮ್ಮ ವಾಯುಪುತ್ರನಿಗೆ.

ಛಂದಸ್ಸು ಇಂದ್ರವಜ್ರಾ.

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೨೧


ಸೀತಾರಾಮ, ಬಂದ ಅಯೋಧ್ಯೆಗೆ.
ಹದಿನಾಲ್ಕು ವರ್ಷಗಳ ಕಾಲ ದುಷ್ಟಶಿಕ್ಷಣ ಶಿಷ್ಟರಕ್ಷಣ ಮಾಡಿ ಬಂದ ಅಯೋಧ್ಯೆಗೆ.
ಸೇವಕತನದ ರುಚಿಯಸವಿದು ತೋರೆಯಲಾಗದೆ ಮತ್ತೂ ಸೇವಿಸಲು ದಣಿಯ ಜೊತೆಗೇ ಬಂದನಲ ತಾನೂ ಅಯೋಧ್ಯೆಗೆ ಹನುಮ.

ಶ್ಯಾಮಂ ಸ್ಮಿತಾಸ್ಯಂ ಪೃಥು-ದೀರ್ಘ-ಹಸ್ತಂ ಸರೋಜ-ನೇತ್ರಂ ಗಜ-ರಾಜ-ಯಾತ್ರಮ್
ವಪುರ್ಜಗನ್ಮಙ್ಗಲಮೇಷ ದೃಗ್ಭ್ಯಾಂ ಚಿರಾದಯೋಧ್ಯಾಧಿಪತೇಃ ಸಿಷೇವೇ ೦೧.೨೧

ಚಿರಕಾಲ ಸೇವಿಸಿದನಿವ ಕಣ್ತುಂಬ ತುಂಬಿಕೊಂಡು, ಕಡುನೀಲಿವರ್ಣನ, ನಗುಮೋರೆಯ, ಆಜಾನು ತೋಳಿನ,  ತಾವರೆಯ ಕಣ್ಣಿನ, ಸಲಗದ ದಿಟ್ಟ ನಡೆಯ, ಜಗತ್ತಿಗೇ ಮಂಗಳನಾದ ಅಯೋಧ್ಯೆಯ ದೊರೆಯ ಚೆಲುಮೈಮಾಟವನ್ನು!
ರಾಮ ಎಂಬ ಶಬ್ದವನ್ನು ಬಿಡಿಸಿ ಹೇಳಿದಂತಿದೆ ಈ ಪದ್ಯ.

ಅಸಿತ-ಶುಕ್ಲ-ಮನೋಜ್ಞ’ ಎಂಬ ಅರ್ಥಗಳಲ್ಲಿ ಕೋಶದವರು ರಾಮಶಬ್ದವನ್ನು ಪಠಿಸುತ್ತಾರೆ.

ಛಂದಸ್ಸು ಜಾಯಾ ಎಂಬ ಉಪಜಾತಿ ಪ್ರಭೇದ.
ರಾಜ್ಯಲಕ್ಷ್ಮಿಯನ್ನು ಮತ್ತೆ ತನ್ನ ಜಾಯೆಯಾಗಿ ಸ್ವೀಕರಿಸಿ ಅಭೂತಪೂರ್ವವಾಗಿ ಆಳಿದ ರಾಮನ ಕಥೆ.

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೨೦


ಮುಂದೇನಾಯಿತು,

ಸ ದಾರಿತಾರಿಂ ಪರಮಂ ಪುಮಾಂಸಂ ಸಮನ್ವಯಾಸೀನ್ನರ-ದೇವ-ಪುತ್ರ್ಯಾ
ವಹ್ನಿ-ಪ್ರವೇಶಾಧಿಗತಾತ್ಮ-ಶುದ್ಧ್ಯಾ ವಿರಾಜಿತಂ ಕಾಞ್ಚನ-ಮಾಲಯೇವ ೦೧.೨೦

