ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Sunday, December 9, 2018

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಪೂರ್ವಭಣಿತಿ(3/6)


ಸಮಸ್ತ ಜೀವರ ಅಂತರ್ಯಾಮಿ, ಜಗತ್ತಿನ ಮೂಲ, ಎಲ್ಲರ ಉಸಿರು ತಾನು ಮಾನವಾಕೃತಿಯಾಗಿ, ಇದೇ ಕಲಿಯುಗದ ಹದಿಮೂರನೇ ಶತಕದಲ್ಲಿ ಉಡುಪಿಯ ಸಮೀಪದ ಪಾಜಕದಲ್ಲಿ ಉದಿಸಿತು. ಮಂತ್ರಪ್ರತಿಪಾದ್ಯನಾದ ವ್ಯಾಸರ ಸಿದ್ಧಾಂತವನ್ನು ಸಜ್ಜನರ ಹೃದಯದಲ್ಲಿ ಅರಳಿಸಿ ತೋರುವ ಕಾರ್ಯ ಈ ರೂಪದ ಮೂಲೋದ್ದೇಶವಾಗಿತ್ತು. ಅದಾವ ಶಿವಾದಿ ಸುರರೇ ಸುಜ್ಞಾನದ ಆವಿಷ್ಕಾರಕ್ಕಾಗಿ ನಿತ್ಯ ಉಪಾಸಿಸುವ 'ಮಧ್ವ' ಎಂಬ ಮಂತ್ರಸಿದ್ಧವಾದ ರೂಪವೇ ಈಗ ಕೇವಲ ಅಜ್ಞ-ಜ್ಞಾನಾರ್ಥಿ-ಜ್ಞಾನಯೋಗ್ಯವಾದ ಸಾತ್ವಿಕಲೋಕದ ಉದ್ಧಾರಕ್ಕಾಗಿ ದೃಷ್ಟಿಗೋಚರವಾಯಿತು. ಆಹಾ ! ಎಂಥಾ ಸೊಬಗು ! ಅಂತರ್ಯಾಮಿಯೇ ಮೈದಾಳಿಬಂದಂತೆ, ಲಕ್ಷಣಗಳೆಲ್ಲಾ ಇಲ್ಲಿ ಲಕ್ಷವಿಟ್ಟನ್ತೆ, ನಡುರಾತ್ರಿಯಲ್ಲಿ ಅನಂತ ಸೂರ್ಯರನ್ನು ಕಂಡಂತೆ, ಭರತಭುವಿಯಲ್ಲಿ ವಾಯುದೇವನ ಕೊನೆಯ ಅವತಾರ ಸಾಕಾರಗೊಂಡಿತು. ಆ ಅದ್ಭುತದ ಅನುಭವ ಪಡೆದ ಕ್ರಿಮಿ, ಕೀಟ, ಲತಾ ತರುಗಳೇ ಭಾಗ್ಯವತ್ತರವಾದವುಗಳು.
   ಆ ಕಾಲವಾದಮೇಲೆ ಮುಂದಿನ ಜನತೆಗೆ ಆ ಭುವನವಿಲಕ್ಷಣರೂಪ-ಗುಣ -ಕ್ರಿಯೆಗಳ ವಿವರ ಹೇಗೆ ತಿಳಿಯಬೇಕು? ತಿಳಿಯದೇ ಹೋದರೆ ಅದರಂತರ್ಯಾಮಿಯ ಅನುಗ್ರಹ ಹೇಗಾಗಬೇಕು? ಅನುಗ್ರಹವಿಲ್ಲದಿದ್ದರೆ ಬಿಡುಗಡೆಯೆಂತು? ಬ್ರಹ್ಮವಸ್ತು ಯೋಚಿಸಿತು. ಸರ್ವಾಂತರ್ಯಾಮಿಯಾದ ಮಧ್ವನ ಗುಣ-ರೂಪ-ಕ್ರಿಯೆಯ ಜ್ಞಾನ ಅವನಂತರ್ಯಾಮಿಯ ಕರ್ತೃತ್ವ ವಿಜ್ಞಾನವುಂಟಾಗಬೇಕು! ಭಕ್ತಿಯು ಪರಿಪಕ್ವಗೊಂಡು, ಬುದ್ಧಿಯು ಅಗ್ರಸ್ಥಾನವನ್ನು ಹೊಂದಿ, ಜೀವವು ಮಾಗಿ, ಉನ್ನತ ವಿದ್ಯೆಯ ತುದಿಯಲ್ಲಿ ನಿರ್ವಾತದೇಶ ದೀಪದಂತೆ ಬೆಳಗುತ್ತಿದ್ದ ಮಧ್ವಪರಮಾನುಗ್ರಹಕ್ಕೆ ಪಾತ್ರವಾಗಿದ್ದ ತ್ರಿವಿಕ್ರಮಪುತ್ರನಾದ ನಾರಾಯಣಕವಿಯನ್ನು ನಾರಾಯಣನು ಹೊಕ್ಕನು. ವಾಣೀ ತನ್ನ ನಲ್ಲನ ಕೊಂಡಾಡಲು ಅಲ್ಲೇ ನಾರಾಯಣನ ಜಿಹ್ವೆಯಲ್ಲೇ ನೆಲೆನಿಂತಳು. ಸರ್ವಾಕ್ಷರಾಭಿಮಾನಿಗಳು ಸಂತಸದಿಂದ ತಾವೇ ಬಂದರು.
   ಸಮಸ್ತ ಸಾತ್ವಿಕಲೋಕವು ಮಧ್ವಾಂತರ್ಯಾಮಿಯ ಕರ್ತೃತ್ವವನ್ನು ಅನುಭವಿಸಿ ಬಿಂಬಸಾಧನೆಯಾಗುವ ಅತ್ಯದ್ಭುತವಾದ ಕಾವ್ಯವು ಹೊಮ್ಮಿತು, ಚಿಮ್ಮಿತು - ಶ್ರೀಮಧ್ವವಿಜಯ !

No comments:

Post a Comment