ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Tuesday, December 11, 2018

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಪೂರ್ವಭಣಿತಿ(5/6)

ಶಬ್ದಗಳ ಚಮತ್ಕಾರದಿಂದ ಸೊಗಸಾದ, ಹೃದಯಂಗಮವಾದ ಅರ್ಥವನ್ನು ಸಹೃದಯರಿಗೆ ಉಣಬಡಿಸುವ ಮೋಡಿಯೇ ಕಾವ್ಯ. ಸ್ವಭಾವದಿಂದ ನಾರಾಯಣರದ್ದು ಕವಿಹೃದಯ. ಮನೆತನವೇ ಕವಿತ್ವದ ಹಂದರ. ಮನೆಯಲ್ಲಿರುವವರೆಲ್ಲಾ ಕವಿಗಳೇ. ಇಂಥಾ ಪರಿಸರದಲ್ಲಿದ್ದು ಬೆಳೆದ ನಾರಾಯಣ ಪಂಡಿತರು ಅದರ ಪೂರ್ಣವಿಕಾಸವನ್ನು ಮಧ್ವವಿಜಯದಲ್ಲಿ ಸೂಸಿದ್ದಾರೆ. ಅವರ ಮಾತಿನ ಧಾಟಿಯೇ ಅನುಪ್ರಾಸಾಲಂಕಾರ. ಹೆಜ್ಜೆ ಹೆಜ್ಜೆಗೂ ತಮ್ಮ ಕಾವ್ಯದಲ್ಲಿ ಒಂದಲ್ಲ ಒಂದು ಕಾವ್ಯ ಚಮತ್ಕಾರನ್ನು ತೋರಿದ್ದಾರೆ. ಯಮಕ, ಏಕಾಕ್ಷರಗಳೇ ಮೊದಲಾದ ಶಬ್ದಾಲಂಕಾರಗಳಲ್ಲದೆ ಅದ್ಭುತವಾದ ಬಂಧಗಳನ್ನು ಹೆಣೆದಿದ್ದಾರೆ. ಸ್ವಭಾವೋಕ್ತಿ, ಪರಿಕರ, ಉಪಮಾ, ಶ್ಲೇಷ, ಅರ್ಥಾಂತರನ್ಯಾಸ ರೂಪಕವೇ ಮೊದಲಾದ ಮೂವತ್ತಕ್ಕೂ ಮೀರಿ ಅರ್ಥಾಲಂಕಾರಗಳಿಂದ ತಮ್ಮ ಕೃತಿಯನ್ನು ಸಿಂಗರಿಸಿದ್ದಾರೆ. ಭಕ್ತಿ, ಶಾಂತ, ವೀರ, ಅದ್ಭುತ, ಶೃಂಗಾರಾದಿ ರಸಗಳನ್ನು ಸಹೃದಯನ ಅಂತರಂಗದಿ ಚಿಮ್ಮಿಸಿ ಅದರ ಒರೆತದಿಂದ ಮನಸ್ಸನ್ನು ತೋಯಿಸಿದ್ದಾರೆ. ಕಾವ್ಯದ ಪ್ರತಿಅಂಶವನ್ನೂ ವಿಶೇಷವಾದ ಆಧ್ಯಾತ್ಮಿಕ ಅರ್ಥದ ಆವಿಷ್ಕಾರಕ್ಕೆ ಬಳಸಿಕೊಂಡದ್ದು ಇವರ ಆಧ್ಯಾತ್ಮಿಕ ಹೃದಯಕ್ಕೆ ಸಾಕ್ಷಿ

   ಪ್ರೌಢವಾದ ಭಾಷೆ, ಬಿಗಿಯಾದ ಛಂದಸ್ಸಿನ ನಡೆ ಇವು ನಾರಾಯಣ ಪಂಡಿತರ ವೈಶಿಷ್ಟ್ಯ. ಮಧ್ವವಿಜಯಭಾವಸಂಗ್ರಹ ಮಾಡುತ್ತಾ ಕಾವ್ಯರಸಾಸ್ವಾದನೆಯನ್ನೂ ಮಾಡುವ. ಇದು ಮಧ್ವವಿಜಯದ ಎರಡನೇ ಮುಖ.

No comments:

Post a Comment