ಹಗೆಯಾದ ರಾವಣನನ್ನು ಕೊಂದ, ಬೆಂಕಿಯಲ್ಲಿ ಅದ್ದಿ ತೆಗೆದ, ಪುಟಕಿಟ್ಟ ಬಂಗಾರದ ಸರದಂತೆ ಸಿಂಗಾರವಾದ ಜನಕನ ಕುವರಿಯೊಡನೆ ಕೊಂಗೊಳಿಸುವ, ಪರಮಪುರುಷ ಶ್ರೀರಾಮನ ಹಿಂಬಾಲಿಸಿ ನಡೆದನಿವ, ಸದಾ ತುಂಬಿದ ಭಕ್ತಿಭಾವದಿಂದ ಕೈಮುಗಿದುಕೊಂಡು.
ರಾವಣನನ್ನು ಕೊಂದ. ಹಿಂದೆ ಹಿರಣ್ಯಕಶಿಪು ಆಗಿ ನರಹರಿಯಿಂದ ಹತನಾದವನೆ ಈಗ ಮತ್ತೆ ರಾಮನಿಂದ ಸತ್ತ. ಇವನಲ್ಲಿ ಜಯ ಎಂಬ ದ್ವಾರಪನ ಆವೇಶ. ಅವನು ಹರಿಭಕ್ತನೇ. ಅವನಿಗೆ ಶಾಪ ಬಂತು, ಸನಕಾದಿ ಮುನಿಗಳಿಂದ. ಆಗ ಹರಿಯೇ ಹೇಳಿದ್ದ, ನಾನಿದ್ದೇನೆ ಹೆದರಬೇಡ ಎಂದು, ‘ಮಾ ಭೈಷ್ಟಮಸ್ತು ಶಮ್', ಎಂದು  (ಭಾ ೩. ೧೭. ೨೯)
ಈಗ ಇವನನ್ನು ತಾನೇ ಕೊಂದದ್ದರಿಂದಲೇ ಪ್ರಮಿತವಾಯಿತು, ರಾಮ ಪರಮಪುರುಷನಾದ ಶ್ರೀಹರಿ (ಪರಮಂ ಪುಮಾಂಸಂ) ಎಂದು.

ತಸ್ಮಿನ್ ಹತೇ ತ್ರಿಜಗತಾಂ ಪರಮಪ್ರತೀಪೇ ಬ್ರಹ್ಮಾ ಶಿವೇನ ಸಹಿತಃ ಸಹ ಲೋಕಪಾಲೈಃ । ಅಭ್ಯೇತ್ಯ ಪಾದಯುಗಳಂ ಜಗದೇಕಾಭರ್ತ್ತೂ ರಾಮಸ್ಯ ಭಕ್ತಿಭರಿತಃ ಶಿರಸಾ ನನಾಮ
ರಾವಣ ಸತ್ತ ಕೂಡಲೇ ಬ್ರಹ್ಮಾ, ಶಿವನೇ ಮೊದಲಾದ ದೇವತೆಗಳಿಂದ ಕೂಡಿ, ಓಡಿಬಂದು ರಾಮನ ಪದಕ್ಕೆರಗಿದ, ಭಕ್ತಿಯಿಂದ.
ಅಂಡಪುರುಷನಾದ ಬ್ರಹ್ಮನೇ ನಮಿಸುವ ಪಾದ. ಆದ್ದರಿಂದಲೇ ಇವನು ಪರಮಪುರುಷ(ಪರಮಂ ಪುಮಾಂಸಂ).

ಅಲ್ಲಿ ರಾವಣನ ಹಿಡಿತದಲ್ಲಿ ಇದದ್ದು ಸೀತೆಯ ಗೊಂಬೆ ಅಷ್ಟೇ ಅಲ್ಲವೇ!
ನಿಜವಾದ ಸೀತೆಯನ್ನು ಬರಮಾಡಿಕೊಂಡದ್ದು ಹೇಗೆ?
ಬೆಂಕಿಯಲ್ಲಿ ಗೊಂಬೆಯನ್ನು ಹಾಕಿದ,
ಹಿರಣ್ಯವರ್ಣಳಾದ, ಕೈಲಾಸದಲ್ಲಿ ಪೂಜೆಗೊಳ್ಳುತ್ತಿದ್ದ ರಮೆಯನ್ನು ಮತ್ತೆ ಸ್ವೀಕರಿಸಿದ, ಲೋಕದೃಷ್ಟಿಯಲ್ಲಿ.

