ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Tuesday, April 16, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೧೫


ಇಡಿಯ ಸುಂದರಕಾಂಡವನ್ನು ಕವಿ ಇಲ್ಲಿ ಕಟ್ಟಿಕೊಡುವ –

ಗೋಭಿಃ ಸಮಾನಂದಿತ-ರೂಪಸೀತಃ ಸ್ವವಹ್ನಿ-ನಿರ್ದಗ್ಧ-ಪಲಾಶಿ-ರಾಶಿಃ ।
ಅಹೋ ಹನೂಮನ್ನವ-ವಾರಿದೋsಸೌ ತೀರ್ಣಾಂಬುಧಿರ್ವಿಷ್ಣು-ಪದೇ ನನಾಮ ॥೦೧.೧೫॥  

ತನ್ನ ಮೆದುನುಡಿಗಳಿಂದ (ಪನ್ನೀರಿನಿಂದ) ಸೀತೆಯನ್ನು (ಸಸಿಗಳನ್ನು) ಸಂತೈಸಿ,
ಬಾಲದ ಬೆಂಕಿಯಿಂದ (ಮಿಂಚಿನ ಕಿಡಿಯಿಂದ) ಮಾಂಸವನ್ನು ತಿನ್ನುವ ಕ್ರೂರ ರಕ್ಕಸರನ್ನು (ಎಲೆಗಳಿಂದ ತುಂಬಿದ ಮರಗಳನ್ನು) ಸುಟ್ಟು,
ಸಾಗರವನ್ನು ದಾಟಿ, ವಿಷ್ಣುಪಾದಕ್ಕೆ (ಆಗಸದಲ್ಲಿ) ಬಾಗಿತು ಈ ಹನುಮನೆಂಬೋ ಹೊಸದೊಂದು ಮೋಡ!

