ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Wednesday, June 5, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೨೦


ಮುಂದೇನಾಯಿತು,

ಸ ದಾರಿತಾರಿಂ ಪರಮಂ ಪುಮಾಂಸಂ ಸಮನ್ವಯಾಸೀನ್ನರ-ದೇವ-ಪುತ್ರ್ಯಾ
ವಹ್ನಿ-ಪ್ರವೇಶಾಧಿಗತಾತ್ಮ-ಶುದ್ಧ್ಯಾ ವಿರಾಜಿತಂ ಕಾಞ್ಚನ-ಮಾಲಯೇವ ೦೧.೨೦

ಹಗೆಯಾದ ರಾವಣನನ್ನು ಕೊಂದ, ಬೆಂಕಿಯಲ್ಲಿ ಅದ್ದಿ ತೆಗೆದ, ಪುಟಕಿಟ್ಟ ಬಂಗಾರದ ಸರದಂತೆ ಸಿಂಗಾರವಾದ ಜನಕನ ಕುವರಿಯೊಡನೆ ಕೊಂಗೊಳಿಸುವ, ಪರಮಪುರುಷ ಶ್ರೀರಾಮನ ಹಿಂಬಾಲಿಸಿ ನಡೆದನಿವ, ಸದಾ ತುಂಬಿದ ಭಕ್ತಿಭಾವದಿಂದ ಕೈಮುಗಿದುಕೊಂಡು.
ರಾವಣನನ್ನು ಕೊಂದ. ಹಿಂದೆ ಹಿರಣ್ಯಕಶಿಪು ಆಗಿ ನರಹರಿಯಿಂದ ಹತನಾದವನೆ ಈಗ ಮತ್ತೆ ರಾಮನಿಂದ ಸತ್ತ. ಇವನಲ್ಲಿ ಜಯ ಎಂಬ ದ್ವಾರಪನ ಆವೇಶ. ಅವನು ಹರಿಭಕ್ತನೇ. ಅವನಿಗೆ ಶಾಪ ಬಂತು, ಸನಕಾದಿ ಮುನಿಗಳಿಂದ. ಆಗ ಹರಿಯೇ ಹೇಳಿದ್ದ, ನಾನಿದ್ದೇನೆ ಹೆದರಬೇಡ ಎಂದು, ‘ಮಾ ಭೈಷ್ಟಮಸ್ತು ಶಮ್', ಎಂದು  (ಭಾ ೩. ೧೭. ೨೯)
ಈಗ ಇವನನ್ನು ತಾನೇ ಕೊಂದದ್ದರಿಂದಲೇ ಪ್ರಮಿತವಾಯಿತು, ರಾಮ ಪರಮಪುರುಷನಾದ ಶ್ರೀಹರಿ (ಪರಮಂ ಪುಮಾಂಸಂ) ಎಂದು.

ತಸ್ಮಿನ್ ಹತೇ ತ್ರಿಜಗತಾಂ ಪರಮಪ್ರತೀಪೇ ಬ್ರಹ್ಮಾ ಶಿವೇನ ಸಹಿತಃ ಸಹ ಲೋಕಪಾಲೈಃ । ಅಭ್ಯೇತ್ಯ ಪಾದಯುಗಳಂ ಜಗದೇಕಾಭರ್ತ್ತೂ ರಾಮಸ್ಯ ಭಕ್ತಿಭರಿತಃ ಶಿರಸಾ ನನಾಮ
ರಾವಣ ಸತ್ತ ಕೂಡಲೇ ಬ್ರಹ್ಮಾ, ಶಿವನೇ ಮೊದಲಾದ ದೇವತೆಗಳಿಂದ ಕೂಡಿ, ಓಡಿಬಂದು ರಾಮನ ಪದಕ್ಕೆರಗಿದ, ಭಕ್ತಿಯಿಂದ.
ಅಂಡಪುರುಷನಾದ ಬ್ರಹ್ಮನೇ ನಮಿಸುವ ಪಾದ. ಆದ್ದರಿಂದಲೇ ಇವನು ಪರಮಪುರುಷ(ಪರಮಂ ಪುಮಾಂಸಂ).