ಜಾನನ್ ಗಿರೀಶಾಲಯಗಾಂ ಸ ಸೀತಾಂ ಸಮಗ್ರಹೀತ್ ಪಾವಕಸಂಪ್ರದತ್ತಾಮ್
ಮುಮೋದ ಸಂಪ್ರಾಪ್ಯ ಚ ತಾಂ ಸ ರಾಮ ಸಾ ಚೈವ ದೇವೀ ಭಗವಂತಮಾಪ್ಯ (ಮ. ಭಾ. ತಾ. ನಿ. ೮. ೨೨೩)

ಲಕ್ಷ್ಮಿಯನ್ನು ನಮಗೆ ತಂದುಕೊಡೆಂದು ಬೇಡುವುದು ಅಗ್ನಿಯನ್ನೇ ಅಲ್ಲವೇ?
"ಹಿರಣ್ಯವರ್ಣಾಂ ಹರಿಣೀಮ್ ಸುವರ್ಣರಜತಸೃಜಾಂ ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ", ಎಂದು.
ಅಗ್ನಿಗೇ ಏಕೆ ಒಡ್ಡಿದರು ಪರೀಕ್ಷೆಗಾಗಿ?
ಛಂದೋಗೋಪನಿಷತ್ತಿನಲ್ಲಿ ಬಂದ ಮಾತು -
ಸ ಯದಿ ತಸ್ಯ ಕರ್ತಾ ಭವತಿ ಸ ದಹ್ಯತೇ ಸ ಯದಿ ತಸ್ಯಾಕರ್ತಾ ಭವತಿ ಸ ನ ದಹ್ಯತೇ
ಅಗ್ನಿ ಪಾಪಿಗಳನ್ನು ಮಾತ್ರ ಸುಡುತ್ತಾನೆ, ಪುಣ್ಯವಂತರನ್ನು ಅಲ್ಲ, ಎಂದು.
ಇದರಿಂದ ಸೀತೇ ಪರಮಪುನೀತೇ ಎಂದು ಜಗತ್ತಿಗೆ ತಿಳಿಯಿತು (ವಹ್ನಿ-ಪ್ರವೇಶಾಧಿಗತಾತ್ಮ-ಶುದ್ಧ್ಯಾ).

ಛಂದಸ್ಸು ಪ್ರೇಮಾ ಎಂಬ ಉಪಜಾತಿ ಪ್ರಭೇದ.
ಎಂದೂ ವಿಯೋಗವಿಲ್ಲದ ಸೀತಾರಾಮರ ಅನನ್ಯಪ್ರೇಮದ ಪ್ರತೀಕ.
ಭಾವುಕಜನಾಗ್ರಣೀ ಹನುಮ ಸದಾ ಮುದ್ದಿಸುವ ರಾಮನ ಬೆಂಬತ್ತಿ ನಡೆದ ಪ್ರೇಮದ ಸಂಕೇತ.

Tuesday, May 21, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೧೯


ಯುದ್ಧದ ಮಧ್ಯೇ ಲಕ್ಷ್ಮಣನೇ ಮೊದಲಾದ ರಾಮನ ಪಡೆಯವರು ಉರಗಬಂಧನಕ್ಕೆ ಸಿಕ್ಕು ಮೂರ್ಛಿತರಾಗುತ್ತರೆ. ಅವರಿಗೆ ಮತ್ತೆ ಜೀವನವಿತ್ತ ಪ್ರಾಣನ ಇನ್ನೊಂದು ಲೀಲಾಕಥನ-

ರಾಮಾರ್ಚನೇ ಯೋ ನಯತಃ ಪ್ರಸೂನಂ ದ್ವಾಭ್ಯಾಂ ಕರಾಭ್ಯಾಮಭವತ್ ಪ್ರಯತ್ನಃ   
ಏಕೇನ ದೋಷ್ಣಾ ನಯತೋ ಗಿರೀನ್ದ್ರಂ ಸಞ್ಜೀವನಾದ್ಯಾಶ್ರಯಮಸ್ಯ ನಾಭೂತ್ ೦೧.೧೯