ಮತ್ತೆ ಕವಿಯ ಶ್ಲೇಷಚಾತುರ್ಯ!
ಒಂದು ವಾಕ್ಯದಲ್ಲಿ ಬರುವ ಶಬ್ದಗಳ ದೆಸೆಯಿಂದ ಮೂಡುವ ಅನೇಕಾರ್ಥದ ಸೊಬಗನ್ನು ಶ್ಲೇಷವೆಂದು ಕರೆವರು.
‘ಶ್ಲೇಷಃ ಸ ವಾಕ್ಯೇ ಏಕಸ್ಮಿನ್ ಯತ್ರಾನೇಕಾರ್ಥತಾ ಭವೇತ್’, ಎಂದ ಕಾವ್ಯಪ್ರಕಾಶಕಾರ.
ಇದೊಂದು ಅರ್ಥಾಲಂಕಾರ.
ಈ ಪದ್ಯವನ್ನೇ ನೋಡುವ - ಇಲ್ಲಿ ಬಂದಿರುವ ಗೋಭಿಃ, ಸೀತಾ, ಸ್ವವಹ್ನಿ, ಪಲಾಶಿ, ವಿಷ್ಣುಪದೇ ಎಂಬ ಶಬ್ದಗಳಿಗೆ ಎರಡು ಅರ್ಥಗಳು.
ಗೋ - ಮಾತು, ನೀರು.
ಸೀತಾ - (ಸೀರಜಾತಾ) ನೇಗಿಲಿನ ದೆಸೆಯಿಂದ ಹುಟ್ಟಿದ್ದು, ಸೀತಾ ಹಾಗೂ ಸಸಿಗಳು.
ಸ್ವವಹ್ನಿ- ಬಾಲದ ಕಿಡಿ ಹಾಗೂ ಮೋಡದ ಮಿಂಚು.
ಪಲಾಶಿ - ಪಲಾಶ ಎಂದರೆ ಎಲೆ. ಪಲಾಶಿ, ಎಲೆಗಳಿರುವ ಮರ. ಹಾಗೂ ಪಲ ಎಂದರೆ ಮಾಂಸ, ಅದನ್ನು ತಿನ್ನುವವ ಪಲಾಶಿ, ರಕ್ಕಸ.
ವಿಷ್ಣುಪದ - ವಿಷ್ಣುವಿನ ಪಾದ, ಆಕಾಶ.
ಮೋಡವೊಂದು ಹೇಗೆ ತನ್ನ ಮಳೆನೀರಿನಿಂದ (ಗೋಭಿಃ) ಸಸಿಗಳನ್ನು (ಸೀತಾ) ಬೆಳೆಸುವದೋ, ಮಿಂಚಿನ ಕಿಡಿಯಿಂದ (ಸ್ವವಹ್ನಿ) ಮರಗಳ ತೋಪನ್ನು (ಪಲಾಶಿ) ಸುಡುವುದೋ, ಹೇಗೆ ಆಗಸದಲ್ಲಿ (ವಿಷ್ಣುಪದೇ) ಸಾಗಿ ಹೋಗುವುದೋ, ಹಾಗೆಯೇ ಈ ಹನುಮನೆಂಬ ಹೊಸತೊಂದು ಮೋಡ, ತನ್ನ ನುಡಿಗಳಿಂದ (ಗೋಭಿಃ) ಸೀತೆಯನ್ನು ಸಂತೈಸಿದ, ತನ್ನ ಬಾಲದ ತುದಿಯ ಬೆಂಕಿಯಿಂದ (ಸ್ವವಹ್ನಿ) ರಕ್ಕಸರನ್ನು (ಪಲಾಶಿ) ಸುಟ್ಟ, ಸಾಗಿ ಬಂದು ವಿಷ್ಣುವಿನ ಪಾದಕ್ಕೆ ನಮಿಸಿದ.
ಏಕೆ ನಾವೀಗ ಶ್ಲೇಷೆಯ ಲಕ್ಷಣವನ್ನು ತಿಳಿದದ್ದು?
ಇದು ನಾರಾಯಣಪಂಡಿತರ ನೆಚ್ಚಿನ ಅಲಂಕಾರ ಎನ್ನಿಸುತ್ತೆ! ಈ ಕಾವ್ಯದಲ್ಲಿ ಬಹುಪಾಲು ಪದ್ಯಗಳು ಶ್ಲೇಷೆಯಲ್ಲೇ ರಚಿತವಾಗಿವೆ. ಎಂಟನೇ ಸರ್ಗವಂತೂ ಶ್ಲೇಷದ ವಿಶ್ವರೂಪದರ್ಶನ!
ಹಿಂದಿನ ಸಂಸ್ಕೃತಕವಿಗಳು ಇಡಿಯ ಕಾವ್ಯವನ್ನು ಶ್ಲೇಷದಲ್ಲಿ ರಚಿಸಿದ ಉದಾಹರಣೆಗಳು ಸಿಗುತ್ತವೆ. ಇದು ಸಂಸ್ಕೃತಕ್ಕೆ ತಾನೇ ಒಗ್ಗಿ ಬಂದ ಸೊಗಸು. ವೇದದ ಪ್ರತಿ ಮಾತಿಗೂ ಮೂರು ಅರ್ಥಗಳು, ಭಾರತಕ್ಕೆ ಕನಿಷ್ಠ ಹತ್ತು, ವಿಷ್ಣಸಹಸ್ರನಾಮದ ಪ್ರತಿ ನಾಮಕ್ಕೂ ನೂರು ಅರ್ಥಗಳನ್ನು ಹೇಳಬಹುದು ತಾನೇ! ಅದು ವಿಶೇಷ ಉಪಾಸನೆಗೂ ಆಗುವ ಸಾಧನೆ.
ಶ್ಲೇಷದ ಈ ಸೊಬಗನ್ನು ಕನ್ನಡದಲ್ಲಿ ಇಡಲು ಕಷ್ಟಸಾಧ್ಯ! ಅದಕಾಗಿ ಈ ತಯಾರಿ. ಶ್ಲೇಷದ ಲಕ್ಷಣ, ಉದಾಹರಣೆ ಹಾಗೂ ಒಂದಿಷ್ಟು ಪರಿಚಯ ಆದರೆ, ಮುಂದೆ ಕಾವ್ಯದ ಭಾವಸಂಗ್ರಹ ಲಲಿತವಾಗುತ್ತದೆ, ನನಗೂ ನಿಮಗೂ ಎಂದೇ ಈ ಶ್ಲೇಷಪಾಠ.
ಹಿಂದೆ ನಾವು ನೋಡಿದ ಅನಾಕುಲಮ್ (೧.೨)  ಕರ್ಣಾಂತಮಾನೀಯ (೧.೧೪) ಎಂಬ ಪದ್ಯಗಳೂ ಇದೇ ಅಲಂಕಾರದ ಉದಾಹರಣೆಗಳು.
ಮುಂದೆ ಸಾಗುವ,
ಇಲ್ಲಿ ಸಮಾನಂದಿತ-ರೂಪಸೀತಃ ಎಂದು ಕವಿ ಹೇಳಿದ.
ಲಂಕೆಯ ಅಶೋಕವನದಲ್ಲಿ ಕಾಲಸವೆಸಿದ್ದು ನಿಜವಾದ ಸೀತೆಯಲ್ಲ, ಅದು ‘ರೂಪಸೀತಾ’. ರೂಪದಿಂದ ಮಾತ್ರ ಸೀತೆ, ನೋಡಲು ಸೀತೆಯೆಂತೆ ಇದ್ದ ರೂಪ. ನಿಜವಾದ ಸೀತೆಯೆಲ್ಲಿ?
ದೇವ್ಯಾಃ ಸಮೀಪಮಥ ರಾವಣ ಆಸಸಾದ ಸಾsದೃಶ್ಯತಾಮಗಮದಪ್ಯವಿಷಹ್ಯಶಕ್ತಿಃ । ಸೃಷ್ಟಾsತ್ಮನಃ ಪ್ರತಿಕೃತಿಂ ಪ್ರಯಯೌ ಚ ಶೀಘ್ರಂ ಕೈಲಾಸಮರ್ಚಿತಪದಾ ನ್ಯವಸಚ್ಛಿವಾಭ್ಯಾಮ್’ ([1])
ರಾವಣ ಬಂದೊಡನೆ, ಅವನನ್ನು ದೃಶ್ಯಳಾಗಿಯೇ ನಿಗ್ರಹಿಸುವ ಶಕ್ತಿಯಿದ್ದರೂ, ತಾನು ಅದೃಶ್ಯಳಾಗಿ, ತನ್ನದೊಂದು ಆಡುಗೊಂಬೆಯನ್ನು ಮಾಡಿ, ಕೈಲಾಸಕ್ಕೆ ಹೋದಳು. ಅಲ್ಲಿ ಶಿವಶಿವೆಯರಿಂದ ನಿತ್ಯ ಪೂಜೆಗೊಂಡಳು.
ವಿಜಯದಾಸರು ದುರ್ಗಾಸುಳಾದಿಯಲ್ಲಿ ಹೇಳಿದರು, ಕೈಲಾಸಪುರದಲ್ಲಿ ಪೂಜೆಗೊಂಬುವ ದೇವಿ’, ಎಂದು.
ಲಂಕೆಗೆ ಆ ಮಂಕು ರಾವಣ ಹೊತ್ತು ಹೋದದ್ದು ಬರಿಯ ಸೀತೆಯಂತೆ ರೂಪವಿದ್ದ ಗೊಂಬೆಯನ್ನು.
ಹನುಮನು ಸೀತಾಕೃತಿಯನ್ನು ಕಂಡು ಸವಿನುಡಿಗಳಿಂದ ಸಂತೈಸಿದ: "ಕುಶಲೀ ತವ ಕಾಕುತ್ಸ್ಥಃ ಸರ್ವಶಸ್ತ್ರಭೃತಾಂ ವರಃ" ([2])   ಅಮ್ಮ! ನಿನ್ನ ರಾಮ ಕ್ಷೇಮವಾಗಿದ್ದಾನೆ.