ಅಲ್ಲಿ ರಾವಣನ ಹಿಡಿತದಲ್ಲಿ ಇದದ್ದು ಸೀತೆಯ ಗೊಂಬೆ ಅಷ್ಟೇ ಅಲ್ಲವೇ!
ನಿಜವಾದ ಸೀತೆಯನ್ನು ಬರಮಾಡಿಕೊಂಡದ್ದು ಹೇಗೆ?
ಬೆಂಕಿಯಲ್ಲಿ ಗೊಂಬೆಯನ್ನು ಹಾಕಿದ,
ಹಿರಣ್ಯವರ್ಣಳಾದ, ಕೈಲಾಸದಲ್ಲಿ ಪೂಜೆಗೊಳ್ಳುತ್ತಿದ್ದ ರಮೆಯನ್ನು ಮತ್ತೆ ಸ್ವೀಕರಿಸಿದ, ಲೋಕದೃಷ್ಟಿಯಲ್ಲಿ.

ಜಾನನ್ ಗಿರೀಶಾಲಯಗಾಂ ಸ ಸೀತಾಂ ಸಮಗ್ರಹೀತ್ ಪಾವಕಸಂಪ್ರದತ್ತಾಮ್
ಮುಮೋದ ಸಂಪ್ರಾಪ್ಯ ಚ ತಾಂ ಸ ರಾಮ ಸಾ ಚೈವ ದೇವೀ ಭಗವಂತಮಾಪ್ಯ (ಮ. ಭಾ. ತಾ. ನಿ. ೮. ೨೨೩)

ಲಕ್ಷ್ಮಿಯನ್ನು ನಮಗೆ ತಂದುಕೊಡೆಂದು ಬೇಡುವುದು ಅಗ್ನಿಯನ್ನೇ ಅಲ್ಲವೇ?
"ಹಿರಣ್ಯವರ್ಣಾಂ ಹರಿಣೀಮ್ ಸುವರ್ಣರಜತಸೃಜಾಂ ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ", ಎಂದು.
ಅಗ್ನಿಗೇ ಏಕೆ ಒಡ್ಡಿದರು ಪರೀಕ್ಷೆಗಾಗಿ?
ಛಂದೋಗೋಪನಿಷತ್ತಿನಲ್ಲಿ ಬಂದ ಮಾತು -
ಸ ಯದಿ ತಸ್ಯ ಕರ್ತಾ ಭವತಿ ಸ ದಹ್ಯತೇ ಸ ಯದಿ ತಸ್ಯಾಕರ್ತಾ ಭವತಿ ಸ ನ ದಹ್ಯತೇ
ಅಗ್ನಿ ಪಾಪಿಗಳನ್ನು ಮಾತ್ರ ಸುಡುತ್ತಾನೆ, ಪುಣ್ಯವಂತರನ್ನು ಅಲ್ಲ, ಎಂದು.
ಇದರಿಂದ ಸೀತೇ ಪರಮಪುನೀತೇ ಎಂದು ಜಗತ್ತಿಗೆ ತಿಳಿಯಿತು (ವಹ್ನಿ-ಪ್ರವೇಶಾಧಿಗತಾತ್ಮ-ಶುದ್ಧ್ಯಾ).

ಛಂದಸ್ಸು ಪ್ರೇಮಾ ಎಂಬ ಉಪಜಾತಿ ಪ್ರಭೇದ.
ಎಂದೂ ವಿಯೋಗವಿಲ್ಲದ ಸೀತಾರಾಮರ ಅನನ್ಯಪ್ರೇಮದ ಪ್ರತೀಕ.
ಭಾವುಕಜನಾಗ್ರಣೀ ಹನುಮ ಸದಾ ಮುದ್ದಿಸುವ ರಾಮನ ಬೆಂಬತ್ತಿ ನಡೆದ ಪ್ರೇಮದ ಸಂಕೇತ.

No comments:

Post a Comment