ರಾಮನ ಪಾದಾರ್ಚನೆಗೆ ಹೂಗಳನ್ನು ಬೊಗಸೆ ತುಂಬ ಹೊತ್ತು ತರುವಾಗ ಪಟ್ಟಷ್ಟು ಪ್ರಯತ್ನವನ್ನೂ ಇವನು ಮಾಡಲಿಲ್ಲ ಒಂದೇ ಕೈಯಲ್ಲಿ ಸಞ್ಜೀವನಾದಿ ಔಷಧಿಗಳ ಖನಿಯಾದ ಗಂಧಮಾದನಪರ್ವತವನ್ನು ಹೊತ್ತು ಬರುವಾಗ ಕೂಡ.
ಅದು ಸಾಮಾನ್ಯವಾದ ಬೆಟ್ಟವಲ್ಲ. "ಯೋಜನಾನಾಂ ಶತಮ್ ಉಚ್ಛಃ ತಾವದ್ ವಿಸ್ತಾರವಾನ್", ನೂರು ಯೋಜನಗಳಷ್ಟು ಎತ್ತರದ್ದು ಅಷ್ಟೇ ಬಿತ್ತರದ್ದು. ಅದನ್ನು ಒಂದೇ ಕೈಯಿಂದ ಕಲ್ಲುಚೂರಿನಂತೆ ಒಂದೇ ಕ್ಷಣದಲ್ಲಿ ತಂದ ಇವನು.
ಆದರೇ ರಾಮನ ಪಾದಸೇವೆಗೆ ಹೊತ್ತು ತರುವ ಹೊಗಳನ್ನು ಎರಡೂ ಕೈಯಿಂದ ಭಾರವೇನೋ ಎಂಬಂತೆ ನಿಧಾನವಾಗಿ ಸಾಗಿ ಬರುತ್ತಾನೆ.
 "ಸಞ್ಜೀವನಾದ್ಯಾಶ್ರಯಮ್", ಎಂದು ಹೇಳಿದ್ದಾರೆ. ಸಞ್ಜೀವನವೇ ಮುಂತಾದವುಗಳಿಗೆ ಆಶ್ರಯವಾದ ಪರ್ವತ ಎಂದು. ಯಾವುವು ಅವು?
"ಮೃತಸಞ್ಜೀವನೀ ಮುಖ್ಯಾ ಸಂಧಾನಕರಣೀ ಪರಾ ಸವರ್ಣಕರಣೀ ಚೈವ ವಿಶಲ್ಯಕರಣೀತಿ ಚ[1] "
ಮೃತಸಞ್ಜೀವನೀ, ಸಂಧಾನಕರಣೀ, ಸವರ್ಣಕರಣೀ ಹಾಗೂ ವಿಶಲ್ಯಕರಣೀ ಎಂದು ನಾಲ್ಕು ಬಗೆಯ ಔಷಧಿಗಳ ತಾಣ ಆ ಪರ್ವತ.
ಛಂದಸ್ಸು ಇಂದ್ರವಜ್ರಾ.


[1]  ವಾಲ್ಮೀಕಿ ರಾಮಾಯಣ ಯುದ್ಧಕಾಂಡ (ಅಧ್ಯಾಯ ೭೪)

Monday, May 20, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೧೮


ಜಾಜ್ವಲ್ಯಮಾನೋಜ್ವಲ-ರಾಘವಾಗ್ನೌ ಚಕ್ರೇ ಸ ಸುಗ್ರೀವ-ಸುಯಾಯಜೂಕೇ
ಆಧ್ವರ್ಯವಂ ಯುದ್ಧ-ಮಖೇ ಪ್ರತಿಪ್ರಸ್ಥಾತ್ರಾ ಸುಮಿತ್ರಾ-ತನಯೇನ ಸಾಕಮ್ ೦೧.೧೮

ಸುಗ್ರೀವನ ಯಜಮಾನಿಕೆಯಲ್ಲಿ ನಡೆದ ಯುದ್ಧವೆಂಬೋ ಮಾರಣಹೋಮದಲ್ಲಿ ಲಕ್ಷ್ಮಣನ ಜೊತೆಗೂಡಿ ಇವನು ದಗದಗ ಉರಿವ ರಾಮನೆಂಬ ಅಗ್ನಿಯಲ್ಲಿ ರಕ್ಕಸರ ತಲೆಗಳನ್ನು ಹೋಮಿಸಿಬಿಟ್ಟ!
‘ಯಾಯಜೂಕ’ ಎಂದರೆ ಹೋಮಮಾಡುವ ಯಜಮಾನ.
‘ಅಧ್ವರ್ಯು’ ಎಂದು ಯಜುರ್ವೇದವನ್ನು ಬಲ್ಲ, ಪ್ರಧಾನಹೋಮವನ್ನು ಮಾಡುವ ಋತ್ವಿಕ್. ‘ಅಧ್ವರ’ ಎಂದರೆ ಯಜ್ಞ. ಅದನ್ನು ಸದಾ ಮಾಡುವ ಬಯಕೆಯುಳ್ಳವನು, ಅದು ನಡೆವಲ್ಲಿ ತಾನಿರುವವನು ಅದಕ್ಕೆ ಅವನಿಗೆ ಅಧ್ವರ್ಯು ಎಂದು ಹೆಸರು.
ಅಧ್ವರ್ಯುವಿನ ಸಹಾಯಕ ಪ್ರತಿಪ್ರಸ್ಥಾತಾ. ಯಜುರ್ವೇದವನ್ನು ಬಲ್ಲ ಒಬ್ಬ ಋತ್ವಿಕ್. ಪ್ರತಿಯೊಂದನ್ನೂ ಎಲ್ಲೆಲ್ಲಿ ಸ್ಥಾಪಿಸಬೇಕು, ನಡೆಸಬೇಕು ಎಂದು ಬಲ್ಲ ಜಾಣ. ಅದಕ್ಕೆ ಅವನಿಗೆ ಪ್ರತಿಪ್ರಸ್ಥಾತಾ ಎಂದು ಹೆಸರು.