'ರಾಘವಶ್ಚ ಮಹಾವೀರಃ ಕ್ಷಿಪ್ರಂ ತ್ವಾಮಭಿಪತ್ಸ್ಯತೇ । ಸಮಿತ್ರಬಂಧವಂ ಹತ್ವಾ ರಾವಣಂ ರಾಕ್ಷಸಾಧಿಪಮ್’ ([2])
ಮಹಾವೀರನಾದ ನಿನ್ನ ರಾಮನು ಬೇಗನೆ ಕೇಡಿಗಳ ದೊರೆಯಾದ ಈ ರಾವಣನನ್ನು ಬಂಧುಮಿತ್ರರ ಸಹಿತವಾಗಿ ಕೊಂದು ನಿನ್ನನ್ನು ಸೇರುವನು.
ವಿಷ್ಣು ಪಾದಕ್ಕೆ ಬಂದು ನಮಿಸಿದ. ಹೇಗೆ?
‘ಚೂಳಾಮಣಿಂ ಪವನಜಃ ಪದಯೋಃ ನಿಧಾಯ । ಸರ್ವಾಙ್ಗಕೈಃ ಪ್ರಣತಿಮಸ್ಯ ಚಕಾರ ಭಕ್ತ್ಯಾ’ ([2])
ರಾಮನಡಿಮೇಲೆ ಚೂಳಾಮಣಿಯನ್ನು ಇಟ್ಟು, ಭಕ್ತಿಯಿಂದ ಸರ್ವಾಂಗಗಳಿಂದ ನಮಿಸಿದ.

ಛಂದಸ್ಸು ಉಪೇಂದ್ರಮಾಲಾ ಎಂಬ ಉಪಜಾತಿ.



[1] ಮಹಾಭಾರತ ತಾತ್ಪರ್ಯ ನಿರ್ಣಯ (೫.೩೭),
[2] ವಾಲ್ಮೀಕಿ ರಾಮಾಯಣ

No comments:

Post a Comment