ಈ ಪದ್ಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಯಜ್ಞ ಯಾಗಗಳ ಪರಿಭಾಷೆಯನ್ನು ಅರಿಯಬೇಕು. ಅದಕ್ಕಾಗಿಯೇ ಈ ಭಾಗ -
ಸೋಮಯಾಗದಲ್ಲಿ ಪ್ರಧಾನವಾಗಿ ನಾಲ್ಕು ಜನ ಋತ್ವಿಜರು. ಹೋತಾ, ಅಧ್ವರ್ಯು, ಉದ್ಗಾತಾ ಹಾಗೂ ಬ್ರಹ್ಮ ಎಂದು. ಅದರಲ್ಲಿ ಋಗ್ವೇದವನ್ನು ಬಲ್ಲ, ಶಸ್ತ್ರ ಮಂತ್ರಗಳನ್ನು ಶಂಸನ ಮಾಡುವ ಋತ್ವಿಕ್ ಹೋತಾ. ಅಧ್ವರ್ಯು ತಾನು ಹೋಮಿಸುತ್ತಾನೆ. ಉದ್ಗಾತಾ ಸಾಮವೇದವನ್ನು ಬಲ್ಲ ಹಾಡುಗಾರ. ಅವನು ಸಾಮಗಾನ ಮಾಡುತ್ತಾನೆ. ಬ್ರಹ್ಮ ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವ, ಯಜ್ಞದ ಪೂರ್ಣಾಪ್ತಿಯನ್ನು ಹೊಂದಿಸುವ ಋತ್ವಿಕ್. ಈ ನಾಲ್ವರಿಗೆ ಮೂರು ಮೂರರಂತೆ ಹನ್ನೆರಡು ಸಹಾಯಕರು. ಹೋತನಿಗೆ ಮೈತ್ರಾವರುಣ, ಅಚ್ಛಾವಾಕ ಹಾಗೂ ಗ್ರಾವಸ್ತುಕ್ ಎಂದು ಮೂರು ಸಹಾಯಕ ಋತ್ವಿಜರು. ಅಧ್ವರ್ಯುವಿಗೆ ಪ್ರತಿಪ್ರಸ್ಥಾತಾ, ನೇಷ್ಟಾ ಹಾಗೂ ಉನ್ನೇತಾ ಎಂಬ ಮೂವರು ಸಹಾಯಕರು. ಉದ್ಗಾತನಿಗೆ ಪ್ರಸ್ತೋತಾ, ಪ್ರತಿಹರ್ತಾ ಹಾಗೂ ಸುಬ್ರಹ್ಮಣ್ಯ ಎಂಬ ಮೂವರು ಹಾಗೂ ಕಡೆಗೆ ಬ್ರಹ್ಮನಿಗೆ ಬ್ರಾಹ್ಮಣಾಚ್ಛಂಸಿ, ಆಗ್ನೀಧ್ರ ಹಾಗೂ ಪೋತಾ ಎಂಬ ಮೂರು ಜನ  ಋತ್ವಿಜರು ಸಹಾಯಕರು. ಒಟ್ಟಿಗೆ ಹದಿನಾರು ಋತ್ವಿಜರ ಪಡೆ ಒಂದು ಯಜ್ಞವನ್ನು ನಡೆಸುತ್ತದೆ.

ಇಲ್ಲಿ, ರಾಮನಿಗೆ ತಾನು ಸೀತೆಯನ್ನು ತಂದುಕೊಡುವದಾಗಿ ಅಂದು ಅಗ್ನಿಮುಖದಲ್ಲಿ ಶಪಥಮಾಡಿದ ಸುಗ್ರೀವನು ಯುದ್ಧವೆಂಬೋ ಯಾಗಕ್ಕೆ ಯಜಮಾನನಾದ.
ಶಪಥ ಮಾಡಿದ್ದು ಸುಗ್ರೀವ. ಆದರೆ ಅಗ್ನಿಗೆ ಆಜ್ಯವನ್ನು ಅಳೆದಳೆದು ಹೋಮಿಸಿದ ಅಧ್ವರ್ಯು, ಹನುಮ.
ಅವನ ಸಹಾಯಕ್ಕೆ ನಿಂತವನು ಲಕ್ಷಣನೆಂಬ ಪ್ರತಿಪ್ರಸ್ಥಾತಾ. ಈ ಇಡಿಯ ಯುದ್ಧವೆಂಬ ಯಜ್ಞವು ಯಾರಲ್ಲಿ ಸಮರ್ಪಿತವಾಯಿತು?
ರಾಮನೆಂಬೋ ನಿಗಿನಿಗಿವ ದಳ್ಳುರಿಯಲ್ಲಿ!  
ಛಂದಸ್ಸು ಇಂದ್ರವಜ್ರ.

Friday, April 19, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೧೭


ಮುಂದೆ ಯುದ್ಧಕಾಂಡ –


ನಿಬಧ್ಯ ಸೇತುಂ ರಘುವಂಶ-ಕೇತು-ಭ್ರೂಭಂಗ-ಸಂಭ್ರಾಂತ-ಪಯೋಧಿ-ಮಧ್ಯೇ
ಮುಷ್ಟಿ-ಪ್ರಹಾರಂ ದಶಕಾಯ ಸೀತಾ-ಸಂತರ್ಜನಾಗ್ರ್ಯೋತ್ತರಮೇಷಕೋsದಾತ್ ॥೦೧.೧೭  

ರಘುವಂಶದ ಕೀರ್ತಿಸ್ಥಂಭ ಶ್ರೀರಾಮ (ರಘುವಂಶ-ಕೇತು). ಅವನ ಕುಡಿನೋಟಕ್ಕೆ ಬೆದರಿ ಬೆಚ್ಚಿದ ಸಮುದ್ರನ ಮಧ್ಯೆ ಬಿಗಿದನಿವನು ಸೇತುವೆಯನ್ನು! (ಭ್ರೂಭಂಗ-ಸಂಭ್ರಾಂತ-ಪಯೋಧಿ-ಮಧ್ಯೇ ನಿಬಧ್ಯ ಸೇತುಂ).
ಸೀತೆಯನ್ನು ಬೆದರಿಸಿದ ಸೇಡಿಗೆ ತಕ್ಕ ಉತ್ತರವಾಗಿ ಬಿಗಿದು ಕೊಟ್ಟ ಹತ್ತುತಲೆಯ ರಾವಣನಿಗೆ ತನ್ನ ಮುಷ್ಟಿಯಿಂದ!
ಸಂತರ್ಜನ ಎಂದರೆ ಬೆದರಿಸುವುದು, ಗದರಿಸುವುದು ಎಂದು ಅರ್ಥ.
ತನ್ನ ತಂದೆಯ ಭಾಷೆಯನ್ನೇ ಅನುಕರಿಸಿದಂತಿದೆ ಕವಿ. ತ್ರಿವಿಕ್ರಮ ಪಂಡಿತರೂ ಇದೇ ಮಾತನ್ನು ವಾಯುಸ್ತುತಿಯಲ್ಲಿ ಆಡಿದರು -
‘ದೃಷ್ಟ್ವಾ ದುಷ್ಟಾಧಿಪೋರಃ ಸ್ಫುಟಿತಕನಕಸದ್ವರ್ಮ ಘೃಷ್ಟಾಸ್ಥಿಕೂಟಂ ನಿಷ್ಪಿಷ್ಟಮ್’ ಎಂದು.
‘ಹನುಮನ ಗುದ್ದಿಗೆ, ಪುಟಕಿಟ್ಟ ಚಿನ್ನದ ಕವಚವನ್ನು ತೊಟ್ಟಿದ್ದ, ದುಷ್ಟರ ದೊರೆಯಾದ ರಾವಣನ ಎದೆಗೂಡಿನ ಎಲಬುಗಳು ಪುಡಿಯಾದವು!’
ರಾಮನಿಗೆ ಸಮುದ್ರವೇಕೆ ಹೆದರಿತು?
ದಕ್ಷಿಣಸಾಗರದ ತೀರಕೈತಂದ ವಾನರಸೇನೆ ಅಲ್ಲೇ ನಿಂತಿತು, ರಾಮ ಜಗತ್ತಿಗೆ ತೋರಬಯಸಿದ ಲೀಲೆಗೆ ಸಾಕ್ಷಿಯಾಗಿ. ಮುಂದೆಸಾಗುವ ಮುನ್ನ ಸಮುದ್ರನ ಅನುಮತಿಯನ್ನು ಬೇಡಿ ಅಲ್ಲೇ ತಂಗಿದರು ಎಲ್ಲಾ.
ಮೂರು ರಾತ್ರಿಗಳಾದರೂ ಸಮುದ್ರ ಅಲೆಯನ್ನು ಬಿಟ್ಟು ಏಳಲಿಲ್ಲ. ರಾಮನು ಕ್ರೋಧಗೊಂಡ ತನ್ನ ಕುಡಿನೋಟದಿಂದ ಸಮುದ್ರವನ್ನು ಶೋಷಿಸಿಬಿಡುವಂತೆ ಇರುವಾಗಲೇ ಎಲ್ಲರಿಗೂ ಕಾಣುವಂತೆ ಮಾನಿಸನ ರೂಪಹೊತ್ತು ಬಂತು ಸಾಗರ.
ಇಲ್ಲಿ ಭ್ರೂಭಂಗ-ಸಂಭ್ರಾಂತ ಎಂದು ಕವಿ ಅಂದದ್ದನ್ನೆ, ಹನುಮನು ‘ಕ್ರೋಧದೀಪ್ತನಯನಾಂತಹತಃ[1], ಎಂದು ಕಂಡು ನುಡಿದ.
ಛಂದಸ್ಸು ‘ಕೀರ್ತಿ’ ಎಂಬ ಉಪಜಾತಿಯ ಪ್ರಭೇದ.
ರಾಘವನ ಕೀರ್ತಿಯನ್ನು ಜಗತ್ತಿಗೆ ಸಾರಿದ ಸಾಗರನ ನಡೆಯು.




[1] ಮಹಾಭಾರತ ತಾತ್ಪರ್ಯ ನಿರ್ಣಯ ೮.೧೦


Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೧೬


ಅಪಕ್ಷಪಾತೀ ಪುರುಷಸ್ತ್ರಿಲೋಕ್ಯಾಮ್-ಅಭೋಗ-ಭೋಕ್ತಾ ಪತಗಾಧಿ-ರಾಜಮ್
ವಿಶ್ವಮ್ಭರಂ ಬಿಭ್ರದಸೌ ಜಿಗಾಯ ತ್ವರಾ-ಪರಾಕ್ರಾಂತಿಷು ಚಿತ್ರಮೇತತ್ ॥೦೧.೧೬    

ಇವನು ವೇಗ ಹಾಗೂ ಪರಾಕ್ರಮದಲ್ಲಿ ಗರುಡನನ್ನೇ ಗೆದ್ದ ಗಂಡು!
ವಿಚಿತ್ರ! ಲೋಕದಲ್ಲಿ ಹಾರುವ ಹಕ್ಕಿಯನ್ನು ನಡೆವ ಪುರುಷನು ಗೆದ್ದದ್ದು!
ಇದಾದರೋ ಬರಿಯ ನಾಡು ಹಕ್ಕಿಯಲ್ಲ. ಹಕ್ಕಿಗಳ ರಾಜ (ಪತಗಾಧಿರಾಜಮ್)
ಇವನೋ ಒಂದು ಕಪಿ. ಗರುಡನನ್ನು ಹೇಗೆ ಗೆದ್ದ!?

ಗರುಡನಾದರೋ ‘ಪಕ್ಷಪಾತಿ’ (ಪಕ್ಷಗಳ ಸಹಾಯದಿಂದ ಹಾರುವ), ಆದರೆ ಇವನು ಪಕ್ಷಪಾತವಿಲ್ಲದ ಗಂಡು(ಅಪಕ್ಷಪಾತೀ ಪುರುಷಃ).  ನುಗ್ಗಿದ್ದು ವೈರಿಯ ರಾಜ್ಯಕ್ಕೆ, ಆದರೂ ಮಂಡೋದರಿ, ವಿಭೀಷಣರೇ ಮೊದಲಾದವರನ್ನು ಹಾಳು ಮಾಡದೆ, ಅವರವರ ಯೋಗ್ಯತೆಯನ್ನು ತಿಳಿದು, ಗುಣಕ್ಕೆ ತಕ್ಕ ನಡೆಯನ್ನು ತೋರಿ, ಹಾಳುಗೆಡಬೇಕಾದ್ದನ್ನು ಹಾಳು ಮಾಡಿ ಬಂದ! ಮೂರುಲೋಕದಲ್ಲಿ ಇವನಿಗೆ ಸಮನಾದ ‘ಅಪಕ್ಷಪಾತೀ’ ಯಾರಿದ್ದಾರೆ?!
ಮತ್ತೆ, ಗರುಡನಾದರೋ ಭೋಗಗಳನ್ನು ತಿಂದು ಬದುಕುವನು. ಭೋಗ ಎಂದರೆ ಹಾವಿನ ದೇಹ. ಆದ್ದರಿಂದ ಗರುಡ ‘ಭೋಗಭೋಕ್ತಾ’.
ಹನುಮನಾದರೋ ಭೋಗವನ್ನು ತೊರೆದ ಬ್ರಹ್ಮಚಾರಿ! ಆದರಿಂದ ಇವನು ‘ಅಭೋಗಭೋಕ್ತಾ’ !
ಇವನೂ ಗರುಡನಂತೆ ವಿಶ್ವವನ್ನು ಹೊತ್ತ ಸ್ವಾಮಿಯನ್ನು ಹೆಗಲಲ್ಲಿ ಹೊತ್ತಿರುವನು!
ನಿಜ ಸಂಗತಿ ಇದು - ಇವನು ಮೂಲತಃ ಗರುಡನಿಗಿಂತ ಮೇಲಿನ ಯೋಗ್ಯತೆಯ ದೇವತೆ ಮುಖ್ಯಪ್ರಾಣ. ವಿಚಾರಿಸಿ ನೋಡಿದರೆ ಇದಾವುದೂ ವಿಚಿತ್ರವಲ್ಲ. ನೋಡುವ ಕಣ್ಣಿಗೆ ಇದೊಂದು ವಿಚಿತ್ರ ಅಷ್ಟೇ!
ಇಲ್ಲಿ ಮತ್ತೆ ನಾವು ಸ್ವಲ್ಪ ಶ್ಲೇಷವನ್ನು ತಿಳಿಯುವ ಪ್ರಯತ್ನ ಮಾಡುವ.
ಇಲ್ಲಿ ಬಂದ ಅಪಕ್ಷಪಾತೀ, ಅ- ಭೋಗಭೋಕ್ತಾ ಹಾಗೂ ವಿಶ್ವಮ್ಭರಂ ಬಿಭ್ರದ್ ಈ ಶಬ್ದಗಳು ಪಾತ್ರಕ್ಕೆ ತಕ್ಕಂತೆ ವಾಕ್ಯಕ್ಕೆ ಹೊಸ ಅರ್ಥವನ್ನು ಕೊಟ್ಟವು.
ಕವಿಯ ಚಾತುರ್ಯಕ್ಕೆ ನಮನ.
ಛಂದಸ್ಸು ಪ್ರೇಮಾ ಎಂಬ ಉಪಜಾತಿಪ್ರಭೇದ.
ಇದು, ಮರಳಿದ ಹನುಮನಿಗೆ ಏನನ್ನೂ ಕೊಡಲು ಕಾಣದೆ ತನ್ನನ್ನೇ ಕೊಟ್ಟುಕೊಂಡ ರಾಮನ ಅನಿಮಿತ್ತಪ್ರೇಮ.
ತಾನು ಗರುಡನನ್ನೇ ಗೆದೆವ ತಾಕತ್ತಿನ ವೀರ, ಸ್ವಾಮಿಯ ಮುಂದೆ ತಲೆಬಾಗಿ ನಿಂತು ಭಕ್ತಿಯಲ್ಲಿ ತೋದ ಕುವರ. ಇದೇ  ದಾಸ ಈಶರ ಸಮಾಗಮ.